ಸಾರಾಂಶ
ತಮಿಳುನಾಡಿನ ಪೊಲೀಸರಿಂದ ನಿರಂತರ ಹಿಂಸೆ । ಕರ್ನಾಟಕ ಸರ್ಕಾರ ಮಧ್ಯಪ್ರವೇಶಿಸಿ ಕ್ರಮಕ್ಕೆ ಆಗ್ರಹ
ಕನ್ನಡಪ್ರಭ ವಾರ್ತೆ ಹನೂರುತಮಿಳುನಾಡಿನ ಪೋಲೀಸರು ಹೊಗೇನಕಲ್‌ನಲ್ಲಿ ಕರ್ನಾಟಕದ ಭಾಗದಲ್ಲಿ ತೆಪ್ಪ ನಡೆಸುವವರ ಮೇಲೆ ನಿರಂತರ ಕಿರುಕುಳ ನಡೆಸುತ್ತಿರುವ ಬಗ್ಗೆ ರಾಜ್ಯ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಮಧ್ಯಪ್ರವೇಶ ಮಾಡಬೇಕು. ಇಲ್ಲದಿದ್ದರೆ ತೆಪ್ಪ ನಡೆಸುವುದಿಲ್ಲ ಎಂದು ಹೊಗೇನಕಲ್‌ನಲ್ಲಿ ತೆಪ್ಪ ನಡೆಸುವ ಪಳನಿ ಸ್ವಾಮಿ ಹೇಳಿದರು.
ಹನೂರು ಗಡಿ ಗ್ರಾಮದ ಹೊಗೇನಕಲ್ ಜಲಪಾತ ವೀಕ್ಷಣೆಗೆ ತೆರಳಿದ್ದ ರಾಜ್ಯದ ಪ್ರವಾಸಿಗರ ಮೇಲೆ ತಮಿಳುನಾಡಿನ ಪೊಲೀಸರ ಕ್ರಮ ಖಂಡಿಸಿ 300ಕ್ಕೂ ಹೆಚ್ಚು ತೆಪ್ಪ ನಡೆಸುವವರು ಪ್ರತಿಭಟನೆ ನಡೆಸಿ ಮಾತನಾಡಿದರು.ಹೊಗೇನಕಲ್ ಕರ್ನಾಟಕದ ಭಾಗದಿಂದ ತಮಿಳುನಾಡಿನ ಭಾಗದ ಜಲಪಾತದ ವೀಕ್ಷಣೆಗೆ ಪ್ರವಾಸಿಗರನ್ನು ಕರೆದುಕೊಂಡು ಹೋಗಿದ್ದಾಗ ತೆಪ್ಪ ನಡೆಸುವವರ ಮೇಲೆ ಈ ಹಿಂದೆ ಕೂಡ ಅಲ್ಲಿನ ಪೊಲೀಸ್ ಅಧಿಕಾರಿಗಳು ಹಲ್ಲೆ ನಡೆಸಿರುವ ಘಟನೆಗಳು ಮತ್ತೆ ಮರುಕಳಿಸಿವೆ. ಹೀಗಾಗಿ ಕರ್ನಾಟಕ ಸರ್ಕಾರ ಹಾಗೂ ಚಾಮರಾಜನಗರ ಜಿಲ್ಲಾಧಿಕಾರಿ ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳು ಸೇರಿದಂತೆ ಅರಣ್ಯ ಇಲಾಖೆ ಅಧಿಕಾರಿಗಳು ಜಂಟಿ ಸಭೆ ನಡೆಸಿ ಇಂತಹ ಸಮಸ್ಯೆಗಳಿಂದ ಮತ್ತೆ ಮರುಕಳಿಸದಂತೆ ಕ್ರಮವಹಿಸಬೇಕು. ಅಲ್ಲಿಯವರೆಗೂ ತೆಪ್ಪ ನಡೆಸುವುದಿಲ್ಲ ಎಂದು ಹೇಳಿದರು.
ಪ್ರವಾಸಿಗರನ್ನು ಭಾನುವಾರ ತೆಪ್ಪದಲ್ಲಿ ಕರೆದುಕೊಂಡು ಕರ್ನಾಟಕ ಭಾಗದಿಂದ ತಮಿಳುನಾಡಿನ ಭಾಗದ ಹೊಗೇನಕಲ್ ಜಲಪಾತ ವೀಕ್ಷಿಸಲು ತೆರಳಿದ್ದ ವೇಳೆ ತಮಿಳುನಾಡಿನ ಪೊಲೀಸ್ ಇನ್‌ಸ್ಪೆಕ್ಟರ್ ಕರ್ನಾಟಕ ಭಾಗದಿಂದ ತೆರಳಿದ್ದ ತೆಪ್ಪ ನಡೆಸುವವರನ್ನು ಈ ಕಡೆ ಬರಬಾರದು ಎಂದು ಕಟ್ಟಾಜ್ಞೆ ಹೊರಡಿಸುವ ಮೂಲಕ ಹೋದಂತಹ ಪ್ರವಾಸಿಗರ ಎದುರೇ ತೆಪ್ಪ ನಡೆಸುವವರ ಮೇಲೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಮೊಬೈಲ್ ಕಸಿದು ಬೆದರಿಕೆ ಹಾಕಿದ್ದಾರೆ. ತಮಿಳುನಾಡಿನ ಕಡೆಯಿಂದ 300ಕ್ಕೂ ಹೆಚ್ಚು ತೆಪ್ಪ ನಡೆಸುವವರು ಕರ್ನಾಟಕ ಭಾಗದ ಹೊಗೇನಕಲ್ ಜಲಪಾತದ ವೀಕ್ಷಿಸಲು ಬರುತ್ತಾರೆ. ಆದರೆ ನಾವು ಅವರಿಗೆ ಯಾವುದೇ ತೊಂದರೆ ನೀಡುತ್ತಿಲ್ಲ. ಆದರೆ ಇಲ್ಲಿಂದ ಅಲ್ಲಿಗೆ ತೆರಳುವ ಪ್ರವಾಸಿಗರ ಎದುರೇ ತೆಪ್ಪ ನಡೆಸುವವರ ಮೇಲೆ ದುರ್ನಡತೆಯಿಂದ ತಮಿಳುನಾಡಿನ ಪೊಲೀಸರು ಕಿರುಕುಳ ನೀಡುತ್ತಿದ್ದಾರೆ ಎಂದು ದೂರಿದರು.ಇದರ ಬಗ್ಗೆ ಕರ್ನಾಟಕದ ಕಾವೇರಿ ವನ್ಯಧಾಮ ಅಧಿಕಾರಿಗಳಿಗೆ ಘಟನೆ ಬಗ್ಗೆ ತಿಳಿಸಿದ್ದರೂ ಸಹ ಇನ್ನು ಸಹ ಇದರ ಬಗ್ಗೆ ಕ್ರಮ ಕೈಗೊಳ್ಳದೆ ಇರುವುದರಿಂದ ಸೋಮವಾರ ಸಹ ತಮಿಳುನಾಡಿನ ಕಡೆ ತೆರಳಿದ್ದ ತೆಪ್ಪ ನಡೆಸುವವರನ್ನು ತಮಿಳುನಾಡಿನ ಪೊಲೀಸರು ವಾಪಸ್ ಕಳಿಸಿದ್ದಾರೆ. ಹೀಗಾಗಿ ಸರ್ಕಾರ ಹಾಗೂ ಜಿಲ್ಲಾಡಳಿತ ಕೂಡಲೇ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಹೊಗೇನಕಲ್ ಜಲಪಾತದಲ್ಲಿ ಘಟನೆ ನಡೆದಿರುವ ಬಗ್ಗೆ ಮಾಹಿತಿ ಬಂದಿದೆ. ಈ ಬಗ್ಗೆ ನಮ್ಮ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಸಮಸ್ಯೆ ಬಗೆಹರಿಸಲಾಗುವುದು ಎಂದು ಚಾಮರಾಜನಗರ ಕಾವೇರಿ ವನ್ಯಧಾಮದ ಡಿಸಿಎಫ್ ಸುರೇಂದ್ರ ಹೇಳಿದರು. ಎರಡು ರಾಜ್ಯಗಳ ನಡುವೆ ಇರುವ ಗಡಿ ಬಗ್ಗೆ ಹಿರಿಯ ಅಧಿಕಾರಿಗಳನ್ನು ಸಂಪರ್ಕಿಸಿದಾಗ ಹಾರಿಕೆ ಉತ್ತರ ನೀಡಿದ್ದಾರೆ.