ನೌಕಾನೆಲೆ ಪ್ರದೇಶದಲ್ಲಿ ಸಂಗ್ರಹವಾಗುವ ತ್ಯಾಜ್ಯವನ್ನು ವಿಲೇವಾರಿ ಮಾಡಲು ಗುತ್ತಿಗೆ ನೀಡಲಾಗಿದೆ. ಆದರೆ, ಈ ವ್ಯವಸ್ಥೆಯನ್ನೇ ದುರುಪಯೋಗಪಡಿಸಿಕೊಂಡು ರಾತ್ರಿ, ಹಗಲೆನ್ನದೆ ಕದ್ದುಮುಚ್ಚಿ ಹಾರವಾಡ ಭಾಗಕ್ಕೆ ತ್ಯಾಜ್ಯ ತಂದು ಸುರಿಯಲಾಗುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಅಂಕೋಲಾ: ಒಂದು ಕಡೆ ಅಭಿವೃದ್ಧಿ ಯೋಜನೆ, ಮತ್ತೊಂದೆಡೆ ಅದರಿಂದ ಹೊರಬರುವ ತ್ಯಾಜ್ಯದಿಂದ ಸ್ಥಳೀಯರ ಬದುಕಿಗೆ ಸಂಕಷ್ಟ! ಸೀಬರ್ಡ್ ನೌಕಾನೆಲೆಯ ವಸತಿ ಹಾಗೂ ಯೋಜನಾ ಪ್ರದೇಶದ ತ್ಯಾಜ್ಯವನ್ನು ಹಾರವಾಡ ಭಾಗದಲ್ಲಿ ತಂದು ಸುರಿಯಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದ್ದು, ಇದರಿಂದ ರೊಚ್ಚಿಗೆದ್ದ ಗ್ರಾಮಸ್ಥರು ತ್ಯಾಜ್ಯ ಸಾಗಿಸುತ್ತಿದ್ದ ವಾಹನಕ್ಕೆ ಅಡ್ಡಲಾಗಿ ನಿಂತು ಪ್ರತಿಭಟನೆ ನಡೆಸಿ, ವಾಹನವನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.
ನೌಕಾನೆಲೆ ಪ್ರದೇಶದಲ್ಲಿ ಸಂಗ್ರಹವಾಗುವ ತ್ಯಾಜ್ಯವನ್ನು ವಿಲೇವಾರಿ ಮಾಡಲು ಗುತ್ತಿಗೆ ನೀಡಲಾಗಿದೆ. ಆದರೆ, ಈ ವ್ಯವಸ್ಥೆಯನ್ನೇ ದುರುಪಯೋಗಪಡಿಸಿಕೊಂಡು ರಾತ್ರಿ, ಹಗಲೆನ್ನದೆ ಕದ್ದುಮುಚ್ಚಿ ಹಾರವಾಡ ಭಾಗಕ್ಕೆ ತ್ಯಾಜ್ಯ ತಂದು ಸುರಿಯಲಾಗುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.ಹಾರವಾಡದ ವ್ಯಕ್ತಿಯೊಬ್ಬರು ಹಣದ ಆಸೆಗಾಗಿ ತಮ್ಮ ವ್ಯಾಪ್ತಿಯಲ್ಲಿ ತ್ಯಾಜ್ಯ ಇಳಿಸಲು ಅವಕಾಶ ಮಾಡಿಕೊಡುತ್ತಿದ್ದಾರೆ ಎಂಬುದು ಸ್ಥಳೀಯರ ಮತ್ತೊಂದು ಗಂಭೀರ ಆರೋಪವಾಗಿದೆ. ಈ ರೀತಿ ಎಲ್ಲೆಂದರಲ್ಲಿ ತ್ಯಾಜ್ಯ ಸುರಿಯುವುದರಿಂದ ಹಾರವಾಡ ಸುತ್ತಮುತ್ತಲಿನ ಪರಿಸರ ಹದಗೆಡುತ್ತಿದೆ.
ಕಸದ ದುರ್ವಾಸನೆಯಿಂದ ಜನರು ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ವಾತಾವರಣ ಕಲುಷಿತಗೊಂಡು ಉಸಿರಾಟಕ್ಕೂ ತೊಂದರೆಯಾಗುತ್ತಿದೆ. ಇಂತಹ ಪರಿಸ್ಥಿತಿ ಮುಂದುವರಿದರೆ ಜನರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಬಹುದು ಎಂಬ ಆತಂಕ ಗ್ರಾಮಸ್ಥರನ್ನು ಕಾಡುತ್ತಿದೆ.ಜನರ ಆರೋಗ್ಯ ಮತ್ತು ಪರಿಸರದ ಹಿತವನ್ನು ಕಡೆಗಣಿಸಿ ತ್ಯಾಜ್ಯ ಸುರಿಯುವುದನ್ನು ಸಹಿಸಲು ಸಾಧ್ಯವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ಹಾರವಾಡ, ಅವರ್ಸಾ ಹಾಗೂ ಹಟ್ಟಿಕೇರಿ ಭಾಗದ ಗ್ರಾಮಸ್ಥರು ತ್ಯಾಜ್ಯ ಸಾಗಿಸುತ್ತಿದ್ದ ವಾಹನವನ್ನು ತಡೆದು ನಿಲ್ಲಿಸಿದರು. ಕೆಲಕಾಲ ಸ್ಥಳದಲ್ಲಿ ಬಿಗುವಿನ ವಾತಾವರಣವೂ ನಿರ್ಮಾಣವಾಯಿತು. ಬಳಿಕ ವಾಹನವನ್ನು ಅಂಕೋಲಾ ಪೊಲೀಸ್ ಠಾಣೆಗೆ ಒಪ್ಪಿಸುವ ಮೂಲಕ ಸಂಬಂಧಪಟ್ಟವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದರು.
ಸ್ಥಳಕ್ಕೆ ಆಗಮಿಸಿದ ಪಿಎಸ್ಐ ಗುರುನಾಥ ಹಾದಿಮನಿ ಅವರು ವಾಹನವನ್ನು ವಶಕ್ಕೆ ಪಡೆದು ಕಾನೂನು ಕ್ರಮ ಕೈಗೊಂಡರು. ಈ ಸಂದರ್ಭದಲ್ಲಿ ಹೊನ್ನಪ್ಪ ವಿಠೋಬ ನಾಯಕ, ಶ್ರೀಕಾಂತ ನಾಯ್ಕ, ಶಾಂತೇಶ ನಾಯ್ಕ, ಸುನೀಲ ಗಜಾನನ ನಾಯ್ಕ, ಮಂಜುನಾಥ ಠಾಕೇಕರ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು. ಪಿಡಿಒ ಪೂರ್ಣಿಮಾ ಗೌಡ ಹಾಗೂ ಕಾರ್ಯದರ್ಶಿ ವಸಂತ ನಾಯ್ಕ ಹಾಜರಿದ್ದು ಮಾಹಿತಿ ಪಡೆದುಕೊಂಡರು.