ಸಾರಾಂಶ
ಮಸ್ಕಿಯ ಸರ್ಕಾರಿ ಬಾಲಕಿಯರ ಪ್ರೌಢ ಶಾಲೆಯಲ್ಲಿ ಮಕ್ಕಳ ದಿನಾಚರಣೆ ನಿಮಿತ್ತ ಹಮ್ಮಿಕೊಂಡಿದ್ದ ಕಾನೂನು ಅರಿವು-ನೆರವು ಕಾರ್ಯಕ್ರಮಕ್ಕೆ ಸಿಂಧನೂರಿನ ಹಿರಿಯ ಸಿವಿಲ್ ನ್ಯಾಯಾಧೀಶ ಲಕ್ಷ್ಮಿಕಾಂತ ಜೆ.ಮಿಸ್ಕಿನ್ ಚಾಲನೆ ನೀಡಿದರು,
ಕನ್ನಡಪ್ರಭ ವಾರ್ತೆ ಮಸ್ಕಿ
ನಾವೆಲ್ಲರೂ ಸರ್ಕಾರಿ ಶಾಲೆಯಲ್ಲಿ ಕಠಿಣ ಪರಿಶ್ರಮದಿಂದ ಕಲಿತು ಉನ್ನತ ಸ್ಥಾನಕ್ಕೆ ಬಂದಿದ್ದೇವೆ. ವಿದ್ಯಾರ್ಥಿಗಳು ಸಾಮಾಜಿಕ ಜಾಲಾತಾಣದಿಂದ ದೂರವಿದ್ದು ಓದಿನ ಕಡೆ ಹೆಚ್ಚು ಗಮನ ಕೊಟ್ಟಾಗ ಗುರಿ ಮುಟ್ಟಲು ಸಾಧ್ಯ ಎಂದು ಸಿಂಧನೂರಿನ ಹಿರಿಯ ಸಿವಿಲ್ ನ್ಯಾಯಾಧೀಶ ಲಕ್ಷ್ಮಿಕಾಂತ ಜೆ.ಮಿಸ್ಕಿನ್ ಕರೆ ನೀಡಿದರು.ಪಟ್ಟಣದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಗುರುವಾರ ತಾಲ್ಲೂಕು ಕಾನೂನು ಸೇವಾ ಸಮಿತಿ ಸಿಂಧನೂರು, ನ್ಯಾಯವಾದಿಗಳ ಸಂಘ ಮಸ್ಕಿಯ ನೇತೃತ್ವದಲ್ಲಿ ನಡೆದ ಮಕ್ಕಳ ದಿನಾ ಚರಣೆ ಹಾಗೂ ಕಾನೂನು ಸೇವಾ ದಿನ ನಿಮಿತ್ತ ‘ಕಾನೂನು ಅರಿವು-ನೆರವು’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸರ್ಕಾರಿ ಶಾಲೆಗಳಲ್ಲಿ ಕಲೆತ ಅನೇಕ ವಿದ್ಯಾರ್ಥಿಗಳು ಇಂದು ಉನ್ನತ ಸ್ಥಾನದಲ್ಲಿದ್ದಾರೆ. ಅವರ ಕಠಿಣ ಪರಿಶ್ರಮದಿಂದ ಮಾತ್ರ ಇದು ಸಾಧ್ಯವಾಗಿದೆ ಎಂದರಲ್ಲದೆ, ಸಾಮಾಜಿಕ ಜಾಲಾತಾಣದಲ್ಲಿ ಸಮಯ ಕಳೆಯದೆ ಓದಿನ ಕಡೆ ಹೆಚ್ಚು ಗಮನಕೊಟ್ಟು ಸಾಧನೆಯ ಮೆಟ್ಟಲು ಹತ್ತಬೇಕು ಎಂದು ತಿಳಿಸಿದರು.
ಜೆಎಂಎಫ್‌ಸಿ ಕೋರ್ಟ್ ನ್ಯಾಯಾಧೀಶ ಅಚ್ಚಪ್ಪ ದೊಡ್ಡ ಬಸವರಾಜ ಮಾತನಾಡಿ, ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಕಾನೂನು ನೆರವು ಸಿಗಬೇಕು ಅನ್ನುವ ಉದ್ದೇಶದಿಂದ ಕಾನೂನು ಪ್ರಾಧಿಕಾರದಿಂದ ಉಚಿತ ಕಾನೂನು ಸಮಿತಿ ರಚನೆಯಾಗಿದೆ ಎಂದರು.ಅಲ್ಲದೆ, ಪೊಲೀಸ್ ಇಲಾಖೆ ಹೆಲ್ಮೆಟ್ ಹಾಕಿ ಎಂದು ಪ್ರತಿ ನಿತ್ಯ ಅರಿವು ಮೂಡಿಸುವ ಕೆಲಸ ಮಾಡುತ್ತಿದೆ. ಆದರೂ ಸಹ ಬಹಳಷ್ಟು ಅಪಘಾತಗಳು ನಡೆದು ಪ್ರಾಣಾ ಹಾನಿಯಾಗುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದರು.
ವಕೀಲ ನಿರೂಪಾದೆಪ್ಪ ಗುಡಿಹಾಳ ವಕೀಲ ಮಾತನಾಡಿದರು. ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಈಶಪ್ಪ ದೇಸಾಯಿ ಗುಡದೂರು ಅಧ್ಯಕ್ಷತೆ ವಹಿಸಿದ್ದರು. ತಹಸೀಲ್ದಾರ್ ಕೆ. ಮಲ್ಲಪ್ಪ ಯರಗೋಳ, ಸಿಪಿಐ ಬಾಲಚಂದ್ರ ಡಿ. ಲಕ್ಕಂ, ಹಿರಿಯ ವಕೀಲ ರಾಮಣ್ಣ ನಾಯಕ, ಪ್ರಭಾರಿ ಪ್ರಾಚಾರ್ಯ ಮಹಾಂತೇಶ ಮಸ್ಕಿ, ಅಮರೇಗೌಡ ತಿಮ್ಮಾಪುರ, ಸಂಘದ ಕಾರ್ಯದರ್ಶಿ ಆನಂದ ರಾಠೋಡ ಇತರರು ಇದ್ದರು.