ಹಾಳುಕೊಂಪೆಯಾದ ಸಾಣಿಕಟ್ಟಾ ಶಾಲಾ ಕಟ್ಟಡ

| Published : Nov 15 2024, 12:31 AM IST

ಸಾರಾಂಶ

ನಿತ್ಯಾನಂದ ಪ್ರೌಢಶಾಲೆಯ ಹತ್ತಿರದಲ್ಲಿ ನಾಲ್ಕು ಕೊಠಡಿಯನ್ನು ನಿರ್ಮಿಸಲಾಗಿತ್ತು. ಆದರೆ ಕಟ್ಟಡ ನಿರ್ಮಾಣವಾಗಿ ಹಲವು ವರ್ಷ ಕಳೆದರೂ ಪ್ರಾರಂಭಿಸದೆ ಬಿಡಲಾಗಿದೆ.

ಗೋಕರ್ಣ: ಇಲ್ಲಿನ ಸಾಣಿಕಟ್ಟಾ ಹಿರಿಯ ಪ್ರಾಥಮಿಕ ಶಾಲೆಯ ತರಗತಿ ನಡೆಸಲು ಲಕ್ಷಾಂತರ ರುಪಾಯಿ ಖರ್ಚು ಮಾಡಿ ಕಟ್ಟಿದ್ದ ಕಟ್ಟಡ ಬಳಕೆಯಾಗದೆ ಹಾಳುಕೊಂಪೆಯಾಗಿದೆ.

ಪ್ರಸ್ತುತ ರಾಜ್ಯ ಹೆದ್ದಾರಿ ಪಕ್ಕದಲ್ಲಿರುವ ಹಳೆಯ ಕಟ್ಟಡದಲ್ಲಿ ಶಾಲೆ ನಡೆಯುತ್ತಿದೆ. ಇಕ್ಕಟ್ಟಾದ ಜಾಗದ ವಾಹನ ಸಂಚರಿಸುವ ಸ್ಥಳವಾದರಿಂದ ವಿಶಾಲ ಜಾಗ ಹೊಂದಿರುವ ನಿತ್ಯಾನಂದ ಪ್ರೌಢಶಾಲೆಯ ಹತ್ತಿರದಲ್ಲಿ ನಾಲ್ಕು ಕೊಠಡಿಯನ್ನು ನಿರ್ಮಿಸಲಾಗಿತ್ತು. ಆದರೆ ಕಟ್ಟಡ ನಿರ್ಮಾಣವಾಗಿ ಹಲವು ವರ್ಷ ಕಳೆದರೂ ಪ್ರಾರಂಭಿಸದೆ ಬಿಡಲಾಗಿದೆ. ಶಾಲೆಗೆ ತೆರಳಲು ಉತ್ತಮ ಸಿಮೆಂಟ್ ರಸ್ತೆಯ ಇದ್ದು, ಪ್ರಶಾಂತ ವಾತಾವರಣದಲ್ಲಿ ಉತ್ತಮ ಕಲಿಕೆಗೆ ಅನುಕೂಲವಿದೆ. ಆದರೂ ಶಿಕ್ಷಣ ಇಲಾಖೆ ಇಲ್ಲಿ ತರಗತಿ ಆರಂಭಿಸದಿರುವುದು ಏಕೆ ಎಂದು ಜನರು ಪ್ರಶ್ನಿಸುತ್ತಿದ್ದಾರೆ. ತಕ್ಷಣ ಈ ಬಗ್ಗೆ ಕ್ರಮಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಲಕ್ಷಾಂತರ ರು. ವೆಚ್ಚ: ಅಡುಗೆಯ ಕೊಠಡಿ, ಶೌಚಾಲಯದ ಕಟ್ಟಡವನ್ನು ಹೊಸದಾಗಿ ನಿರ್ಮಿಸಲಾಗಿದೆ. ಇದರ ಜತೆ ಶಾಲೆಯ ಕೊಠಡಿ, ಕ್ರೀಡಾಂಗಣ ಅಭಿವೃದ್ಧಿಗೆ ವೆಚ್ಚ ಮಾಡಲಾಗಿದೆ. ಆದರೆ ಸಾರ್ವಜನಿಕ ಹಣ ಸದ್ಬಳಕೆ ಮಾಡದೆ ವ್ಯರ್ಥವಾಗುತ್ತಿದೆ.ತುಕ್ಕು ಹಿಡಿದಿದೆ ಬಾಗಿಲ ಬೀಗ: ಶೌಚಾಲಯ, ಅಡುಗೆ, ತರಗತಿ ಕೊಠಡಿಗಳಿಗೆ ಬೀಗ ಹಾಕಲಾಗಿದ್ದು, ಇದು ಸಂಪೂರ್ಣ ತುಕ್ಕು ಹಿಡಿದಿದೆ. ಅಂದರೆ ಪುನಃ ಇದನ್ನು ತೆರವುಗೊಳಿಸಬೇಕಾದರೆ ಬೀಗ ಒಡೆದು ತೆಗೆಯಬೇಕಾಗಿದ್ದು, ಅಂದರೆ ಇದು ಬಳೆಕೆಯಾಗದ ಎಷ್ಟು ದಿನವಾಗಿದೆ ಎಂಬುದಕ್ಕೆ ನಿದರ್ಶನವಾಗಿದೆ. ಈ ಬಗ್ಗೆ ಶಾಲಾ ಅಭಿವೃದ್ದಿ ಸಮಿತಿ ಅಧ್ಯಕ್ಷ ರಾಜು ನಾಯ್ಕ ಅವರನ್ನು ವಿಚಾರಿಸಿದರೆ, ಕಟ್ಟಡ ಬಳಕೆಯಾಗಿಲ್ಲ. ಆದರೆ ಅಲ್ಲಿ ಹಲವು ಸೌಲಭ್ಯಗಳು ಬೇಕಾಗಿದ್ದು, ಇದಾದ ಬಳಿಕ ತರಗತಿ ಆರಂಭಿಸಲು ಪ್ರಯತ್ನಿಸುತ್ತೇನೆ ಎನ್ನುತ್ತಾರೆ. ಆದರೆ ಈಗಾಗಲೇ ಕುಡಿಯುವ ನೀರು ಶೌಚಾಲಯದ ವ್ಯವಸ್ಥೆಗಳು ಇದ್ದರೂ ಇನ್ನೇನು ಸೌಕರ್ಯಗಳು ಬೇಕು ಎಂಬುದೇ ತಿಳಿಯದಾಗಿದ್ದು, ಇನ್ನಾದರೂ ತರಗತಿಗಳು ಆರಂಭವಾಗಿ ವಿದ್ಯಾರ್ಥಿಗಳ ಉಪಯೋಗಕ್ಕೆ ಬರಲಿ ಎಂಬುದು ಸಾರ್ವಜನಿಕರ ಆಶವಾಗಿದೆ. ಈಗಿರುವ ಶಾಲೆಯಿಂದ ನೂತನ ಕೊಠಡಿಗೆ ತೆರಳಲು ಸರಿಯಾದ ರಸ್ತೆ ಇಲ್ಲ ಎಂಬ ಮಾಹಿತಿ ದೊರೆತ್ತಿತ್ತು. ಈ ವರ್ಷ ಅಧಿಕ ಮಳೆಯ ಕಾರಣ ತೊಂದರೆಯಾಗಿರಬಹುದು. ಈಗಿರುವ ಕಟ್ಟಡ ಶಿಥಿಲಗೊಂಡಿರುವುದು ಹಾಗೂ ಹೆದ್ದಾರಿ ಅಗಲೀಕರಣವಾದರೆ ತೊಂದರೆಯಾಗುವ ಬಗ್ಗೆ ಇಲಾಖೆಗೆ ತಿಳಿದಿದೆ. ಶೀಘ್ರದಲ್ಲೇ ಶಾಲಾ ಅಭಿವೃದ್ಧಿ ಸಮಿತಿ ಹಾಗೂ ಪಾಲಕರ ಸಭೆ ಕರೆದು ತರಗತಿ ನಡೆಸಿ ಕೊಠಡಿ ಬಳಕೆ ಮಾಡಿಕೊಳ್ಳಲು ಸೂಚಿಸುತ್ತೇನೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ರಾಜೇಂದ್ರ ಭಟ್ ತಿಳಿಸಿದರು. ನಗೆ ಶಾಲೆಯಲ್ಲಿ ಮಕ್ಕಳ ದಿನಾಚರಣೆ

ಕಾರವಾರ: ತಾಲೂಕಿನ ನಗೆ ಶಾಲೆಯಲ್ಲಿ ಮಕ್ಕಳ ದಿನವನ್ನು ಆಚರಿಸಲಾಯಿತು. ಶಾಲಾ ವಿದ್ಯಾರ್ಥಿಗಳು ಜವಾಹರಲಾಲ್ ನೆಹರೂ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.ಲಕ್ಷ್ಮೀ ದಿನೇಶ ಗೌಡ ನೆಹರೂ ಬಗ್ಗೆ ಭಾಷಣ ಹಾಗೂ ಹಾಡನ್ನು ಹಾಡಿದಳು.ಶಾಲಾ ಮುಖ್ಯಾಧ್ಯಾಪಕ ಅಖ್ತರ್ ಸೈಯದ್, ಸಹಶಿಕ್ಷಕಿ ರೂಪಾ ನಾಯ್ಕ, ಅತಿಥಿ ಶಿಕ್ಷಕಿ ರೇಷ್ಮಾ ಹುಲಸ್ವಾರ, ಕೈಗಾ ಯೊಜನೆಯ ಶಿಕ್ಷಕಿ ಪ್ರಿಯಾ ಲಾಂಜೇಕರ, ಅಡುಗೆ ಸಿಬ್ಬಂದಿ ಶೋಭಾ ಗೌಡ, ಕಾಂಚನಾ ಗೌಡ, ಎಸ್‌ಡಿಎಂಸಿ ಅಧ್ಯಕ್ಷೆ ಲಲಿತಾ ಗೌಡ ಇದ್ದರು.

ಶಾಲಾ ಮಕ್ಕಳಿಗೆ ಅಜೀಂ ಪ್ರೇಮ್‌ಜಿ ಅವರ ಬಿಸಿಯೂಟದ ಮೊಟ್ಟೆಯ ಜತೆಯಲ್ಲಿ ಮುಖ್ಯ ಶಿಕ್ಷಕರ ವತಿಯಿಂದ ಇನ್ನೊಂದು ಮೊಟ್ಟೆಯನ್ನು ಹಾಗೂ ತುಳಸಿ ಹಬ್ಬದ ನಿಮಿತ್ತ ಅಂಕೋಲಾ ಗ್ರಾಮೀಣ ಭಾಗದ ಗೆಣಸುಗಳ ಪಾಯಸವನ್ನು ವಿಶೇಷವಾಗಿ ಮಾಡಿ ನೆಹರೂ ಅವರ ಜನ್ಮದಿನದ ಸವಿನೆನಪಿಗಾಗಿ ಉಣಬಡಿಸಲಾಯಿತು.