ಸಾರಾಂಶ
ಕನಕದಾಸರ ಜಯಂತಿ ಪೂರ್ವಭಾವಿ ಸಭೆಯಲ್ಲಿ ಕೆ.ರಾಘವೇಂದ್ರ ಹಿಟ್ನಾಳಕನ್ನಡಪ್ರಭ ವಾರ್ತೆ ಕೊಪ್ಪಳ
ನ. 18ರಂದು ನಡೆಯುವ ಸಂತಶ್ರೇಷ್ಠ ಶ್ರೀ ಭಕ್ತ ಕನಕದಾಸರ ಜಯಂತಿಯನ್ನು ಅಚ್ಚುಕಟ್ಟಾಗಿ ಆಚರಿಸಿ ಎಂದು ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಹೇಳಿದರು.ಬುಧವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕರೆದ ಸಂತಶ್ರೇಷ್ಠ ಶ್ರೀ ಭಕ್ತ ಕನಕದಾಸರ ಜಯಂತಿ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ನ. 18ರಂದು ನಗರದ ಸಾಹಿತ್ಯ ಭವನದಲ್ಲಿ 11.30ಕ್ಕೆ ವೇದಿಕೆ ಕಾರ್ಯಕ್ರಮ ನಡೆಯಲಿದ್ದು, ಈ ಕುರಿತು ಸಮಾಜದ ಎಲ್ಲ ಜನರಿಗೆ ಮಾಹಿತಿ ನೀಡಿ. ಜಿಲ್ಲೆಯಲ್ಲಿ ಇತ್ತೀಚೆಗೆ ವಿವಿಧ ಕ್ಷೇತ್ರಗಳಲ್ಲಿ ರಾಜೋತ್ಸವ ಪ್ರಶಸ್ತಿ ಪಡೆದವರನ್ನೂ ಈ ಕಾರ್ಯಕ್ರಮದಲ್ಲಿ ಸನ್ಮಾನಿಸಿ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಿಗೆ ಹೇಳಿದರು.ಸರ್ಕಾರದ ಎಲ್ಲ ಕಚೇರಿ ಹಾಗೂ ಶಾಲಾ- ಕಾಲೇಜುಗಳಲ್ಲಿ ಕನಕದಾಸರ ಜಯಂತಿ ಆಚರಿಸಬೇಕು. ಇದು ಸರ್ಕಾರದ ನಿರ್ದೇಶನವಾಗಿದ್ದು ಎಲ್ಲರೂ ಪಾಲನೆ ಮಾಡಬೇಕು. ಕೊಪ್ಪಳ ವಿಶ್ವವಿದ್ಯಾಲಯದ ಕುಲಪತಿ ಡಾ. ಬಿ.ಕೆ. ರವಿ ಅವರನ್ನು ಕನಕದಾಸರ ಬಗೆಗೆ ವಿಶೇಷ ಉಪನ್ಯಾಸ ನೀಡಲು ಆಹ್ವಾನಿಸುವ ಕುರಿತು ಸಭೆಯಲ್ಲಿ ನಿರ್ಧರಿಸಲಾಯಿತು.ಜಯಂತಿಯಲ್ಲಿ ಹೆಚ್ಚಿನ ಜನರು ಸೇರಬೇಕಾದರೆ ಮುಂಚಿತವಾಗಿ ಸಮಾಜದ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ಮತ್ತು ಕಾರ್ಯದರ್ಶಿಗಳು, ಮುಖಂಡರಿಗೆ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿ. ಕಾರ್ಯಕ್ರಮದ ಒಂದು ದಿನ ಮುಂಚಿತವಾಗಿ ಕೊಪ್ಪಳ ನಗರದ ಸಾಹಿತ್ಯ ಭವನವನ್ನು ಸ್ವಚ್ಛಗೊಳಿಸಿ. ಕಾರ್ಯಕ್ರಮ ಒಳ್ಳೆಯ ರೀತಿಯಲ್ಲಿ ಆಯೋಜನೆ ಮಾಡಬೇಕು ಎಂದು ಹೇಳಿದರು.
ಜಿಲ್ಲಾಧಿಕಾರಿ ನಲಿನ್ ಅತುಲ್ ಮಾತನಾಡಿ, ಶ್ರೀ ಭಕ್ತ ಕನಕದಾಸರ ಜಯಂತಿ ಕಾರ್ಯಕ್ರಮಕ್ಕೆ ಸಕಲ ಸಿದ್ಧತೆ ಕೈಗೊಂಡು ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.ಸಭೆಯಲ್ಲಿ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ರತ್ನಂ ಪಾಂಡೇಯ, ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ರೇಷ್ಮಾ ಹಾನಗಲ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕೊಟ್ರೇಶ ಮರಬನಳ್ಳಿ. ಹಾಲುಮತ ಸಮಾಜದ ಕೊಪ್ಪಳ ತಾಲೂಕು ಅಧ್ಯಕ್ಷ ಮುದ್ದಣ್ಣ ಬೇವಿನಹಳ್ಳಿ, ಕಾಳಿದಾಸ ಸಂಸ್ಥೆಯ ಕಾರ್ಯದರ್ಶಿ ಜಂಬಣ್ಣ, ಡೊಳ್ಳಿನ ಸಂಘದ ತಾಲೂಕು ಅಧ್ಯಕ್ಷ ಗುಡದಪ್ಪ ಹಲಗೇರಿ, ಮುಖಂಡರಾದ ಶಿವರಾಮ್ ಗಬ್ಬೂರು, ಹನುಮಂತ ಹಳ್ಳಿಕೇರಿ, ವರುಣ ಕುಮಾರ್ ನಿಟ್ಟಾಲಿ, ಹನುಮಂತ ಅಬ್ಬಿಗೇರಿ ಸೇರಿದಂತೆ ಸಮಾಜದ ಇತರರು ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.