ಸಾರಾಂಶ
ಶಿಗ್ಗಾಂವಿ ವಿಧಾನಸಭಾ ಮತಕ್ಷೇತ್ರದಲ್ಲಿ ನಡೆದ ಉಪಚುನಾವಣೆಯಲ್ಲಿ ಶೇ. 80.48ರಷ್ಟು ಮತದಾನವಾಗಿದೆ. 2023ರ ಚುನಾವಣೆ ಸಂದರ್ಭದಲ್ಲಿಯೂ ಅಷ್ಟೇ ಪ್ರಮಾಣದ ಮತದಾನವಾಗಿತ್ತು.
ಹುಬ್ಬಳ್ಳಿ:
ಶಿಗ್ಗಾಂವಿ ಮತಕ್ಷೇತ್ರದಲ್ಲಿ ಬುಧವಾರ ಉಪಚುನಾವಣೆ ನಡೆದಿದ್ದು, ಜನರ ಬೆಂಬಲ ನನ್ನ ಪರವಾಗಿರುತ್ತದೆ ಎನ್ನುವ ಆತ್ಮವಿಶ್ವಾಸ ನನಗಿದೆ. ನಮ್ಮದು ಪರ್ಮನೆಂಟ್ ಗ್ಯಾರಂಟಿ. ನಮ್ಮ ಸರ್ಕಾರ ಕೈಗೊಂಡ ಅಭಿವೃದ್ಧಿ ಪಟ್ಟಿ ಮಾಡುತ್ತಾ ಹೋದರೆ ಎರಡು ದಿನ ಬೇಕು ಎಂದು ಶಿಗ್ಗಾಂವಿ ವಿಧಾನಸಭಾ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಭರತ್ ಬೊಮ್ಮಾಯಿ ಹೇಳಿದರು.ಅವರು ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಬುಧವಾರ ಶಿಗ್ಗಾಂವಿ ವಿಧಾನಸಭಾ ಮತಕ್ಷೇತ್ರದಲ್ಲಿ ನಡೆದ ಉಪಚುನಾವಣೆಯಲ್ಲಿ ಶೇ. 80.48ರಷ್ಟು ಮತದಾನವಾಗಿದೆ. 2023ರ ಚುನಾವಣೆ ಸಂದರ್ಭದಲ್ಲಿಯೂ ಅಷ್ಟೇ ಪ್ರಮಾಣದ ಮತದಾನವಾಗಿತ್ತು. ಹಾಗಾಗಿ ಈ ಬಾರಿಯೂ ಕ್ಷೇತ್ರದ ಜನತೆಯ ಬೆಂಬಲ ನನ್ನ ಪರವಾಗಿರುತ್ತದೆ ಎಂಬ ನಂಬಿಕೆಯಿದೆ ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದರು. ಕ್ಷೇತ್ರದಲ್ಲಿ ನನ್ನ ಪರವಾಗಿ ಹಗಲು-ರಾತ್ರಿ ಶ್ರಮಿಸಿದ ಪಕ್ಷದ ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು.
ಯಾಸಿರಖಾನ್ ಪಠಾಣ್ ರೌಡಿ ಶೀಟರ್ ಎಂಬ ಬಸವರಾಜ ಬೊಮ್ಮಾಯಿ ಹೇಳಿಕೆ ಕುರಿತು ಕಿಡಿಕಾರಿದ್ದ ಸಚಿವ ಶಿವಾನಂದ ಪಾಟೀಲರ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ನಾವು ಆ ರೀತಿಯಾಗಿ ಎಲ್ಲಿಯೂ ಹೇಳಿಲ್ಲ. ಹಾವೇರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳೇ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ್ದಾರೆ ಎಂದು ಸ್ಪಷ್ಟಪಡಿಸಿದರು.