ಗ್ಯಾಸ್ ಸಿಲಿಂಡರ್ ಇಲ್ಲದೇ ಆಟೋಚಾಲಕರು, ಹೊಟೇಲ್ ನವರು, ತಿಂಡಿ ನಡೆಸುತ್ತಿರುವ ವ್ಯಾಪಾರಿಗಳು ಪರದಾಡುತ್ತಿದ್ದಾರೆ.
ಕನ್ನಡಪ್ರಭ ವಾರ್ತೆ ಮೈಸೂರು
ಯುದ್ಧ ನಿಲ್ಲಿಸಿ, ಗ್ಯಾಸ್ ಸಿಲಿಂಡರ್ ಕೊಡಿಸುವಂತೆ ಆಗ್ರಹಿಸಿ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಅವರು ನಗರದ ಹಾರ್ಡಿಂಜ್ ವೃತ್ತದಲ್ಲಿ ಈಡುಗಾಯಿ ಚಳವಳಿ ನಡೆಸಿದರು.ಈ ವೇಳೆ ವಾಟಾಳ್ ನಾಗರಾಜ್ ಮಾತನಾಡಿ, ಇರಾನ್ ಮೇಲಿನ ಅಮೆರಿಕಾ ಹಾಗೂ ಇಸ್ರೇಲ್ ದಾಳಿಯಿಂದ ಮಾನವ ಕುಲವೇ ಬೆಚ್ಚಿ ಬಿದ್ದಿದೆ. ಇದರಿಂದ ತೀವ್ರ ಪರಿಣಾಮ ಬೀರಿ, ಜನರು ಅಡುಗೆ ಮಾಡಲು ಗ್ಯಾಸ್ ಸಿಲಿಂಡರ್ ಇಲ್ಲದೇ ಪರದಾಡುತ್ತಿದ್ದಾರೆ. ಈ ಕೂಡಲೇ ಯುದ್ಧ ನಿಲ್ಲಿಸಿ, ಶಾಂತಿ ಸ್ಥಾಪನೆಯಾಗಲಿ ಎಂದು ಒತ್ತಾಯಿಸಿದರು.ಗ್ಯಾಸ್ ಸಿಲಿಂಡರ್ ಇಲ್ಲದೇ ಆಟೋಚಾಲಕರು, ಹೊಟೇಲ್ ನವರು, ತಿಂಡಿ ನಡೆಸುತ್ತಿರುವ ವ್ಯಾಪಾರಿಗಳು ಪರದಾಡುತ್ತಿದ್ದಾರೆ. ಕೇಂದ್ರ ಸರ್ಕಾರ ಸಮರ್ಪಕವಾಗಿ ಗ್ಯಾಸ್ ಸಿಲಿಂಡರ್ ಗಳ ವ್ಯವಸ್ಥೆ ಮಾಡಬೇಕು. ಸರ್ವ ಪಕ್ಷಗಳ ನಿಯೋಗವು ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿ, ಗ್ಯಾಸ್ ಸಿಲಿಂಡರ್ ಸಮಸ್ಯೆ ನೀಗಿಸಲಿ ಎಂದು ಅವರು ಆಗ್ರಹಿಸಿದರು.ರಾಜ್ಯ ಸರ್ಕಾರ ಜನರಿಗೆ ಅನುಕೂಲ ಮಾಡಿಕೊಡಲಿ, ಸರ್ಕಾರದ ಮಂತ್ರಿಗಳು ನೀವು ಮೊದಲು ಸೌದೆಯಲ್ಲಿ ಅಡುಗೆ ಮಾಡಿದರೆ ಜನರ ಕಷ್ಟ ಅರಿವಾಗುತ್ತದೆ. ಸಮಸ್ಯೆ ಬಗೆಹರಿಸದಿದ್ದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮನೆಗೆ ನುಗ್ಗುತ್ತೇನೆ. ಇಡೀ ರಾಜ್ಯದಲ್ಲಿ ಆಟೋ ಚಾಲಕರು ನೋವು ಪಡುತ್ತಿದ್ದಾರೆ. ಈ ಚಾಲಕರಿಗೆ ಪ್ರತಿ ತಿಂಗಳು 15 ಸಾವಿರ ಕೊಡಿ. 15 ದಿನದೊಳಗೆ ಸಮಸ್ಯೆ ಬಗೆಹರಿಸದಿದ್ದರೆ ಕರ್ನಾಟಕ ಬಂದ್ ಮಾಡುತ್ತೇವೆ ಎಂದು ಅವರು ಎಚ್ಚರಿಸಿದರು.ಡ್ರಗ್ಸ್ ಪ್ರಕರಣಗಳು ಮತ್ತೆ ಬಾರದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿಗಿ ನಿಲುವು ತಾಳಬೇಕು ಎಂದು ಅವರು ಒತ್ತಾಯಿಸಿದರು.ಕನ್ನಡಪರ ಹೋರಾಟಗಾರರಾದ ಮೂಗೂರು ನಂಜುಂಡಸ್ವಾಮಿ, ಶಿವಶಂಕರ್, ತೇಜಸ್ ಲೋಕೇಶ್ ಗೌಡ, ಪಾರ್ಥಸಾರಥಿ ಮೊದಲಾದವರು ಇದ್ದರು.