ಕಠಿಣ ಪರಿಶ್ರಮಿ, ಸ್ನೇಹಜೀವಿ ಸಿದ್ದಣ್ಣ ಚಂಗಳಿ ಸೇವಾ ನಿವೃತ್ತಿ

| Published : Jun 28 2024, 12:47 AM IST

ಕಠಿಣ ಪರಿಶ್ರಮಿ, ಸ್ನೇಹಜೀವಿ ಸಿದ್ದಣ್ಣ ಚಂಗಳಿ ಸೇವಾ ನಿವೃತ್ತಿ
Share this Article
  • FB
  • TW
  • Linkdin
  • Email

ಸಾರಾಂಶ

ಕಳೆದ ಎರಡು ವರ್ಷಗಳಿಂದ ಮುಂಡರಗಿ ಪಟ್ಟಣದ ಸರ್ಕಾರಿ ಐಟಿಐ ಕಾಲೇಜಿನ ಪ್ರಾಚಾರ್ಯರಾಗಿ, ವಿದ್ಯಾರ್ಥಿಗಳ ಹಾಗೂ ಕಾಲೇಜಿನ ಸಿಬ್ಬಂದಿ ವರ್ಗದವರ ಮನಗೆದ್ದಿದ್ದ ನೆಚ್ಚಿನ ಕಠಿಣ ಪರಿಶ್ರಮಿ, ಸ್ನೇಹಜೀವಿ ಸಿದ್ದಣ್ಣ ಚಂಗಳಿ ಜೂ. 28ರಂದು ಸೇವಾ ನಿವೃತ್ತಿ ಹೊಂದಲಿದ್ದಾರೆ.

ಮುಂಡರಗಿ: ಎರಡು ವರ್ಷಗಳಿಂದ ಮುಂಡರಗಿ ಪಟ್ಟಣದ ಸರ್ಕಾರಿ ಐಟಿಐ ಕಾಲೇಜಿನ ಪ್ರಾಚಾರ್ಯರಾಗಿ, ವಿದ್ಯಾರ್ಥಿಗಳ ಹಾಗೂ ಕಾಲೇಜಿನ ಸಿಬ್ಬಂದಿ ಮನಗೆದ್ದಿದ್ದ ಕಠಿಣ ಪರಿಶ್ರಮಿ, ಸ್ನೇಹಜೀವಿ ಸಿದ್ದಣ್ಣ ಚಂಗಳಿ ಜೂ. 28ರಂದು ಸೇವಾ ನಿವೃತ್ತಿ ಹೊಂದಲಿದ್ದಾರೆ.

ಜೂ. 28ರಂದು ಮುಂಡರಗಿ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಬೆಳಗ್ಗೆ 10.30ಕ್ಕೆ ಬೀಳ್ಕೊಡುಗೆ ಸಮಾರಂಭ ಜರುಗಲಿದ್ದು, ಸಂಡೂರಿನ ಪ್ರಭು ಮಹಾಸ್ವಾಮೀಜಿ, ಭೈರನಟ್ಟಿಯ ಜ. ಶಾಂತಲಿಂಗ ಮಹಾಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಸಿಬ್ಬಂದಿ ಹಾಗೂ ವಿದ್ಯಾರ್ಥಿ ಬಳಗದ ಹಮ್ಮಿಕೊಂಡಿರುವ ಈ ಸಮಾರಂಭದಲ್ಲಿ, ಬೇರೆ-ಬೇರೆ ಕೈಗಾರಿಕಾ ತರಬೇತಿ ಸಂಸ್ಥೆಯವರು ಪಾಲ್ಗೊಳ್ಳಲಿದ್ದಾರೆ.

ಹಿನ್ನೆಲೆ-ಸೇವೆ: ಸಿದ್ದಣ್ಣ ಚಂಗಳಿ ಅವರು ಮೂಲತಃ ಬಾಗಲಕೋಟಿ ಜಿಲ್ಲೆಯ ಬೇವೂರಿನವರು. 1964ರಲ್ಲಿ ಜನಿಸಿದ ಅವರು ಬೇವುರಿನಲ್ಲಿ ತಮ್ಮ ಪ್ರಾಥಮಿಕ ಹಾಗೂ ಮಾಧ್ಯಮಿಕ ಶಿಕ್ಷಣ ಪಡೆದು, ವಿಜಯಪುರದಲ್ಲಿ ವೃತ್ತಿಪರ ಐಟಿಐ ಶಿಕ್ಷಣ ಪಡೆದರು.

1984ರಲ್ಲಿ ಬೆಂಗಳೂರಿನ ಎಚ್.ಎ.ಎಲ್. ವಿಮಾನ ಕಾರ್ಖಾನೆಯಲ್ಲಿ ಅಪ್ರೆಂಟಿಸ್ ತರಬೇತಿ ಪಡೆದುಕೊಂಡರು. ಅಷ್ಟರಲ್ಲಿ ಅವರ ತಂದೆ ನಿಧನರಾದರು. ಆನಂತರ ಖಾಸಗಿ ಸಂಸ್ಥೆಯಲ್ಲಿ ಕೆಲಸ ಹುಡುಕಿ ಜಯನಗರದ ಉದ್ಯಮಿ ರವೀಂದ್ರ ಪಾಲಹಳ್ಳಿ ಅವರ ಸಿನರ್‌ಜಿಸ್ಟಿಕ್ ಇಂಡಿಯಾ ಪ್ರೆ .ಲಿ. ಸಂಸ್ಥೆಯಲ್ಲಿ ಸೇವೆ ಪ್ರಾರಂಭಿಸಿದರು. ಅಲ್ಲಿ 1985ರಿಂದ 1988ರ ವರೆಗೆ ಸೇವೆ ಸಲ್ಲಿಸಿದರು. ಆನಂತರ ಮುಂದಿನ ಕೆಲಸಕ್ಕೆ ಹೋಗಲು ರವೀಂದ್ರ ಅವರೇ ಆರ್ಥಿಕ ನೆರವು ನೀಡಿದರು.

ಇದೇ ಸಂದರ್ಭದಲ್ಲಿ ಅದೇ ತಾನೆ ಹೊಸದಾಗಿ ಸಂಡೂರಿನ ಪ್ರಭು ಮಹಾಸ್ವಾಮೀಜಿ ಸಂಡೂರಿನಲ್ಲಿ 1988ರಲ್ಲಿ ಐಟಿಐ ಕಾಲೇಜು ಪ್ರಾರಂಭಿಸಿದ್ದರು. ಸರ್ಕಾರಕ್ಕೆ ಒಳಪಡಬೇಕಾದ ಸಂಸ್ಥೆ ಅದಾಗಿದ್ದ ಕಾರಣ ಸಂಡೂರಿನ ಐಟಿಐ ಕಾಲೇಜಿಗೆ 1988ರಲ್ಲಿ ಬೋಧಕರಾಗಿ ಸೇರಿಕೊಂಡರು. ಅಲ್ಲಿ ಎರಡು ವರ್ಷ ಸೇವೆ ಸಲ್ಲಿಸಿ, ಅಲ್ಲಿಂದ ಗದುಗಿನ ತೋಂಟದಾರ್ಯ ಮಠದ ಸಂಸ್ಥೆಯಿಂದ ಪ್ರಾರಂಭವಾಗಿದ್ದ ಜೆ.ಟಿ. ಐ.ಟಿ.ಐ. ಮಂಡಲಗಿರಿಯಲ್ಲಿ ಐಟಿಐ ಇನೆಸ್ಪೆಕ್ಟರ್‌ ಆಗಿ ನೇಮಕವಾದರು.

ಚಂಗಳಿ ಅವರನ್ನು ಗದುಗಿನ ತೋಂಟದ ಸಿದ್ದಲಿಂಗ ಸ್ವಾಮೀಜಿ ಮಂಡಲಗಿರಿಯಿಂದ ತಮ್ಮ ಮೂಲ ಮಠವಾದ ಡಂಬಳಕ್ಕೆ ವರ್ಗಾವಣೆ ಮಾಡಿಸಿ, ಅಲ್ಲಿ ಸ್ಥಾಪಿಸಿದ್ದ ತೋಂಟದಾರ್ಯ ಕೈಗಾರಿಕಾ ತರಬೇತಿ ಸಂಸ್ಥೆ ಜವಾಬ್ದಾರಿ ನೀಡಿದರು. ಇಲ್ಲಿಯೂ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುವ ಮೂಲಕ ವಿದ್ಯಾರ್ಥಿಗಳಿಗೆ ಅಚ್ಚುಮೆಚ್ಚಿನ ಗುರುಗಳಾದರು.

1990ರಿಂದ 98ರ ವರೆಗೆ ಸತತವಾಗಿ 8 ವರ್ಷಗಳ ಕಾಲ ಸೇವೆ ಸಲ್ಲಿಸಿದ ಬಳಿಕ ಸರ್ಕಾರ ಅವರನ್ನು ಐಟಿಐ ಬೋಧಕ ಹುದ್ದೆಗೆ ನೇಮಿಸಿತು. ಅವರಿಗೆ ತೋಂಟದ ಶ್ರೀಗಳ ಸಂಸ್ಥೆ ಬಿಟ್ಟು ಹೋಗಲು ಮನಸ್ಸಿಲ್ಲದಿದ್ದರೂ ಶ್ರೀಗಳ ಸೂಚನೆಯ ಮೇರೆಗೆ ತೆರಳಿದರು.

1998ರಲ್ಲಿ ಕುಕನೂರಿನ ಸರ್ಕಾರಿ ಐಟಿಐ ಸಂಸ್ಥೆಯ ಕಿರಿಯ ತರಬೇತಿ ಅಧಿಕಾರಿಯಾಗಿ ನೇಮಕಗೊಂಡರು. 2018ರಲ್ಲಿ ಬಳ್ಳಾರಿ ಐಟಿಐನಲ್ಲಿ ಒಂದು ವರ್ಷ ಸೇವೆ ಸಲ್ಲಿಸಿ, 2019ರಿಂದ 2021ರ ವರೆಗೆ ಎರಡು ವರ್ಷಗಳ ಕಾಲ ಕುಷ್ಟಗಿ ತಾಲೂಕಿನ ಯಡ್ಡೋಣಿಯಲ್ಲಿ ಬೋಧಕರಾಗಿ ಸೇವೆ ಸಲ್ಲಿಸಿದರು. ಆನಂತರ ಪದೋನ್ನತಿ ಹೊಂದಿ 2022ರಿಂದ 2024ರ ಜೂನ್ 28ರವರೆಗೆ ಮುಂಡರಗಿ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಚಾರ್ಯರಾಗಿ ಸೇವೆ ಸಲ್ಲಿಸಿದರು. ಮುಂಡರಗಿ ಐಟಿಐ ಕಾಲೇಜನ್ನು ಇನ್ನಷ್ಟು ಅಭಿವೃದ್ಧಿ ಪಥದತ್ತ ತೆಗೆದುಕೊಂಡು ಹೋದರು.