ಸಾರಾಂಶ
ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು ಅಭಿವಂದನಾ ಸಮಿತಿ ವತಿಯಿಂದ ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು ಅಭಿವಂದನಾ ಮತ್ತು ಕರ್ಮಯೋಗಿ ಬಿರುದು ಪ್ರದಾನ ಸಮಾರಂಭ ಪಿಲಿಕುಳದ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ತರಬೇತಿ ಕೇಂದ್ರದಲ್ಲಿ ಶನಿವಾರ ನೆರವೇರಿತು.
ಕನ್ನಡಪ್ರಭ ವಾರ್ತೆ ಮಂಗಳೂರು
ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು ಅಭಿವಂದನಾ ಸಮಿತಿ ವತಿಯಿಂದ ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು ಅಭಿವಂದನಾ ಮತ್ತು ಕರ್ಮಯೋಗಿ ಬಿರುದು ಪ್ರದಾನ ಸಮಾರಂಭ ಪಿಲಿಕುಳದ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ತರಬೇತಿ ಕೇಂದ್ರದಲ್ಲಿ ಶನಿವಾರ ನೆರವೇರಿತು.ಧರ್ಮಸ್ಥಳ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಮಾತನಾಡಿ, ಅನೇಕ ಸ್ಥಾನಗಳನ್ನು ಪುನರೂರರು ಅಲಂಕರಿಸಿ ಅದರ ಶ್ರೇಯಸ್ಸನ್ನು ಹೆಚ್ಚಿಸಿದ್ದಾರೆ. ಇಂದು ಇವರಿಗೆ ನೀಡಿರುವ ‘ಕರ್ಮಯೋಗಿ’ ಎನ್ನುವ ಬಿರುದು ಅವರ ವ್ಯಕ್ತಿತ್ವ ಹಾಗೂ ಅವರು ನೀಡಿದ ಕೊಡುಗೆಗಳಿಗೆ ಸೂಕ್ತವಾಗಿದೆ ಎಂದರು.ಕಾರ್ಯಕ್ರಮದಲ್ಲಿ ಮಾತನಾಡಿದ ಕರ್ನಾಟಕ ವಿಧಾನಸಭಾಧ್ಯಕ್ಷ ಯು.ಟಿ. ಖಾದರ್, ಬಹಳ ಉತ್ತಮವಾಗಿ ಆಯೋಜಿಸಲಾದ ಅಭಿವಂದನಾ ಕಾರ್ಯಕ್ರಮವು ಸಾಮಾನ್ಯ ಕಾರ್ಯಕ್ರಮಗಳಂತಲ್ಲ ಇದು ಕರ್ನಾಟಕದ ಯುವ ಸಮುದಾಯಕ್ಕೆ ಹರಿಕೃಷ್ಣ ಪುನರೂರು ಅವರ ವ್ಯಕ್ತಿತ್ವದ ಪರಿಚಯದ ಕಾರ್ಯಕ್ರಮ. ಶಾಲಾ ಕಾಲೇಜುಗಳಲ್ಲಿ ಒಂದಷ್ಟನ್ನು ಕಲಿಯಬಹುದು, ಇಂತಹ ವ್ಯಕ್ತಿ ಪರಿಚಯದಿಂದ ಈಗಿನ ಪೀಳಿಗೆ ಕಲಿಯಲು ಅಗಾಧವಾಗಿದೆ. ಜಿಲ್ಲೆಯ ಪರಂಪರೆ ಮತ್ತು ಸಂಸ್ಕೃತಿಯನ್ನು ಕಾಣುವುದಿದ್ದರೆ ಅದು ಪುನರೂರರಿಂದ ಮಾತ್ರ. ಇವರ ಸೇವಾ ಗುಣವು ನಿಜಕ್ಕೂ ಸಮಾಜಕ್ಕೆ ಮಾದರಿ. ಮನುಷ್ಯ ಕೊನೆಗೆ ಹೋಗುವಾಗ ತನ್ನ ಯಾವುದೇ ಅಧಿಕಾರವನ್ನು ತೆಗೆದು ಕೊಂಡು ಹೋಗುವುದಿಲ್ಲ ಆತ ಯಾವುದನ್ನಾದರು ತೆಗೆದುಕೊಂಡು ಹೋಗುವುದಿದ್ದರೆ ಅದು ಪ್ರೀತಿ ಮತ್ತು ವಿಶ್ವಾಸ ಎಂದರು.ಆಶೀರ್ವಚನ ನೀಡಿದ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಪುನರೂರು ಕರ್ನಾಟಕಕ್ಕೆ ಕೊಟ್ಟ ಕೊಡುಗೆ ಅಮೂಲ್ಯವಾದದ್ದು. ಪುಟ್ಟ ಊರು ಪುನರೂರು ಇಂದು ದೇಶದ ಉದ್ದಗಲಕ್ಕೂ ಮನೆಮಾತಾಗಿದ್ದು ಹರಿಕೃಷ್ಣ ಪುನರೂರು ಅವರ ಕರ್ಮಯೋಗದಿಂದ. ಸಮಾಜದ ಮೇಲೆ ದೀನದಲಿತರ ಮೇಲೆ ವಿಶೇಷ ಕರುಣೆ ಹೊಂದಿದ್ದ ಅವರು ಓರ್ವ ನಿಗರ್ವಿ, ನಿರಹಂಕಾರಿ ವ್ಯಕ್ತಿತ್ವ ಉಳ್ಳವರು ಎಂದು ಹೇಳಿದರು.ಮೂಡುಬಿದಿರೆ ಶಾಸಕ ಉಮಾನಾಥ್ ಕೋಟ್ಯಾನ್ ಮಾತನಾಡಿದರು.ಅಭಿವಂದನಾ ನುಡಿಯನ್ನಾಡಿದ ಸಾಹಿತಿ ಹಾಗೂ ಸಂಶೋಧಕ ಡಾ. ಕಬ್ಬಿನಾಲೆ ವಸಂತ ಭಾರದ್ವಾಜ, ಸಾಧಿಸಿದವನಿಗೆ ಎಂದಿಗೂ ಕೂಡ ಬೇಸರ, ಅಹಂಕಾರ, ಆಲಸ್ಯವಿರಬಾರದು ಇದಕ್ಕೆ ಅರ್ಥ ಪೂರ್ಣವಾದ ಹೆಸರು ಹರಿಕೃಷ್ಣ ಪುನರೂರು ಎಂದು ಶ್ಲಾಘಿಸಿದರು.ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ, ಪುನರೂರು ಅವರ ಪತ್ನಿ ಉಷಾ ರಾಣಿ, ದುಗ್ಗಣ್ಣ ಸಾಮಂತರು, ಪ್ರದೀಪ್ ಕಲ್ಕೂರ, ಉದ್ಯಮಿ ಶ್ರೀಪತಿ ಭಟ್, ಡಾ. ಶ್ರೀನಾಥ್, ಭುವನಾಭಿ ರಾಮ ಉಡುಪ ಮತ್ತಿತರರು ಇದ್ದರು.ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಸ್ವಾಗತಿಸಿದರು. ನವನೀಶ್ ಶೆಟ್ಟಿ ಕದ್ರಿ ನಿರೂಪಿಸಿದರು...............ಪುನರೂರು ಸಾಕ್ಷ್ಯ ಚಿತ್ರ ಪ್ರದರ್ಶನಕಾರ್ಯಕ್ರಮದ ಆರಂಭದಲ್ಲಿ ಸುರ್ ಸಾಗರ್ ಫ್ಯೂಷನ್ ಬ್ಯಾಂಡ್‌ನ ಲೋಕೇಶ್ ಸಂಪಿಗೆ ಅವರಿಂದ ಕೊಳಲು ವಾದನ ನಡೆಯಿತು. ಪುನರೂರು ಅವರ ಧೀಮಂತ ಬದುಕಿನ ಕುರಿತು ಶಶಿರಾಜ್ ಕಾವೂರು ಅವರ ನಿರ್ದೇಶನದ ಸಾಕ್ಷ್ಯ ಚಿತ್ರ ಪ್ರದರ್ಶನ ಮಾಡಲಾಯಿತು. ಬಳಿಕ ಮೇಳ ವಾದ್ಯಗಳಿಂದ ಕೂಡಿದ ಭವ್ಯ ಮೆರವಣಿಗೆಯ ಮೂಲಕ ಪುನರೂರು ಅವರನ್ನು ಸಭೆಗೆ ಕರೆತರಲಾಯಿತು. ಧರ್ಮಸ್ಥಳದ ಪರವಾಗಿಯೂ ಪುನರೂರು ಅವರನ್ನು ಸನ್ಮಾನಿಸಲಾಯಿತು.