ಸಾರಾಂಶ
- ಹರಿಹರ ಶಾಸಕ ಬಿ.ಪಿ.ಹರೀಶ, ಜೆಡಿಎಸ್ ಮುಖಂಡ ಶಿವಶಂಕರ ವಿರುದ್ಧ ಮಾಜಿ ಸಚಿವ ತೀವ್ರ ವಾಗ್ದಾಳಿ
- ಮೈತ್ರಿಗೆ ಸೀಮಿತ ಇರಲಿ, ಬಿಜೆಪಿ ವಿಚಾರಕ್ಕೆ ಬಾರದಂತೆ ಮಾಜಿ ಶಾಸಕ ಶಿವಶಂಕರ್‌ಗೆ ಎಚ್ಚರಿಕೆ- ದಾವಣಗೆರೆಯ ಶಿರಮಗೊಂಡನಹಳ್ಳಿಯಲ್ಲಿ ಬಿಜೆಪಿ ಹಿರಿಯ ನಾಯಕ, ಮಾಜಿ ಸಚಿವ ಎಸ್.ಎ.ರವೀಂದ್ರನಾಥರ ನಿವಾಸದಲ್ಲಿ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಹೇಳಿಕೆ- - - ಕನ್ನಡಪ್ರಭ ವಾರ್ತೆ, ದಾವಣಗೆರೆ
ಲೋಕಸಭೆ ಚುನಾವಣೆಯಲ್ಲಿ ಮಾಜಿ ಸಚಿವ ಎಸ್.ಎ. ರವೀಂದ್ರನಾಥರ ನೇತೃತ್ವದಲ್ಲಿ ಬಿಜೆಪಿ ಗೆಲುವಿಗಾಗಿ ಪ್ರಾಮಾಣಿಕವಾಗಿ, ಮನಃಪೂರ್ವಕವಾಗಿ ನಾವೆಲ್ಲರೂ ಕೆಲಸ ಮಾಡಿದ್ದೇವೆ. ಆದರೂ, ಹರಿಹರ ಕ್ಷೇತ್ರ ಶಾಸಕ ಬಿ.ಪಿ.ಹರೀಶ, ಮಾಜಿ ಶಾಸಕ ಹಾಗೂ ಜೆಡಿಎಸ್ ಮುಖಂಡ ಎಚ್.ಎಸ್. ಶಿವಶಂಕರ ಆರೋಪಿಸುವುದು ಸರಿಯಲ್ಲ ಎಂದು ಬಿಜೆಪಿ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಗುಟುರು ಹಾಕಿದ್ದಾರೆ.ತಾಲೂಕಿನ ಶಿರಮಗೊಂಡನಹಳ್ಳಿಯಲ್ಲಿ ಬಿಜೆಪಿ ಹಿರಿಯ ನಾಯಕ, ಮಾಜಿ ಸಚಿವ ಎಸ್.ಎ.ರವೀಂದ್ರನಾಥರ ನಿವಾಸದಲ್ಲಿ ಸಭೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ವಿರುದ್ಧವಷ್ಟೇ ಅಲ್ಲ, ಬಿ.ಎಸ್.ಯಡಿಯೂರಪ್ಪ, ಬಿ.ವೈ.ವಿಜಯೇಂದ್ರ ವಿರುದ್ಧವೂ ಮಾತನಾಡುತ್ತಿರುವ ಹರಿಹರ ಶಾಸಕ ಬಿ.ಪಿ.ಹರೀಶ ಇದೇ ರೀತಿ ಮಾತನಾಡಿದರೆ ಸರಿ ಇರುವುದಿಲ್ಲ ಎಂದರು.
ಹರೀಶ ಬಿಜೆಪಿ ತತ್ವ, ಸಿದ್ಧಾಂತ ಅಳವಡಿಸಿಕೊಂಡಿದ್ದರೆ ಹೀಗೆಲ್ಲಾ ಮಾತನಾಡುತ್ತಿರಲಿಲ್ಲ. ಹರಿಹರದಲ್ಲಿ ಕಾಂಗ್ರೆಸ್ ಪಕ್ಷವು ಬಿಜೆಪಿಗಿಂತಲೂ ಹೆಚ್ಚು ಮತ ಪಡೆದಿದೆ. ಅಲ್ಲಿ ಹರೀಶ, ಜೆಡಿಎಸ್ ಮಾಜಿ ಶಾಸಕ ಎಚ್.ಎಸ್. ಶಿವಶಂಕರ ಸೇರಿ ಮೂವರಿದ್ದರೂ ಏಕೆ ಲೀಡ್ ಕೊಡಿಸಲಿಲ್ಲ? ವಿಧಾನಸಭೆ ಚುನಾವಣೆಯಲ್ಲಿ ಇಬ್ಬರೂ 1 ಲಕ್ಷಕ್ಕೂ ಅಧಿಕ ಮತ ಪಡೆದಿದ್ದರು. ಆದರೆ, ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಬಂದಿದ್ದು ಕೇವಲ 70 ಸಾವಿರ ಮತ ಮಾತ್ರ. ತಮ್ಮ ಕ್ಷೇತ್ರದಲ್ಲೇ ಬಿಜೆಪಿಗೆ ಮುನ್ನಡೆ ಕೊಡಿಸಲಾಗದ ಹರೀಶ ಹಗುರ ಮಾತನಾಡಿದರೆ ಸರಿ ಇರಲ್ಲ. ಜೆಡಿಎಸ್ ಶಿವಶಂಕರ ಮೈತ್ರಿಗಷ್ಟೇ ಸೀಮಿತ. ನಮ್ಮ ಪಕ್ಷದ ವಿಚಾರದಲ್ಲಿ ಪ್ರವೇಶಿಸುವುದು ಸರಿಯಲ್ಲ ಎಂದು ಆಕ್ಷೇಪಿಸಿದರು.ಬಿಜೆಪಿ ಕೃತಜ್ಞತಾ ಸಭೆಯಲ್ಲಿ ಹರೀಶ, ಶಿವಶಂಕರ ದ್ವೇಷದ ಮಾತನ್ನಾಡಿದ್ದಾರೆ. ನಿಷ್ಠಾವಂತರು ಇಲ್ಲಿದ್ದರೆ, ಸೋಲಿಸಿದವರು ದೆಹಲಿಗೆ ಹೋಗಿದ್ದಾರೆಂದು ಆರೋಪಿಸಿದ್ದಾರೆ. ನಾವು ಲೋಕಸಭೆ ಚುನಾವಣೆ ಪೂರ್ವದಲ್ಲಿ ಟಿಕೆಟ್ ಕೇಳಿದ್ದು ನಿಜ. ಆದರೆ, ಪಕ್ಷದ ನಾಯಕರ ಸೂಚನೆ ಮೇರೆಗೆ ನಾವು ಕೆಲಸ ಮಾಡಿದ್ದೇವೆ. 2014ರಲ್ಲಿ ನರೇಂದ್ರ ಮೋದಿ ಪ್ರಧಾನಿ ಅಭ್ಯರ್ಥಿ ಆಗಿದ್ದಾಗಲೇ ಬಿ.ಪಿ.ಹರೀಶ್ ಕಾಂಗ್ರೆಸ್ಸಿಗೆ ಹೋಗಿದ್ದು ಪಕ್ಷ ನಿಷ್ಠೆನಾ? ಸತ್ಯಹರಿಶ್ಚಂದ್ರನು ಬಿ.ಪಿ.ಹರೀಶ ಮನೆಯಲ್ಲಿ ಹುಟ್ಟಿದ್ದನಾ ಎಂದು ರೇಣುಕಾಚಾರ್ಯ ಹರಿಹಾಯ್ದರು.
ನಿಮ್ಮಿಂದಲೇ ಪಕ್ಷವಿರೋಧಿ ಚಟುವಟಿಕೆ:ಕಾಂಗ್ರೆಸ್ಸಿಗೆ ಹೋಗಿದ್ದ ಹರೀಶ್‌ಗೆ ವಾಪಸ್ ಬಿಜೆಪಿಗೆ ಸೇರಿಸಿಕೊಂಡಿದ್ದೇ ಎಸ್.ಎ.ರವೀಂದ್ರನಾಥ್. ಶಾಮನೂರು ಶಿವಶಂಕರಪ್ಪ ಅವರು ಅಭಾವೀಮ ಕಾರ್ಯಕ್ರಮದಲ್ಲಿ ಹೇಳಿಕೆ ನೀಡಿದ್ದಾರೆ. ಆದರೆ, ಪಕ್ಷ ವಿರೋಧಿ ಚಟುವಟಿಕೆ ಮಾಡಿದ್ದೇ ನೀವುಗಳು. ಮಾಜಿ ಸಚಿವ ಎಸ್.ಎ.ರವೀಂದ್ರನಾಥ ನೇತೃತ್ವದಲ್ಲೇ ಚುನಾವಣೆಯೆಂದು ಯಡಿಯೂರಪ್ಪ ಹೇಳಿದ್ದರೂ, ಒಂದು ಸಭೆಯನ್ನೂ ಜಿ.ಎಂ. ಸಿದ್ದೇಶ್ವರ ಮಾಡಲಿಲ್ಲ. ಪಕ್ಷ ವಿರೋಧಿ ಚಟುವಟಿಕೆ ಮಾಡಿದ್ದು ನೀವೇ ಹೊರತು, ನಾವಲ್ಲ ಎಂದರು.
ಜಗಳೂರಲ್ಲೇಕೆ ಮುನ್ನಡೆ ಸಿಗಲಿಲ್ಲ:ಜಗಳೂರಿನಲ್ಲಿ ಜಿ.ಎಂ. ಸಿದ್ದೇಶ್ವರ ಪುತ್ರ ಜಿ.ಎಸ್. ಅನಿತಕುಮಾರ ಇನ್‌ಚಾರ್ಜ್ ಇದ್ದರೂ ಅಲ್ಲಿ ಏಕೆ ಬಿಜೆಪಿಗೆ ಮುನ್ನಡೆ ಸಿಗಲಿಲ್ಲ? ದಾವಣಗೆರೆ ಉತ್ತರದಲ್ಲಿ ಬಿಜೆಪಿಗೆ ಮುನ್ನಡೆ ಬಂದಿತಲ್ಲವೇ? ಇದಕ್ಕೆ ಎಸ್.ಎ.ರವೀಂದ್ರನಾಥ, ಲೋಕಿಕೆರೆ ನಾಗರಾಜ, ಡಾ. ಎ.ಎಚ್. ಶಿವಯೋಗಿಸ್ವಾಮಿ ಕಾರಣ ಅಲ್ಲವೇ? ಇನ್ನಾದರೂ ಬಿ.ಪಿ.ಹರೀಶ ಉದ್ಧಟನದ ಹೇಳಿಕೆ ಬಿಡಬೇಕು. ನಮ್ಮ ಬಗ್ಗೆ ಹೀಗೆ ಉದ್ಧಟತನದ ಹೇಳಿಕೆ ನೀಡಿದರೆ, ಎಲ್ಲಿ ಉತ್ತರ ಕೊಡಬೇಕೋ ಅಲ್ಲಿಯೇ ಕೊಡುತ್ತೇವೆ ಎಂದು ಎಂ.ಪಿ.ರೇಣುಕಾಚಾರ್ಯ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು.
ಮಾಜಿ ಸಚಿವ ಎಸ್.ಎ.ರವೀಂದ್ರನಾಥ, ವಿಪ ಮಾಜಿ ಮುಖ್ಯ ಸಚೇತಕ ಡಾ.ಎ.ಎಚ್.ಶಿವಯೋಗಿಸ್ವಾಮಿ, ಮಾಜಿ ಶಾಸಕ ಎಂ.ಬಸವರಾಜ ನಾಯ್ಕ, ಮುಖಂಡರಾದ ಮಾಡಾಳ ಮಲ್ಲಿಕಾರ್ಜುನ, ಲೋಕಿಕೆರೆ ನಾಗರಾಜ, ಬಿ.ಜಿ.ಅಜಯಕುಮಾರ ಇತರರು ಇದ್ದರು.- - - ಬಾಕ್ಸ್
* ನಮಗೆ ಬೈಯ್ಯಲೆಂದೇ ಕೃತಜ್ಞತಾ ಸಮಾರಂಭ - ಮೋದಿ, ಕಾರ್ಯಕರ್ತರ ಮುಖ ನೋಡಿ ಬಿಜೆಪಿಗೆ ಓಟು ಬಿದ್ದಿವೆ: ರೇಣುಕನ್ನಡಪ್ರಭ ವಾರ್ತೆ, ದಾವಣಗೆರೆ
ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಮುಖಂಡರು, ಕಾರ್ಯಕರ್ತರಿಗೆ ಕೃತಜ್ಞತಾ ಸಮಾರಂಭ ಮುಂದೂಡುವಂತೆ ಹೇಳಿದ್ದರೂ ಯಾಕೆ ಮಾಡಿದರು? ನಮಗೆ ಬೈಯಿಸಬೇಕು ಅಂತಲೇ ಮಾಡಿದ್ದಲ್ಲವೇ ಎಂದು ರೇಣುಕಾಚಾರ್ಯ ಪ್ರಶ್ನಿಸಿದರು.ಕೃತಜ್ಞತಾ ಸಭೆಯಲ್ಲಿ ಎಸ್.ಎ. ರವೀಂದ್ರನಾಥ, ಡಾ. ಎ.ಎಚ್. ಶಿವಯೋಗಿಸ್ವಾಮಿ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ. ನಾವು ಇಲ್ಲದ ಕಾರ್ಯಕ್ರಮದಲ್ಲಿ ನಮ್ಮನ್ನು ಬೈಯ್ಯಲೆಂದೇ ಮಾಡಿದ ಸಭೆ ಅದಾಗಿತ್ತು. ಯಡಿಯೂರಪ್ಪ, ವಿಜಯೇಂದ್ರ, ನಮ್ಮ ಬಗ್ಗೆ ಹಗುರ ಮಾತನಾಡುವುದನ್ನು ನಿಲ್ಲಿಸಲಿ. ಸೋಲು ನಮ್ಮಿಂದ ಆಗಿದ್ದಲ್ಲ. ಸ್ವಯಂಕೃತಾಪರಾಧದಿಂದ ಸೋಲಾಗಿದೆ ಎಂದರು.
ನರೇಂದ್ರ ಮೋದಿ, ಬಿಜೆಪಿ ಕಾರ್ಯಕರ್ತರ ಮುಖ ನೋಡಿ, ನಿಮಗೆ ಇಷ್ಟೊಂದು ಮತ ಬಂದಿದೆ. ಹರಿಹರದಲ್ಲಿ ಅದೃಷ್ಟದಿಂದ ನೀನು ಶಾಸಕನಾಗಿದ್ದೀಯ. ಇನ್ನು ಮುಂದೆ ಈ ರೀತಿಯೆಲ್ಲಾ ಮಾತನಾಡುವುದನ್ನು ಬಿಡಬೇಕು ಎಂದು ಹರಿಹರದ ಸ್ವಪಕ್ಷ ಶಾಸಕ ಬಿ.ಪಿ.ಹರೀಶ್ ಅವರಿಗೆ ಏಕವಚನದಲ್ಲೇ ರೇಣುಕಾಚಾರ್ಯ ಸಲಹೆ ನೀಡಿದರು.- - - -17ಕೆಡಿವಿಜಿ10, 11:
ದಾವಣಗೆರೆ ತಾಲೂಕು ಶಿರಮಗೊಂಡನಹಳ್ಳಿಯಲ್ಲಿ ಮಾಜಿ ಸಚಿವ ಎಸ್.ಎ. ರವೀಂದ್ರನಾಥ ನಿವಾಸದಲ್ಲಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಸುದ್ದಿಗಾರರೊಂದಿಗೆ ಮಾತನಾಡಿದರು.