ಅಧಿಕಾರ ಇರಲಿ, ಇಲ್ಲದಿರಲಿ ಸದಾ ಜನರೊಂದಿಗೆ, ಕ್ಷೇತ್ರದೊಂದಿಗೆ ಸದಾ ಒಡನಾಟ ಹೊಂದಿರುವ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಬಗ್ಗೆ ಮಾತನಾಡಲು ಹರಿಹರ ಶಾಸಕ ಬಿ.ಪಿ.ಹರೀಶ್ಗೆ ಯಾವುದೇ ನೈತಿಕತೆ ಇಲ್ಲ ಎಂದು ಹೊನ್ನಾಳಿ- ನ್ಯಾಮತಿ ತಾಲೂಕು ಬಿಜೆಪಿ ಅಧ್ಯಕ್ಷ ಅರಕೆರೆ ನಾಗರಾಜ ಆಕ್ಷೇಪಿಸಿದ್ದಾರೆ.
- ಅಸ್ತಿತ್ವಕ್ಕೆ ಹೋರಾಡುತ್ತಿರುವ ಹರಿಹರ ಶಾಸಕ ಕ್ಷೇತ್ರದ ಜನರ ಋಣ ತೀರಿಸಲಿ: ಅರಕೆರೆ ನಾಗರಾಜ - - -
ಕನ್ನಡಪ್ರಭ ವಾರ್ತೆ ದಾವಣಗೆರೆಅಧಿಕಾರ ಇರಲಿ, ಇಲ್ಲದಿರಲಿ ಸದಾ ಜನರೊಂದಿಗೆ, ಕ್ಷೇತ್ರದೊಂದಿಗೆ ಸದಾ ಒಡನಾಟ ಹೊಂದಿರುವ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಬಗ್ಗೆ ಮಾತನಾಡಲು ಹರಿಹರ ಶಾಸಕ ಬಿ.ಪಿ.ಹರೀಶ್ಗೆ ಯಾವುದೇ ನೈತಿಕತೆ ಇಲ್ಲ ಎಂದು ಹೊನ್ನಾಳಿ- ನ್ಯಾಮತಿ ತಾಲೂಕು ಬಿಜೆಪಿ ಅಧ್ಯಕ್ಷ ಅರಕೆರೆ ನಾಗರಾಜ ಆಕ್ಷೇಪಿಸಿದ್ದಾರೆ.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಮ್ಮ ನಾಯಕರಾದ ರೇಣುಕಾಚಾರ್ಯ ಬಗ್ಗೆ ಶಾಸಕ ಬಿ.ಪಿ.ಹರೀಶ ವೈಯಕ್ತಿಕವಾಗಿ ತೇಜೋವಧೆ ಮಾಡುತ್ತಿರುವುದನ್ನು ತೀವ್ರವಾಗಿ ಖಂಡಿಸುತ್ತೇವೆ ಎಂದರು.ಶಾಸಕ ಬಿ.ಪಿ.ಹರೀಶ 2018ರಿಂದ 2023ರವರೆಗೆ ನಿತ್ಯವೂ ರೇಣುಕಾಚಾರ್ಯ ಮನೆಗೆ ಬರುತ್ತಿದ್ದರು. ಹಲವಾರು ಕೆಲಸ, ಕಾರ್ಯ ಮಾಡಿಸಿಕೊಳ್ಳಲು, ರಾಜಕೀಯ ಲಾಭ ಪಡೆಯುವಾಗ, 2023ರಲ್ಲಿ ವಿರೋಧದ ಮಧ್ಯೆಯೂ ಟಿಕೆಟ್ ಕೊಡಿಸಿದಾಗ ರೇಣುಕಾಚಾರ್ಯ ಬ್ಲ್ಯಾಕ್ಮೇಲರ್ ಎಂಬುದು ಹರೀಶ್ಗೆ ಗೊತ್ತಿರಲಿಲ್ಲವೇ? ಎಲ್ಲ ಮುಗಿದ ಮೇಲೆ ಈಗ ಮಾಜಿ ಸಚಿವರ ವಿರುದ್ಧ ಹೇಳಿಕೆ ನೀಡುತ್ತಾ, ತೇಜೋವಧೆ ಮಾಡುತ್ತಿದ್ದೀರಾ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರೇಣುಕಾಚಾರ್ಯ ಮಾತ್ರವಲ್ಲ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಮಾಜಿ ಸಂಸದ ಜಿ.ಎಂ. ಸಿದ್ದೇಶ್ವರ ಬಗ್ಗೆಯೂ ಬಿ.ಪಿ.ಹರೀಶ ಹಗುರವಾಗಿ ಮಾತನಾಡಿದ್ದಾರೆ. ಸ್ವಪಕ್ಷದವರ ವಿರುದ್ಧವೇ ಹರೀಶ ಮಾತನಾಡುತ್ತಾರೆ. ಇನ್ನಾದರೂ ಪಕ್ಷ ವಿರೋಧಿ ಚಟುವಟಿಕೆಗಳನ್ನು ನಿಲ್ಲಿಸಲಿ. ಹರೀಶ ಈಗ ತಮ್ಮ ಅಸ್ತಿತ್ವಕ್ಕಾಗಿ ಹೋರಾಟ ನಡೆಸುತ್ತಿದ್ದಾರೆ. ತನ್ನನ್ನು ಗೆಲ್ಲಿಸಿದ ಹರಿಹರದ ಜನರ ಋಣ ತೀರಿಸುವ ಕೆಲಸವನ್ನೇ ಹರೀಶ ಮಾಡುತ್ತಿಲ್ಲ ಎಂದು ಟೀಕಿಸಿದರು.ರೇಣುಕಾಚಾರ್ಯ ರಾಜಕೀಯ ಜೀವನದ ಅಂತ್ಯಕಾಲ ಆರಂಭವಾಗಿದೆಯೆಂದು ಹರೀಶ ಹೇಳಿದ್ದು, ಅದನ್ನು ಕ್ಷೇತ್ರದ ಜನ ತೀರ್ಮಾನಿಸುತ್ತಾರೆ. 2028ರ ಚುನಾವಣೆಯಲ್ಲಿ ಯಾರ ರಾಜಕೀಯ ಜೀವನ ಅಂತ್ಯ ಎಂಬುದನ್ನು ಜನ ತೀರ್ಮಾನಿಸುತ್ತಾರೆ ಹೊರತು ಬಿ.ಪಿ.ಹರೀಶ ಅಲ್ಲ. ಮಾಜಿ ಸಚಿವ ರೇಣುಕಾಚಾರ್ಯರೇನೂ ನಮ್ಮ ಸಂಬಂಧಿಯಲ್ಲ, ಬೀಗರೂ ಅಲ್ಲ. ನಮ್ಮ ನಾಯಕರು. ಅವರ ಬಗ್ಗೆ ಇನ್ನು ಮುಂದೆ ಸಲ್ಲದ ರೀತಿ ಮಾತನಾಡಿದರೆ ಸಹಿಸುವ ಪ್ರಶ್ನೆಯೇ ಇಲ್ಲ ತಿರುಗೇಟು ನೀಡಿದರು.
ಹರೀಶ ಮಾತನಾಡಿದ್ದಕ್ಕೆ ರೇಣುಕಾಚಾರ್ಯ ಮಾತನಾಡಿದ್ದಾರೆ. ವಿಪ ಆಗ್ನೇಯ ಪದವೀಧರರ ಕ್ಷೇತ್ರಕ್ಕೆ ನೂತನವಾಗಿ ಆಯ್ಕೆಯಾದ ಕೆ.ಎಂ.ಸುರೇಶರಿಗೆ ಟಿಕೆಟ್ ಕೊಟ್ಟವರಿಗೆ ಹೊಡೆಯಬೇಕೆಂದು ಹರೀಶ ಹೇಳಿಕೆ ನೀಡಿದ್ದರು. ಈ ಎಲ್ಲ ವಿಚಾರಗಳ ಬಗ್ಗೆ ಪಕ್ಷದ ರಾಜ್ಯ ಉಸ್ತುವಾರಿ, ರಾಜ್ಯಾಧ್ಯಕ್ಷರ ಗಮನಕ್ಕೂ ತರುತ್ತೇವೆ. ಇನ್ನಾದರೂ ಬಿ.ಪಿ.ಹರೀಶ ತಮ್ಮ ವರ್ತನೆ, ಹೇಳಿಕೆ ಮೇಲೆ ಹಿಡಿತ ಹೊಂದಿರಲಿ ಎಂದು ಅರಕೆರೆ ನಾಗರಾಜ ಹೇಳಿದರು.ಪಕ್ಷದ ಒಬಿಸಿ ಮೋರ್ಚಾದ ರಾಜ್ಯ ಉಪಾಧ್ಯಕ್ಷ ಕೆ.ಪಿ.ಕುಬೇಂದ್ರಪ್ಪ ಮಾತನಾಡಿ, ಬಿಜೆಪಿಯಲ್ಲಿ ಎ ಟೀಂ, ಬಿ ಟೀಂ ಆಗುವುದಕ್ಕೆ ಮೂಲ ಕಾರಣವೇ ಬಿ.ಪಿ.ಹರೀಶ. ಕೇಂದ್ರದ ಮಾಜಿ ಸಚಿವಜಿ.ಎಂ.ಸಿದ್ದೇಶ್ವರ ಬಳಿ ಏನೇನೋ ಹೇಳಿ, ರೇಣುಕಾಚಾರ್ಯ ದೂರವಾಗುವಂತೆ ಮಾಡಿದರು. ಶಾಸಕರಾಗಿ ಸಣ್ಣಪುಟ್ಟದನ್ನು ಸರಿಪಡಿಸುವ ಬದಲಿಗೆ, ಎಲ್ಲರನ್ನೂ ದೂರ ಮಾಡಿ, ಕಂದಕ ಸೃಷ್ಟಿಸುವ ಕೆಲಸ ಮಾಡಿದ್ದಾರೆ ಎಂದು ಆರೋಪಿಸಿದರು.
ಪಕ್ಷದ ಮುಖಂಡರಾದ ಎಸ್.ಎಸ್.ಬೀರಪ್ಪ, ಜೆ.ಕೆ.ಸುರೇಶ, ನೆಲಹೊನ್ನೆ ಮಂಜುನಾಥ, ಶಿವು ಹುಡೇದ, ಸುರೇಂದ್ರ ನಾಯ್ಕ, ಜಿ.ಬಿ.ಮಾರುತಿ ನಾಯ್ಕ, ಎಂ.ಎಸ್.ಪಾಲಾಕ್ಷಪ್ಪ, ರಮೇಶ ಗೌಡ, ಸಿದ್ದಲಿಂಗಪ್ಪ, ಬಾಬಣ್ಣ ಇತರರು ಇದ್ದರು.- - -
(ಕೋಟ್)ಚಿತ್ರದುರ್ಗಕ್ಕೆ ಅ.31ರಂದು ಆಗಮಿಸುವ ಪಕ್ಷದ ರಾಜ್ಯ ಉಸ್ತುವಾರಿ ಹಾಗೂ ರಾಜ್ಯಾಧ್ಯಕ್ಷರಿಗೆ ಹರಿಹರ ಶಾಸಕ ಬಿ.ಪಿ.ಹರೀಶ ವಿರುದ್ಧ ಲಿಖಿತ ದೂರು ಸಲ್ಲಿಸುವ ಜೊತೆಗೆ ಬಿ.ಪಿ.ಹರೀಶ ಈವರೆಗೆ ನೀಡಿರುವ ಹೇಳಿಕೆಗಳ ಕ್ಲಿಪ್ಪಿಂಗ್, ವೀಡಿಯೋ, ಪತ್ರಿಕಾ ಹೇಳಿಕೆಗಳೆಲ್ಲವನ್ನೂ ಸಲ್ಲಿಸಲಾಗುವುದು. ಬಿ.ಪಿ.ಹರೀಶ ಈಗಲೂ ಮಾತನಾಡುವುದನ್ನು ನಿಲ್ಲಿಸದಿದ್ದರೆ ಹರಿಹರ ಕ್ಷೇತ್ರಕ್ಕೆ ನಾವೇ ಹೋಗಿ, ಅವರಿಗೆ ಉತ್ತರ ಕೊಡುತ್ತೇವೆ.
- ಕೆ.ಪಿ.ಕುಬೇಂದ್ರಪ್ಪ, ರಾಜ್ಯ ಉಪಾಧ್ಯಕ್ಷ, ಬಿಜೆಪಿ ಒಬಿಸಿ ಮೋರ್ಚಾ.- - -
-28ಕೆಡಿವಿಜಿ5: ದಾವಣಗೆರೆಯಲ್ಲಿ ಬುಧವಾರ ಹೊನ್ನಾಳಿ-ನ್ಯಾಮತಿ ತಾಲೂಕು ಬಿಜೆಪಿ ಅಧ್ಯಕ್ಷ ಅರಕೆರೆ ನಾಗರಾಜ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.