ಸಾರಾಂಶ
ಹೊನ್ನಾವರ: ಅಭೂತಪೂರ್ವ ಪ್ರವಾಸೋದ್ಯಮ ಪರಿಸರವನ್ನು ಹೊಂದಿರುವ ಹೊನ್ನಾವರವನ್ನು ಸರ್ವನಾಶಗೊಳಿಸಲು ಕಾಸರಕೋಡು ವಾಣಿಜ್ಯ ಬಂದರು ಎಂಬ ವಿನಾಶಕಾರಿ ಧೂಮಕೇತು ಅಪ್ಪಳಿಸಲು ಸಜ್ಜಾಗಿದ್ದು, ಕ್ಷಣಗಣನೆ ಆರಂಭವಾಗಿದೆ ಎಂದು ಟೊಂಕಾದ ಮೀನುಗಾರ ಹೋರಾಟಗಾರ ರಾಜೇಶ್ ಗೋವಿಂದ ತಾಂಡೇಲ್ ಆತಂಕ ವ್ಯಕ್ತಪಡಿಸಿದ್ದಾರೆ.
ಕಾಸರಕೋಡು ಟೊಂಕಾ ಉದ್ದೇಶಿತ ಖಾಸಗಿ ವಾಣಿಜ್ಯ ಬಂದರು ಪ್ರದೇಶವು ಪರಿಸರ ಸೂಕ್ಷ್ಮ ಪ್ರದೇಶವಾಗಿದ್ದು, ಇಲ್ಲಿ ಖಾಸಗಿ ಬಂದರು ನಿರ್ಮಾಣವಾದರೆ ಹೊನ್ನಾವರ ಸರ್ವನಾಶವಾಗುವುದರಲ್ಲಿ ಸಂಶಯವೇ ಇಲ್ಲ. ಇಲ್ಲಿ ಕಲಿದ್ದಲು ಆಮದು ಮತ್ತು ರಫ್ತು ಪ್ರಕ್ರಿಯೆ ನಡೆಯಲಿದ್ದು, ಅದರ ಧೂಳು ಇಡೀ ತಾಲೂಕಿನ ಶರಾವತಿ ಎಡದಂಡೆ ಮತ್ತು ಬಲದಂಡೆಯ ಪ್ರದೇಶವನ್ನು ವ್ಯಾಪಿಸಿಕೊಳ್ಳಲಿದೆ ಮತ್ತು ಶರಾವತಿ ನದಿ ಸಂಪೂರ್ಣವಾಗಿ ಕಲುಷಿತಗೊಳ್ಳಲಿದೆ. ಇಲ್ಲಿನ ಜನರ ಆದಾಯದ ಮೂಲವಾಗಿರುವ ಮೀನುಗಾರಿಕೆ ಮತ್ತು ಪ್ರವಾಸೋದ್ಯಮ ಸಂಪೂರ್ಣ ನಾಶವಾಗುತ್ತದೆ ಎಂದಿದ್ದಾರೆ.ಪ್ರತಿಭಟಿಸಿದ ಮೀನುಗಾರರಿಗೆ ಪೊಲೀಸ್ ಲಾಠಿ ಏಟುಗಳ ಜತೆಗೆ ಒಬ್ಬೊಬ್ಬರ ಮೇಲೆ ಇಪ್ಪತ್ತೆಂಟಕ್ಕೂ ಹೆಚ್ಚು ಕೇಸುಗಳನ್ನು ಹಾಕಲಾಗಿದೆ. ವೋಟು ಹಾಕಿ ಗೆಲ್ಲಿಸಿದ್ದ ತಪ್ಪಿಗೆ ಮಹಾನುಭಾವ ರಾಜಕಾರಣಿ ಸೂಕ್ತ ಬಹುಮಾನವನ್ನೇ ನೀಡಿದ್ದಾರೆ. ನಮ್ಮ ಪ್ರಜಾಪ್ರಭುತ್ವದ ಕ್ರೂರ ಅಣಕವಿದು ಎಂದು ಅಳಲನ್ನು ತೋಡಿಕೊಂಡಿದ್ದಾರೆ.
ಇದೀಗ ಕಾಸರಕೋಡು ಟೊಂಕಾದಲ್ಲಿ ತರಾತುರಿಯಲ್ಲಿ ರಸ್ತೆ ಕಾಮಗಾರಿ ನಡೆಸಲಾಗುತ್ತಿದೆ. ಕೋರ್ಟ್ ಆದೇಶ, ಚುನಾವಣಾ ನೀತಿ ಸಂಹಿತೆ ಯಾವುದೇ ಲೆಕ್ಕಕ್ಕಿಲ್ಲ. ಶತಾಯಗತಾಯ ಖಾಸಗಿ ವಾಣಿಜ್ಯ ಬಂದರು ನಿರ್ಮಾಣ ಮಾಡಲೇಬೇಕು ಎಂಬ ಉದ್ದೇಶವನ್ನು ಮುಂದಿಟ್ಟುಕೊಂಡು ದುರುದ್ದೇಶಪೂರ್ವಕವಾಗಿ 144 ಸೆಕ್ಷನ್ ಹಾಕಿ ರಸ್ತೆ ಕಾಮಗಾರಿ ಕಾರ್ಯ ಭರದಿಂದ ಸಾಗುತ್ತಿದೆ. ಜಿಲ್ಲಾಡಳಿತವೇ ಇದರ ಸಾರಥ್ಯ ವಹಿಸಿರುವುದು ಆಘಾತಕಾರಿ ವಿಚಾರವಾಗಿದೆ ಎಂದು ತಿಳಿಸಿದ್ದಾರೆ.ಮೀನುಗಾರರನ್ನು ಸಾಮೂಹಿಕವಾಗಿ ಒಕ್ಕಲೆಬ್ಬಿಸಲು ಕೊನೆಯ ಕ್ಷಣಗಳ ಕಸರತ್ತು ನಡೆಯುತ್ತಿದೆ. ಇಲ್ಲಿ ಹಲವು ವರ್ಷಗಳಿಂದ ಮನೆ ಬದುಕು ಕಟ್ಟಿಕೊಂಡಿರುವ ಮೀನುಗಾರರು ಕಳವಳಗೊಂಡಿದ್ದು, ಉದ್ದೇಶಿತ ಖಾಸಗಿ ವಾಣಿಜ್ಯ ಬಂದರಿನಲ್ಲಿ ಮುಖ್ಯವಾಗಿ ಕಲಿದ್ದಲು ಆಮದು ಮತ್ತು ರಫ್ತು ಪ್ರಕ್ರಿಯೆಗಳು ನಡೆಯಲಿದ್ದು, ಇದರಿಂದ ಹೊನ್ನಾವರದ ಜೀವನದಿ ಶರಾವತಿ ಕಲುಷಿತಗೊಂಡು ಬರಡಾಗುವ ಭಯಾನಕ ದಿನಗಳು ಬರಲಿದೆ. ಜಿಲ್ಲೆಯ ಜನತೆ ಇದರ ವಿರುದ್ಧ ದೊಡ್ಡ ಮಟ್ಟದ ಹೋರಾಟ ನಡೆಸಬೇಕಾದ ಅನಿವಾರ್ಯತೆ ಇದೆ ಎಂದಿದ್ದಾರೆ.