ಮನುಷ್ಯನ ಹಸ್ತಕ್ಷೇಪದಿಂದ ಜೀವ ರಾಶಿಗಳಿಗೆ ಹಾನಿ: ಪ್ರಕಾಶ್‌

| Published : Jun 09 2024, 01:33 AM IST

ಸಾರಾಂಶ

ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ತಮಟಕಲ್ಲು ರಸ್ತೆಯಲ್ಲಿರುವ ಅಭಿಷೇಕ್ ಸ್ಟೋನ್ ಕ್ರಷರ್‌ನಲ್ಲಿ ಗಿಡ ನೆಡಲಾಯಿತು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಮನುಷ್ಯನ ಹಸ್ತಕ್ಷೇಪದಿಂದ ಪರಿಸರ ಹಾಳಾಗುತ್ತಿದ್ದು, ಭೂಮಿ ಮೇಲೆ ವಾಸಿಸುತ್ತಿರುವ ಜೀವರಾಶಿಗಳಿಗೆ ಅಪಾಯವಾಗುತ್ತಿದೆ ಎಂದು ಪರಿಸರ ಅಧಿಕಾರಿ ಪ್ರಕಾಶ್ ಆತಂಕ ವ್ಯಕ್ತಪಡಿಸಿದರು.

ಕಂದಾಯ, ಗಣಿ ಮತ್ತು ಭೂವಿಜ್ಞಾನ ಇಲಾಖೆ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಜಿಲ್ಲೆಯ ಕಲ್ಲು ಕ್ವಾರಿ ಮತ್ತು ಕ್ರಷರ್ ಘಟಕಗಳ ಮಾಲೀಕರ ಸಂಘದಿಂದ ತಮಟಕಲ್ಲು ರಸ್ತೆಯಲ್ಲಿರುವ ಅಭಿಷೇಕ್ ಸ್ಟೋಕ್ ಕ್ರಷರ್‌ನಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಶ್ವ ಪರಿಸರ ದಿನಾಚರಣೆಯಲ್ಲಿ ಗಿಡ ನೆಟ್ಟು ಮಾತನಾಡಿದ ಅವರು, 1973ರಿಂದ ಪ್ರತಿ ವರ್ಷವೂ ವಿಶ್ವದಾದ್ಯಂತ ಪರಿಸರ ದಿನಾಚರಣೆ ಆಚರಿಸಿಕೊಂಡು ಬರಲಾಗುತ್ತಿದೆ. ಜನಸಂಖ್ಯೆ ಸ್ಪೋಟ, ನಗರೀಕರಣ, ಕೈಗಾರಿಕೆಗಳು ಜಾಸ್ತಿಯಾಗುತ್ತಿರುವುದರಿಂದ ನೀರು, ಗಾಳಿ, ಆಹಾರ ಕಲುಷಿತವಾಗುತ್ತಿದ್ದು, ಗಿಡ-ಮರಗಳ ನಾಶವಾಗುತ್ತಿದೆ. ಮಾನವ ಪರಿಸರ ನಾಶ ಮಾಡದೆ ಬದಲಾಗಿ ಗಿಡ ನೆಟ್ಟು ಪೋಷಿಸಿ ದೊಡ್ಡ ಮರವನ್ನಾಗಿ ಬೆಳೆಸಬೇಕು. ಆಗ ನಿಜವಾಗಿಯೂ ಪರಿಸರ ಉಳಿಸಿದಂತಾಗುತ್ತದೆ ಎಂದರು.

ರಾಸಾಯನಿಕ ರಸಗೊಬ್ಬರ ಬಳಕೆಯಿಂದ ಸೇವಿಸುವ ಆಹಾರ ವಿಷಪೂರಿತವಾಗಿದ್ದು, ಅರಣ್ಯ ಪ್ರದೇಶ ಕಡಿಮೆಯಾಗುತ್ತಿದೆ. ಯಾವುದೇ ಒಂದು ಪ್ರದೇಶ ಅಭಿವೃದ್ಧಿಯಾಗಬೇಕಾದರೆ ಪರಿಸರಕ್ಕೆ ಹಾನಿಯಾಗಬಾರದು. ಮಳೆನೀರು ಕೊಯ್ಲು, ಸೋಲಾರ್ ಬಳಸಿ ಪರಿಸರ ಸ್ನೇಹಿಯಾಗಬೇಕೆಂದು ವಿನಂತಿಸಿದರು.

ಕಲ್ಲು ಕ್ವಾರಿ ಮತ್ತು ಕ್ರಷರ್ ಘಟಕಗಳ ಮಾಲೀಕರ ಸಂಘದ ಅಧ್ಯಕ್ಷ ಅಬ್ದುಲ್ ಮಜೀದ್ ಮಾತನಾಡಿ, ಪ್ರತಿ ವರ್ಷ 143 ದೇಶಗಳಲ್ಲಿ ವಿಶ್ವಪರಿಸರ ದಿನಾಚರಣೆ ಆಚರಿಸಲಾಗುತ್ತಿದೆ. ಸಕಲ ಜೀವರಾಶಿಗಳು ಜೀವಿಸಲು ಭೂಮಿ ಬೇಕು. ಕ್ರಷರ್ ಗಳಲ್ಲಿ ಕನಿಷ್ಠ ಐದು ನೂರರಿಂದ ಒಂದು ಸಾವಿರ ಗಿಡಗಳನ್ನು ನೆಟ್ಟು ಸಂರಕ್ಷಣೆ ಮಾಡಿದಾಗ ಹಾನಿಯಾದ ಪ್ರದೇಶಗಳ ಅಭಿವೃದ್ಧಿ ಸಾಧ್ಯ. ಗಿಡ-ಮರ ಬೆಳೆಸಿ ಪರಿಸರ ಚೆನ್ನಾಗಿಟ್ಟುಕೊಂಡರೆ ಉಸಿರಾಟಕ್ಕೆ ಶುದ್ಧ ಗಾಳಿ ಸಿಗುತ್ತದೆ. ಹಾಗಾಗಿ ಗಿಡ-ಮರ ಕಡಿಯಬಾರದು ಎಂದು ಹೇಳಿದರು.

ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಉಪ ನಿರ್ದೇಶಕ ಮಹೇಶ್ ಮಾತನಾಡಿ, ಪರಿಸರ ಅಭಿವೃದ್ಧಿಯಾಗಬೇಕಾದರೆ ಕ್ರಷರ್‌ ಗಳಲ್ಲಿ ಹೆಚ್ಚು ಗಿಡ ನೆಟ್ಟು ಪೋಷಿಸಬೇಕು. ರಸ್ತೆ ಬದಿಯಲ್ಲಿ ಗಿಡ ಬೆಳೆಸಿದರೆ ದೊಡ್ಡ ಮರವಾಗಿ ಎಲ್ಲರಿಗೂ ಉಪಕಾರಿಯಾಗುತ್ತದೆ. ಪರಿಸರ ಕಾಪಾಡುವುದು ಕೇವಲ ಸರ್ಕಾರದ ಜವಾಬ್ದಾರಿಯೆಂದು ತಿಳಿಯಬಾರದು. ಪ್ರತಿಯೊಬ್ಬ ಪ್ರಜೆಯ ಮೇಲೂ ಪರಿಸರ ಸಂರಕ್ಷಿಸುವ ಜವಾಬ್ದಾರಿಯಿದೆ. ಮನುಷ್ಯನಿಂದ ಮಾತ್ರ ಪರಿಸರ ಹಾಳಾಗುತ್ತಿದೆ. ಅದಕ್ಕಾಗಿ ಪರಿಸರ ಕಾಪಾಡಿದರೆ ಮುಂದಿನ ಪೀಳಿಗೆಗೆ ಹಸಿರು ವಾತಾವರಣವಿರುತ್ತದೆ ಎಂದರು.

ಹಿರಿಯ ಭೂ ವಿಜ್ಞಾನಿ ನಾಗೇಂದ್ರಪ್ಪ ಮಾತನಾಡಿ, ಮನೆಗೊಂದು ಗಿಡ ನೆಟ್ಟು ಪರಿಸರ ಕಾಪಾಡಿಕೊಳ್ಳುವುದು ಎಲ್ಲರ ಜವಾಬ್ದಾರಿ. ದುಡಿಮೆ ಜೊತೆ ಪರಿಸರ ಸುಂದರವಾಗಿಟ್ಟುಕೊಳ್ಳಬೇಕು. ಅದುವೇ ಪರಿಸರಕ್ಕೆ ನೀಡುವ ಬಹುದೊಡ್ಡ ಕೊಡುಗೆ ಎಂದರು. ಸಹಾಯಕ ಪರಿಸರ ಅಧಿಕಾರಿ ರಾಜೇಶ್, ಕಲ್ಲು ಕ್ವಾರಿ ಮತ್ತು ಕ್ರಷರ್ ಘಟಕಗಳ ಮಾಲೀಕರ ಸಂಘದ ಕಾರ್ಯದರ್ಶಿ ಜಿ.ಬಿ.ಶೇಖರ್, ಅಭಿಶೇಕ್ ಸ್ಟೋನ್ ಕ್ರಷರ್ ಮಾಲೀಕ ಅಭಿಶೇಕ್, ನಗರಸಭೆ ಸದಸ್ಯ ವೆಂಕಟೇಶ್,ಸಂದೀಪ್ ಗುಂಡಾರ್ಪಿ ಇದ್ದರು.