ಕುವೆಂಪು ಅವರ ಸರ್ವಜನಾಂಗದ ಶಾಂತಿಯ ತೋಟ ಸಂದೇಶ ಪ್ರತಿಯೊಬ್ಬರಿಗೂ ಅನ್ವಯಿಸುತ್ತದೆ. ಹಾಗಾಗಿ ಗಣೇಶೋತ್ಸವದ ವೇಳೆ ಶಾಂತಿ-ನೆಮ್ಮದಿ ಕದಡುವ ಕೋಮುವಾದಿ ಶಕ್ತಿಗಳಿಗೆ ಅವಕಾಶ ನೀಡುವುದಿಲ್ಲ. ಮುಂದಿನ ದಿನಗಳಲ್ಲಿಯೂ ಕೂಡ ಹಿಂದೂ- ಮುಸಲ್ಮಾನರು ಅಣ್ಣ-ತಮ್ಮಂದಿರಂತೆ ನಮ್ಮ ನಮ್ಮ ಹಬ್ಬಗಳನ್ನು ಆಚರಿಸುತ್ತೇವೆ. ಈ ಉತ್ಸವದಲ್ಲಿ ಪಾಲ್ಗೊಳ್ಳಲು ಸಹಕರಿಸಿದ ಪಟ್ಟಣದ ಎ.ಡಿ.ಕಾಲೋನಿಯ ಗಣೇಶ ಪ್ರತಿಷ್ಠಾಪನಾ ಸಮಿತಿ ಸಮಿತಿಯವರಿಗೆ ಹಾಗೂ ಪೊಲೀಸ್ ಇಲಾಖೆಯ ಅಧಿಕಾರಿಗಳಿಗೆ ಅಭಿನಂದಿಸುತ್ತೇವೆ.
ಕನ್ನಡಪ್ರಭ ವಾರ್ತೆ ಮಂಡ್ಯ/ ನಾಗಮಂಗಲ
ಎರಡು ವರ್ಷಗಳ ಹಿಂದೆಯಷ್ಟೇ ಗಣೇಶ ಮೂರ್ತಿ ಮೆರವಣಿಗೆ ವೇಳೆ ಕೋಮು ಗಲಭೆ ಸೃಷ್ಟಿಯಾಗಿದ್ದ ನಾಗಮಂಗಲದಲ್ಲಿ ಈ ಬಾರಿಯ ಗಣೇಶೋತ್ಸವ ವೇಳೆ ಸೌಹಾರ್ದತೆ, ಸಾಮರಸ್ಯದ ಹೊಸಬೆಳಕು ಮೂಡಿದೆ.ಗಣೇಶ ವಿಸರ್ಜನಾ ಪೂರ್ವ ಮೆರವಣಿಗೆಯಲ್ಲಿ ಹಿಂದೂ ಮತ್ತು ಮುಸ್ಲಿಂ ಯುವಕರು ಒಟ್ಟಾಗಿ ಸೇರಿದರು. ಮಸೀದಿ ಮುಂಭಾಗದಲ್ಲೇ ಗಣೇಶ ಮೂರ್ತಿಗೆ ಪುಷ್ಪಾರ್ಚನೆ ನೆರವೇರಿಸಿ, ಗಣಪತಿ ಬಪ್ಪ ಮೋರೆಯಾ ಘೋಷಣೆಗಳನ್ನು ಮೊಳಗಿಸಿ, ಸಾರ್ವಜನಿಕರಿಗೆ ಸಿಹಿ ವಿತರಣೆ ಮಾಡುವ ಮೂಲಕ ಅಪರೂಪದ ಸನ್ನಿವೇಶಕ್ಕೆ ಸಾಕ್ಷಿಯಾದರು.
ಪಟ್ಟಣದ ಮೈಸೂರು ರಸ್ತೆಯ ಎ.ಡಿ.ಕಾಲೋನಿಯಲ್ಲಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿತ್ತು. ಶುಕ್ರವಾರ ಗಣೇಶ ಮೂರ್ತಿ ವಿಸರ್ಜನೆ ಮಾಡುವ ಹಿನ್ನೆಲೆಯಲ್ಲಿ ಗುರುವಾರ ಸಂಜೆಯೇ ಗಣೇಶಮೂರ್ತಿಗೆ ವಿಶೇಷ ಪೂಜೆ ಮತ್ತು ಅನ್ನಸಂತರ್ಪಣೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಇದರಲ್ಲಿ ಮುಸ್ಲಿಂ ಯುವಕರೂ ಕೂಡ ಭಾಗವಹಿಸಿ ಭಾವೈಕ್ಯತೆ ಮೆರೆದರು. ಈ ಬೆಳವಣಿಗೆ ಪೊಲೀಸರಲ್ಲಿ ಅಚ್ಚರಿ ಹಾಗೂ ಆಶ್ಚರ್ಯವನ್ನು ಮೂಡಿಸಿತು. ಹಿಂದೂ-ಮುಸಲ್ಮಾನರ ಸಹಬಾಳ್ವೆಯನ್ನು ಕಂಡು ಸಂತಸ ವ್ಯಕ್ತಪಡಿಸಿದರು.ಶುಕ್ರವಾರ ಬೆಳಗ್ಗೆ ವಿಸರ್ಜನಾ ಪೂರ್ವ ಮೆರವಣಿಗೆಗೆ ಸಿದ್ಧತೆ ನಡೆಸುತ್ತಿದ್ದ ವೇಳೆ ಗಣೇಶ ಮೂರ್ತಿ ಪ್ರತಿಷ್ಠಾಪಿಸಿದ್ದ ಸ್ಥಳಕ್ಕೆ ಆಗಮಿಸಿದ ಸ್ಥಳೀಯ ಮುಸ್ಲಿಂ ಮುಖಂಡರು ಹಾಗೂ ಯುವಕರು ಗಣೇಶೋತ್ಸವ ಸಮಿತಿಯವರೊಂದಿಗೆ ಕೈಜೋಡಿಸಿದರು. ವಿಶೇಷ ಪೂಜೆ ಮುಗಿದ ನಂತರ ಗಣೇಶ ಮೂರ್ತಿಯನ್ನು ಮುಸ್ಲಿಂ ಯುವಕರೇ ಅಲಂಕರಿಸಿದ್ದ ಟ್ರ್ಯಾಕ್ಟರ್‌ನಲ್ಲಿರಿಸಿ ಸ್ವತಃ ಟ್ರ್ಯಾಕ್ಟರ್ ಚಾಲನೆ ಮಾಡಿಕೊಂಡು ಬಂದರು. ಮೆರವಣಿಗೆ ಮೂಲಕ ಗಣೇಶ ಮೂರ್ತಿಯನ್ನು ಯಾ- ಅಲ್ಲಾ ಮಸೀದಿ ಮುಂಭಾಗಕ್ಕೆ ಕರೆತಂದರು. ಅಲ್ಲಿ ಮೂರ್ತಿಗೆ ಹಾರ ಹಾಕಿ, ಪುಷ್ಪಾರ್ಚನೆ ಮಾಡಿ ಗಣಪತಿ ಬಪ್ಪ ಮೋರಿಯಾ ಎಂದು ಘೊಷಣೆ ಮೊಳಗಿಸಿದರು. ಗಣೇಶನಿಗೆ ಭಕ್ತಿಯಿಂದ ನಮನ ಸಲ್ಲಿಸಿ ಮೆರವಣಿಗೆಯನ್ನು ಬೀಳ್ಕೊಟ್ಟರು.
ಈ ವೇಳೆ ಪಟ್ಟಣದ ಮುಸ್ಲಿಂ ಮ್ಯಾನೇಜಿಂಗ್ ಕಮಿಟಿ ಕಾರ್ಯದರ್ಶಿ ಇರ್ಷಾದ್‌ಪಾಷ ಮಾತನಾಡಿ, ನಾಗಮಂಗಲದಲ್ಲಿ ಹಿಂದೂ ಮುಸ್ಲಿಂ ಭಾಯಿ ಭಾಯಿ ರೀತಿಯಲ್ಲಿ ಯಾವುದೇ ಗಲಾಟೆ ಗೊಂದಲವಿಲ್ಲದೆ ಒಂದೇ ಮನಸ್ಸು, ಪ್ರೀತಿ- ವಿಶ್ವಾಸದಿಂದ ಗಣೇಶೋತ್ಸವದಲ್ಲಿ ಪಾಲ್ಗೊಳ್ಳುವ ಮೂಲಕ ಹೊಸ ಇತಿಹಾಸಕ್ಕೆ ಮುನ್ನುಡಿ ಬರೆದಿದ್ದೇವೆ ಎಂದು ಹೇಳಿದರು.ಕುವೆಂಪು ಅವರ ಸರ್ವಜನಾಂಗದ ಶಾಂತಿಯ ತೋಟ ಸಂದೇಶ ಪ್ರತಿಯೊಬ್ಬರಿಗೂ ಅನ್ವಯಿಸುತ್ತದೆ. ಹಾಗಾಗಿ ಗಣೇಶೋತ್ಸವದ ವೇಳೆ ಶಾಂತಿ-ನೆಮ್ಮದಿ ಕದಡುವ ಕೋಮುವಾದಿ ಶಕ್ತಿಗಳಿಗೆ ಅವಕಾಶ ನೀಡುವುದಿಲ್ಲ. ಮುಂದಿನ ದಿನಗಳಲ್ಲಿಯೂ ಕೂಡ ಹಿಂದೂ- ಮುಸಲ್ಮಾನರು ಅಣ್ಣ-ತಮ್ಮಂದಿರಂತೆ ನಮ್ಮ ನಮ್ಮ ಹಬ್ಬಗಳನ್ನು ಆಚರಿಸುತ್ತೇವೆ. ಈ ಉತ್ಸವದಲ್ಲಿ ಪಾಲ್ಗೊಳ್ಳಲು ಸಹಕರಿಸಿದ ಪಟ್ಟಣದ ಎ.ಡಿ.ಕಾಲೋನಿಯ ಗಣೇಶ ಪ್ರತಿಷ್ಠಾಪನಾ ಸಮಿತಿ ಸಮಿತಿಯವರಿಗೆ ಹಾಗೂ ಪೊಲೀಸ್ ಇಲಾಖೆಯ ಅಧಿಕಾರಿಗಳಿಗೆ ಅಭಿನಂದಿಸುತ್ತೇವೆ ಎಂದರು.
ಗಣೇಶೋತ್ಸವದ ಮೆರವಣಿಗೆಯಲ್ಲಿ ಸಹೋದರತ್ವ ಭಾವನೆ ತೋರಿದ ಹಿಂದೂ- ಮುಸ್ಲಿಂ ಯುವಕರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಡಿವೈಎಸ್‌ಪಿ ಬಿ.ಚಲುವರಾಜು, ಪಟ್ಟಣ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಶಿವಕುಮಾರ್, ಗ್ರಾಮಾಂತರ ಸಿಪಿಐ ಹೇಮಂತ್‌ಕುಮಾರ್ ಗಣೇಶ ಮೆರವಣಿಗೆಗೆ ಸೂಕ್ತ ಪೊಲೀಸ್ ಬಂದೋಬಸ್ತ್ ಕಲ್ಪಿಸಿದ್ದರು.--------------------------------
ಎರಡು ವರ್ಷದ ಹಿಂದೆ ಕೋಮು ಘರ್ಷಣೆಎರಡು ವರ್ಷದ ಹಿಂದೆ ನಾಗಮಂಗಲ ಪಟ್ಟಣದಲ್ಲಿ ನಡೆದ ಗಣೇಶೋತ್ಸವ ಮೆರವಣಿಗೆ ವೇಳೆ ಗಲಭೆ ಸೃಷ್ಟಿಯಾಗಿತ್ತು. ಈ ವೇಳೆ ಕಲ್ಲು ತೂರಾಟ, ಪೆಟ್ರೋಲ್ ಬಾಂಬ್ ಎಸೆತ ನಡೆದು ಹಿಂಸಾಚಾರ ಸಂಭವಿಸಿತ್ತು. ಹಲವು ಅಂಗಡಿಗಳಿಗೆ ಬೆಂಕಿ ಹಚ್ಚಿದ್ದರಿಂದ ಸಾಕಷ್ಟು ಹಾನಿ ಸಂಭವಿಸಿತ್ತು. ಈ ಘಟನೆಯಿಂದ ಮುಸ್ಲಿಮರಿಗೆ ಸೇರಿದ ಅಂಗಡಿಗಳಿಗೆ ಹೆಚ್ಚು ಹಾನಿ ಉಂಟಾಗಿತ್ತು.
ಕಳೆದ ವರ್ಷ ನಾಗಮಂಗಲದಲ್ಲಿ ಬಿಗಿ ಬಂದೋಬಸ್ತ್‌ನಲ್ಲಿ ಗಣೇಶ ಮೂರ್ತಿಗಳ ವಿಸರ್ಜನಾ ಮೆರವಣಿಗೆ ನಡೆದಿತ್ತು. ಆದರೆ, ಮದ್ದೂರಿನಲ್ಲಿ ಗಣೇಶೋತ್ಸವ ಮೆರವಣಿಗೆಯಲ್ಲಿ ಕಲ್ಲು ತೂರಾಟ ನಡೆದು ಹಿಂಸಾಚಾರಕ್ಕೆ ತಿರುಗಿತ್ತು. ಈ ಬಾರಿಯೂ ಗಣೇಶೋತ್ಸವ ವಿಸರ್ಜನಾ ಮೆರವಣಿಗೆ ವೇಳೆ ಶಾಂತಿ ಕದಡದಂತೆ ಬಿಗಿ ಭದ್ರತೆಯನ್ನು ಪೊಲೀಸರು ಏರ್ಪಡಿಸಿದ್ದರು.೨೦೨೪ ರಿಂದ ೨೦೨೫ರ ಅವಧಿಯಲ್ಲಿ ರಾಜ್ಯಾದ್ಯಂತ ದಾಖಲಾದ ೭೦ ಕೋಮು ಘರ್ಷಣೆ ಪ್ರಕರಣಗಳಲ್ಲಿ ಮಂಡ್ಯ ಜಿಲ್ಲೆಯಲ್ಲೇ ೩೪ ಪ್ರಕರಣಗಳು ವರದಿಯಾಗಿದ್ದವು. ೨೦೨೪ ರಲ್ಲಿ, ನಾಗಮಂಗಲದಲ್ಲಿ ಒಟ್ಟು ೨೪ ಪ್ರಕರಣಗಳು ದಾಖಲಾಗಿದ್ದರೆ, ೨೦೨೫ ರಲ್ಲಿ ಮದ್ದೂರು ಪೊಲೀಸರು ೧೦ ಪ್ರಕರಣಗಳನ್ನು ದಾಖಲಿಸಿದ್ದರು. ಕೋಮುಗಲಭೆಗಳನ್ನು ತಡೆಯಲು ವಿಶೇಷ ಕಾರ್ಯಪಡೆಯನ್ನು ರಚಿಸಲಾಗಿತ್ತು.
---ನಾಗಮಂಗಲ ಮಾತ್ರವಲ್ಲ. ಎಲ್ಲೆಡೆ ಇಂತಹ ಸಾಮರಸ್ಯದ ಬೆಳಕು ಮೂಡಬೇಕು. ಹಿಂದೂ- ಮುಸಲ್ಮಾನರು ಸೌಹಾರ್ದತೆಯಿಂದ ಬದುಕುವ ವಾತಾವರಣ ಸೃಷ್ಟಿಯಾಗಬೇಕು. ಅಂತಹದೊಂದು ಮಾದರಿಯನ್ನು ನಾಗಮಂಗಲದಲ್ಲಿ ಹಿಂದೂ- ಮುಸ್ಲಿಂ ಯುವಕರು ಹಾಕಿಕೊಟ್ಟಿದ್ದಾರೆ. ಇದೊಂದು ಒಳ್ಳೆಯ ಬೆಳವಣಿಗೆ. ಎಲ್ಲ ಜಾತಿ- ಧರ್ಮದವರು ಅಣ್ಣ- ತಮ್ಮಂದಿರಂತೆ ಬದುಕಿದಾಗ ವಿವಿಧತೆಯಲ್ಲಿ ಏಕತೆ ಕಾಣಲು ಸಾಧ್ಯವಾಗುತ್ತದೆ.
- ಡಾ.ವಿ.ಜೆ.ಶೋಭಾರಾಣಿ, ಜಿಲ್ಲಾ ಪೊಲೀಸ್ ಅಧೀಕ್ಷಕರು, ಮಂಡ್ಯ