ಸಾರಾಂಶ
ಕನ್ನಡಪ್ರಭ ವಾರ್ತೆ ಹಾರೋಹಳ್ಳಿ
ಹಾರೋಹಳ್ಳಿ ಪಟ್ಟಣದ ಪಂಚಾಯಿತಿ ಕಚೇರಿಯಲ್ಲಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ನಟರಾಜ್ ಅಧ್ಯಕ್ಷತೆಯಲ್ಲಿ ಪೂರ್ವಸಿದ್ದತಾ ಸಭೆ ನಡೆಯಿತು.ಸಭೆಯಲ್ಲಿ ಸಾರ್ವಜನಿಕರು ಮತ್ತು ಗ್ರಾಮಸ್ಥರು ಮತ್ತು ಸಂಘ ಸಂಸ್ಥೆಗಳು ಕುಡಿಯುವ ನೀರು, ಶೌಚಾಲಯ ಹಾಗೂ ಇತರ ಮೂಲಭೂತ ಸೌಕರ್ಯಗಳಿಗೆ ಮೊದಲ ಆದ್ಯತೆ ನೀಡುವಂತೆ ಸಭೆಯ ಗಮನಕ್ಕೆ ತಂದರು.
ಕುಡಿವ ನೀರಿನ ಅಭಾವ:ತಾಲೂಕಿನಲ್ಲಿ ಸದ್ಯಕ್ಕೆ ಕುಡಿಯುವ ನೀರಿನ ಸಮಸ್ಯೆ ಇಲ್ಲದಿದ್ದರೂ ಮುಂದೆ ಸಮಸ್ಯೆಯಾಗದಂತೆ ಎಚ್ಚರಿಕೆ ವಹಿಸಬೇಕು. ಪಟ್ಟಣದ ಸುತ್ತಮುತ್ತಲಿನ ಗ್ರಾಮಗಳಲ್ಲಿಯೂ ನೀರಿನ ಸಮಸ್ಯೆ ಆಗದಂತೆ ಎಚ್ಚರಿಕೆ ವಹಿಸಬೇಕು. ನೀರಿನ ಬಿಲ್ ದರ 100 ರು.ಗಳಿಗೆ ಕಡಿಮೆ ಮಾಡಬೇಕು. ಗ್ರಾಮೀಣ ಶಾಲೆಗಳಿಗೆ ಆಟದ ಮೈದಾನ, ರಸ್ತೆ ದೀಪ, ಶೌಚಾಲಯಗಳನ್ನು ನಿರ್ಮಿಸಬೇಕು ಎಂದು ನಾಗರಿಕರು ಮನವಿ ಮಾಡಿದರು.
ಹಾರೋಹಳ್ಳಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಅನೇಕ ಕಾರ್ಖಾನೆಗಳಿದ್ದು ಸಿ.ಎಸ್.ಆರ್ ನಿಧಿಯನ್ನು ಶಾಲೆಗಳ ಅಭಿವೃದ್ಧಿಗೆ ಬಳಸಬೇಕು, ಹಿಂದುಳಿದ ಜನಾಂಗದವರು ಮೃತಪಟ್ಟರೆ ಪ.ಪಂ ವತಿಯಿಂದ ನೀಡುವ ಸಹಾಯಧನ 10 ಸಾವಿರಕ್ಕೆ ಏರಿಸಬೇಕು ಎಂದರು.ಮೇಡಮಾರನಹಳ್ಳಿಯಲ್ಲಿ ಚರಂಡಿಗಳನ್ನು ಮರು ನಿರ್ಮಾಣ ಮಾಡಬೇಕು, ಗ್ರಾಮದಲ್ಲಿ ಕುಡಿವ ನೀರು, ಬೀದಿ ದೀಪ, ಮೂಲ ಸೌಕರ್ಯಗಳನ್ನು ಸರಿಪಡಿಸಬೇಕು, ಸ್ಥಗಿತಗೊಂಡಿರುವ ಮನೆಗಳ ನಿರ್ಮಾಣ ಕಾರ್ಯಗಳನ್ನು ಮತ್ತೆ ಪೂರ್ಣಗೊಳಿಸಲು ಸಹಾಯ ಧನ ಮಂಜೂರು ಮಾಡಬೇಕು, ಗ್ರಾಮದಲ್ಲಿ ಸರ್ಕಾರಿ ಜಾಗವಿದ್ದಲ್ಲಿ ಪರಿಶಿಷ್ಟ ಜನಾಂಗದವರಿಗೆ ಸಮುದಾಯ ಭವನ ನಿರ್ಮಾಣ ಮಾಡಲು ಜಾಗ ಮೀಸಲಿರಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದರು.
ಪಟ್ಟಣದ ಕೆರೆ ಅಭಿವೃದ್ಧಿ:ಪಟ್ಟಣದಲ್ಲಿರುವ ದೊಡ್ಡಕೆರೆ ಕೆರೆ ಅಭಿವೃದ್ಧಿಪಡಿಸಬೇಕು. ಕೆರೆಯಲ್ಲಿ ಹೂಳೆತ್ತಿ, ನೀರು ತುಂಬಿಸಿ ಮೀನುಸಾಕಾಣಿಕೆಗೆ ಗುತ್ತಿಗೆ ಆಧಾರದಲ್ಲಿ ನೀಡಬೇಕೆಂದು ಸಭೆಗೆ ಬಂದಿದ್ದ ಬಹುತೇಕರು ಆಗ್ರಹಿಸಿದರು.
ಸಭೆಯಲ್ಲಿ ಮುಖ್ಯಾಧಿಕಾರಿ ನಟರಾಜು, ಸಿಬ್ಬಂದಿ, ವಿವಿಧ ಸಂಘಟನೆಗಳ ಮುಖಂಡರು, ಸಾರ್ವಜನಿಕರು ಭಾಗವಹಿಸಿದ್ದರು.