ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅಂಗವಿಕಲ ವಿದ್ಯಾರ್ಥಿ ಹರ್ಷ ಉತ್ತಮ ಸಾಧನೆ

| Published : May 17 2024, 12:34 AM IST

ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅಂಗವಿಕಲ ವಿದ್ಯಾರ್ಥಿ ಹರ್ಷ ಉತ್ತಮ ಸಾಧನೆ
Share this Article
  • FB
  • TW
  • Linkdin
  • Email

ಸಾರಾಂಶ

ಪ್ರಸಕ್ತ ಸಾಲಿನ ಎಸ್‌ಎಸ್ಎಲ್‌ಸಿ ಪರೀಕ್ಷೆಯಲ್ಲಿ ಹರ್ಷ 488 ಅಂಕ(ಶೇ. 79) ಪಡೆದು ನ್ಯೂನತೆ ಮೀರಿ ಸಾಧನೆಗೈದಿದ್ದಾನೆ.

ಹೊನ್ನಾವರ: ತಾಲೂಕಿನ ಖರ್ವಾ ಗ್ರಾಮದ ನಾಥಗೇರಿಯ ಅಂಗವಿಕಲ ವಿದ್ಯಾರ್ಥಿಯೊಬ್ಬ ಪ್ರಸಕ್ತ ಸಾಲಿನ ಎಸ್ಎಸ್ಎಲ್‌ಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿ ಇತರರಿಗೆ ಪ್ರೇರಣೆಯಾಗಿದ್ದಾನೆ.

ಈ ವಿಶೇಷ ಸಾಧಕನ ಹೆಸರು ಹರ್ಷ. ಖರ್ವಾ ಗ್ರಾಮದ ಬಾಲಕೃಷ್ಣ ನಾಯ್ಕ,ಗೀತಾ ನಾಯ್ಕ ದಂಪತಿಯ ಪುತ್ರ. ಈತ ನಾಲ್ಕನೇ ವಯಸ್ಸಿಗೆ ಅನಾರೋಗ್ಯಕ್ಕೆ ತುತ್ತಾಗಿ ಸೊಂಟದಿಂದ ಕಾಲಿನ ವರೆಗೂ ಪೂರ್ತಿ ಭಾಗ ಸ್ವಾಧೀನ ಕಳೆದುಕೊಂಡಿದ್ದಾನೆ. ಹರ್ಷನ ಕೌಟುಂಬಿಕ ಆರ್ಥಿಕ ಸ್ಥಿತಿಗತಿ ಕಷ್ಟಕರವಾಗಿದೆ. ತಂದೆ ಬಾಲಕೃಷ್ಣ ಕೂಲಿ ಮಾಡಿ ಮಗನ ಚಿಕಿತ್ಸೆಗಾಗಿ ಲಕ್ಷಾಂತರ ರುಪಾಯಿ ಖರ್ಚು ಮಾಡಿದ್ದಾರೆ.

ಪ್ರಸಕ್ತ ಸಾಲಿನ ಎಸ್‌ಎಸ್ಎಲ್‌ಸಿ ಪರೀಕ್ಷೆಯಲ್ಲಿ 488 ಅಂಕ(ಶೇ. 79) ಪಡೆದು ನೂನ್ಯತೆ ಮೀರಿ ಸಾಧನೆಗೈದಿದ್ದಾನೆ. ನಡೆಯಲು ಅಸಾಧ್ಯವಾಗಿರುವುದರಿಂದ ತಂದೆ ಅಥವಾ ತಾಯಿಯೇ ಎತ್ತುಕೊಂಡು ಶಾಲೆಗೆ ಕರೆದೊಯ್ಯುತ್ತಿದ್ದರು. ಕಾಲಿನ ಸ್ವಾಧೀನತೆ ಇಲ್ಲದಿರುವುದರಿಂದ ಪ್ರತಿದಿನ ಶಾಲೆಗೆ ಹೋಗಲು ಸಾಧ್ಯವಾಗದಿದ್ದರೂ ನೋಟ್ಸ್ ಹಾಗೂ ವಿಶೇಷ ತರಗತಿ ಇದ್ದ ಸಂದರ್ಭಗಳಲ್ಲಿ ಶಾಲೆಗೆ ತೆರಳಿ ಅಲ್ಲಿನ ಶಿಕ್ಷಕರ ಮೂಲಕ ಪಠ್ಯದಲ್ಲಿನ ಯಾವುದೇ ಗೊಂದಲಗಳಿದ್ದರೂ ಕೇಳಿ ಉತ್ತರ ಪಡೆಯುತ್ತಿದ್ದನು. ಮನೆಯಲ್ಲಿದ್ದ ಸಂದರ್ಭದಲ್ಲಿ ಶಾಲೆಯಲ್ಲಿ ನೀಡಿದ ನೋಟ್ಸ್‌ಗಳನ್ನು ವಾಟ್ಸ್‌ಆ್ಯಪ್‌ ಮೂಲಕ ಪಡೆದುಕೊಳ್ಳುತ್ತಿದ್ದನು. ಖರ್ವಾ ನಾಥಗೇರಿಯ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದಿರುವ ಈತ, ಕೊಳಗದ್ದೆಯ ಶ್ರೀ ಸಿದ್ಧಿವಿನಾಯಕ ಪ್ರೌಢಶಾಲೆಯಲ್ಲಿ ಪ್ರೌಢಶಿಕ್ಷಣ ಪಡೆದಿದ್ದಾನೆ.

ಪಿಯುಸಿಯಲ್ಲಿ ಕಾಮರ್ಸ್ ವಿಭಾಗ ಆಯ್ಕೆ ಮಾಡಿಕೊಳ್ಳುವೆ ಎಂದಿದ್ದಾನೆ. ಕಲಿಕೆಯಲ್ಲಿ ಇನ್ನಷ್ಟು ಸಾಧನೆ ಮಾಡಿ ಸರ್ಕಾರಿ ಸೇವೆ ಸಲ್ಲಿಸಬೇಕು ಎಂಬ ಗುರಿ ಇದೆ ಎಂದು ತನ್ನ ಅನಿಸಿಕೆ ವ್ಯಕ್ತಪಡಿಸಿದನು.