ಸಕಲೇಶಪುರ ತಾಲೂಕಿನಲ್ಲಿ ಸುಗ್ಗಿ ಸೊಗಡಿನ ಸಂಭ್ರಮ

| Published : Apr 16 2025, 12:30 AM IST

ಸಕಲೇಶಪುರ ತಾಲೂಕಿನಲ್ಲಿ ಸುಗ್ಗಿ ಸೊಗಡಿನ ಸಂಭ್ರಮ
Share this Article
  • FB
  • TW
  • Linkdin
  • Email

ಸಾರಾಂಶ

ತಾಲೂಕಿನ ಜನತೆ ಕಳೆದ ಎರಡು ತಿಂಗಳಿನಿಂದ ಸುಗ್ಗಿಹಬ್ಬದ ಸಂಭ್ರಮದಲ್ಲಿ ಮಿಂದೇಳುತ್ತಿದ್ದಾರೆ. ಪೆಬ್ರವರಿ ತಿಂಗಳ ಆರಂಭದಿಂದ ಆರಂಭವಾಗಿರುವ ಸುಗ್ಗಿಹಬ್ಬಗಳು ಮೇ ತಿಂಗಳವರಗೆ ನಡೆಯುತ್ತಿದ್ದು, ಅದರಲ್ಲೂ ಏಪ್ರಿಲ್ ತಿಂಗಳಿನಲ್ಲಿ ತಾಲೂಕಿನ ಪ್ರಸಿದ್ದ ಸುಗ್ಗಿಗಳು ಆರಂಭಗೊಂಡಿದ್ದು, ಶಿಷ್ಟಚಾರ, ಸಂಪ್ರದಾಯ ಪಾಲನೆಯ ಮೂಲಕ ಜನರು ಭಕ್ತಿಪರಕಾಷ್ಟೆ ಪ್ರದರ್ಶಿಸುತ್ತಿದ್ದಾರೆ.

ವಿದ್ಯಾಕಾಂತರಾಜ್

ಕನ್ನಡಪ್ರಭವಾರ್ತೆ ಸಕಲೇಶಪುರ

ತಾಲೂಕಿನ ಜನತೆ ಕಳೆದ ಎರಡು ತಿಂಗಳಿನಿಂದ ಸುಗ್ಗಿಹಬ್ಬದ ಸಂಭ್ರಮದಲ್ಲಿ ಮಿಂದೇಳುತ್ತಿದ್ದಾರೆ. ಪೆಬ್ರವರಿ ತಿಂಗಳ ಆರಂಭದಿಂದ ಆರಂಭವಾಗಿರುವ ಸುಗ್ಗಿಹಬ್ಬಗಳು ಮೇ ತಿಂಗಳವರಗೆ ನಡೆಯುತ್ತಿದ್ದು, ಅದರಲ್ಲೂ ಏಪ್ರಿಲ್ ತಿಂಗಳಿನಲ್ಲಿ ತಾಲೂಕಿನ ಪ್ರಸಿದ್ದ ಸುಗ್ಗಿಗಳು ಆರಂಭಗೊಂಡಿದ್ದು, ಶಿಷ್ಟಚಾರ, ಸಂಪ್ರದಾಯ ಪಾಲನೆಯ ಮೂಲಕ ಜನರು ಭಕ್ತಿಪರಕಾಷ್ಟೆ ಪ್ರದರ್ಶಿಸುತ್ತಿದ್ದಾರೆ.

ಹೆತ್ತೂರು ಹೋಬಳಿಯ ಕೊಂಗಳ್ಳಿ, ಹಾನುಬಾಳ್ ಹೋಬಳಿ ಗುಂಡುಬ್ರಹ್ಮ ಹಾಗೂ ಸಕಲೇಶಪುರದ ಸಕಲೇಶ್ವರಸ್ವಾಮಿ ಜಾತ್ರೆಗಳ ಮೂಲಕ ಆರಂಭವಾಗುವ ಧಾರ್ಮಿಕ ಕಾರ್ಯಕ್ರಮಗಳು ಮೇ ಅಂತ್ಯದವರೂ ಸಾಂಗೋಪಾಧಿಯಲ್ಲಿ ನಡೆಯುತ್ತಿವೆ. ಯಸಳೂರು ಹೋಬಳಿ ವ್ಯಾಪ್ತಿಯ ಹೆರೂರು ಗ್ರಾಮದಲ್ಲಿ ಏಪ್ರಿಲ್ ತಿಂಗಳ ಮೊದಲ ವಾರದಲ್ಲಿ ಆರಂಭಗೊಂಡಿರುವ ೧೦ ಗ್ರಾಮಗಳು ಸಮ್ಮೀಲನಗೊಳ್ಳುವ ೧೦ ದಿನಗಳ ಸುಗ್ಗಿ ಸಾಕಷ್ಟು ಪ್ರಸಿದ್ದಿ ಪಡೆದಿದೆ.

ದೇವಿರಮ್ಮ, ಕೆಂಚಮ್ಮ ದೇವಿಯರನ್ನು ಪೂಜಿಸುವ ಸುಗ್ಗಿ ಹಲವು ವೈಶಿಷ್ಟಗಳನ್ನು ಹೊಂದಿದ್ದು, ಸುಗ್ಗಿಯ ಮೊದಲ ದಿನ ಉಚ್ಚಂಗಿ ಗ್ರಾಮ ಸಮೀಪದ ಗುವಿಬೆಟ್ಟಕ್ಕೆ ದೇವರ ವಿಗ್ರಹಗಳನ್ನು ಹೊತ್ತೊಯ್ಯುವ ಅರ್ಚಕರು ಗವಿಬೆಟ್ಟದಲ್ಲಿ ದೇವಿ ಕೊಳದಲ್ಲಿ ದೇವರ ಮಜ್ಜನ ಮಾಡಿಸಿದ ನಂತರ ದೇವಿಯರನ್ನು ಪೂಜಿಸುವ ಮೂಲಕ ಸುಗ್ಗಿ ಆರಂಭಗೊಳ್ಳಲಿದೆ. ಇಲ್ಲಿನ ವೈಶಿಷ್ಟವೆಂದರೆ ಸುಗ್ಗಿ ಸಂದರ್ಭದಲ್ಲಿ ಮಾತ್ರ ದೇವಸ್ಥಾನದ ಬಾಗಿಲು ತೆಗೆಯಲಾಗುತ್ತದೆ. ಇಲ್ಲಿನ ಸಮೀಪ ಬಾಳೆಕೆರೆ ಗ್ರಾಮದಲ್ಲೂ ಮೂರು ದಿನಗಳ ಸುಗ್ಗಿ ಹಲವು ಕಟು ಸಂಪ್ರದಾಯದ ಮೂಲಕ ನಡೆಯುತ್ತದೆ.

ಯಸಳೂರು ಗ್ರಾಮದಲ್ಲಿ ಒಂದು ದಿನದ ನಂದೀಶ್ವರ ಜಾತ್ರೆ ನಡೆಯುತ್ತಿದ್ದು, ಇಲ್ಲಿ ರಥೋತ್ಸವ ಹಾಗೂ ಕೆಂಡೋತ್ಸವಕ್ಕೆ ಕೂಡಗಿನ ಹಲವು ಮನೆತನಗಳು ಆಗಮಿಸುವುದು ಇಲ್ಲಿನ ವಿಶೇಷಗಳಲ್ಲಿ ಒಂದು. ಇನ್ನೂ ಯಸಳೂರು ಹೋಬಳಿಯ ತೊಂತಲಪುರ ಗ್ರಾಮದಲ್ಲೂ ಒಂದು ದಿನದ ಸಂಭ್ರಮದ ಸುಗ್ಗಿ ತಲತಲಾಂತರದಿಂದ ನಡೆದುಕೊಂಡು ಬರುತ್ತಿದೆ. ಉಚ್ಚಂಗಿ ಗ್ರಾಮದಲ್ಲಿ ವಾರಗಳ ಕಾಲ ನಡೆಯುವ ರಾಮೋತ್ಸವ ಸಹ ತನ್ನದೆ ಸಂಪ್ರದಾಯದ ಮೂಲಕ ಹೆಸರು ಪಡೆದಿದೆ. ಹೆತ್ತೂರು ಹೋಬಳಿ ಹೆತ್ತೂರು ಗ್ರಾಮದಲ್ಲಿ ೭ ದಿನಗಳ ಸುಗ್ಗಿ ಹಲವು ವೈಶಿಷ್ಟಗಳನ್ನು ಹೊಂದಿದ್ದು, ಏಪ್ರಿಲ್‌ ೮ ರಿಂದ ಆರಂಭವಾಗಿರುವ ಸುಗ್ಗಿ ೧೬ ಕ್ಕೆ ಮುಗಿಯಲಿದೆ. ಸುಗ್ಗಿ ಆರಂಭದ ಮೊದಲು ಸಾರು ಹಾಕುವ ಸಂಪ್ರದಾಯದ ಮೂಲಕ ಸುಗ್ಗಿ ಆರಂಭಗೊಳ್ಳಲಿದ್ದು, ಮದ್ಯ ಸೇವನೆ ನಿಷೇಧವಿದೆ. ಹಸಿರು ಕಡಿಯವಂತಿಲ್ಲ, ಸಾರು ಹಾಕುವ ವೇಳೆ ಊರು ಹೊರಗಿದ್ದವರು ಹೊರಗೆ ಗ್ರಾಮದಲ್ಲಿದ್ದವರು ಗ್ರಾಮದಿಂದ ತೆರಳದಂತೆ ಕಟ್ಟನಿಟ್ಟಿನ ಆಚರಣೆ ಮಾಡಲಾಗುತ್ತಿದ್ದು, ಸಾರು ಹಾಕುವ ದಿನ ಸಂಗ್ರಹವಾಗುವ ಪಡಿಯನ್ನು ಪಡೆದು ಕಾಡಿನ ಒಡೆಯನ ಹಬ್ಬ ಎಂಬ ಧಾರ್ಮಿಕ ಆಚರಣೆಯನ್ನು ಗ್ರಾಮದ ಹೊರವಲಯದಲ್ಲಿ ಆಚರಿಸಲಾಗುತ್ತದೆ.

ಇದಲ್ಲದೆ ಬಿಲ್ಲುಸುಗ್ಗಿ, ಹಗಲು ಸುಗ್ಗಿ, ಕೆಂಡೋತ್ಸವ ನಡೆಯುವುದು ವಾಡಿಕೆಯಾಗಿದೆ. ಆದರೆ ಸುಗ್ಗಿಯ ಅಂಗವಾಗಿ ನಡೆಯುವ ಮಹಿಳೆಯರ ಸುಗ್ಗಿ ಗಮನ ಸೆಳೆಯುತ್ತಿದ್ದು, ಹೆತ್ತೂರು ಗ್ರಾ.ಪಂ ವ್ಯಾಪ್ತಿಯ ಕಿರ್ಕಳ್ಳಿ ಗ್ರಾಮದ ಪಟೇಲರ ಮನೆಯಲ್ಲಿರುವ ದೇವರ ವಿಗ್ರಹವನ್ನು ಹೊರತಂದು ಗ್ರಾಮದ ಹೊರವಲಯದಲ್ಲಿಟ್ಟು ಕೇವಲ ಮಹಿಳೆಯರೆ ಪೂಜಿಸುವುದು ಈ ಸುಗ್ಗಿಯ ವಿಶೇಷಗಳಲ್ಲಿ ಒಂದಾಗಿದ್ದು, ಅಪ್ಪಿತಪ್ಪಿಯು ಅಂದು ಗ್ರಾಮದಲ್ಲಿ ಪುರುಷರು ಸಂಚರಿಸುವಂತಿಲ್ಲ ಎಂಬ ರೂಢಿ ಹಲವು ಶತಮಾನಗಳಿಂದ ನಡೆದು ಕೊಂಡು ಬಂದಿದೆ.

ಇನ್ನೂ ಹೆತ್ತೂರು ಗ್ರಾಮದ ಸಮೀಪದ ಐಗೂರು ಗ್ರಾಮದ ಐದು ದಿನಗಳ ಸುಗ್ಗಿ ತನ್ನದೆ ವೈಶಿಷ್ಟ್ಯಹೊಂದಿದ್ದು, ಏಪ್ರಿಲ್‌ ೧೪ ರಂದು ದೊಡ್ಡಕಲ್ಲೂರು ಬೆಟ್ಟದಲ್ಲಿರುವ ನಿರ್ವಹಣಾಸ್ವಾಮಿಯ ಗುಹೆಯಲ್ಲಿನ ಪಾದುಕೆಗೆ ನಿರ್ವಹಣಾಸ್ವಾಮಿ ಆರಾಧಾನೆ ಹೆಸರಿನಲ್ಲಿ ರಾತ್ರಿಯಿಡಿ ಪೂಜೆಸಲ್ಲಿಸುವ ಮೂಲಕ ಸುಗ್ಗಿ ಆರಂಭಗೊಂಡಿದ್ದು, ಹಲವು ಕಟ್ಟುಪಾಡುಗಳೊಂದಿಗೆ ಸುಗ್ಗಿ ನಡೆಸಲಾಗುತ್ತಿದೆ. ಗೊದ್ದು ಗ್ರಾಮದ ಸುಗ್ಗಿ ಸಹ ತನ್ನದೇ ವೈಶಿಷ್ಟದ ಮೂಲಕ ಕಳೆದ ಮೂರು ದಿನಗಳ ಕಾಲ ವಿಜೃಭಣೆಯಿಂದ ನಡೆದಿದೆ.

ಹೆತ್ತೂರು ಹೋಬಳಿ ಹೊಂಗಡಹಳ್ಳ ಗ್ರಾಮದಲ್ಲಿ ಮಾರ್ಚ್ ಅಂತ್ಯದಲ್ಲಿ ಮೂರು ದಿನಗಳ ದೇವಿರಮ್ಮ ಸುಗ್ಗಿ ನಡೆದರೆ, ಹಿರಿಯೂರು ಗ್ರಾಮದಲ್ಲಿ ಏಳು ದಿನಗಳ ಸುಗ್ಗಿ ಆರಂಭಗೊಂಡಿದೆ. ವಳಲಹಳ್ಳಿ ಗ್ರಾಮದಲ್ಲೂ ಮೂರು ದಿನಗಳ ದೇವಿರಮ್ಮ ಸುಗ್ಗಿ ಅದ್ಬುತವಾಗಿ ನಡೆದು ಸಮಾಪ್ತಿಗೊಂಡಿದೆ. ಬೊಮ್ಮನಕೆರೆ ಗ್ರಾಮದಲ್ಲಿ ನಡೆಯುವ ಸುಗ್ಗಿಯ ವೇಳೆ ಸುಗ್ಗಿಬನಕ್ಕೆ ಮೌನವಾಗಿ ಹೋಗಿಬರುವುದು ಈ ಸುಗ್ಗಿಯ ವಿಶಿಷ್ಟಗಳಲ್ಲಿ ಒಂದಾಗಿದೆ.

ಇನ್ನೂ ಕಸಬಾ ಹೋಬಳಿ ವ್ಯಾಪ್ತಿಯ ಕುದರಂಗಿ ಜಾತ್ರೆ ಏಪ್ರಿಲ್‌ ೧೪,೧೫ ಹಾಗೂ ೧೬ ರಂದು ಜರುಗಿದ್ದು. ಕುದರಂಗಿ ವೀರಭದ್ರೇಶ್ವರನನ್ನು ಕಣ್ತುಂಬಿಕೊಳ್ಳಲು ಜಿಲ್ಲೆ ಹಾಗೂ ಅಂತರಜಿಲ್ಲೆಯ ಜನರು ಆಗಮಿಸುತ್ತಾರೆ. ರಥೋತ್ಸವಕ್ಕೆ ಈಡುಗಾಯಿ ಸಮರ್ಪಿಸಿ ಪುನೀತರಾಗುತ್ತಾರೆ. ಏಪ್ರಿಲ್‌ ೧೪ ರಿಂದ ಆರಂಭಗೊಂಡಿರುವ ಏಳು ದಿನಗಳ ಕಾಲ ನಡೆಯುವ ಅರೆಕರೆ ಆರುಮಂದೆ ಸುಗ್ಗಿ ಆರಂಭಗೊಳ್ಳಲಿದ್ದು, ಡೊಡ್ಡಮ್ಮ, ಚಿಕ್ಕಮ್ಮ ದೇವಿಯ ವಿಗ್ರಹಗಳು ವಿವಿಧ ಗ್ರಾಮಗಳಿಂದ ಸತ್ಸಸಂಪ್ರದಾಯದ ಮೂಲಕ ಕರೆತಂದು ಸುಗ್ಗಿಕಟ್ಟಿಯಲ್ಲಿ ಪ್ರತಿಷ್ಠಾಪಿಸಿದ ನಂತರ ರಾತ್ರಿ ಪೂರ್ಣ ಸುಗ್ಗಿ ಕುಣಿದುಕುಪ್ಪಳಿಸುವ ಭಕ್ತಾಧಿಗಳು ಬೆಳಗಿನ ಜಾವ ಕೆಂಡೋತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ.

೧೨ ಗ್ರಾಮಗಳ ಗ್ರಾಮಸ್ಥರು ಸೇರಿ ಆಚರಿಸುವ ಬಲ್ದೂರು ಸುಗ್ಗಿ ಎಂದೆ ಹೆಸರು ಪಡೆದಿರುವ ಹುಲ್ಲಹಳ್ಳಿ ಸುಗ್ಗಿ ಏಪ್ರಿಲ್‌ ಎರಡನೇ ವಾರಕ್ಕೆ ಮುಕ್ತಾಯಗೊಂಡಿದೆ. ಕ್ಯಾನಹಳ್ಳಿ, ಬುಗಡಹಳ್ಳಿ ಗ್ರಾಮಸ್ಥರು ಸೇರಿ ಆಚರಿಸುವ ಬುಗಡಹಳ್ಳಿ ಸುಗ್ಗಿ ಇನ್ನೆರಡು ದಿನಗಳಲ್ಲಿ ಆರಂಭವಾಗಲಿದ್ದರೆ, ಬೊಬ್ಬನಹಳ್ಳಿ ಸುಗ್ಗಿ ಕಳೆದ ವಾರ ಮುಕ್ತಾಯಗೊಂಡಿದೆ. ಇನ್ನೂ ಹಾನುಬಾಳ್ ಹೋಬಳಿ ದೇವಾಲದಕೆರೆ ಗ್ರಾ.ಪಂ ವ್ಯಾಪ್ತಿಯ ೯ ಗ್ರಾಮಗಳ ಗ್ರಾಮಸ್ಥರು ನಡೆಸುವ ೧೧ ದಿನಗಳ ಕಾಲ ನಡೆಯುವ ಸುಗ್ಗಿ ಮೂಡಿಗೆರೆ ಹಾಗೂ ಸಕಲೇಶಪುರ ತಾಲೂಕಿನಲ್ಲಿ ಹೆಚ್ಚಿನ ಪ್ರಸಿದ್ದಿ ಪಡೆದಿದ್ದು, ಅಚ್ಚನಹಳ್ಳಿ ಗ್ರಾಮದ ಸುಗ್ಗಿ ದೇವಿರಮ್ಮ ಬನ, ಅಚ್ಚನಹಳ್ಳಿ ಕೊಮರಗುಡಿ, ದೇವಾಲದಕೆರೆ ದೇವಿರಮ್ಮ ಬನ ಸೇರಿದಂತೆ ಮೂರು ಸ್ಥಳಗಳಲ್ಲಿ ಕೆಂಡೋತ್ಸವ ನಡೆಯುವುದು ಈ ಸುಗ್ಗಿಯ ವಿಶೇಷಗಳಲ್ಲಿ ಒಂದಾಗಿದೆ.

ಕ್ಯಾಮನಹಳ್ಳಿ ಗ್ರಾಮದಲ್ಲಿ ಎರಡು ವರ್ಷಕ್ಕೊಮ್ಮೆ ೧೨ ದಿನಗಳ ಸುಗ್ಗಿ ನಡೆಯುತ್ತಿದ್ದು, ಪ್ರತಿವರ್ಷ ಎರಡು ದಿನಗಳ ಧಾರ್ಮಿಕ ಆಚರಣೆ ನಡೆಸಲಾಗುತ್ತಿದೆ. ಇನ್ನೂ ಬೆಳಗೋಡು ಹೋಬಳಿ ಬಾಳ್ಳುಪೇಟೆ ಗ್ರಾಮದಲ್ಲಿ ಕೆಂಚಮ್ಮದೇವಿಯ ಜಾತ್ರೆ ನಡೆದ ಮರು ದಿನ ಆರಂಭವಾಗಲಿರುವ ಸುಗ್ಗಿ ಐದು ದಿನಗಳ ಕಾಲ ನಡೆಯಲಿದೆ. ಜಂಪದ ಹೆಸರಿನಲ್ಲಿ ಈಶ್ವರಹಳ್ಳಿ ಗ್ರಾಮದಲ್ಲಿ ಅಮೃತಲಿಂಗೇಶ್ವರ ದೇವರ ಉತ್ಸವ ಕಳೆದ ಮೂರು ದಿನಗಳಿಂದ ನಡೆದು ಸಮಾಪ್ತಿಗೊಂಡಿದೆ. ಹಸಿಡೆ ಗ್ರಾಮದಲ್ಲೂ ಜಂಪದ ಹೆಸರಿನಲ್ಲಿ ವೀರಭಧ್ರಸ್ವಾಮಿ ದೇವರಿಗೆ ರುದ್ರಾಭಿಪೇಕ ಹಾಗೂ ಕೆಂಡೋತ್ಸವ ನಡೆಸಲಾಗಿದೆ.

ನಿಂತಿದ್ದ ಸುಗ್ಗಿಗಳ ಆರಂಭಕ್ಕೆ ಸಿದ್ದತೆ: ತಾಲೂಕಿನ ಕಾಡುಮನೆ ಗ್ರಾಮದಲ್ಲಿ ಕಳೆದ ೬೦ ವರ್ಷಗಳಿಂದ ಸ್ಥಗಿತಗೊಂಡಿದ್ದ ಸುಗ್ಗಿಯನ್ನು ಪ್ರಸಕ್ತವರ್ಷ ನಡೆಸುವ ಮೂಲಕ ಈ ಭಾಗದ ಜನರು ಸಂಭ್ರಮಿಸಿದರೆ, ದೇವಾಲದಕೆರೆ ಗ್ರಾ.ಪಂ ವ್ಯಾಪ್ತಿಯ ಕುಮಾರಹಳ್ಳಿ ಗ್ರಾಮದಲ್ಲೂ ದೇವಸ್ಥಾನವನ್ನು ಜೀರ್ಣೋದ್ದಾರಗೊಳಿಸುವ ಮೂಲಕ ಸುಗ್ಗಿ ನಡೆಸಲು ಸಿದ್ದತೆಗಳು ನಡೆಸಲಾಗುತ್ತಿದೆ.

ಮದ್ಯ-ಮೇದದ ಸುಗ್ಗಿ: ತಾಲೂಕಿನಲ್ಲಿ ಜರುಗುವ ಬಹುತೇಕ ಎಲ್ಲ ಸುಗ್ಗಿಗಳು ಮದ್ಯ-ಮೇದ ಹೊರತುಪಡಿಸಿ ಧಾರ್ಮಿಕ ಆಚರಣೆಗಳು ನಡೆದರೆ ತಾಲೂಕಿನ ವನಗೂರು ಗ್ರಾಮದಲ್ಲಿ ನಡೆಯುವ ಸುಬ್ಬಮ್ಮದೇವಿಯ ಸುಗ್ಗಿಯಲ್ಲಿ ಮದ್ಯ-ಮೇದದ ಸಮಾರಾಧನೆ ನಡೆಯುವುದು ಇಲ್ಲಿನ ವಿಶೇಷಗಳಲ್ಲಿ ಒಂದಾಗಿದೆ.

ಕೋಟ್‌.......

ತಾಲೂಕಿನಾದ್ಯಂತ ಮಾರ್ಚ್ ಏಪ್ರಿಲ್ ತಿಂಗಳಲ್ಲಿ ಪೂರ್ಣ ಸುಗ್ಗಿಹಬ್ಬಗಳ ಸಂಭ್ರಮ ಮುಗಿಲುಮುಟ್ಟಿದ್ದು, ಹಲವು ಕಟ್ಟುಪಾಡುಗಳೊಂದಿಗೆ ಹಬ್ಬಗಳನ್ನು ಆಚರಣೆ ಮಾಡುವ ಮೂಲಕ ಗ್ರಾಮೀಣ ಭಾಗದಲ್ಲಿ ಹಿಂದೂ ಸಂಪ್ರದಾಯಗಳನ್ನು ಎತ್ತಿಹಿಡಿಯಲಾಗುತ್ತಿದೆ.

ಸೀಮೆಂಟ್ ಮಂಜು. ಶಾಸಕ.

ಕೋಟ್........

ತಾಲೂಕಿನ ಹೆತ್ತೂರು ಗ್ರಾಮದ ಕುಮಾರಲಿಂಗೇಶ್ವರ ದೇವರ ಸುಗ್ಗಿ ತಾಲೂಕಿನಲ್ಲೆ ಪ್ರಸಿದ್ದಿ ಪಡೆದಿದ್ದು, ಹಲವು ಕಟ್ಟುಪಾಡುಗಳೊಂದಿಗೆ ಸುಗ್ಗಿಯನ್ನು ಆಚರಿಸಲಾಗುತ್ತಿದೆ.

ರವಿ. ಗ್ರಾಮದ ಮುಖಂಡ.