ಸಾರಾಂಶ
ಮಹಿಳಾ ಕಾರ್ಮಿಕರ ಕೂಲಿ 450 ರು. ದಾಟಿದ್ದರೆ, ಪುರುಷರ ಕೂಲಿ 750 ರು. ಕ್ಕೇರಿದೆ । ರೈತರ ಸ್ಥಿತಿ ಅತಂತ್ರಕನ್ನಡಪ್ರಭ ವಾರ್ತೆ ಕೋಲಾರ
ಬಿತ್ತನೆ ಸಮಯದಲ್ಲಿ ಸಾಕಾಗುವಷ್ಟು ಮಳೆ ಬಾರದ ಕಾರಣ ಜಿಲ್ಲೆಯಾದ್ಯಂತ ಅಲ್ಪಸ್ವಲ್ಪ ಮಳೆಗೆ ಬಿತ್ತಿದ ರಾಗಿ ಕೊಯ್ಲಿಗೆ ಬಂದಿದೆ. ಆದರೆ ತೆನೆ ಕಟಾವು ಮಾಡಲು ಕೂಲಿ ಕಾರ್ಮಿಕರು ಸಿಗದೆ ರೈತರು ಪರದಾಡುವ ಪರಿಸ್ಥಿತಿ ಉಂಟಾಗಿದೆ.ಸರ್ಕಾರ ಉಚಿತ ಯೋಜನೆಗಳು ಜಾರಿಗೆ ತಂದ ನಂತರ ರೈತರ ಹೊಲಗದ್ದೆ ಮತ್ತು ತೋಟಗಳಲ್ಲಿ ಕೂಲಿ ಮಾಡುವ ಕೂಲಿ ಆಳುಗಳು ಸಿಗುತ್ತಿಲ್ಲ. ಜತೆಗೆ ಕೂಲಿ ದರವೂ ದುಪ್ಪಟ್ಟಾಗಿದ್ದು, ರೈತ ಅಷ್ಟೊಂದು ಕೂಲಿ ಕೊಡುವ ಸ್ಥಿತಿಯಲ್ಲಿ ಇಲ್ಲ. ಹೀಗಾಗಿ ಬೆಳೆ ಕಟಾವು ಮಾಡಿ ಮನೆಗೆ ಸಾಗಿಸಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ.
ಕೆಲವೆಡೆ ಮಾತ್ರ ರಾಗಿ ಬಿತ್ತನೆ:ಜಿಲ್ಲೆಯಾದ್ಯಂತ ಈ ವರ್ಷ ಮುಂಗಾರು ಮಳೆ ಬಿತ್ತನೆ ಕಾರ್ಯದ ಸಂದರ್ಭದಲ್ಲಿ ಕೈಕೊಟ್ಟ ಕಾರಣ ಪ್ರಮುಖ ಮಳೆಯಾಶ್ರಿತ ಬೆಳೆಗಳಾದ ನೆಲಗಡಲೆ, ತೊಗರಿ, ಹಲಸಂದೆ ಮುಂತಾದ ಬೆಳೆ ಬೆಳೆಯಲು ಸಾಧ್ಯವಾಗಿಲ್ಲ. ಅಲ್ಪಸ್ವಲ್ಪ ಬಿದ್ದ ಮಳೆಗೆ ಕೋಲಾರ, ಮಾಲೂರು, ಬಂಗಾರಪೇಟೆ ತಾಲೂಕುಗಳಲ್ಲಿ ರಾಗಿ, ತೊಗರಿ ಬಿತ್ತನೆ ಮಾಡಲಾಗಿತ್ತು. ಈ ಹಿಂದೆ ಮಹಿಳಾ ಕೂಲಿ ಕೆಲಸಗಾರರಿಗೆ ೨೫೦ ರಿಂದ ೩೦೦ ರೂ.ಗಳ ತನಕ ಇತ್ತು. ಈಗ ೩೫೦ ರಿಂದ ೪೫೦ ರು.ಗಳನ್ನು ದಾಟಿದೆ. ಪುರುಷರಿಗೆ ೬೦೦ ರು.ಗಳಿಂದ ಈಗ ೭೫೦ ರು.ಗಳು ಆಗಿರುವುದು ರೈತರಿಗೆ ಹೊರೆಯಾಗಿದೆ.
ರಾಗಿ ಇಳುವರಿ ಕೊರತೆ:ಈಗಿನ ಪರಿಸ್ಥಿತಿಯಲ್ಲಿ ೧ ಎಕೆರೆ ರಾಗಿ ಬೆಳೆ ಬೆಳೆಯಲು ೩೦ ರಿಂದ ೩೫ ಸಾವಿರ ರು.ಗಳ ಖರ್ಚು ಬರುತ್ತಿದೆ. ಒಂದು ಎಕೆರೆ ರಾಗಿ ತೆನೆ ಕಟಾವು ಮಾಡಲು ಮತ್ತು ರಾಗಿ ಮಾಡಿ ಮನೆ ತುಂಬಿಸಿಕೊಳ್ಳಲು ೧೦ ಸಾವಿರ ರು.ಗಳು ಖರ್ಚು ಬರುತ್ತದೆ. ಮಳೆಯಿಲ್ಲದೆ ಬೆಳೆಯು ಸರಿಯಾಗಿ ಆಗದ ಕಾರಣ ೧ ಎಕೆರೆಗೆ ೩ ಮೂಟೆ ರಾಗಿ ಸಿಗುತ್ತಿದೆ. ಸರ್ಕಾರ ನಿಗದಿಪಡಿಸಿರುವ ರಾಗಿ ದರ ಕ್ವಿಂಟಾಲ್‌ಗೆ ೩೮೦೦ ರೂ.ಗಳು. ಈ ರೀತಿಯಾದರೆ ಯಾವ ಬೆಳೆಯನ್ನೂ ಬೆಳೆಯಲು ಸಾಧ್ಯವಿಲ್ಲ ಎನ್ನುವುದು ರೈತರ ಅಭಿಪ್ರಾಯ.
ನೆಲೆಗಡಲೆ ಮತ್ತು ತೊಗರಿ ಹಾಗೂ ಹಲಸಂದೆಗೆ ಮಳೆ ಬಾರದೇ ಹೋದ ಕಾರಣ ಬೆಳೆಯು ಸರಿಯಾಗಿ ಆಗದೆ ಅಲ್ಪಸ್ವಲ್ಪ ಆಗಿರುವ ತೊಗರಿ ಕಾಯಿಯನ್ನು ಕಿತ್ತು ಮಾರುಕಟ್ಟೆಗೆ ತಂದರು, ಮಾರುಕಟ್ಟೆಯಲ್ಲಿ ಒಂದು ಕೆ.ಜಿ ತೊಗರಿಕಾಯಿ ೫೦ ರೂ.ಗಳಿಗೆ ಮಾರಾಟವಾಗುತ್ತಿದೆ. ರೈತರು ಕಟಾವಿಗೆ ನೀಡಿದ ಕೂಲಿಯೂ ಸಿಗದಂತಾಗಿದೆ.ಬಾಕ್ಸ್,,,,
ನಾಲ್ವರು ಸ್ನೇಹಿತರು ಸೇರಿ ಜಮೀನನ್ನು ಗುತ್ತಿಗೆ ಪಡೆದು ರಾಗಿ ಬೆಳೆದಿದ್ದೆವು. ೧ ಎಕೆರೆಗೆ ೩೫ ರಿಂದ ೪೦ ಸಾವಿರಗಳ ವರೆವಿಗೂ ಖರ್ಚು ಬಂದಿದೆ. ೪ ಮೂಟೆ ರಾಗಿ ಆಗಿದೆ. ರಾಗಿ ತೆನೆಯನ್ನು ಮಿಷನ್‌ಗೆ ಹಾಕಿ ರಾಗಿ ಪಡೆಯಲು ಒಂದು ಕ್ವಿಂಟಾಲ್ ರಾಗಿಗೆ ೧೫೦ ರೂ.ಗಳು ರಾಗಿ ಮಿಷನ್ ರವರಿಗೆ ಕೊಡಬೇಕಾಗಿದೆ. ರಾಗಿ ತೆನೆ ಕಟಾವು ಮಾಡಲು ಕೂಲಿ ಕಾರ್ಮಿಕರಿಗಾಗಿ ಹುಡುಕಾಟ ಮಾಡುವಂತಾಯಿತು. ಸರ್ಕಾರ ಈ ಹಂತದಲ್ಲಿ ಬರ ಪರಿಹಾರಕ್ಕಾಗಿ ೨ ಸಾವಿರ ಘೋಷಣೆ ಮಾಡಿದೆ. ರೈತರು ಒಂದು ಎಕೆರೆ ಬೆಳೆ ಮಾಡಲು ೪೦ ಸಾವಿರ ಖರ್ಚಿಗೆ ೨ ಸಾವಿರ ರೂ.ಗಳ ಪರಿಹಾರ ಆನೆಯ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎಂಬಂತಾಗಿದೆ ಎನ್ನುತ್ತಾರೆ ವೇಮಗಲ್ ರೈತ ಕರ್ಣ.