ಸಾರಾಂಶ
ಸಿರಿಗೆರೆ : ಅಪರೂಪಕ್ಕೊಮ್ಮೆ ಬಂದು ಹೆಗಲ ಮೇಲೆ ಕೈಹಾಕಿ ಬಣ್ಣದ ಮಾತಾಡಿ ಹೋಗುವ ಬಿಳಿ ಅಂಗಿ ನಾಯಕರ ಬಗ್ಗೆ ಎಚ್ಚರ ವಹಿಸಬೇಕು ಎಂದು ಹೊಳಲ್ಕೆರೆ ಶಾಸಕ ಡಾ.ಎಂ.ಚಂದ್ರಪ್ಪ ತಮ್ಮ ವಿರೋಧಿಗಳ ವಿರುದ್ಧ ಹರಿಹಾಯ್ದರು.
ಸಮೀಪದ ಕಾಗಳಗೆರೆ ಗ್ರಾಮದಲ್ಲಿ 8 ಕೋಟಿ ರು.ವೆಚ್ಚದಲ್ಲಿ ಕಾಗಳಗೆರೆ ಸಿಸಿ ರಸ್ತೆ, ಚೆಕ್ ಡ್ಯಾಂ ಮತ್ತು ಆಸ್ಪತ್ರೆ ಕಟ್ಟಡ ನಿರ್ಮಾಣ ಭೂಮಿ ಪೂಜೆ ಮಾಡಿ ಸಾರ್ವಜನಿಕ ಕಾರ್ಯಕ್ರಮದಲ್ಲಿ ಮಾತನಾಡಿದರು.
ನಾನು ಅಭಿವೃದ್ಧಿಯ ಕೆಲಸ ಮಾಡುವವನು. ನನಗೆ ನಾಟಕ ಮಾಡುವುದು ಗೊತ್ತಿಲ್ಲ. ನಾಟಕ ಮಾಡುವ ಜನ ಅಭಿವೃದ್ಧಿ ಮಾಡುವುದಿಲ್ಲ. 31 ವರ್ಷದ ಕೆಳಗೆ ನಾನು ಶಾಸಕನಾಗಿದ್ದಾಗ ಕ್ಷೇತ್ರದ ಹಳ್ಳಿಗಳಿಗೆ ರಸ್ತೆಗಳೇ ಇರಲಿಲ್ಲ. ಅಂತಹ ಕಾಲದಲ್ಲಿ 386 ಹಳ್ಳಿಗಳ ಮಣ್ಣಿನ ರಸ್ತೆಯಲ್ಲಿ ಓಡಾಡಿ ಮತ ಯಾಚಿಸಿ ಶಾಸಕನಾಗಿದ್ದೇನೆ ಎಂದು ಶಾಸಕರು ತಿಳಿಸಿದರು.
ದೊಡ್ಡ ನಾಯಕರು ಬಂದು ಬಣ್ಣದ ಮಾತನಾಡಿ ಹೋದರಲ್ಲ, ಅವರು ಜನರ ಕೆಲಸ ಮಾಡಲಿಲ್ಲ. ಅವರು ಈಗ ಕ್ಷೇತ್ರಕ್ಕೆ ಬಂದು ನೋಡಲಿ ಎಂದು ಹೇಳಿದ ಶಾಸಕರು ಸೂಳೆಕೆರೆಯಿಂದ ಬರುವ ನೀರು ಶುದ್ಧವಾಗಿಲ್ಲದಿರುವುದು ಗೊತ್ತಾಗಿದೆ. ಆದ್ದರಿಂದ ವಾಣಿವಿಲಾಸ ಅಣೆಕಟ್ಟೆಯಿಂದ ಹೊಳಲ್ಕೆರೆ ಕ್ಷೇತ್ರಕ್ಕೆ ಕುಡಿಯುವ ನೀರು ತರುವ ಯೋಜನೆ ಮಾಡುತ್ತಿದ್ದೇನೆ. ಆಗ ನಿಮಗೆ ಪರಿಶುದ್ಧ ನೀರು ದೊರೆಯುತ್ತದೆ ಎಂದರು.
ಮಳೆಯಾಧಾರಿತ ರೈತರು ಈಗ ಅಡಿಕೆ ತೋಟಗಳತ್ತ ಕಣ್ಣು ಹಾಕಿದ್ದಾರೆ. ಅಂತವರ ನೆರವಿಗೆ ಚೆಕ್ ಡ್ಯಾಂಗಳ ನಿರ್ಮಾಣ ಮಾಡಲಾಗಿದೆ. ಇದರಿಂದ ಅಂತರಜಲ ಮಟ್ಟ ಹೆಚ್ಚಿ ಕೊಳವೆ ಬಾವಿಗಳಲ್ಲಿ ನೀರು ಸಿಗುತ್ತದೆ. ಅದಕ್ಕೆ ಬೇಕಾದ ವಿದ್ಯುತ್ ನೀಡಲು ಹಲವು ಯೋಜನೆಗಳನ್ನು ಮಾಡುತ್ತಿದ್ದೇನೆ. ಅವುಗಳ ಕಾಮಗಾರಿ ಮುಗಿದಾಗ ನಿರಂತರ 10 ಗಂಟೆ ವಿದ್ಯುತ್ ರೈತರಿಗೆ ಸಿಗುವ ಭರವಸೆ ಇದೆ ಎಂದರು.
ಆಡಳಿತ ಪಕ್ಷದ ಕೆಲವು ಶಾಸಕರು ತನ್ನಿಂದ ಒಂದು ಸಣ್ಣ ಚರಂಡಿ ಮಾಡಲು ಆಗುತ್ತಿಲ್ಲ ಎನ್ನುತ್ತಿರುವಾಗ ವಿರೋಧ ಪಕ್ಷದವನಾದ ನಾನು ಕ್ಷೇತ್ರದ ತುಂಬಾ ಕೋಟಿ ಕೋಟಿ ರು.ಅಭಿವೃದ್ಧಿ ಮಾಡುತ್ತಿರುವುದನ್ನು ನೀವು ನೋಡಿದ್ದೀರಿ. ಕ್ಷೇತ್ರದ ಎಲ್ಲಾ ಕಡೆ ರಸ್ತೆ, ಚರಂಡಿ, ಆಸ್ಪತ್ರೆ, ವಿದ್ಯುತ್, ಕೆರೆ, ಚೆಕ್ ಡ್ಯಾಂ, ಶಾಲೆ ನಿರ್ಮಿಸಿ ಜನರಿಗೆ ಅನುಕೂಲ ಕಲ್ಪಿಸಿದ್ದೇನೆ. ಇದು ಜವಾಬ್ದಾರಿಯುತ ಶಾಸಕನಾಗಿ ನನ್ನ ಕೆಲಸವಾಗಿದೆ. ಇದನ್ನು ತಿಳಿದುಕೊಂಡು ಕೆಲಸ ಮಾಡುವವರ ಬೆನ್ನುತಟ್ಟುವ ಕೆಲಸ ಮಾಡಿ ಎಂದರು.
ಹೊಳಲ್ಕೆರೆ ಕ್ಷೇತ್ರದಲ್ಲಿ ಸುಮಾರು 483 ಹಳ್ಳಿಗಳಿವೆ. ಅವೆಲ್ಲವನ್ನೂ ನನ್ನ ಕುಟುಂಬದ ಸದಸ್ಯರೆಂದೇ ಭಾವಿಸಿದ್ದೇನೆ. ನನಗೆ ಅವು ಹಾಲು ಕೊಡುವ ಹಸುಗಳಿದ್ದಂತೆ. ಕೆಲವು ಹಸುಗಳು ಹಾಲು ಕೊಡದಿದ್ದರೂ ತಾರತಮ್ಮ ಮಾಡದೆ ಅವುಗಳನ್ನೂ ನಾನು ಸಮಾನವಾಗಿ ನೋಡುತ್ತಿದ್ದೇನೆ ಎಂದು ಹೇಳಿದರು.
ಎಲ್ಲ ಸಮುದಾಯಗಳನ್ನು ನನ್ನೊಟ್ಟಿಗೆ ಕರೆದುಕೊಂಡು ಹೋಗುವುದು ನನ್ನ ಕೆಲಸ. ಇಂತಹ ಒಳ್ಳೆಯ ಕೆಲಸಕ್ಕೂ ಹೆಜ್ಜೆಹೆಜ್ಜೆಗೂ ಅಡ್ಡಿಪಡಿಸುವ ಜನರಿದ್ದಾರೆ. ಅವರನ್ನೆಲ್ಲ ಪರಿಗಣನೆಗೆ ತೆಗೆದುಕೊಳ್ಳದೆ ನನ್ನ ಕೆಲಸ ಮಾಡುತ್ತಿದ್ದೇನೆ ಎಂದರು.
ಗ್ರಾಮ ಪಂಚಾಯತಿ ಅಧ್ಯಕ್ಷೆ ಲಕ್ಷ್ಮೀದೇವಿ ರಂಗಸ್ವಾಮಿ, ಗ್ರಾಮ ಪಂಚಾಯತಿ ಉಪಾಧ್ಯಕ್ಷ ದೀಪಕ್, ಹೊಳಲ್ಕೆರೆ ಬಿಜೆಪಿ ಮಂಡಲದ ಮಾಜಿ ಅಧ್ಯಕ್ಷರಾದ ಶ್ರೀ ಸಿದ್ದೇಶ್, ಗ್ರಾಪಂ ಸದಸ್ಯ ಪರಮೇಶ್, ಸುಮಿತ್ರ ತಿಮ್ಮೆಶ್, ಗಿರಿಜಮ್ಮ ಮಹೇಶ್, ಗಿರಿಜಮ್ಮ ತಿಪ್ಪೇಸ್ವಾಮಿ, ತಿಪ್ಪೇಸ್ವಾಮಿ, ಹೊಳಲ್ಕೆರೆ ತಾಲ್ಲೂಕು ಆರೋಗ್ಯ ಅಧಿಕಾರಿಗಳಾದ ರೇಖಾ, ಸಣ್ಣ ನೀರಾವರಿ ಇಲಾಖೆ ಇಂಜಿನಿಯರ್ ನವೀನ್, ಹಾಗೂ ಊರಿನ ಗ್ರಾಮಸ್ಥರು ಭಾಗವಹಿಸಿದ್ದರು.
ಸ್ಥಳೀಯರ ನಾಯಕರ ವಿರುದ್ಧ ಶಾಸಕ ಗರಂ:
ಒಳ ಮೀಸಲಾತಿಗೆ ಹೋರಾಟ ಮಾಡುತ್ತಿರುವ ಸ್ಥಳೀಯರ ನಾಯಕರ ವಿರುದ್ಧ ಗರಂ ಆದ ಶಾಸಕರು, ಒಳ ಮೀಸಲಾತಿಗೆ ಹೋರಾಡುವ ನಾಯಕರು ಓಟು ಹಾಕಿದ ಜನರಿಗೆ ಏನು ಮಾಡಿದ್ದೀರಿ? ಎಂದು ಪ್ರಶ್ನೆ ಮಾಡಿದರು. ಸಭಿಕರತ್ತ ತಿರುಗಿ ಹಾಗಾದರೆ ನಿಮಗೆ ಮೀಸಲಾತಿ ಬೇಡವೆ ಎಂದು ಕೇಳಿದ್ದಕ್ಕೆ ಜನರು ನಮಗೂ ಬೇಕು ಎಂದು ಕೂಗಿದರು.
;Resize=(128,128))
;Resize=(128,128))