ನೂತನ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ನೇಮಕಗೊಂಡ ನಂತರ ಅಭಿನಂದನೆ ಸಲ್ಲಿಸಲು ತೆರಳಿದ್ದ ನಿಮ್ಮನ್ನು ಶ್ರೀರಂಗಪಟ್ಟಣ ಕ್ಷೇತ್ರದ ಶಾಸಕರು ಮನೆಯೊಳಗೇ ಬಿಟ್ಟುಕೊಳ್ಳದೆ ಅವಮಾನಕರವಾಗಿ ನಡೆಸಿಕೊಳ್ಳುವ ಮೂಲಕ ದಲಿತ ವಿರೋಧಿ ನೀತಿಯನ್ನು ಪ್ರದರ್ಶಿಸಿದ್ದಾರೆ. ಇದರ ವಿರುದ್ಧ ದನಿ ಎತ್ತದಿರುವುದು ನಿಮ್ಮ ರಾಜಕೀಯ ಅಸಹಾಯಕತೆಗೆ ಸಾಕ್ಷಿಯಾಗಿದೆ.
ಕನ್ನಡಪ್ರಭ ವಾರ್ತೆ ಮಂಡ್ಯ
ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಬಗ್ಗೆ ಮಾತನಾಡುವ ನೈತಿಕತೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕುಮಾರ್ ಕೊಪ್ಪ ಅವರಿಗೆ ಇಲ್ಲ. ಕುಮಾರಸ್ವಾಮಿ ಅವರ ಕೊಡುಗೆಯನ್ನು ಕೇಳುವ ನೀವು, ಕೈಗಾರಿಕೆ ಸ್ಥಾಪನೆಗೆ ಕುಮಾರಸ್ವಾಮಿ ಕೇಳಿರುವ ಭೂಮಿಯನ್ನು ಸರ್ಕಾರದಿಂದ ಕೊಡಿಸುವಂತೆ ಜೆಡಿಎಸ್ ಎಸ್ಸಿ, ಎಸ್ಟಿ ಜಿಲ್ಲಾಧ್ಯಕ್ಷ ಸಾತನೂರು ಜಯರಾಮ್ ಸವಾಲು ಹಾಕಿದರು.ಕಳೆದ ಹತ್ತು ತಿಂಗಳಿಂದ ಕೈಗಾರಿಕೆಗೆ ಅಗತ್ಯವಿರುವ ಭೂಮಿಯನ್ನು ರಾಜ್ಯ ಸರ್ಕಾರ, ಜಿಲ್ಲಾಡಳಿತವನ್ನು ಕೇಳುತ್ತಲೇ ಬರುತ್ತಿದ್ದಾರೆ. ಇದುವರೆಗೂ ಭೂಮಿಯನ್ನು ಏಕೆ ಮಂಜೂರು ಮಾಡಿಲ್ಲ. ಕೇಂದ್ರ ಬೃಹತ್ ಕೈಗಾರಿಕಾ ಇಲಾಖೆಯಿಂದ ಈಗಾಗಲೇ ಅಧಿಕಾರಿಗಳ ತಂಡ ಭೇಟಿ ನೀಡಿ ಜಿಲ್ಲಾಡಳಿತ ಗುರುತಿಸಿದ್ದ ಜಮೀನಿನಲ್ಲಿ ಬಸರಾಳು ವ್ಯಾಪ್ತಿಯಲ್ಲಿ ೧೦೦ ಎಕರೆ ಭೂಮಿ ಮಂಜೂರು ಮಾಡುವಂತೆ ಸಮ್ಮತಿಸಿದೆ. ಆದರೂ ಜಮೀನು ಕೊಡದ ರಾಜ್ಯಸರ್ಕಾರದ ಕ್ರಮವನ್ನು ಟೀಕಿಸದೆ ಕುಮಾರಸ್ವಾಮಿ ಬಗ್ಗೆ ಸಲ್ಲದ ಆರೋಪ ಮಾಡುತ್ತಿದ್ದೀರಿ ಎಂದು ಕಿಡಿಕಾರಿದರು.
ಮಾಜಿ ಶಾಸಕ ಅನ್ನದಾನಿ ಅವರ ಹಿನ್ನೆಲೆ ಕೆಣಕುವುದಾಗಿ ಹೇಳಿದ್ದೀರಿ. ನಾವೂ ಸಹ ನಿಮ್ಮ ಹಿನ್ನೆಲೆಯನ್ನು ಹೊರ ತೆಗೆಯಬೇಕಾಗುತ್ತದೆ. ರಾಜಕಾರಣ ಮಾಡುವವರು ರಾಜಕೀಯಕ್ಕೆ ಸೀಮಿತವಾಗಿ ಮಾತನಾಡಿ. ಅದನ್ನು ಬಿಟ್ಟು ವೈಯಕ್ತಿಕ ಟೀಕೆಗಳಿಗೆ ಆಸ್ಪದ ನೀಡಬೇಡಿ ಎಂದು ಎಚ್ಚರಿಕೆ ನೀಡಿದರಲ್ಲದೆ, ಅನಾವಶ್ಯಕವಾಗಿ ವೈಯಕ್ತಿಕ ವಿಚಾರಗಳನ್ನು ಬೀದಿಗೆ ಎಳೆದು ತರುವುದು ಸರಿಯಲ್ಲ ಎಂದರು.ನೂತನ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ನೇಮಕಗೊಂಡ ನಂತರ ಅಭಿನಂದನೆ ಸಲ್ಲಿಸಲು ತೆರಳಿದ್ದ ನಿಮ್ಮನ್ನು ಶ್ರೀರಂಗಪಟ್ಟಣ ಕ್ಷೇತ್ರದ ಶಾಸಕರು ಮನೆಯೊಳಗೇ ಬಿಟ್ಟುಕೊಳ್ಳದೆ ಅವಮಾನಕರವಾಗಿ ನಡೆಸಿಕೊಳ್ಳುವ ಮೂಲಕ ದಲಿತ ವಿರೋಧಿ ನೀತಿಯನ್ನು ಪ್ರದರ್ಶಿಸಿದ್ದಾರೆ. ಇದರ ವಿರುದ್ಧ ದನಿ ಎತ್ತದಿರುವುದು ನಿಮ್ಮ ರಾಜಕೀಯ ಅಸಹಾಯಕತೆಗೆ ಸಾಕ್ಷಿಯಾಗಿದೆ ಎಂದು ಮೂದಲಿಸಿದರು.
ಅಧ್ಯಕ್ಷರಾಗಿ ನೇಮಕವಾದ ನಂತರ ಶಾಸಕರಿಗೆ ಕೃತಜ್ಞತೆ ಹೇಳಲು ಅವರ ಮನೆಗೆ ತೆರಳಿದಾಗ ಶಾಸಕರು ಕನಿಷ್ಟವಾಗಿ ನಡೆದುಕೊಂಡರಲ್ಲದೆ, ನೀವು ತಂದಿದ್ದ ಪೇಟ, ಹಾರ, ಶಾಲನ್ನು ಪಕ್ಕಕ್ಕೆಸದು ಹೋಗಿದ್ದನ್ನು ಅಂದೇ ಖಂಡಿಸಬೇಕಿತ್ತು. ನಮ್ಮ ಪಕ್ಷದಲ್ಲಿ ನನ್ನನ್ನು ಇಂತಹ ಹೀನಾಯ ಸ್ಥಿತಿಯಲ್ಲಿ ನಡೆಸಿಕೊಂಡಿಲ್ಲ. ಒಂದು ವೇಳೆ ನಾನು ಆ ಸ್ಥಾನದಲ್ಲಿದ್ದಿದ್ದರೆ ಅಂದೇ ರಾಜೀನಾಮೆ ಕೊಟ್ಟು ಹೊರಬರುತ್ತಿದ್ದೆ. ಸಮುದಾಯಕ್ಕೆ ಅಪಮಾನ ಮಾಡುವುದನ್ನು ಎಂದಿಗೂ ಸಹಿಸುವುದಿಲ್ಲ ಎಂದು ಎಚ್ಚರಿಸಿದರು.ಮುಖಂಡರಾದ ಕಾಂತರಾಜ್, ಬೊಮ್ಮರಾಜು, ಸಂತೋಷ್, ಶ್ರೆನಿವಾಸ್, ಭದ್ರಾಚಲಮೂರ್ತಿ ಗೋಷ್ಠಿಯಲ್ಲಿದ್ದರು.