ಹಾಸನ ‘ಕೈ’ ಅಭ್ಯರ್ಥಿ ಶ್ರೇಯಸ್ ಪಟೇಲ್ ನಾಮಪತ್ರ ಸಲ್ಲಿಕೆ

| Published : Apr 02 2024, 01:06 AM IST

ಸಾರಾಂಶ

ಕಾಂಗ್ರೆಸ್ ಪಕ್ಷವು ಕಳೆದ ೩೦ ವರ್ಷಗಳ ಹಿಂದೆ ಹಾಸನ ಜಿಲ್ಲೆಯಲ್ಲಿ ಲೋಕಸಭಾ ಚುನಾವಣೆಯಲ್ಲಿ ಗೆದ್ದಿತ್ತು. ಈ ಬಾರಿ ನಿಮ್ಮೆಲ್ಲರ ಆಶೀರ್ವಾದದಿಂದ ಶ್ರೇಯಸ್‌ ಪಟೇಲ್ ಗೆಲ್ಲುತ್ತಾರೆ. ನಾವು ದೇಶದಲ್ಲಿ ಧರ್ಮ ಯುದ್ದಕ್ಕೆ ಕಾಲಿಡುತ್ತಿದ್ದು, ಕಾಂಗ್ರೆಸ್ ಪಕ್ಷ ಜಾತಿ,ಧರ್ಮಗಳಿಂದ ದೇಶವನ್ನು ಕಟ್ಟಿದರೆ, ಬಿಜೆಪಿ ದೇಶದಲ್ಲಿ ಧರ್ಮ, ಜಾತಿಗಳನ್ನು ಒಡೆಯುತ್ತಿದೆ.

ಕನ್ನಡಪ್ರಭ ವಾರ್ತೆ ಹಾಸನ

ಏಪ್ರಿಲ್ ೨೬ ರಂದು ನಡೆಯಲಿರುವ ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ನಿಂದ ಅಭ್ಯರ್ಥಿಯಾಗಿ ಶ್ರೇಯಸ್ ಪಟೇಲ್ ಅವರು ಕಾಂಗ್ರೆಸ್ ನಾಯಕರ ಸಮ್ಮುಖದಲ್ಲಿ ಜಿಲ್ಲಾ ಚುನಾವಣಾಧಿಕಾರಿ ಸಿ. ಸತ್ಯಭಾಮ ಅವರಿಗೆ ಸೋಮವಾರ ನಾಮಪತ್ರ ಸಲ್ಲಿಸಿದರು.

ಮೊದಲ ಎರಡು ಸೆಟ್ ನಾಮಪತ್ರವನ್ನು ಗೃಹಸಚಿವ ಜಿ. ಪರಮೇಶ್ವರ್, ಸಹಕಾರ ಸಚಿವ ಕೆ.ಎನ್. ರಾಜಣ್ಣ, ರಾಜ್ಯ ಗೃಹಮಂಡಳಿ ಅಧ್ಯಕ್ಷ ಕೆ.ಎಂ. ಶಿವಲಿಂಗೇಗೌಡ, ಮಾಜಿ ಸಚಿವ ಬಿ. ಶಿವರಾಂ ಉಪಸ್ಥಿತಿಯಲ್ಲಿ ಜಿಲ್ಲಾ ಚುನಾವಣಾಧಿಕಾರಿಗಳಿಗೆ ಸಲ್ಲಿಸಲಾಯಿತು.ತಡವಾಗಿ ಆಗಮಿಸಿದ್ದ ಡಿಸಿಎಂ ಡಿಕೆ ಶಿವಕುಮಾರ್ ಮೆರವಣಿಗೆಯಲ್ಲಿ ಪಾಲ್ಗೊಂಡರು.

ನಗರದ ಡೈರಿ ವೃತ್ತದಿಂದ ಹೊರಟ ಬೃಹತ್ ಮೆರವಣಿಗೆಯಲ್ಲಿ ತೆರೆದ ವಾಹನದೊಳಗೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಗೃಹಸಚಿವ ಜಿ. ಪರಮೇಶ್ವರ್, ಸಹಕಾರ ಸಚಿವ ಕೆ.ಎನ್. ರಾಜಣ್ಣ, ರಾಜ್ಯ ಗೃಹಮಂಡಳಿ ಅಧ್ಯಕ್ಷ ಕೆ.ಎಂ. ಶಿವಲಿಂಗೇಗೌಡ, ಮಾಜಿ ಸಚಿವ ಬಿ. ಶಿವರಾಂ, ಅಭ್ಯರ್ಥಿ ಶ್ರೇಯಸ್ ಪಟೇಲ್ ಹಾಗೂ ತಾಯಿ ಅನುಪಮಾ ಭಾಗವಹಿಸಿದ್ದು, ಮೆರವಣಿಗೆ ವೇಳೆ ಕಾಂಗ್ರೆಸ್ ಕಾರ್ಯಕರ್ತರು ಡಿಜೆ ಸೌಂಡ್ ಹಾಗೂ ಬ್ಯಾಂಡ್ ಸೆಟ್ ಗೆ ಕುಣಿದು ಕುಪ್ಪಳಿಸಿದರು.

ಗಂಟೆಗಟ್ಟಲೆ ಮೆರವಣಿಗೆ ನಡೆದಿದ್ದರಿಂದ ಬಿ.ಎಂ. ರಸ್ತೆ ಮೂಲಕ ವಾಹನಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು. ತುರ್ತಾಗಿ ತಲುಪಬೇಕಾದವರು ಬದಲಿ ರಸ್ತೆ ಮೂಲಕ ಸುತ್ತಾಡಿಕೊಂಡು ಹೋಗಬೇಕಾಯಿತು. ಇದಕ್ಕೆ ಮೊದಲು ಗೃಹ ಸಚಿವ ಜಿ. ಪರಮೇಶ್ವರ್, ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್. ರಾಜಣ್ಣ ಅವರು ಹಾಸನಕ್ಕೆ ಆಗಮಿಸುವ ವೇಳೆ ಶಾಂತಿಗ್ರಾಮದ ಚೆಕ್ ಪೋಸ್ಟ್ ನಲ್ಲಿ ತಡೆದು ಚುನಾವಣಾಧಿಕಾರಿಗಳು ವಾಹನಗಳ ತಪಾಸಣೆ ನಡೆಸಿದರು.

ಜೆಡಿಎಸ್ ನ ಒಂದೇ ಕುಟುಂಬದಿಂದ ಮೂವರು ಸ್ಪರ್ಧೆ:

ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮಾತನಾಡಿ, ಹಾಸನ, ಮಂಡ್ಯ, ಬೆಂಗಳೂರು ಗ್ರಾಮಾಂತರ ಚುನಾವಣೆಯ ಕುರಿತು ಜನತೆ ನೋಡುತ್ತಿದ್ದಾರೆ. ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಮೊಮ್ಮಗನನ್ನು ಹಾಸನದಿಂದ ನಿಲ್ಲಿಸಿದರೆ, ಮಂಡ್ಯದಲ್ಲಿ ಮಗನನ್ನು ನಿಲ್ಲಿಸಿದ್ದಾರೆ. ತನ್ನ ಅಳಿಯನನ್ನು ಬಿಜೆಪಿಯಿಂದ ಬೆಂಗಳೂರು ಗ್ರಾಮಾಂತರದಲ್ಲಿ ನಿಲ್ಲಿಸಿದ್ದಾರೆ. ಒಂದೇ ಕುಟುಂಬದಿಂದ ಮೂವರನ್ನು ಜೆಡಿಎಸ್ ನಿಂದ ನಿಲ್ಲಿಸಲಾಗಿದ್ದು, ಈ ಕ್ಷೇತ್ರಗಳಿಗೆ ಬೇರೆ ಯಾರೂ ಇರಲಿಲ್ಲವೇ ಎಂದು ಪ್ರಶ್ನಿಸಿದರು.

ಗೃಹಸಚಿವ ಜಿ. ಪರಮೇಶ್ವರ್ ಮಾತನಾಡಿ, ಕಾಂಗ್ರೆಸ್ ಪಕ್ಷವು ಕಳೆದ ೩೦ ವರ್ಷಗಳ ಹಿಂದೆ ಹಾಸನ ಜಿಲ್ಲೆಯಲ್ಲಿ ಲೋಕಸಭಾ ಚುನಾವಣೆಯಲ್ಲಿ ಗೆದ್ದಿತ್ತು. ಈ ಬಾರಿ ನಿಮ್ಮೆಲ್ಲರ ಆಶೀರ್ವಾದದಿಂದ ಶ್ರೇಯಸ್‌ ಪಟೇಲ್ ಗೆಲ್ಲುತ್ತಾರೆ. ನಾವು ದೇಶದಲ್ಲಿ ಧರ್ಮ ಯುದ್ದಕ್ಕೆ ಕಾಲಿಡುತ್ತಿದ್ದು, ಕಾಂಗ್ರೆಸ್ ಪಕ್ಷ ಜಾತಿ,ಧರ್ಮಗಳಿಂದ ದೇಶವನ್ನು ಕಟ್ಟಿದರೆ, ಬಿಜೆಪಿ ದೇಶದಲ್ಲಿ ಧರ್ಮ, ಜಾತಿಗಳನ್ನು ಒಡೆಯುತ್ತಿದೆ ಎಂದು ದೂರಿದರು.

ಸೆರೆಗೊಡ್ಡಿ ಬೇಡಿದ ಅನುಪಮಾ:

ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ ತಾಯಿ ಅನುಪಮಾ ಮಹೇಶ್ ಮಾತನಾಡಿ, ನನ್ನ ಮಗನನ್ನು ನಿಮ್ಮ ಮಡಿಲಿಗೆ ಹಾಕಿದ್ದೇನೆ. ಈ ಬಾರಿಯಾದರೂ ಗೆಲ್ಲಿಸಿ ಎಂದು ಕಣ್ಣೀರಿಡುತ್ತಾ ಸೆರಗೊಡ್ಡಿ ಬೇಡಿದರು. ಪಂಚಾಯಿತಿಯಿಂದ ಪ್ರಧಾನಿಯವರೆಗೂ ಅವರಿಗೇ ಅಧಿಕಾರ ನೀಡಿದ್ದೀರಿ, ನನಗೆ ಇರುವುದು ಒಬ್ಬನೇ ಮಗ. ಮೂರು ಚುನಾವಣೆಗಳಲ್ಲಿ ನಮ್ಮನ್ನು ಸೋಲಿಸಿದ್ದೀರಿ. ಮೂರು ಬಾರಿ ಅವರ ಮುಂದೆ ನಾವು ಮಂಡಿಯೂರಿದ್ದೇವೆ. ಈ ಬಾರಿಯಾದರೂ ನನ್ನ ಮಗನನ್ನು ಗೆಲ್ಲಿಸಿಕೊಡಿ. ನನ್ನ ಮಗನನ್ನು ನಿಮ್ಮ ಮಡಿಲಿಗೆ ಹಾಕಿದ್ದೇನೆ ಎಂದು ಭಾವನಾತ್ಮಕವಾಗಿ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಮತದಾರರಲ್ಲಿ ಮನವಿ ಮಾಡಿದರು.

ರಾಜ್ಯ ಗೃಹ ಮಂಡಳಿ ಅಧ್ಯಕ್ಷ ಕೆ.ಎಂ. ಶಿವಲಿಂಗೇಗೌಡ ಮಾತನಾಡಿ,ನಾನು ಮಂತ್ರಿ ಆಗಬೇಕಾದರೆ ಶ್ರೇಯಸ್ ಪಟೇಲ್ ಅವರನ್ನು ಗೆಲ್ಲಿಸಬೇಕು ಎಂದು ಕರೆ ನೀಡಿದರು.ಬೆಳಿಗ್ಗಿನಿಂದ ಕಾದಿದ್ದ ಕಾಂಗ್ರೆಸ್ ಕಾರ್ಯಕರ್ತರು ಬಿ.ಎಂ. ರಸ್ತೆ ಉದ್ದಲಕ್ಕೂ ಇದ್ದ ಮದ್ಯದಂಗಡಿಗೆ ಕಾಲಿಟ್ಟರು. ಇನ್ನು ಹೋಟೇಲ್ ಗಳು, ಬಾರ್ ಅಂಡ್ ರೆಸ್ಟೋರೆಂಟ್ ಫುಲ್ ರಶ್ ಆಗಿರುವುದು ಕಂಡುಬಂದಿತು. ಕಾರ್ಯಕರ್ತರು ದಾರಿಗಳಲ್ಲೇ ಎಣ್ಣೆ ಬಾಡೂಟ ಸೇವಿಸಿದ್ದು ಸಾಮಾನ್ಯವಾಗಿತ್ತು.

ಮೆರವಣಿಗೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್. ರಾಜಣ್ಣ, ಕಾಂಗ್ರೆಸ್ ಎಂಪಿ ಅಭ್ಯರ್ಥಿ ಶ್ರೇಯಸ್ ಪಟೇಲ್, ಹಿರಿಯ ಕಾಂಗ್ರೆಸ್ ಮುಖಂಡ ಬಿ. ಶಿವರಾಂ, ಪಕ್ಷದ ಮುಖಂಡರಾದ ಎಚ್.ಕೆ. ಮಹೇಶ್, ಬನವಾಸೆ ರಂಗಸ್ವಾಮಿ, ಪ್ರಚಾರ ಸಮಿತಿ ಅಧ್ಯಕ್ಷ ದೇವರಾಜೇಗೌಡ, ಮುರುಳಿ ಮೋಹನ್, ಅಶೋಕ್, ಜಾವಗಲ್ ಮಂಜುನಾಥ್, ವಿನಯ್ ಗಾಂಧಿ ಇತರರು ಉಪಸ್ಥಿತರಿದ್ದರು.