ಸಾರಾಂಶ
ಬಿಜೆಪಿ ಕಾಲದಲ್ಲಿ ಬಿಜೆಪಿ ಕಚೇರಿ ಸಮೀಪವೇ ಬಾಂಬ್ ಸ್ಫೋಟವಾಗಿತ್ತು. ಶಿವಾಜಿ ನಗರ, ಚರ್ಚ್ ಸ್ಟ್ರೀಟ್ ಹಾಗೂ ಅನೇಕ ಕಡೆಗಳಲ್ಲಿ ಬಾಂಬ್ ಸ್ಫೋಟವಾಗಿತ್ತು. ಈ ಬಗ್ಗೆ ಹಚ್ಚು ಚರ್ಚಿಸುವ ಅಗತ್ಯ ಇಲ್ಲ ಎಂದು ಗುಂಡೂರಾವ್ ಹೇಳಿದರು.
ಕನ್ನಡಪ್ರಭ ವಾರ್ತೆ ಮಂಗಳೂರು
ಬಿಜೆಪಿ ಸರ್ಕಾರ ಇದ್ದಾಗ ಹಲವಾರು ಬಾರಿ ಬಾಂಬ್ ಸ್ಫೋಟ ಪ್ರಕರಣಗಳು ನಡೆದಿವೆ. ಈಗ ನಾವು ಆಡಳಿತದಲ್ಲಿದ್ದೇವೆ, ಪ್ರಸ್ತುತ ಪ್ರಕರಣದ ಬಗ್ಗೆ ತನಿಖೆ ಮಾಡುತ್ತಿದ್ದೇವೆ. ರಾಷ್ಟ್ರೀಯ ತನಿಖಾ ತಂಡ, ರಾಜ್ಯ ಪೋಲಿಸರು ಸೇರಿ ತನಿಖೆ ಮಾಡುತ್ತಿದ್ದಾರೆ. ಇದು ಸೂಕ್ಷ್ಮ ಹಾಗೂ ಗಂಭೀರ ವಿಷಯವಾದ ಕಾರಣ ಸರ್ಕಾರ ಯಾವುದೇ ರೀತಿಯ ರಿಯಾಯಿತಿ ಮಾಡುವ ಪ್ರಶ್ನೆ ಇಲ್ಲ ಎಂದು ಆರೋಗ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಕಾಲದಲ್ಲಿ ಬಿಜೆಪಿ ಕಚೇರಿ ಸಮೀಪವೇ ಬಾಂಬ್ ಸ್ಫೋಟವಾಗಿತ್ತು. ಶಿವಾಜಿ ನಗರ, ಚರ್ಚ್ ಸ್ಟ್ರೀಟ್ ಹಾಗೂ ಅನೇಕ ಕಡೆಗಳಲ್ಲಿ ಬಾಂಬ್ ಸ್ಫೋಟವಾಗಿತ್ತು. ಈ ಬಗ್ಗೆ ಹಚ್ಚು ಚರ್ಚಿಸುವ ಅಗತ್ಯ ಇಲ್ಲ ಎಂದರು.ಬಿಜೆಪಿಯವರು ಭಯ ಸೃಷ್ಟಿ ಮಾಡ್ತಿದ್ದಾರೆ: ಇದೀಗ ಕೆಫೆ ಬಾಂಬ್ ಮತ್ತು ಪಾಕ್ ಪರ ಘೋಷಣೆ ಪ್ರಕರಣವನ್ನು ಮುಂದಿಟ್ಟು ಬಿಜೆಪಿ ಕರ್ನಾಟಕದ ಹೆಸರು ಹಾಳು ಮಾಡುತ್ತಿದೆ. ಜನರಲ್ಲಿ ಭಯ ಸೃಷ್ಟಿಸಬೇಕು, ಜನರು ಇಲ್ಲಿಗೆ ಬರಬಾರದೆಂಬ ಉದ್ದೇಶದಿಂದ ಬಾಂಬ್ ಬೆಂಗಳೂರು ಎಂದು ಬಿಜೆಪಿಗರು ಹೇಳುತ್ತಿದ್ದಾರೆ ಎಂದು ಆರೋಪಿಸಿದ ಗುಂಡೂರಾವ್, ದೇಶದಲ್ಲಿ ಅತಿ ಹೆಚ್ಚು ಬಂಡವಾಳ ಬರುವ ರಾಜ್ಯ ಕರ್ನಾಟಕ ಮತ್ತು ಮಹಾರಾಷ್ಟ್ರ. ಇಂಥ ಘಟನೆಯನ್ನು ಗಂಭಿರವಾಗಿ ಪರಿಗಣಿಸಬೇಕಿದೆ ಎಂದು ಹೇಳಿದರು.ಸ್ಪರ್ಧೆಗೆ ಸೂಚನೆ ಬಂದಿಲ್ಲ: ಲೋಕಸಭಾ ಚುನಾವಣೆಗೆ ಸ್ಪರ್ಧಿಸುವಂತೆ ನನಗೆ ಯಾವುದೇ ಒತ್ತಡ, ಸೂಚನೆ ಪಕ್ಷದಿಂದ ಬಂದಿಲ್ಲ. ಕೆಲವು ಕ್ಷೇತ್ರಗಳಿಂದ ಶಾಸಕರು, ಸಚಿವರು ಸ್ಪರ್ಧಿಸುವ ಕುರಿತು ಚರ್ಚೆಯಾಗುತ್ತಿದೆ. ಈ ಕುರಿತು ಪಕ್ಷ ವರಿಷ್ಠರು ತೀರ್ಮಾನ ತೆಗೆದುಕೊಳ್ಳುತ್ತಾರೆ. ಪಕ್ಷ ಸ್ಪರ್ಧಿಸುವಂತೆ ಸೂಚಿಸಿದರೆ ಅಸಮಾಧಾನ ಯಾಕೆ ಎಂದು ದಿನೇಶ್ ಗುಂಡೂರಾವ್ ಪ್ರಶ್ನಿಸಿದರು.