ಹಾಸನ ಚಲೋಗೆ ವಿವಿಧ ಸಂಘಟನೆಗಳ ಸಾಥ್

| Published : May 29 2024, 12:47 AM IST

ಸಾರಾಂಶ

ಭೂಗತ ಪಾತಕಿಯಂತೆ ವಿದೇಶದಲ್ಲಿ ಎಲ್ಲೋ ಅಡಗಿ ಕುಳಿತು, ಮೇ 31ಕ್ಕೆ ಎಸ್ ಐಟಿ ಮುಂದೆ ಶರಣಾಗುವುದಾಗಿ ವಿಡಿಯೋ ಹರಿಬಿಡುತ್ತಿರುವ ವಿಕೃತಕಾಮಿ ಪ್ರಜ್ವಲ್ ರೇವಣ್ಣ ನಡೆ ಖಂಡನೀಯವಾಗಿದೆ.

ಕನ್ನಡಪ್ರಭ ವಾರ್ತೆ ಅರಕಲಗೂಡು

ಸಂಸದ ಪ್ರಜ್ವಲ್ ರೇವಣ್ಣ ಬಂಧನಕ್ಕೆ ಆಗ್ರಹಿಸಿ ರಾಜ್ಯ ಜನಪರ ಚಳವಳಿಗಳ ಒಕ್ಕೂಟ ಮೇ 30ರಂದು ಹಮ್ಮಿಕೊಂಡಿರುವ ‘ನಮ್ಮೆಲ್ಲರ ಹೋರಾಟದ ನಡಿಗೆ ಹಾಸನದ ಕಡೆಗೆ’ ಬೃಹತ್ ಪ್ರತಿಭಟನಾ ಮೆರವಣಿಗೆ ಬೆಂಬಲಿಸಿ ತಾಲೂಕಿನ ವಿವಿಧ ಸಂಘಟನೆಗಳು ಪಾಲ್ಗೊಳ್ಳಲಿವೆ ಎಂದು ತಾಲೂಕು ಛಲವಾದಿ ಮಹಾಸಭಾ ಉಪಾಧ್ಯಕ್ಷ ಎ.ವಿ. ಲಿಂಗರಾಜು ತಿಳಿಸಿದರು.

ಪಟ್ಟಣದಲ್ಲಿ ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಕೃತಕಾಮಿ ಪ್ರಜ್ವಲ್ ರೇವಣ್ಣ ಬಂಧನಕ್ಕೆ ಸಹಕರಿಸದ ಕೇಂದ್ರ ಸರ್ಕಾರ, ತಪ್ಪಿತಸ್ಥ ಆರೋಪಿ ಬೆಂಬಲಿಸಿ ಈ ನೆಲದ ಕಾನೂನಿಗೆ ಅಗೌರವ ತೋರುತ್ತಿರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.

ತಾಲೂಕು ರೈತ ಸಂಘದ ಅಧ್ಯಕ್ಷ ಎಸ್.ವಿ. ಯೋಗಣ್ಣ ಮಾತನಾಡಿ, ಭೂಗತ ಪಾತಕಿಯಂತೆ ವಿದೇಶದಲ್ಲಿ ಎಲ್ಲೋ ಅಡಗಿ ಕುಳಿತು, ಮೇ 31ಕ್ಕೆ ಎಸ್ ಐಟಿ ಮುಂದೆ ಶರಣಾಗುವುದಾಗಿ ವಿಡಿಯೋ ಹರಿಬಿಡುತ್ತಿರುವ ವಿಕೃತಕಾಮಿ ಪ್ರಜ್ವಲ್ ರೇವಣ್ಣ ನಡೆ ಖಂಡನೀಯವಾಗಿದೆ. ಸಂಸತ್ ಸದಸ್ಯ ಸ್ಥಾನದ ಘನತೆ ಮರೆತಿರುವ ಈತನನ್ನು ಬಂಧಿಸದಿರುವುದು ಈ ನೆಲದ ಕಾನೂನಿನ ಶಕ್ತಿಯನ್ನು ಅಣಕಿಸುವಂತಿದೆ. ಮಹಿಳೆಯರ ರಕ್ಷಣೆ ಬಗ್ಗೆ ಕೇಂದ್ರ ಸರ್ಕಾರ ವರ್ತನೆ ಬರಿ ಬೂಟಾಟಿಕೆ ಎಂಬುದು ಸಾಬೀತಾಗಿದೆ. ವಿಕೃತಕಾಮಿ ಬಂಧನಕ್ಕೆ ಆಗ್ರಹಿಸಿ ಕೆಲ ಪ್ರಗತಿಪರ ಚಿಂತಕರು, ಹೋರಾಟಗಾರರು ಧ್ವನಿ ಎತ್ತದೇ ವಿಮುಖರಾಗುತ್ತಿರುವ ಸಂಗತಿ ನಿಜಕ್ಕೂ ಶೋಚನೀಯವಾಗಿದೆ. ವಿಕೃತಕಾಮಿ ಎಸಗಿರುವ ವಿಡಿಯೋ ನೋಡಿಯೂ ಕೋಟ್ಯಂತರ ಮಹಿಳೆಯರು ದಂಗೆ ಏಳದಿರುವುದು ದುರಾದೃಷ್ಟಕರ. ಇದೊಂದು ರೀತಿ ಭ್ರಷ್ಟಾಚಾರಿಗಳನ್ನು ನೋಡಿಯೂ ಕೂಡ ಭ್ರಷ್ಟ ರಾಜಕಾರಣಿಗಳಿಗೆ ಹಾಗೂ ಅತ್ಯಾಚಾರಿಗಳಿಗೆ ಪ್ರೋತ್ಸಾಹ ನೀಡಿದಂತಾಗಿದೆ. ಈತನನ್ನು ಬಂಧಿಸಿ ಕಾನೂನು ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದರು.

ದಸಂಸ ಮುಖಂಡ ನಿಂಗರಾಜು ಗೋಷ್ಠಿಯಲ್ಲಿದ್ದರು.