ಸಾರ್ವತ್ರಿಕ ಲಸಿಕೆ ಮಕ್ಕಳಿಗೆ ತಪ್ಪದಂತೆ ನಿಗಾ ವಹಿಸಲು ಹಾಸನ ಜಿಲ್ಲಾಧಿಕಾರಿ ಸೂಚನೆ

| Published : Sep 29 2024, 01:39 AM IST

ಸಾರಾಂಶ

ಮಕ್ಕಳಿಗೆ ಸಾರ್ವತ್ರಿಕ ಲಸಿಕಾ ಕಾರ್ಯಕ್ರಮದಡಿ ನಿಗದಿತ ಅವಧಿಯೊಳಗೆ ತಪ್ಪದೆ ಲಸಿಕೆ ಹಾಕಲು ಕ್ರಮ ವಹಿಸುವಂತೆ ಜಿಲ್ಲಾಧಿಕಾರಿ ಸತ್ಯಭಾಮ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಹಾಸನದಲ್ಲಿ ಆರೋಗ್ಯ ಅಭಿಯಾನ ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿದರು.

ಆರೋಗ್ಯ ಅಭಿಯಾನ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಡೀಸಿಕನ್ನಡಪ್ರಭ ವಾರ್ತೆ ಹಾಸನ

ಮಕ್ಕಳಿಗೆ ಸಾರ್ವತ್ರಿಕ ಲಸಿಕಾ ಕಾರ್ಯಕ್ರಮದಡಿ ನಿಗದಿತ ಅವಧಿಯೊಳಗೆ ತಪ್ಪದೆ ಲಸಿಕೆ ಹಾಕಲು ಕ್ರಮ ವಹಿಸುವಂತೆ ಜಿಲ್ಲಾಧಿಕಾರಿ ಸತ್ಯಭಾಮ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಿ.ಸಿ.ರಾಯ್ ಸಭಾಂಗಣದಲ್ಲಿ ಆರೋಗ್ಯ ಅಭಿಯಾನ ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿದ ಅವರು, ಪಲ್ಸ್ ಪೋಲಿಯೋ ಲಸಿಕೆ ಕಾರ್ಯಕ್ರಮದಂತೆ ಸಾರ್ವತ್ರಿಕ ಲಸಿಕಾ ಕಾರ್ಯಕ್ರಮವನ್ನು ಅತ್ಯಂತ ಪರಿಣಾಮಕಾರಿಯಾಗಿ ಅನುಷ್ಟಾನಗೊಳಿಸಲು ಸೂಚಿಸಿದರು.

ಮಗು ಹುಟ್ಟಿದ ನಂತರ ಕಾಲಕಾಲಕ್ಕೆ ನಿಗದಿತ ಅವಧಿಯೊಳಗೆ ಲಸಿಕೆ ಹಾಕಿಸಲು ಪೋಷಕರು ನಿಗಾವಹಿಸಬೇಕು ಎಂದು ತಿಳಿವಳಿಕೆ ನೀಡುವಂತೆ ತಿಳಿಸಿದರು. ತಾಯಿ ಮತ್ತು ಶಿಶು ಮರಣ ಪ್ರಮಾಣ ಕಡಿಮೆ ಮಾಡಲು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ತಿಳಿಸಿದರು. ಪ್ರತಿಯೊಂದು ತಾಯಿ ಮರಣದ ಪ್ರಕರಣಗಳ ಬಗ್ಗೆ ಡೆತ್ ಅಡಿಟ್ ಮಾಡಿಸುವಂತೆ ಸೂಚಿಸಿದರು.

ಆಸ್ಪತ್ರೆಗೆ ಹೋದರೆ ಜೀವ ಉಳಿಯುತ್ತದೆ ಎಂಬ ಭರವಸೆ ಮೂಡಬೇಕು. ಜೀವಕ್ಕೆ ಬೆಲೆ ಕಟ್ಟಲಾಗದು. ಈ ನಿಟ್ಟಿನಲ್ಲಿ ವೈದ್ಯರು ಎಚ್ಚರವಹಿಸುವಂತೆ ತಿಳಿಸಿದರು. ಆರೋಗ್ಯ ಇಲಾಖೆಯಲ್ಲಿ ವಿವಿಧ ಯೋಜನೆಗಳಿವೆ ವಾರಕ್ಕೆ ಒಮ್ಮೆ ವಿಡಿಯೋ ಸಂವಾದದ ಮೂಲಕ ಪ್ರಗತಿ ಪರಿಶೀಲನೆ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಗುರಿ ಸಾಧಿಸಲು ಸಾಧ್ಯವಾಗುತ್ತದೆ ಜೊತೆಗೆ ಆರೋಗ್ಯ ಸೌಲಭ್ಯ ಪ್ರತಿಯೊಬ್ಬರಿಗೂ ಒದಗಿಸಲು ಸಹಕಾರಿಯಾಗುತ್ತದೆ ಎಂದರು.

ಒಂದು ವಾರಕ್ಕೆ ಗುರಿ ನಿಗದಿಪಡಿಸಿಕೊಂಡರೆ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಅನುಷ್ಟಾನಕ್ಕೆ ಸಹಕಾರಿ ಆಗುತ್ತದೆ ಎಂದರು. ಮೆಡಿಕಲ್ ಆಫೀಸರ್ ಅಂಗನವಾಡಿ ಕೇಂದ್ರಗಳಿಗೆ ಅನಿರೀಕ್ಷಿತ ಭೇಟಿ ನೀಡಿ ಪರಿಶೀಲನೆ ಮಾಡುವಂತೆ ತಿಳಿಸಿದರು.

ತಾಯಿ ಕಾರ್ಡ್‌ನಲ್ಲಿ ಮಗುವಿಗೆ ಲಸಿಕೆ ಹಾಕಿಸಲಾಗಿದೆಯಾ ಪರಿಶೀಲನೆ ಮಾಡಿ ಎಂದು ತಿಳಿಸಿದರು. ಲಸಿಕೆ ಹಾಕಿಸಲು ಪೋಷಕರಿಗೆ ಅರಿವು ಮೂಡಿಸಲು ತಿಳಿಸಿದರಲ್ಲದೆ, ಮಗುವಿಗೆ ಲಸಿಕೆ ಹಾಕಿಸಿದ್ದಾರೆ ರೋಗಗಳು ಬಾರದಂತೆ ತಡೆಯಲು ಸಹಕಾರಿಯಾಗುತ್ತದೆ ಎಂದು ಮನವರಿಕೆ ಮಾಡಲು ತಿಳಿಸಿದರು.

ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧಿಸಲಾಗಿದೆ. ಆದಾಗ್ಯೂ ಕಂಡುಬಂದರೆ ಪ್ರಕರಣಗಳನ್ನು ದಾಖಲಿಸಲಿಸುವಂತೆ ಸೂಚಿಸಿದರು. ಜೊತೆಗೆ ಕಂಟ್ರೋಲ್ ರೂಂ ತೆರೆಯುವಂತೆ ತಿಳಿಸಿದರಲ್ಲದೆ, ಪ್ರಕರಣ ದಾಖಲಿಸಲು ಚುರುಕುಗೊಳಿಸುವಂತೆ ತಿಳಿಸಿದರು. ಟ್ರೇಡ್ ಲೈಸೆನ್ಸ್ ಪಡೆದಿದ್ದಾರ ಎಂದು ಅನಿರೀಕ್ಷಿತ ಭೇಟಿ ನೀಡಿ ಪರಿಶೀಲನೆ ಮಾಡುವಂತೆ ಸೂಚಿಸಿದರು.

ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಅನುಷ್ಟಾನಗೊಳಿಸುವ ನಿಟ್ಟಿನಲ್ಲಿ ದಂಡ ವಿಧಿಸುವಂತೆ ತಿಳಿಸಿದರು. ಶಾಲಾ ಕಾಲೇಜುಗಳಲ್ಲಿ ಅರಿವು ಮೂಡಿಸಲು ತಿಳಿಸಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಶಿವಸ್ವಾಮಿ, ಆರ್‌.ಸಿ.ಎಚ್‌.ಅಧಿಕಾರಿ ಡಾ.ಶಿವಶಂಕರ್‌, ಸರ್ವೇಕ್ಷಣಾಧಿಕಾರಿ ಡಾ.ಚೇತನ್, ಜಿಲ್ಲಾ ಶಸ್ತ್ರ ಚಿಕಿತ್ಸಕರಾದ ಲೋಕೇಶ್, ಹಿಮ್ಸ್ ಡಾ.ಕುಮಾರ್‌, ಡಾ.ಶ್ರೀನಿವಾಸ್ ಉಪಸ್ಥಿತರಿದ್ದರು.