ಹಾಸನ ಸಂಸದ ಪ್ರಜ್ವಲ್ ರೇವಣ್ಣನನ್ನು ಬಂಧಿಸಿ: ಕೊಳಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿ,

| Published : Apr 30 2024, 02:10 AM IST

ಹಾಸನ ಸಂಸದ ಪ್ರಜ್ವಲ್ ರೇವಣ್ಣನನ್ನು ಬಂಧಿಸಿ: ಕೊಳಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿ,
Share this Article
  • FB
  • TW
  • Linkdin
  • Email

ಸಾರಾಂಶ

ಪ್ರಜ್ವಲ್ ಕರ್ಮಕಾಂಡ ಮೊದಲೇ ಗೊತ್ತಿದ್ದರೂ ಹಾಸನದಿಂದ ಲೋಕಸಭೆಗೆ ಸ್ಪರ್ಧಿಸಲು ಅವಕಾಶ ನೀಡಿದ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಹೆಣ್ಣು ಮಕ್ಕಳಿಗೆ ದ್ರೋಹ ಬಗೆದಿವೆ, ತಾಳಿ ಬಗ್ಗೆ ಮಾತನಾಡುವ ಪ್ರಧಾನಿಗಳು ಈ ಪ್ರಕರಣದ ಬಗ್ಗೆ ಮೌನವಹಿಸಿರುವುದು ಏಕೆ ?

ಕನ್ನಡಪ್ರಭ ವಾರ್ತೆ ತುಮಕೂರು

ಹಾಸನ ಸಂಸದ ಪ್ರಜ್ವಲ್ ರೇವಣ್ಣನನ್ನು ಬಂಧಿಸುವಂತೆ ಜಿಲ್ಲಾ ಕೊಳಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿ, ಸ್ಲಂ ಮಹಿಳಾ ಘಟಕದಿಂದ ಪ್ರತಿಭಟನೆ ನಡೆಸಲಾಯಿತು.

ಪ್ರಜ್ವಲ್ ಪೆನ್‌ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಎಸ್ಐಟಿ ರಚಿಸಿದ್ದು, ಕೂಡಲೇ ಬಂಧಿಸಿ ದೌರ್ಜನ್ಯಕ್ಕೆ ಒಳಗಾದ ಹಾಗೂ ಸಾವಿರಾರು ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ನಡೆಸಿರುವ ಆರೋಪದ ಹಿನ್ನೆಲೆಯಲ್ಲಿ ಮಹಿಳಾ ಆಯೋಗದ ಶಿಫಾರಸ್ಸಿನ ಮೇಲೆ ರಾಜ್ಯ ಸರ್ಕಾರ ಕ್ರಮವಹಿಸಿರುವುದನ್ನು ಸಂಘಟನೆ ಸ್ವಾಗತಿಸಿದೆ.

ಆದರೆ, ಆರೋಪಿಗೆ ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದ ಪ್ರಮುಖ ರಾಜಕಾರಣಿಗಳ ಬೆಂಬಲವಿರುವುದರಿಂದ ಈಗಾಗಲೇ ವಿದೇಶಕ್ಕೆ ಪಲಾಯನಗೊಂಡಿದ್ದು, ತಕ್ಷಣವೇ ಎಸ್ಐಟಿ ಬಂಧಿಸಿ ನೊಂದ ಮಹಿಳೆಯರಿಗೆ ನ್ಯಾಯ ಒದಗಿಸಿಕೊಡಬೇಕೆಂದು ಸ್ಲಂ ಮಹಿಳಾ ಸಮಿತಿ ಆಗ್ರಹಿಸಿದೆ.

ಪ್ರತಿಭಟನೆ ನೇತೃತ್ವ ವಹಿಸಿ ಮಹಿಳಾ ಘಟಕದ ಸಂಚಾಲಕಿ ಅನುಪಮ ಮಾತನಾಡಿ, ಪ್ರಜ್ವಲ್ ಕರ್ಮಕಾಂಡ ಮೊದಲೇ ಗೊತ್ತಿದ್ದರೂ ಹಾಸನದಿಂದ ಲೋಕಸಭೆಗೆ ಸ್ಪರ್ಧಿಸಲು ಅವಕಾಶ ನೀಡಿದ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಹೆಣ್ಣು ಮಕ್ಕಳಿಗೆ ದ್ರೋಹ ಬಗೆದಿವೆ, ತಾಳಿ ಬಗ್ಗೆ ಮಾತನಾಡುವ ಪ್ರಧಾನಿಗಳು ಈ ಪ್ರಕರಣದ ಬಗ್ಗೆ ಮೌನವಹಿಸಿರುವುದು ಏಕೆ ? ಮಂಗಳಸೂತ್ರ ಬರೀ ಮಾತಿಗಾಗಿ ಅಥವಾ ರಾಜಕಾರಣಕ್ಕೆ ಬಳಸಿಕೊಳ್ಳುವುದು ಎಷ್ಟು ಸರಿ? ಎಂದು ಪ್ರತಿಭಟನಾಕಾರರು ಪ್ರಶ್ನಿಸಿದ್ದಾರೆ.

ತಕ್ಷಣ ಚುನಾವಣಾ ಆಯೋಗ ಈ ಪ್ರಕರಣದ ಬಗ್ಗೆ ಮಧ್ಯೆ ಪ್ರವೇಶ ಮಾಡಬೇಕೆಂದರು. ಪ್ರತಿಭಟನೆಯಲ್ಲಿ ಸ್ಲಂ ಸಮಿತಿಯ ಕಾರ್ಯದರ್ಶಿ ಅರುಣ್, ತಿರುಮಲಯ್ಯ, ಪದಾಧಿಕಾರಿಗಳಾದ ಮಂಗಳಮ್ಮ, ಪೂರ್ಣಿಮಾ, ಸಂಧ್ಯಾ ಯಾದವ್, ಹನುಮಕ್ಕ, ಶಾರದಮ್ಮ, ಗಂಗಾ, ಸುಧಾ, ಪಾರ್ವತಮ್ಮ, ವಸಂತಮ್ಮ, ದೇವಿಕಾ. ಶಾಂತಮ್ಮ ಮುಂತಾದವರು ಪಾಲ್ಗೊಂಡಿದ್ದರು.