ಪೂಜೆ ಮಾಡಿ ಕುರ್ಚಿ ಅಲಂಕರಿಸಿದ ನಗರಸಭೆ ನೂತನ ಅಧ್ಯಕ್ಷ

| Published : Aug 24 2024, 01:20 AM IST

ಪೂಜೆ ಮಾಡಿ ಕುರ್ಚಿ ಅಲಂಕರಿಸಿದ ನಗರಸಭೆ ನೂತನ ಅಧ್ಯಕ್ಷ
Share this Article
  • FB
  • TW
  • Linkdin
  • Email

ಸಾರಾಂಶ

ಈಗಾಗಲೇ ಚುನಾಯಿತರಾಗಿ ನಗರಸಭೆ ಅಧ್ಯಕ್ಷರಾಗಿರುವ ಎಂ. ಚಂದ್ರೇಗೌಡ ಮತ್ತು ಉಪಾಧ್ಯಕ್ಷೆ ಲತಾದೇವಿ ಶುಕ್ರವಾರ ಮಧ್ಯಾಹ್ನ ತಮ್ಮ ಕಚೇರಿಯಲ್ಲಿ ಸಾಂಪ್ರದಾಯದಂತೆ ಕಳಶ ಇಟ್ಟು ವಿಶೇಷ ಪೂಜೆ ಸಲ್ಲಿಸಿದ ನಂತರ ತಮ್ಮ ಕುರ್ಚಿಯಲ್ಲಿ ಕುಳಿತು ಅಧಿಕಾರ ಸ್ವೀಕರಿಸಿದರು.ನಗರಸಭೆ ವ್ಯಾಪ್ತಿಯಲ್ಲಿ ರಸ್ತೆ, ವಿದ್ಯುತ್, ಚರಂಡಿ, ಕಸದ ಸಮಸ್ಯೆ ಹೀಗೆ ಹತ್ತು ಹಲವು ಸಮಸ್ಯೆಗಳಿವೆ. ಪ್ರತಿ ಸಮಸ್ಯೆಗಳ ಬಗ್ಗೆ ಹಂತ ಹಂತವಾಗಿ ಗಮನಹರಿಸಿ ಎಲ್ಲ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಹೇಳಿದರು.

ಕನ್ನಡಪ್ರಭ ವಾರ್ತೆ ಹಾಸನ

ಈಗಾಗಲೇ ಚುನಾಯಿತರಾಗಿ ನಗರಸಭೆ ಅಧ್ಯಕ್ಷರಾಗಿರುವ ಎಂ. ಚಂದ್ರೇಗೌಡ ಮತ್ತು ಉಪಾಧ್ಯಕ್ಷೆ ಲತಾದೇವಿ ಶುಕ್ರವಾರ ಮಧ್ಯಾಹ್ನ ತಮ್ಮ ಕಚೇರಿಯಲ್ಲಿ ಸಾಂಪ್ರದಾಯದಂತೆ ಕಳಶ ಇಟ್ಟು ವಿಶೇಷ ಪೂಜೆ ಸಲ್ಲಿಸಿದ ನಂತರ ತಮ್ಮ ಕುರ್ಚಿಯಲ್ಲಿ ಕುಳಿತು ಅಧಿಕಾರ ಸ್ವೀಕರಿಸಿದರು. ತಮ್ಮ ಸ್ಥಾನದಲ್ಲಿ ನಗರಸಭೆ ನೂತನ ಅಧ್ಯಕ್ಷರು ಕುಳಿತುಕೊಳ್ಳುತ್ತಿದ್ದಂತೆ ನಗರಸಭೆ ಸದಸ್ಯರು, ಜೆಡಿಎಸ್ ಮುಖಂಡರು ಹಾಗೂ ಅಪಾರ ಅಭಿಮಾನಿಗಳು ಶಾಲುಗಳನ್ನು ಹೊದಿಸಿ ಹಾರ ಹಾಕಿ, ಸಿಹಿ ತಿನ್ನಿಸುವುದರ ಮೂಲಕ ಅಭಿನಂದನೆ ಸಲ್ಲಿಸಿದರು. ನಂತರ ಸುದ್ದಿಗಾರರೊಂದಿಗೆ ನಗರಸಭೆ ನೂತನ ಅಧ್ಯಕ್ಷರಾದ ಚಂದ್ರೇಗೌಡ ಮಾತನಾಡಿ, ನನ್ನ ಪಾಲಿಗೆ ಅಧ್ಯಕ್ಷ ಪದವಿ ಸಿಕ್ಕಿರುವುದು ತುಂಬಾ ಸಂತೋಷ ತಂದಿದೆ. ಈ ಸಂದರ್ಭದಲ್ಲಿ ನಮ್ಮ ತಂದೆ ಮೈಲಾರಿಗೌಡರನ್ನು ನೆನಪು ಮಾಡಿಕೊಂಡು ಈ ಸ್ಥಾನದಲ್ಲಿ ಕೂರುವುದಕ್ಕೆ ಇಷ್ಟಪಡುತ್ತೇನೆ. ಮುಖ್ಯವಾಗಿ ದಿವಂಗತ ಎಚ್.ಎಸ್. ಪ್ರಕಾಶ್, ದೇವೇಗೌಡರು, ಕುಮಾರಸ್ವಾಮಿ, ಶಾಸಕ ಸ್ವರೂಪ್, ರೇವಣ್ಣ ಇವರೆಲ್ಲರ ಅಭಿಮಾನದಿಂದ ಈ ಸ್ಥಾನ ದೊರಕಿದೆ. ಪಕ್ಷಕ್ಕಾಗಿ ದುಡಿದಿದ್ದರಿಂದ ಇಂದು ಫಲ ಸಿಕ್ಕಿದೆ. ಜೆಡಿಎಸ್ ಪಕ್ಷದಲ್ಲಿ ಸಾಮಾನ್ಯ ಕಾರ್ಯಕರ್ತರಿಗೂ ಅಧಿಕಾರ ಸಿಗುತ್ತದೆ ಎಂಬುದಕ್ಕೆ ನಾನೇ ಉದಾಹರಣೆ. ಇದನ್ನು ಉಪಯೋಗಿಸಿಕೊಂಡು ಉತ್ತಮವಾದ ಸಮಾಜ ಕಟ್ಟುವಲ್ಲಿ ನಿರತರಾಗಿರುತ್ತೇವೆ ಎಂದರು.

ನಗರಸಭೆ ವ್ಯಾಪ್ತಿಯಲ್ಲಿ ರಸ್ತೆ, ವಿದ್ಯುತ್, ಚರಂಡಿ, ಕಸದ ಸಮಸ್ಯೆ ಹೀಗೆ ಹತ್ತು ಹಲವು ಸಮಸ್ಯೆಗಳಿವೆ. ಪ್ರತಿ ಸಮಸ್ಯೆಗಳ ಬಗ್ಗೆ ಹಂತ ಹಂತವಾಗಿ ಗಮನಹರಿಸಿ ಎಲ್ಲ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಹೇಳಿದ ಅವರು, ಸ್ವಚ್ಛತೆ ಹಾಗೂ ಗುಂಡಿಮುಕ್ತ ಹಾಸನ ನಗರ ನಿರ್ಮಾಣ ನನ್ನ ಪ್ರಮುಖ ಧ್ಯೇಯವಾಗಿದ್ದು, ಅಧಿಕಾರ ಸ್ವೀಕಾರ ಮಾಡಿದ ದಿನದಿಂದಲೇ ಗಮನಹರಿಸಲಾಗುವುದು ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇಡೀ ನಗರವನ್ನು ಗುಂಡಿಮುಕ್ತ ನಗರವನ್ನಾಗಿ ಮಾಡುವ ಆಸೆ ನನ್ನಲ್ಲಿದೆ ಎಂದು ತಮ್ಮ ಉದ್ದೇಶವನ್ನು ತಿಳಿಸಿದರು. ಇದೇ ವೇಳೆ ಜೆಡಿಎಸ್ ತಾಲೂಕು ಅಧ್ಯಕ್ಷ ಎಸ್. ದ್ಯಾವೇಗೌಡ, ನಗರಸಭೆ ಸದಸ್ಯ ಅಮೀರ್ ಜಾನ್, ಮಂಜುನಾಥ್, ಯೋಗೇಂದ್ರ, ಕುಮಾರ್ ಸೇರಿದಂತೆ ಇತರರು ಇದ್ದರು.