ಹಾಸನದ ಐನೆಟ್‌ ಮಳಿಗೆ ಮಾಲೀಕ ಮೇಲೆ ಪುಂಡರಿಂದ ಹಲ್ಲೆ: ಆಸ್ಪತ್ರೆಗೆ ದಾಖಲು

| Published : Apr 13 2024, 01:00 AM IST

ಹಾಸನದ ಐನೆಟ್‌ ಮಳಿಗೆ ಮಾಲೀಕ ಮೇಲೆ ಪುಂಡರಿಂದ ಹಲ್ಲೆ: ಆಸ್ಪತ್ರೆಗೆ ದಾಖಲು
Share this Article
  • FB
  • TW
  • Linkdin
  • Email

ಸಾರಾಂಶ

ಹಾಸನದ ಎಂ.ಜಿ. ರಸ್ತೆ ಬಳಿ ಇರುವ ಐ-ನೆಟ್ ಮಳಿಗೆ ಮಾಲೀಕ ವಿಜಿಕುಮಾರ್‌ ಮೇಲೆ ಯುವಕರ ಗುಂಪೊಂದು ಶುಕ್ರವಾರ ಮಧ್ಯಾಹ್ನ ಏಕಾಏಕಿ ದಾಳಿ ಮಾಡಿ ಹಲ್ಲೆ ಮಾಡಿದೆ. ಪ್ರೀತಂಗೌಡ ಶಾಸಕರಾದ ನಂತರದಲ್ಲಿ ಅವರ ಆಪ್ತ ವಲಯದಲ್ಲಿ ಗುರ್ತಿಸಿಕೊಂಡಿದ್ದ ವಿಜಯ್‌ ಕುಮಾರ್ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿಯಾದ ನಂತರದಲ್ಲಿ ಇತ್ತೀಚೆಗೆ ಸಂಸದ ಪ್ರಜ್ವಲ್ ರೇವಣ್ಣ ಪರ ಪ್ರಚಾರ ಮಾಡಿದ್ದರು.

ಅಂಗಡಿಗೆ ನುಗ್ಗಿದ 50 ಜನ ಯುವಕರ ಗುಂಪು । ಐನೆಟ್‌ ವಿಜಿ ಸೇರಿ ಮೂವರ ಮೇಲೆ ಹಲ್ಲೆ

ಕನ್ನಡಪ್ರಭ ವಾರ್ತೆ ಹಾಸನ

ನಗರದ ಎಂ.ಜಿ. ರಸ್ತೆ ಬಳಿ ಇರುವ ಐ-ನೆಟ್ ಮಳಿಗೆ ಮಾಲೀಕ ವಿಜಿಕುಮಾರ್‌ ಮೇಲೆ ಯುವಕರ ಗುಂಪೊಂದು ಶುಕ್ರವಾರ ಮಧ್ಯಾಹ್ನ ಏಕಾಏಕಿ ದಾಳಿ ಮಾಡಿ ಹಲ್ಲೆ ಮಾಡಿದೆ. ಅಂಗಡಿ ಗಾಜುಗಳನ್ನು ಪುಡಿಪುಡಿ ಮಾಡಿ ಬಿಜೆಪಿ ಮುಖಂಡ ಐನೆಟ್ ವಿಜಿಕುಮಾರ್ ಸೇರಿ ಮೂವರ ಮೇಲೆ ಹಲ್ಲೆ ಮಾಡಲಾಗಿದೆ. ಮೂವರೂ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬಿಜೆಪಿ ಮಾಧ್ಯಮ ವಕ್ತಾರ ಹಾಗೂ ಹಲವು ವರ್ಷಗಳಿಂದ ಆರ್‌ಎಸ್‌ಎಸ್‌ನಲ್ಲಿ ಗುರುತಿಸಿಕೊಂಡಿದ್ದ ವಿಜಯ್ ಕುಮಾರ್ ಮಳಿಗೆಯಲ್ಲಿ ಕೆಲಸದ ನಿಮಿತ್ತ ಕುಳಿತಿದ್ದಾಗ ಮಳಿಗೆಗೆ ನುಗ್ಗಿದ ೫೦ಕ್ಕೂ ಹೆಚ್ಚು ಜನರ ಯುವಕರ ಗುಂಪೊಂದು ಐನೆಟ್ ಕಚೇರಿಯ ಗಾಜುಗಳನ್ನು ಒಡೆದು ಹಾಕಿದ್ದಾರೆ. ನಂತರ ಮಾಲೀಕ ಐನೆಟ್ ವಿಜಯ್ ಕುಮಾರ್ ಮೇಲೆ ಹಲ್ಲೆ ಮಾಡಿದ್ದಾರೆ. ಪ್ರಶ್ನೆ ಮಾಡಿ ರಕ್ಷಣೆ ಮಾಡಲು ಬಂದ ಸ್ನೇಹಿತರಾದ ಪ್ರಮೋದ್ ಮತ್ತು ಸಂದೇಶ್ ಮೇಲೂ ಹಲ್ಲೆ ಮಾಡಿಡಿ ನಾನಾ ಕಡೆ ಗಾಯಗೊಳಿಸಿದ್ದಾರೆ.

ತಕ್ಷಣ ಮೂವರು ಗಾಯಾಳುಗಳನ್ನು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.

ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಪ್ರೀತಂಗೌಡ ಶಾಸಕರಾದ ನಂತರದಲ್ಲಿ ಅವರ ಆಪ್ತ ವಲಯದಲ್ಲಿ ಗುರ್ತಿಸಿಕೊಂಡಿದ್ದ ವಿಜಯ್‌ ಕುಮಾರ್ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿಯಾದ ನಂತರದಲ್ಲಿ ಇತ್ತೀಚೆಗೆ ಸಂಸದ ಪ್ರಜ್ವಲ್ ರೇವಣ್ಣ ಅವರು ಐನೆಟ್ ವಿಜಯ್‌ ಕುಮಾರ್ ಮನೆಗೆ ಹೋಗಿ ಬೆಂಬಲ ನೀಡುವಂತೆ ಚರ್ಚೆ ಮಾಡಿದ್ದರು. ಅದರಂತೆ ವಿಜಯ್‌ ಕುಮಾರ್‌ ಕೂಡ ಪ್ರಜ್ವಲ್‌ ಪರವಾಗಿ ಪ್ರಚಾರದಲ್ಲಿ ತೊಡಗಿದ್ದರು.

ಹಲ್ಲೆಯಾದ ಐ ನೆಟ್ ಮಳಿಗೆ ಹಾಗೂ ಹಿಮ್ಸ್ ಆಸ್ಪತ್ರೆಗೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿ ಗಾಯಳುಗಳಿಂದ ಮಾಹಿತಿ ಪಡೆದರು. ಹಲ್ಲೆ ಮಾಡುವಾಗ ‘ನಮ್ಮ ಪ್ರೀತಂ ಅಣ್ಣನ ಬಗ್ಗೆ ಮಾತನಾಡುತ್ತೀಯಾ’ ಎಂದು ಹಲ್ಲೆ ಮಾಡಿದ ಕೀಡಿಗೇಡಿಗಳು ಮಾತನಾಡಿದ್ದಾರೆ. ತಲೆ, ಹೊಟ್ಟೆ, ಭಾಗಕ್ಕೆ ಹೆಚ್ಚಿನ ಹಲ್ಲೆಗಳನ್ನು ಮಾಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಗಾಯಳುಗಳನ್ನು ಜಿಲ್ಲಾ ಪಂಚಾಯತ್ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷೆ ಭವಾನಿ ರೇವಣ್ಣ, ಮಾಜಿ ಸಚಿವ ಎಚ್.ಡಿ.ರೇವಣ್ಣ, ಶಾಸಕ ಹುಲ್ಲಳ್ಳಿ ಸುರೇಶ್ ಸೇರಿದಂತೆ ಹಲವಾರು ರಾಜಕೀಯ ಮುಖಂಡರು ಭೇಟಿ ಮಾಡಿ ಯೋಗಕ್ಷೇಮ ವಿಚಾರಿಸಿದರು.

ಹಲ್ಲೆಗೊಳಗಾದ ಐನೆಟ್ ವಿಜಿಕುಮಾರ್ ಮಾಧ್ಯಮದೊಂದಿಗೆ ಮಾತನಾಡಿ, ‘ನಾನು ಕಚೇರಿಯಲ್ಲಿದ್ದಾಗ ಚೆಕ್ ಬರೆಯುವ ವೇಳೆ ಒಬ್ಬ ಒಳಗೆ ಬಂದು ನೀವು ವಿಜಿಕುಮಾರ್ ಅಲ್ವ ಎಂದು ಪ್ರಶ್ನೆ ಮಾಡಿ ಮಾತನಾಡಬೇಕು ಹೊರಗೆ ಬನ್ನಿ ಎಂದು ಕರೆದು ಬಳಿಕ ಹಲವರು ಒಳಗೆ ಬಂದು ಹೊಡೆಯಲು ಪ್ರಾರಂಭಿಸಿದರು. ಪ್ರೀತಂಗೌಡರ ಬಗ್ಗೆ ನೀನು ಮಾತನಾಡುತ್ತೀಯಾ ಎಂದು ಹೇಳುತ್ತಿದ್ದರು. ನಾನು ಯಾವಾಗ ಮಾತನಾಡಿದೆ ಗೊತ್ತಿಲ್ಲ. ನೂರಾರು ಜನರು ನಮ್ಮ ನೆಟ್ ಕಚೇರಿ ಮುಂದೆ ಇದ್ದರು. ಹಲ್ಲೆ ಮಾಡಿದವರನ್ನು ನಾನು ನೋಡಿದ್ದೇನೆ. ಬಿಜೆಪಿ ಕಾರ್ಯಕರ್ತರು ಈ ರೀತಿ ಮಾಡುವುದಿಲ್ಲ. ಪ್ರೀತಂಗೌಡರ ಕಡೆಯವರೇ ಈ ಹಲ್ಲೆ ಮಾಡಿದ್ದಾರೆ’ ಎಂದು ದೂರಿದರು.

ಇದೇ ವೇಳೆ ಜೆಡಿಎಸ್ ಮುಖಂಡರಾದ ರಘುಗೌಡ, ಬಿದರಿಕೆರೆ ಜಯರಾಂ, ಎಚ್.ಎಸ್. ಅನಿಲ್ ಕುಮಾರ್, ಆರ್‌ಎಸ್‌ಎಸ್‌ ಮುಖಂಡ ಮೋಹನ್ ಕುಮಾರ್, ವಿಶಾಲ್ ಅಗರ್‌ವಾಲ್ ಇತರರು ಇದ್ದರು.

ಆಸ್ಪತ್ರೆಯಲ್ಲಿ ದಾಖಲಾದ ಗಾಯಾಳುಗಳಿಂದ ಪೊಲೀಸರು ಮಾಹಿತಿ ಪಡೆಯುತ್ತಿರುವುದು.

ಪುಂಡರ ದಾಳಿಯಿಂದ ಐ ನೆಟ್‌ ಮಳಿಗೆಯ ಗಾಜುಗಳು ಪುಡಿಪುಡಿಯಾಗಿರುವುದು.