ಸಾರಾಂಶ
ಹಾವೇರಿ: ರಾಜ್ಯ ಸರ್ಕಾರ ಪರಿಶಿಷ್ಟ ಜಾತಿಗಳ ಉಪವರ್ಗೀಕರಣಕ್ಕಾಗಿ ಕೈಗೊಳ್ಳುತ್ತಿರುವ ಸಮೀಕ್ಷೆಯು ತರಾತುರಿಯಲ್ಲಿ ನಡೆಸುವಂತಾಗಿದ್ದು, ಈ ಸಮೀಕ್ಷೆಯಿಂದ ಸಮಂಜಸವಾದ ವರದಿ ನಿರೀಕ್ಷೆ ಹುಸಿಯಾಗಿ ಬಂಜಾರ ಸಮಾಜಕ್ಕೆ ಅನ್ಯಾಯವಾಗಲಿದೆ ಎಂದು ಬಂಜಾರ(ಲಂಬಾಣಿ) ಹಕ್ಕು ಸಂರಕ್ಷಣಾ ಸಮಿತಿ ರಾಜ್ಯಾಧ್ಯಕ್ಷ ಎಸ್.ಆರ್. ರಾಜಾನಾಯ್ಕ ತಿಳಿಸಿದರು.ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೇಂದ್ರ ಸರ್ಕಾರ ಜಾತಿಜನಗಣತಿ ಮಾಡಲು ಘೋಷಿಸಿದ್ದು, ಕೇಂದ್ರ ಸರ್ಕಾರದ ಜಾತಿಗಣತಿ ಸಂದರ್ಭದಲ್ಲಿಯೇ ಸಮೀಕ್ಷೆ ಮಾಡಬೇಕು. ಒಳಮೀಸಲಾತಿ ವಿಚಾರದಲ್ಲಿ ನ್ಯಾ. ನಾಗಮೋಹನದಾಸ ಅವರು ಸರ್ಕಾರಕ್ಕೆ ನೀಡಿರುವ ಮಧ್ಯಂತರ ವರದಿಯಲ್ಲಿ ಸುಪ್ರೀಂ ಕೋರ್ಟಿನ ಆದೇಶದಂತೆ ಪ್ರಾಯೋಗಿಕ ದತ್ತಾಂಶ ಸಂಗ್ರಹಣೆ ಮಾಡದೇ ಒಳಮೀಸಲಾತಿ ಕಲ್ಪಿಸಲು ಸಾಧ್ಯವಿಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿರುವುದರಿಂದ ಸರ್ಕಾರ ಪರಿಶಿಷ್ಟ ಜಾತಿಗಳಲ್ಲಿ ಬರುವ ಪ್ರತಿಯೊಂದು ಜಾತಿಯ ಸ್ಥಿತಿಗತಿ ಕುರಿತು ಅಧ್ಯಯನ ಮಾಡಲು ಆದೇಶಿಸಿದೆ. ಮೇ 5ರಿಂದ 17ರ ವರೆಗೆ ಸಮೀಕ್ಷೆ ಕಾರ್ಯ ನಡೆಸಲು ಮುಂದಾಗಿದೆ. ಇಷ್ಟು ಕಡಿಮೆ ಅವಧಿಯಲ್ಲಿ ಬಂಜಾರ ಸಮಾಜದ ಸಮೀಕ್ಷೆ ನಡೆಸುವುದು ಅಸಾಧ್ಯವಿದೆ ಎಂದರು.
ಬಂಜಾರ ಕುಟುಂಬಗಳ ಜೀವನ ಸ್ಥಿತಿಗತಿ ಶೋಚನೀಯವಾಗಿದ್ದು, ಸಾಮಾಜಿಕ, ಶೈಕ್ಷಣಿಕ, ಆರ್ಥಿಕ, ರಾಜಕೀಯ ಹಾಗೂ ಔದ್ಯೋಗಿಕವಾಗಿ ತೀರಾ ಹಿಂದುಳಿದಿದ್ದಾರೆ. ಲಂಬಾಣಿಗರು ವಾಸಿಸುವ ಗ್ರಾಮಗಳು ಕಂದಾಯ ಗ್ರಾಮಗಳಲ್ಲ. ಯಾವುದೇ ಹಕ್ಕುಪತ್ರ ಹೊಂದಿಲ್ಲ. ನಿತ್ಯ ಜೀವನೋಪಾಯಕ್ಕಾಗಿ ಆಂಧ್ರ, ಗೋವಾ, ಮಹಾರಾಷ್ಟ್ರ, ಚಿಕ್ಕಮಗಳೂರು, ಬೆಂಗಳೂರು ಹೀಗೆ ವಿವಿಧೆಡೆ ಕೆಲಸಕ್ಕಾಗಿ ಹೋಗಿದ್ದಾರೆ.ಹೆಚ್ಚಿನ ಸಂಖ್ಯೆಯಲ್ಲಿ ಕೆಲಸಕ್ಕೆ ತೆರಳಿರುವುದರಿಂದ ಕಡಿಮೆ ಅವಧಿಯಲ್ಲಿ ಸಮೀಕ್ಷೆಗೆ ಹಾಜರಾಗಲು ಸಾಧ್ಯವಿಲ್ಲ. ಅಲ್ಲದೇ ಅಂಕಿ ಅಂಶಗಳು ನಿಖರವಾಗಿರಲು ಸಾಧ್ಯವಿಲ್ಲ. ಹಾಗಾಗಿ ದೀಪಾವಳಿ ಸಮಯದಲ್ಲಿ ಲಂಬಾಣಿಗರ ಹಿರಿಯರಿಗೆ (ಮೃತಪಟ್ಟವರಿಗೆ) ಧೂಪ ಹಾಕುವ ವೇಳೆ ವಾಪಸ್ಸಾಗುವುದರಿಂದ ಸಮೀಕ್ಷೆಯಲ್ಲಿ ಪಾಲ್ಗೊಳ್ಳಬಹುದು. ಇಲ್ಲವೇ ಸಮೀಕ್ಷೆಗಾರರೇ ಬಂಜಾರರು ದುಡಿಯಲು ಹೋಗಿರುವ ಸ್ಥಳಕ್ಕೆ ತೆರಳಿ ಸಮೀಕ್ಷೆ ನಡೆಸಬೇಕು. ಈಗಾಗಲೇ ಕೇಂದ್ರ ಸರ್ಕಾರ ಘೋಷಿಸಿದಂತೆ ಜಾತಿಜನಗಣತಿ ವೇಳೆ ಸಮೀಕ್ಷೆ ಮಾಡಿದಾಗ ನಿಜವಾದ ಅಂಕಿಅಂಶಗಳು ಸಿಗಲಿವೆ ಎಂದರು. ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕಾಂತ ಅಂಗಡಿ ಮಾತನಾಡಿ, 2011ರ ಗಣತಿ ಸಮಯದಲ್ಲಿ ರಾಜ್ಯದಲ್ಲಿ ಕೇವಲ 12 ಲಕ್ಷ ಜನಸಂಖ್ಯೆ ಇದೆ ಎಂದು ಅಂಕಿ- ಅಂಶಗಳನ್ನು ತಿಳಿಸಿದ್ದಾರೆ. ಇದು ಸತ್ಯಕ್ಕೆ ದೂರವಾಗಿದ್ದು, ರಾಜ್ಯದಲ್ಲಿ ಸುಮಾರು 3300ಕ್ಕೂ ಹೆಚ್ಚು ತಾಂಡಾಗಳಿದ್ದು, ಒಂದೊಂದು ತಾಂಡಾದಲ್ಲಿ ಸಾವಿರ, 2 ಸಾವಿರ, 5000ರ ವರೆಗೆ ಜನರು ವಾಸ ಮಾಡಿಕೊಂಡಿದ್ದಾರೆ. ಸರಾಸರಿ ಒಂದು ತಾಂಡಾದಲ್ಲಿ 1 ಸಾವಿರ ಜನಸಂಖ್ಯೆಯಂತೆ ನೋಡಿದಾಗ 33 ಲಕ್ಷ ಜನಸಂಖ್ಯೆ ಇದೆ. ಹಾಗಾಗಿ ಸರ್ಕಾರ ಸಮಾಜಕ್ಕೆ ಅನ್ಯಾಯವಾಗದ ರೀತಿಯಲ್ಲಿ ಬಂಜಾರರ ಪರವಾಗಿ ವೈಜ್ಞಾನಿಕ ಸಮೀಕ್ಷೆ ಮಾಡಬೇಕು. ಮೂಲ ಸೌಕರ್ಯಗಳ ಜತೆಗೆ ಸರ್ಕಾರಿ ಸೌಲಭ್ಯಗಳನ್ನು ಒದಗಿಸಿಕೊಡುವ ನಿಟ್ಟಿನಲ್ಲಿ ಮುಂದಾಗಬೇಕೆಂದು ಆಗ್ರಹಿಸಿದರು. ಮುಖಂಡ ಈರಪ್ಪ ಲಮಾಣಿ ಮಾತನಾಡಿ, ರಾಜ್ಯ ಸರ್ಕಾರ ಬಂಜಾರ ಅಭಿವೃದ್ಧಿ ನಿಗಮ ಸ್ಥಾಪಿಸಿದ್ದು ಬಿಟ್ಟರೆ, ಸಮಾಜದ ಅಭಿವೃದ್ಧಿಗಾಗಿ ನಿಗಮಕ್ಕೆ ಹಣ ಬಿಡುಗಡೆ ಮಾಡಿಲ್ಲ. ನಿಗಮಕ್ಕೆ ಕೇವಲ ಅಧ್ಯಕ್ಷರನ್ನು ನೇಮಕ ಮಾಡಿದ್ದಾರೆ ಅಷ್ಟೇ. ಇದರಿಂದ ಸಮುದಾಯದ ಅಭಿವೃದ್ಧಿ ಸಾಧ್ಯವಿಲ್ಲ. ಕೂಡಲೇ ನಿಮಗಕ್ಕೆ ಅನುದಾನ ಬಿಡುಗಡೆ ಮಾಡಬೇಕು. ಲಂಬಾಣಿಗರು ವಾಸಿಸುವ ಪ್ರದೇಶಗಳನ್ನು ಕಂದಾಯ ಗ್ರಾಮಗಳನ್ನಾಗಿ ಘೋಷಿಸಬೇಕು ಎಂದು ಒತ್ತಾಯಿಸಿದರು.ನಾಗಪ್ಪ ಚೌಹಾಣ, ಜಯರಾಮ ಮಾಳಾಪುರ, ಐ.ಡಿ. ಲಮಾಣಿ, ಗಂಗಾನಾಯಕ ಗೊಂದಿ, ರಮಾನಾಯಕ, ಸಂತೋಷ ಲಮಾಣಿ, ಈಶ್ವರ ಲಮಾಣಿ ಇತರರು ಇದ್ದರು.