ದೇವಾಲಯಗಳು ನಮ್ಮ ಇತಿಹಾಸದ ಮೇಲೆ ಬೆಳಕು ಚೆಲ್ಲುವ ಜೀವಂತ ಸ್ಮಾರಕಗಳು. ನಮ್ಮ ಸಂಸ್ಕೃತಿಯ ಪ್ರತಿಬಿಂಬವಾಗಿರುವ ದೇಗುಲದ ಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ. ಯುವಕರಿಗೆ ನಮ್ಮ ಕಲೆ ಮತ್ತು ಸಂಸ್ಕೃತಿಯನ್ನು ಪರಿಚಯಿಸುವ ಕೆಲಸ ಆಗಬೇಕು.
ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಗುರು ಹಿರಿಯರು ಹಾಗೂ ತಂದೆ ತಾಯಿಗಳ ಬಗ್ಗೆ ಯುವಜನರು ಗೌರವ, ಭಕ್ತಿ ಭಾವನೆ ಹೊಂದಬೇಕು ಎಂದು ಕೆಂಗೇರಿ ವಿಶ್ವ ಒಕ್ಕಲಿಗರ ಮಠದ ಪೀಠಾಧಿಪತಿ ಡಾ.ನಿಶ್ಚಲಾನಂದನಾಥ ಸ್ವಾಮೀಜಿ ಮನವಿ ಮಾಡಿದರು.ತಾಲೂಕಿನ ಬೊಮ್ಮನಾಯಕನಹಳ್ಳಿಯಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀಮಂಚಮ್ಮ ಹಾಗೂ ಶ್ರೀಮಾಸ್ತಮ್ಮ ದೇವಸ್ಥಾನದ ಲೋಕಾರ್ಪಣೆ, ವಿಗ್ರಹಗಳ ಪ್ರಾಣ ಪ್ರತಿಷ್ಠಾಪನೆ ಹಾಗೂ ಶಿಖರ ಕಳಸಾರೋಹಣ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು.
ದೇವಾಲಯಗಳು ನಮ್ಮ ಇತಿಹಾಸದ ಮೇಲೆ ಬೆಳಕು ಚೆಲ್ಲುವ ಜೀವಂತ ಸ್ಮಾರಕಗಳು. ನಮ್ಮ ಸಂಸ್ಕೃತಿಯ ಪ್ರತಿಬಿಂಬವಾಗಿರುವ ದೇಗುಲದ ಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ. ತಾಲೂಕಿನ ಸಾಂಸ್ಕೃತಿಕ ಗ್ರಾಮ ಬೊಮ್ಮನಾಯಕನಹಳ್ಳಿ ಗ್ರಾಮಸ್ಥರು ಶಿಥಿಲವಾಗಿದ್ದ ಗ್ರಾಮದೇವತೆಗಳಾದ ಮಂಚಮ್ಮ ಹಾಗೂ ಮಾಸ್ತಮ್ಮ ದೇವಾಲಯಗಳ ಪುನರುಜ್ಜೀವನ ಮಾಡಿ ಇಡೀ ನಾಗರಿಕ ಸಮಾಜವೇ ಮೆಚ್ಚುವಂತಹ ಕಾರ್ಯ ಮಾಡಿ ಮಾದರಿಯಾಗಿದ್ದಾರೆ ಎಂದು ಶ್ಲಾಘಿಸಿದರು.ಯುವಕರಿಗೆ ನಮ್ಮ ಕಲೆ ಮತ್ತು ಸಂಸ್ಕೃತಿಯನ್ನು ಪರಿಚಯಿಸುವ ಕೆಲಸ ಆಗಬೇಕು. ಯುವಜನರು ತಂದೆ ತಾಯಿಗಳು ಹಾಗೂ ಗುರು ಹಿರಿಯರನ್ನು ಗೌರವಿಸುವ ಮನೋಭಾವನೆ ಬೆಳೆಸಿಕೊಂಡು ಸಂಸ್ಕಾರವಂತರಾಗಿ ಉತ್ತಮ ಜೀವನ ನಡೆಸಬೇಕು ಎಂದು ಹಿತೋಪದೇಶ ಮಾಡಿದರು.
ಶಾಸಕ ಎಚ್.ಟಿ.ಮಂಜು ಮಾತನಾಡಿ, ದೇಗುಲಗಳನ್ನು ಹೊಸದಾಗಿ ನಿರ್ಮಿಸಿ ಶಿಲಾ ವಿಗ್ರಹಗಳನ್ನು ಪುನರ್ ಪ್ರತಿಷ್ಠಾಪನೆ ಮಾಡಿ ದೇವಾಲಯದ ಕಳಸರೋಹಣ ನೆರವೇರಿಸಿ ನಮ್ಮ ಸಂಸ್ಕೃತಿ ಹಾಗೂ ಪರಂಪರೆ ಉಳಿಸಿ ಬೆಳೆಸುವ ಕಾರ್ಯವನ್ನು ಮಾಡುವ ಮೂಲಕ ಇತರೆ ಗ್ರಾಮಗಳಿಗೆ ಮಾದರಿಯಾಗಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ದೇವಾಲಯಗಳು ಹಾಗೂ ಮಠಮಾನ್ಯಗಳು ನಮ್ಮ ಹಿಂದೂ ಧರ್ಮದ ಶ್ರೇಷ್ಠತೆ ಸಾರುವ ದಿವ್ಯ ಮಂದಿರಗಳಾಗಿವೆ. ಹಾದಿ ತಪ್ಪಿರುವ ಸಮಾಜ ಹಾಗೂ ಯುವಕರನ್ನು ಸರಿದಾರಿಯಲ್ಲಿ ಮುನ್ನಡೆಸುವಲ್ಲಿ ಮಾರ್ಗದರ್ಶಿಯಾಗಿ ಜ್ಞಾನದ ಬೆಳಕನ್ನು ಪಸರಿಸುವ ಶರಣ ಶ್ರದ್ಧಾ ಕೇಂದ್ರಗಳಾಗಿ ಮುನ್ನಡೆಯುತ್ತಿರುವುದು ಹೆಮ್ಮೆಯ ವಿಚಾರ ಎಂದರು.
ಕಾರ್ಯಕ್ರಮದಲ್ಲಿ ಶಾಸಕರ ಧರ್ಮಪತ್ನಿ ರಮಾ ಮಂಜು, ಟಿಎಪಿಸಿಎಂಎಸ್ ನಿರ್ದೇಶಕ ಎಚ್.ಟಿ.ಲೋಕೇಶ್ ದಂಪತಿ ಸೇರಿದಂತೆ ಶೀಳನೆರೆ ಹೋಬಳಿ ಎಲ್ಲಾ ಗ್ರಾಮಗಳ ಸಾವಿರಾರು ಭಕ್ತಾದಿಗಳು ಮಂಚಮ್ಮ ಹಾಗೂ ಮಾಸ್ತಮ್ಮ ದೇವಾಲಯಗಳ ಶಿಖರಾರೋಹಣ ಭಾಗವಹಿಸಿದ್ದರು.