ಸಾರಾಂಶ
ತ್ಯಾಜ್ಯ ನಿರ್ವಹಣೆಯಲ್ಲಿ ಸಮುದಾಯದ ಸಹಭಾಗಿತ್ವ ಅವಶ್ಯಕ. ಮುಂದಿನ ಪೀಳಿಗೆಯ ಭವಿಷ್ಯಕ್ಕಾಗಿ ಪರಿಸರ ಸ್ನೇಹಿ ಜೀವನ ಶೈಲಿ, ವಿಷಮುಕ್ತ ಆಹಾರ ಉತ್ಪಾದನೆ, ಶುದ್ಧ ನೀರು, ಶುದ್ಧ ಗಾಳಿ ದೊರೆಯುವಂತೆ ಇಂದಿನ ಮಕ್ಕಳು ಭಾಷ್ಯ ಬರೆಯಬೇಕಾಗಿದೆ.
ಧಾರವಾಡ:
ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ವೀರಾಪುರ ಸರ್ಕಾರಿ ಪ್ರೌಢಶಾಲೆ ಆಶ್ರಯದಲ್ಲಿ ನಡೆದ ಘನ ಮತ್ತು ದ್ರವ ತ್ಯಾಜ್ಯ ನಿರ್ವಹಣೆಯಲ್ಲಿ ಪರಿಸರ ಸ್ನೇಹಿ ಜೈವಿಕ ತಂತ್ರಜ್ಞಾನ ಮತ್ತು ಸೌರ ವಿದ್ಯುತ್ ಶಕ್ತಿ ಉತ್ಪಾದನೆ ತಂತ್ರಜ್ಞಾನಗಳ ಕುರಿತು ಉಪನ್ಯಾಸ ನಡೆಯಿತು.ಮುಖ್ಯಾಧ್ಯಾಪಕಿ ಮಂಗಳಗೌರಿ ಬಡಿಗೇರ ಸಸಿಗೆ ನೀರುಣಿಸಿ ಉದ್ಘಾಟಿಸಿದರು. ಉಪನ್ಯಾಸ ನೀಡಿದ ಪರಿಸರವಾದಿ ಬಾಲಚಂದ್ರ ಜಾಬಶೆಟ್ಟಿ, ತ್ಯಾಜ್ಯ ನಿರ್ವಹಣೆಯಲ್ಲಿ ಸಮುದಾಯದ ಸಹಭಾಗಿತ್ವ ಅವಶ್ಯಕ. ಮುಂದಿನ ಪೀಳಿಗೆಯ ಭವಿಷ್ಯಕ್ಕಾಗಿ ಪರಿಸರ ಸ್ನೇಹಿ ಜೀವನ ಶೈಲಿ, ವಿಷಮುಕ್ತ ಆಹಾರ ಉತ್ಪಾದನೆ, ಶುದ್ಧ ನೀರು, ಶುದ್ಧ ಗಾಳಿ ದೊರೆಯುವಂತೆ ಇಂದಿನ ಮಕ್ಕಳು ಭಾಷ್ಯ ಬರೆಯಬೇಕಾಗಿದೆ. ಪಾರಂಪರಿಕ ಹಾಗೂ ನಂದಿ ಆಧಾರಿತ ಕೃಷಿಯ ಪುನರುತ್ಥಾನಕ್ಕಾಗಿ ನಾವೆಲ್ಲರೂ ಕಂಕಣ ಬದ್ಧರಾಗಬೇಕಿದೆ ಎಂದರು.
ಸೌರ ವಿದ್ಯುಚ್ಛಕ್ತಿ ಉತ್ಪಾದನೆಯಿಂದ ದೊರೆಯುವ ಲಾಭಗಳ ಕುರಿತು ವಿವಿಧ ಆಯಾಮಗಳಲ್ಲಿ ಅವರು ವಿಷಯ ಮಂಡಿಸಿದರು. ಎಸ್‌ಡಿಎಂಸಿ ಅಧ್ಯಕ್ಷ ಈರನಗೌಡ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಕಸಾಪ ಅಧ್ಯಕ್ಷ ಮಹಾಂತೇಶ ನರೇಗಲ್ಲ ಪರಿಚಯಿಸಿದರು. ವಿಜ್ಞಾನ ಶಿಕ್ಷಕಿ ಸ್ಮಿತಾ ವಡಗಾವೆ ನಿರೂಪಿಸಿದರು. ಡಾ. ಕೆ. ಪರಿಮಳಾ ಸ್ವಾಗತಿಸಿದರು. ಉಮಾದೇವಿ ಪಾಟೀಲ ವಂದಿಸಿದರು. ಸುರೇಶ ಮುಗಳಿ, ಸುವರ್ಣ ಪಾಟೀಲ, ವೈ.ಎಸ್. ಬೆಣ್ಣಿ ಇದ್ದರು.