ರಮೇಶ್ ಬಿದರಕೆರೆ

ಕನ್ನಡಪ್ರಭ ವಾರ್ತೆ ಹಿರಿಯೂರುಹಿರಿಯೂರು ತಾಲೂಕು ಜೆಡಿಎಸ್ ಪಕ್ಷ ಎರಡು ಬಣವಾಗಿ ಮಾರ್ಪಟ್ಟಿದೆಯಾ? ಇಂತಹದೊಂದು ಪ್ರಶ್ನೆಗೆ ಹೌದು ಎನ್ನುವಂತೆ ತಾಲೂಕಿನ ಜೆಡಿಎಸ್ ಮುಖಂಡರೇ ಸಾಕ್ಷಿ ಒದಗಿಸುತ್ತಿದ್ದಾರೆ.

ಜೆಡಿಎಸ್ ಮಾಜಿ ಜಿಲ್ಲಾಧ್ಯಕ್ಷ ಡಿ.ಯಶೋಧರ್, ಪಿಲಾಜನಹಳ್ಳಿ ಜಯಣ್ಣನವರದೊಂದು ಬಣ. 2023ರ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದಿಂದ ಸ್ಪರ್ಧಿಸಿದ್ದ ಎಂ.ರವೀಂದ್ರಪ್ಪನವರದೊಂದು ಬಣ ಎಂಬುದು ಈಗಾಗಲೇ ತಾಲೂಕಿನ ಜನರಿಗಿರಲಿ, ಸ್ವತಃ ಜೆಡಿಎಸ್ ಕಾರ್ಯಕರ್ತರಿಗೇ ಗೊತ್ತಾಗಿ ಹೋಗಿದೆ. ಎರಡು ಬಣಗಳ ನಡುವಿನ ಹಾವು ಮುಂಗುಸಿ ದ್ವೇಷದ ಪರಾಕಾಷ್ಟೆ ಎಲ್ಲಿಗೆ ತಲುಪಿದೆ ಎಂದರೆ ಡಿ.ಯಶೋಧರ್ ಮತ್ತು ಜಯಣ್ಣ ಬಣದಲ್ಲಿ ಒಬ್ಬರನ್ನು ಜೆಡಿಎಸ್ ತಾಲೂಕು ಅಧ್ಯಕ್ಷರು ಎಂದು ಘೋಷಣೆ ಮಾಡಿಕೊಳ್ಳುತ್ತಾರೆ. ಅದೇ ದಿನ ಎಂ.ರವೀಂದ್ರಪ್ಪನವರ ಬಣದಲ್ಲೂ ಅವರಲ್ಲ ಇವರೇ ನೋಡಿ ನಮ್ಮ ತಾಲೂಕು ಅಧ್ಯಕ್ಷರು ಎಂದು ಘೋಷಣೆ ಮಾಡಿ ಪುನೀತರಾಗುತ್ತಾರೆ. ಪತ್ರಿಕೆಗಳಿಗೆ ಸುದ್ದಿ ಕೊಡುವಾಗ ಎರಡೂ ಬಣದಲ್ಲೂ ತಾಲೂಕು ಅಧ್ಯಕ್ಷರ ಹೆಸರು ಬೇರೆ ಬೇರೆ ಇರುತ್ತದೆ. ಇದಕ್ಕೆಲ್ಲಾ ಇಂಬು ಕೊಟ್ಟಂತೆ ಸೋಮವಾರ ನಡೆದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಹುಟ್ಟುಹಬ್ಬ ಆಚರಣೆಯನ್ನು ಸಹ ಈ ಎರಡು ಬಣಗಳು ಬೇರೆ ಬೇರೆಯಾಗಿಯೇ ಆಚರಿಸಿದವು ಮತ್ತು ಬೇರೆ ಬೇರೆ ತಾಲೂಕು ಅಧ್ಯಕ್ಷರ ಹೆಸರಲ್ಲಿ ಘೋಷಣೆ ಮೊಳಗಿದವು. ನಿಜ ಹೇಳಬೇಕೆಂದರೆ ಇವತ್ತಿಗೂ ಹಳ್ಳಿಗಳ ಭಾಗದಲ್ಲಿ ಜೆಡಿಎಸ್ ಪಕ್ಷಕ್ಕೆ ಗಟ್ಟಿ ಮತದಾರರಿದ್ದಾರೆ. ಎರಡು ದಶಕದಿಂದ ತಾಲೂಕಿನಲ್ಲಿ ಪಕ್ಷಕ್ಕೆ ಅಧಿಕಾರ ಸಿಗದಿದ್ದರೂ ಸಹ ಜೆಡಿಎಸ್ ಪಕ್ಷದ ಮತದಾರರು ವಲಸೆ ಹೋಗಿಲ್ಲ. ಹೋಗುವಂತಹ ಮತದಾರರೂ ಅಲ್ಲ ಅವರು. ಎಚ್.ಡಿ.ದೇವೇಗೌಡರು ಮತ್ತು ಕುಮಾರಸ್ವಾಮಿಯವರನ್ನು ಆರಾಧಿಸುವ, ಪ್ರೀತಿಸುವ ಮತದಾರರು ಅವರಾಗಿದ್ದು ಸ್ವತಃ ಚುನಾವಣಾ ನಿಪುಣರಾಗಿದ್ದ ಡಿ.ಸುಧಾಕರ್ ರವರು ಸಹ ಜೆಡಿಎಸ್ ಪಕ್ಷದ ಮತಗಳನ್ನು ನಿರೀಕ್ಷಿತ ಪ್ರಮಾಣದಲ್ಲಿ ಸೆಳೆಯಲಾಗಿರಲಿಲ್ಲ. ಅಂತಹುದೊಂದು ಗಟ್ಟಿ ಮತದಾರರ ಪಡೆ ಇರುವ ಜೆಡಿಎಸ್ ಪಕ್ಷದ ಏಳ್ಗೆಗೆ ಈಗ ಅದರ ಮುಖಂಡರೇ ಅಡ್ಡಗಾಲು ಆಗುತ್ತಿದ್ದಾರೆ. ತಾಲೂಕು ಅಧ್ಯಕ್ಷರ ಆಯ್ಕೆಯನ್ನು ಪ್ರತಿಷ್ಠೆಯನ್ನಾಗಿ ಪರಿಗಣಿಸಿರುವ ಎರಡೂ ಬಣಗಳು ಇಬ್ಬಿಬ್ಬರು ತಾಲೂಕು ಅಧ್ಯಕ್ಷರ ಹೆಸರು ತೇಲಿ ಬಿಟ್ಟು ಜನರನ್ನು ಗೊಂದಲಕ್ಕೆ ನೂಕುತ್ತಿದ್ದಾರೆ. ಡಿ.ಯಶೋಧರ್ ಮತ್ತು ಜಯಣ್ಣನವರು ರಂಗೇನಹಳ್ಳಿಯ ಮಾಜಿ ತಾಪಂ ಸದಸ್ಯ ಶಂಕರಮೂರ್ತಿಯವರನ್ನು ತಾಲೂಕು ಅಧ್ಯಕ್ಷರು ಎಂದರೆ ಎಂ.ರವೀಂದ್ರಪ್ಪನವರು ಮತ್ತು ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ಮಂಜಣ್ಣನವರು ಶಂಕರಮೂರ್ತಿಯವರು ತಾಲೂಕು ಅಧ್ಯಕ್ಷರಲ್ಲ. ಈ ಹಿಂದಿನ ಎನ್. ಹನುಮಂತರಾಯಪ್ಪನವರನ್ನೇ ಮತ್ತೊಂದು ಅವಧಿಯ ಅಧ್ಯಕ್ಷರನ್ನಾಗಿ ಮುಂದುವರಿಸಲಾಗಿದೆ ಎಂದು ಪತ್ರಿಕಾ ಹೇಳಿಕೆ ನೀಡುತ್ತಾರೆ.

ಎರಡೂ ಬಣಗಳು ತಾಲೂಕು ಅಧ್ಯಕ್ಷರ ಆಯ್ಕೆಯ ಬಗ್ಗೆ ಕೊಡುವ ಕಾರಣಗಳು ಸಹ ಕೇಳುವಂತಹವೇ ಆಗಿವೆ. ಚುನಾವಣೆ ಪ್ರಕ್ರಿಯೆ ಮೂಲಕ ತಾಲೂಕು ಅಧ್ಯಕ್ಷರನ್ನಾಗಿ ಕೆ.ಶಂಕರಮೂರ್ತಿಯವರನ್ನು ಆಯ್ಕೆ ಮಾಡಲಾಗಿದೆ ಎಂದು ಒಂದು ಬಣ ಸಮರ್ಥನೆ ಮಾಡಿಕೊಂಡರೆ ಮತ್ತೊಂದು ಬಣ ಎಚ್.ಡಿ.ಕುಮಾರಸ್ವಾಮಿಯವರು ಮತ್ತು ನಿಖಿಲ್ ಕುಮಾರಸ್ವಾಮಿಯವರ ಆದೇಶದ ಮೇರೆಗೆ ಎನ್.ಹನುಮಂತರಾಯಪ್ಪನವರನ್ನು ತಾಲೂಕು ಅಧ್ಯಕ್ಷರಾಗಿ ಮುಂದುವರೆಸಿದ್ದೇವೆ ಎನ್ನುತ್ತಾರೆ.

ಈ ಕೆರೆ ದಡ ಆಟವನ್ನು ಎರಡೂ ಬಣಗಳು ಕಳೆದ ಎರಡ್ಮೂರು ತಿಂಗಳಿನಿಂದ ಆಡುತ್ತಲೇ ಬರುತ್ತಾ ತಾಲೂಕಿನ ಜನರನ್ನು, ಆ ಪಕ್ಷದ ಕಾರ್ಯಕರ್ತರನ್ನು ಗೊಂದಲದಲ್ಲೇ ಇಟ್ಟಿದ್ದಾರೆ. ನಾನೇ ತಾಲೂಕು ಅಧ್ಯಕ್ಷ ಎಂದು ಇಬ್ಬಿಬ್ಬರು ಪ್ರತಿ ಹಬ್ಬದಲ್ಲೂ ಪೋಸ್ಟರ್ ಹಾಕಿಕೊಳ್ಳುವುದು, ಬೆಂಬಲಿಗರಿಂದ ತಾಲೂಕು ಅಧ್ಯಕ್ಷರಿಗೆ ಜೈ ಎಂದು ಘೋಷಣೆ ಕೂಗಿಸಿಕೊಳ್ಳುವುದು ಸದ್ಯಕ್ಕೆ ಅನ್ಯ ಪಕ್ಷಗಳ ಕಾರ್ಯಕರ್ತರಿಗೆ ಪುಗುಸಟ್ಟೆ ಮನರಂಜನೆ ನೀಡುತ್ತಿದೆ.


ಯಾವುದೇ ಕಾರಣಕ್ಕೂ ಹನುಮಂತರಾಯಪ್ಪನವರನ್ನು ಬದಲಾಯಿಸುವುದಿಲ್ಲ. ಈಗಲೂ ಬೆಂಗಳೂರಿನಲ್ಲಿ ಪಕ್ಷದ ಸಭೆಯಲ್ಲಿ ಇದ್ದೇನೆ. ಕುಮಾರಸ್ವಾಮಿಯವರು ಹನುಮಂತರಾಯಪ್ಪನವರನ್ನೇ ಮುಂದುವರೆಸುವಂತೆ ಮತ್ತೊಮ್ಮೆ ಹೇಳಿದ್ದಾರೆ. ಗೊಂದಲ ಇರುವುದನ್ನು ಖುದ್ದು ಅವರೇ ಮಾತನಾಡಿ ಬಗೆಹರಿಸುವ ಬಗ್ಗೆ ಹೇಳಿದ್ದಾರೆ. ಹಾಗಾಗಿ ಅವರ ಆದೇಶದಂತೆ ಹನುಮಂತರಾಯಪ್ಪನವರು ಮುಂದುವರೆಯುತ್ತಾರೆ.

-ಜೆಜಿ ಹಳ್ಳಿ ಮಂಜಣ್ಣ, ಜೆಡಿಎಸ್ ಜಿಲ್ಲಾಧ್ಯಕ್ಷ