ಪಾಳು ಬಿದ್ದಿರುವ ಹಾವೇರಿ ಎಪಿಎಂಸಿ ವಾಣಿಜ್ಯ ಮಳಿಗೆಗಳು

| Published : Jul 11 2024, 01:33 AM IST

ಸಾರಾಂಶ

ಹಾವೇರಿ ಎಪಿಎಂಸಿ ಜಾನುವಾರು ಮಾರುಕಟ್ಟೆ ಆವರಣದಲ್ಲಿ ಕೋಟ್ಯಂತರ ರುಪಾಯಿ ಖರ್ಚು ಮಾಡಿ ನಿರ್ಮಿಸಿದ್ದ 28 ವಾಣಿಜ್ಯ ಮಳಿಗೆಗಳನ್ನು ಇದುವರೆಗೆ ಯಾರಿಗೂ ಹಂಚಿಕೆ ಮಾಡದ್ದರಿಂದ ಪಾಳು ಬಿದ್ದಿವೆ. ಮಳಿಗೆಗಳಿಗೆ ಹೆಚ್ಚಿನ ದರ ನಿಗದಿ ಮಾಡಿದ ಹಿನ್ನೆಲೆಯಲ್ಲಿ ಈ ಹಿಂದೆ ಕರೆದಿದ್ದ ಟೆಂಡರ್‌ನಲ್ಲಿ ಯಾರೂ ಭಾಗವಹಿಸುತ್ತಿಲ್ಲ.

ನಾರಾಯಣ ಹೆಗಡೆ

ಹಾವೇರಿ: ಇಲ್ಲಿಯ ಎಪಿಎಂಸಿ ಜಾನುವಾರು ಮಾರುಕಟ್ಟೆ ಆವರಣದಲ್ಲಿ ಕೋಟ್ಯಂತರ ರುಪಾಯಿ ಖರ್ಚು ಮಾಡಿ ನಿರ್ಮಿಸಿದ್ದ 28 ವಾಣಿಜ್ಯ ಮಳಿಗೆಗಳನ್ನು ಇದುವರೆಗೆ ಯಾರಿಗೂ ಹಂಚಿಕೆ ಮಾಡದ್ದರಿಂದ ಪಾಳು ಬಿದ್ದಿವೆ. ಕೆಲವು ಮಳಿಗೆಗಳ ಷಟರ್ಸ್‌ ತೆರೆಯಲಾಗಿದ್ದು, ಪುಂಡ-ಪೋಕರಿಗಳ ಅಡ್ಡೆಯಂತಾಗಿದೆ.

ಹಾನಗಲ್ಲ ರಸ್ತೆಯ ಜಾನುವಾರು ಮಾರುಕಟ್ಟೆ ಪ್ರಾಂಗಣದಲ್ಲಿ ಕೋಟ್ಯಂತರ ರು. ಖರ್ಚು ಮಾಡಿ ವರ್ಷದ ಹಿಂದೆಯೇ 28 ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಲಾಗಿದೆ. ತರಕಾರಿ ವ್ಯಾಪಾರಸ್ಥರಿಗೆ ನೀಡಲೆಂದು ಅವುಗಳನ್ನು ಮೀಸಲಿಡಲಾಗಿದೆ. ಆದರೆ, ಇದುವರೆಗೆ ಮಳಿಗೆಗಳನ್ನು ವ್ಯಾಪಾರಸ್ಥರಿಗೆ ಹಂಚಿಕೆ ಮಾಡದ್ದರಿಂದ ಪಾಳು ಬೀಳುತ್ತಿದೆ. ಇತ್ತ ತರಕಾರಿ ವ್ಯಾಪಾರಸ್ಥರು ಕಾಳುಕಡಿ ಮಾರುಕಟ್ಟೆ ಆವರಣದ ರಸ್ತೆಯಲ್ಲೇ ಅನಿವಾರ್ಯವಾಗಿ ತರಕಾರಿ ಹರಾಜು ನಡೆಸುತ್ತಿದ್ದಾರೆ. ಅತ್ತ ಎಪಿಎಂಸಿಗೆ ಬರಲಿದ್ದ ಆದಾಯವೂ ಇಲ್ಲದಂತಾಗಿದೆ.

ಪುಂಡರ ಅಡ್ಡೆಯಾಗುತ್ತಿದೆ ಮಳಿಗೆ: ತರಕಾರಿ ವ್ಯಾಪಾರ ಮಾಡುವ ದಲಾಲರಿಗೆ ಅನುಕೂಲವಾಗಲೆಂದು ಕಟ್ಟಿಸಿರುವ ಮಳಿಗೆಗಳು ಅಧಿಕಾರಿಗಳ ನಿರ್ಲಕ್ಷ್ಯದಿಂದ ಹಾಳು ಬೀಳುತ್ತಿದೆ. ಕೆಲವು ಮಳಿಗೆಗಳ ಷಟರ್ಸ್‌ಗಳನ್ನು ಎತ್ತಲಾಗಿದ್ದು, ಪುಂಡ-ಪೋಕರ ಅಡ್ಡೆಯಾಗುತ್ತಿರುವ ಬಗ್ಗೆ ಸುತ್ತಮುತ್ತಲಿನ ವ್ಯಾಪಾರಸ್ಥರು ಹೇಳುತ್ತಿದ್ದಾರೆ. ರಾತ್ರಿ ವೇಳೆ ಕುಡುಕರ ಹಾವಳಿ ಹೆಚ್ಚುತ್ತಿದೆ. ದನದ ಸಂತೆ ದಿನ ಮಳಿಗೆಗಳು ಕುರಿ ದೊಡ್ಡಿಯಾಗುತ್ತಿದೆ. ಇಷ್ಟಾದರೂ ಎಚ್ಚೆತ್ತುಕೊಳ್ಳದ ಎಪಿಎಂಸಿ ಆಡಳಿತ ವಿವಿಧ ಕಾರಣ ಹೇಳುತ್ತಿರುವುದರಿಂದ ಸರ್ಕಾರದ ಕೋಟ್ಯಂತರ ರು. ಅನುದಾನ ವ್ಯರ್ಥವಾಗಿದೆ.

ದಲಾಲರಿಗೆ ಸಮಸ್ಯೆ: ತರಕಾರಿ ದಲಾಲರು ಕಾಳುಕಡಿ ಮಾರುಕಟ್ಟೆ ಆವರಣದ ರಸ್ತೆ ಮಧ್ಯೆಯೇ ದಿನನಿತ್ಯ ಕಾಯಿಪಲ್ಲೆ ಹರಾಜು ಮಾಡುವ ಪರಿಸ್ಥಿತಿಯಿದೆ. ಈ ಮಳಿಗೆಗಳನ್ನು ನೀಡಿದರೆ ಯಾವ ತೊಂದರೆಯೂ ಇಲ್ಲದೇ ತರಕಾರಿ ಹರಾಜು ಪ್ರಕ್ರಿಯೆಗೆ ಅನುಕೂಲವಾಗಲಿದೆ. ಅಲ್ಲದೇ ಕಾಳುಕಡಿ ಮಾರುಕಟ್ಟೆ ಪ್ರಾಂಗಣದ ರಸ್ತೆಯೂ ತೆರವಾಗುತ್ತದೆ. ಆದರೆ, ಎಪಿಎಂಸಿ ಆಡಳಿತದ ನಿರ್ಲಕ್ಷ್ಯದಿಂದ ದಲಾಲರಿಗೆ ಸಮಸ್ಯೆಯಾಗಿದೆ.

ಮಳಿಗೆಗಳಿಗೆ ಹೆಚ್ಚಿನ ದರ ನಿಗದಿ ಮಾಡಿದ ಹಿನ್ನೆಲೆಯಲ್ಲಿ ಈ ಹಿಂದೆ ಕರೆದಿದ್ದ ಟೆಂಡರ್‌ನಲ್ಲಿ ಯಾರೂ ಭಾಗವಹಿಸುತ್ತಿಲ್ಲ. ದರ ಕಡಿಮೆ ಮಾಡಿ ಅಂಗಡಿಗಳನ್ನು ನೀಡಬೇಕು ಎಂಬುದು ವ್ಯಾಪಾರಸ್ಥರ ಮನವಿಯಾಗಿದೆ. ಎಪಿಎಂಸಿಯಿಂದ ವಾಣಿಜ್ಯ ಮಳಿಗೆ ನಿರ್ಮಾಣವಾಗಿ ಹಂಚಿಕೆಯಾಗಬೇಕಿತ್ತು. ಎಪಿಎಂಸಿ ಆಡಳಿತ ಮಂಡಳಿ ಕಳೆದ ಒಂದೂವರೆ ವರ್ಷದಿಂದ ಮಳಿಗೆಗನ್ನು ಹಂಚಿಕೆ ಮಾಡಿಲ್ಲ. ಇದರಿಂದ ಮಳಿಗೆಗಳು ಹಾಳು ಬೀಳುತ್ತಿವೆ. ಆದಷ್ಟು ಬೇಗ ವ್ಯಾಪಾರಸ್ಥರಿಗೆ ಹಂಚಿಕೆ ಮಾಡದಿದ್ದರೆ ಕೋಟ್ಯಂತರ ರು. ವ್ಯರ್ಥವಾಗಲಿದೆ. ಇದಕ್ಕೆ ಕಾರಣರಾಗುವ ಅಧಿಕಾರಿಗಳಿಂದಲೇ ಆ ಹಣ ವಸೂಲಿ ಮಾಡಬೇಕೆಂದು ಹೋರಾಟ ಮಾಡಬೇಕಾಗುತ್ತದೆ ಎಂದು ಸಾಮಾಜಿಕ ಕಾರ್ಯಕರ್ತ ಸತೀಶ ಮಡಿವಾಳರ ಹೇಳಿದರು.

ಜಾನುವಾರು ಮಾರುಕಟ್ಟೆ ಪ್ರಾಂಗಣದಲ್ಲಿ ನಿರ್ಮಿಸಿರುವ ಮಳಿಗೆಗಳನ್ನು ಹಂಚಿಕೆ ಮಾಡುವ ಸಂಬಂಧ ಮತ್ತೊಮ್ಮೆ ಟೆಂಡರ್‌ ಕರೆಯಲಾಗಿದೆ. ಪರವಾನಗಿ ಪಡೆದ ತರಕಾರಿ ವ್ಯಾಪಾರಸ್ಥರು ಟೆಂಡರ್‌ ಹಾಕಬಹುದಾಗಿದ್ದು, ಜು. 15ರ ವರೆಗೆ ಅವಕಾಶವಿದೆ. ಆದಷ್ಟು ಬೇಗ ಪ್ರಕ್ರಿಯೆ ಪೂರ್ಣಗೊಳಿಸಿ ಹಂಚಿಕೆ ಮಾಡಲಾಗುವುದು ಎಂದು ಹಾವೇರಿ ಎಪಿಎಂಸಿ ಕಾರ್ಯದರ್ಶಿ ಜಿ.ಬಿ. ಕಬ್ಬೇರಹಳ್ಳಿ ಹೇಳಿದರು.