ಹಾವೇರಿ ಸಮಾವೇಶದಲ್ಲಿ 1.06 ಲಕ್ಷ ಜನರಿಗೆ ಕಂದಾಯ ಭೂಮಿಯ ಮಾಲೀಕತ್ವದ ಹಕ್ಕುಪತ್ರ ನೀಡುತ್ತಿದ್ದೇವೆ. ಹಿಂದಿನ 6 ವರ್ಷಗಳಲ್ಲಿ 1.10 ಲಕ್ಷ ಜನರಿಗೆ ಹೊಸಪೇಟೆಯಲ್ಲಿ ಹಕ್ಕುಪತ್ರ ನೀಡಲಾಗಿತ್ತು. ನಾವು ಅಧಿಕಾರಕ್ಕೆ ಬಂದು ಎರಡೂವರೆ ವರ್ಷಗಳಲ್ಲಿ ಒಟ್ಟಾರೆ 2.20 ಲಕ್ಷ ಜನರಿಗೆ ಹಕ್ಕುಪತ್ರ ನೀಡಲಾಗುತ್ತಿದೆ.
ಹುಬ್ಬಳ್ಳಿ:
ಹಾವೇರಿಯಲ್ಲಿ ಶನಿವಾರ ಆಯೋಜಿಸಿರುವ ಭೂ ಗ್ಯಾರಂಟಿ ಸಮರ್ಪಣಾ ಸಮಾವೇಶವು ಯಾವುದೇ ಶಕ್ತಿ ಪ್ರದರ್ಶನವಲ್ಲ, ಸಾವಿರ ದಿನಗಳಲ್ಲಿ ಸರ್ಕಾರ ಮಾಡಿರುವ ಕೆಲಸದ ಲೆಕ್ಕ ಕೊಡುವ ಕಾರ್ಯಕ್ರಮ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದರು.ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ಹಾವೇರಿ ಸಮಾವೇಶದಲ್ಲಿ 1.06 ಲಕ್ಷ ಜನರಿಗೆ ಕಂದಾಯ ಭೂಮಿಯ ಮಾಲೀಕತ್ವದ ಹಕ್ಕುಪತ್ರ ನೀಡುತ್ತಿದ್ದೇವೆ. ಹಿಂದಿನ 6 ವರ್ಷಗಳಲ್ಲಿ 1.10 ಲಕ್ಷ ಜನರಿಗೆ ಹೊಸಪೇಟೆಯಲ್ಲಿ ಹಕ್ಕುಪತ್ರ ನೀಡಲಾಗಿತ್ತು. ನಾವು ಅಧಿಕಾರಕ್ಕೆ ಬಂದು ಎರಡೂವರೆ ವರ್ಷಗಳಲ್ಲಿ ಒಟ್ಟಾರೆ 2.20 ಲಕ್ಷ ಜನರಿಗೆ ಹಕ್ಕುಪತ್ರ ನೀಡಲಾಗುತ್ತಿದೆ. ಇನ್ನು 1.39 ಲಕ್ಷ ಜನರಿಗೆ ಹಕ್ಕು ಪತ್ರ ನೀಡುವುದು ಬಾಕಿ ಇದೆ ಎಂದರು.
ಕೇಂದ್ರ ಸರ್ಕಾರ ಜನಗಣತಿ ಪ್ರಕ್ರಿಯೆ ಆರಂಭಿಸುತ್ತಿರುವುದರಿಂದ ಡಿಸೆಂಬರ್ 2025ರ ಬಳಿಕ ಕಂದಾಯ ಗ್ರಾಮ ಘೋಷಣೆ ಮಾಡಬಾರದು ಎಂದು ಹೇಳಿದೆ. ಆದರೂ ನಾವು ಪ್ರಸ್ತಾವನೆಗಳನ್ನು ಸಿದ್ಧಪಡಿಸಲು ಅಧಿಕಾರಿಗಳಿಗೆ ಸೂಚಿಸಿದ್ದೇವೆ. ಕೇಂದ್ರ ಸರ್ಕಾರದಿಂದ ಸೂಚನೆ ಬಂದ ಬಳಿಕ ಬಾಕಿ ಉಳಿದಿರುವ ಕಂದಾಯ ಗ್ರಾಮಗಳನ್ನು ಘೋಷಣೆ ಮಾಡಿ ಹಕ್ಕುಪತ್ರ ವಿತರಿಸಲು ಕ್ರಮಕೈಗೊಳ್ಳಲಾಗುದು ಎಂದು ಹೇಳಿದರು.6500 ದಾಖಲೆ ರಹಿತ ವಸತಿ ಪ್ರದೇಶವನ್ನು ಗುರುತಿಸಲಾಗಿದೆ. ಕಳೆದ 6 ವರ್ಷಗಳ ಹಿಂದೆ 1557 ಕಂದಾಯ ಗ್ರಾಮಗಳನ್ನು ಘೋಷಿಸಲಾಗಿದೆ. ಬಾಕಿ ಇರುವ 5 ಸಾವಿರ ವಸತಿ ಪ್ರದೇಶಗಳನ್ನು ಕಂದಾಯ ಗ್ರಾಮ ಎಂದು ಘೋಷಿಸುವ ಕಾರ್ಯ ಪ್ರಗತಿಯಲ್ಲಿದೆ. ಇದರಲ್ಲಿ ಯಾರಿಂದಲೂ ಅರ್ಜಿ ಪಡೆಯದೇ, ಜನರನ್ನು ಅಲೆದಾಡಿಸದೇ, ಜನರ ಮನೆಬಾಗಿಲೆಗೇ ಹೋಗಿ ಕೆಲಸ ಮಾಡಿರುವುದು ಉತ್ತಮ ಆಡಳಿತಕ್ಕೆ ಹಿಡಿದ ಕೈಗನ್ನಡಿ ಎಂದರು.
ಪಕ್ಷದಲ್ಲಿ ಯಾವುದೇ ಗೊಂದಲವಿಲ್ಲ:ನಮ್ಮ ಕೆಲಸಗಳನ್ನು ಜನರಿಗೆ ತಿಳಿಹೇಳಬೇಕು. ಅಂದಾಗ ಆಡಳಿತದಲ್ಲಿ ಪಾರದರ್ಶಕತೆ ಬರಲಿದೆ. ಹೀಗಾಗಿ ಹಾವೇರಿಯಲ್ಲಿ ಡಿಜಿಟಲ್ ಹಕ್ಕುಪತ್ರ ನೀಡುತ್ತಿದ್ದೇವೆ. ಇದು ರಾಜಕೀಯ ಶಕ್ತಿ ಪ್ರದರ್ಶನ ಅಲ್ಲ. ಸಾವಿರ ದಿನಗಳ ಸಾರ್ಥಕ ಸೇವೆಯನ್ನು ಜನರಿಗೆ ಸಮರ್ಪಣೆ ಮಾಡುತ್ತಿದ್ದೇವೆ. ಕಾರ್ಯಕ್ರಮಕ್ಕೆ ಉಪ ಮುಖ್ಯಮಂತ್ರಿ ಬರುತ್ತಾರೊ ಇಲ್ಲವೋ ಎಂಬುದನ್ನು ಕಾದು ನೋಡಿ ಎಂದಿರುವ ಕೃಷ್ಣ ಬೈರೇಗೌಡ, ಪಕ್ಷದಲ್ಲಿ ಯಾವುದೇ ಗೊಂದಲ ಇಲ್ಲ. ಕುರ್ಚಿಯಲ್ಲಿ ಕುಳಿತಿದ್ದೇವೆ. ಗೊಂದಲಗಳಿಲ್ಲದೇ ಜನ ಸೇವೆ ಮಾಡುತ್ತಿದ್ದೇವೆ. ರಾಜಕೀಯದಲ್ಲಿ ಇದ್ದ ಮೇಲೆ ರಾಜಕೀಯ ಮಾಡಲೇಬೇಕು. ನಾವು ಸನ್ಯಾಸಿಗಳಲ್ಲ. ಆದರೆ, ಅಭಿವೃದ್ಧಿ ಕಾರ್ಯಗಳಲ್ಲಿ ರಾಜಕಾರಣ ಮಾಡುವ ಪ್ರಮೇಯ ನಮಗಿಲ್ಲ ಎಂದು ಸ್ಪಷ್ಟಪಡಿಸಿದರು.