ಹಾವೇರಿ ಲೋಕಸಭಾ ಕ್ಷೇತ್ರದ ಅಖಾಡ ರೆಡಿ

| Published : Mar 14 2024, 02:00 AM IST

ಸಾರಾಂಶ

ತೀವ್ರ ಕುತೂಹಲ ಕೆರಳಿಸಿದ್ದ ಹಾವೇರಿ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್‌ ಘೋಷಣೆಯಾಗಿದ್ದು, ಮಾಜಿ ಮುಖ್ಯಮಂತ್ರಿ, ಶಿಗ್ಗಾಂವಿ ಶಾಸಕ ಬಸವರಾಜ ಬೊಮ್ಮಾಯಿ ಟಿಕೆಟ್‌ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ನಾರಾಯಣ ಹೆಗಡೆ

ಹಾವೇರಿ: ತೀವ್ರ ಕುತೂಹಲ ಕೆರಳಿಸಿದ್ದ ಹಾವೇರಿ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್‌ ಘೋಷಣೆಯಾಗಿದ್ದು, ಮಾಜಿ ಮುಖ್ಯಮಂತ್ರಿ, ಶಿಗ್ಗಾಂವಿ ಶಾಸಕ ಬಸವರಾಜ ಬೊಮ್ಮಾಯಿ ಟಿಕೆಟ್‌ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಕಾಂಗ್ರೆಸ್‌ನಿಂದ ಈಗಾಗಲೇ ಆನಂದ ಗಡ್ಡದೇವರಮಠ ಅವರಿಗೆ ಟಿಕೆಟ್‌ ನೀಡಲಾಗಿದ್ದು, ಕ್ಷೇತ್ರವು ರಾಜಕೀಯ ಹಣಾಹಣಿಗೆ ಸಾಕ್ಷಿಯಾಗುವುದು ನಿಶ್ಚಿತವಾಗಿದೆ.

ಕ್ಷೇತ್ರದಿಂದ ಹ್ಯಾಟ್ರಿಕ್‌ ಗೆಲುವು ಸಾಧಿಸಿದ್ದ ಶಿವಕುಮಾರ ಉದಾಸಿ ವರ್ಷದ ಹಿಂದೆಯೇ ರಾಜಕೀಯ ನಿವೃತ್ತಿ ಘೋಷಣೆ ಮಾಡಿದ್ದರಿಂದ ಬಿಜೆಪಿ ಟಿಕೆಟ್‌ಗಾಗಿ ಪೈಪೋಟಿ ನಡೆದಿತ್ತು. ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಪುತ್ರ ಕೆ.ಇ. ಕಾಂತೇಶ, ಮಾಜಿ ಸಚಿವ ಬಿ.ಸಿ. ಪಾಟೀಲ ಸೇರಿದಂತೆ 20ಕ್ಕೂ ಹೆಚ್ಚು ಆಕಾಂಕ್ಷಿಗಳು ಟಿಕೆಟ್‌ಗಾಗಿ ಪ್ರಯತ್ನಿಸಿದ್ದರು. ಜಗದೀಶ ಶೆಟ್ಟರ್ ಹೆಸರು ಕೂಡ ಇತ್ತೀಚೆಗೆ ಚಾಲ್ತಿಗೆ ಬಂದಿತ್ತು. ಆದರೆ, ಅಳೆದು ತೂಗಿ ಬಿಜೆಪಿ ಹೈಕಮಾಂಡ್‌ ಬಸವರಾಜ ಬೊಮ್ಮಾಯಿ ಹೆಸರನ್ನು ಘೋಷಿಸಿದೆ. ಇದರೊಂದಿಗೆ ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಅಖಾಡ ಸಿದ್ಧಗೊಂಡಂತಾಗಿದೆ.

ಕೇಂದ್ರದತ್ತ ಬೊಮ್ಮಾಯಿ: ಬಸವರಾಜ ಬೊಮ್ಮಾಯಿ ಅವರು ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿಯಿಂದ ನಾಲ್ಕು ಬಾರಿ ಗೆಲುವು ಸಾಧಿಸಿದ್ದಾರೆ. 2023ರಲ್ಲಿ ನಡೆದ ಚುನಾವಣೆಯಲ್ಲಿ ಗೆದ್ದು ಸದ್ಯ ಕ್ಷೇತ್ರದ ಶಾಸಕರಾಗಿದ್ದಾರೆ. ರಾಜಕೀಯದಲ್ಲಿ ಏರುಗತಿಯಲ್ಲೇ ಸಾಗಿರುವ ಅವರು, ಈ ಹಿಂದೆ ಜನತಾ ಪರಿವಾರದಿಂದ ಎರಡು ಬಾರಿ ವಿಧಾನಪರಿಷತ್‌ ಸದಸ್ಯರಾಗಿ ರಾಜಕೀಯ ಅನುಭವ ಗಳಿಸಿದ್ದರು. 2008ರಲ್ಲಿ ಬಿಜೆಪಿ ಸೇರಿದರು. ಅಲ್ಲಿಂದ ನಡೆದ ನಾಲ್ಕು ಚುನಾವಣೆಗಳಲ್ಲಿ ಸತತ ಗೆಲುವು ಸಾಧಿಸಿದ್ದಾರೆ. 2008ರಲ್ಲಿ ಜಲಸಂಪನ್ಮೂಲ ಸಚಿವರಾಗಿ, 2019ರಲ್ಲಿ ಗೃಹ ಸಚಿವರಾಗಿದ್ದ ಅವರು, ಯಡಿಯೂರಪ್ಪ ನಿವೃತ್ತಿಯಾದ ಬಳಿಕ 2021ರ ಜು. 27ರಂದು ರಾಜ್ಯದ 23ನೇ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು. ಒಂದೂವರೆ ವರ್ಷಗಳ ಕಾಲ ಸಿಎಂ ಆಗಿ ಅಧಿಕಾರ ನಡೆಸಿ, ಈಗ ಕೇಂದ್ರ ರಾಜಕಾರಣದತ್ತ ಮುಖ ಮಾಡಿದ್ದಾರೆ.

ಬೊಮ್ಮಾಯಿ- ಗಡ್ಡದೇವರಮಠ: ಬಿಜೆಪಿ ಮತ್ತು ಕಾಂಗ್ರೆಸ್‌ ಎರಡೂ ಪಕ್ಷಗಳು ಅಭ್ಯರ್ಥಿಗಳ ಹೆಸರನ್ನು ಫೈನಲ್‌ ಮಾಡಿರುವುದರಿಂದ ಮೊದಲ ಹಂತದ ಅಖಾಡ ಸಜ್ಜುಗೊಂಡಂತಾಗಿದೆ. ರಾಜಕಾರಣದಲ್ಲಿ ಹಳೆ ಹುಲಿ ಎನಿಸಿರುವ ಬೊಮ್ಮಾಯಿ ಸ್ಪರ್ಧಿಸುತ್ತಿದ್ದರೆ, ಕಾಂಗ್ರೆಸ್‌ ಈ ಸಲ ಯುವಕರಾಗಿರುವ ಆನಂದ ಗಡ್ಡದೇವರಮಠ ಅವರಿಗೆ ಅವಕಾಶ ನೀಡಿದೆ.

ಜಾತಿ ಲೆಕ್ಕಾಚಾರದಿಂದ ವೀರಶೈವ ಲಿಂಗಾಯತ ಸಮುದಾಯಕ್ಕೆ ಸೇರಿದ ಗಡ್ಡದೇವರಮಠ ಅವರಿಗೆ ಕಾಂಗ್ರೆಸ್‌ ಮಣೆ ಹಾಕಿದ್ದರೆ, ಅದಕ್ಕೆ ಪ್ರತಿತಂತ್ರವಾಗಿ ಬಿಜೆಪಿ ಕೂಡ ಲಿಂಗಾಯತ ಸಮಾಜದವರೇ ಆಗಿರುವ ಬೊಮ್ಮಾಯಿ ಅವರನ್ನು ಕಣಕ್ಕಿಳಿಸಿದೆ. ಕ್ಷೇತ್ರದಲ್ಲಿ ಜಾತಿ ಲೆಕ್ಕಾಚಾರ ಕೆಲಸ ಮಾಡಲಿದೆ. ಆಡಳಿತಾರೂಢ ಕಾಂಗ್ರೆಸ್‌ ಗ್ಯಾರಂಟಿ ಯೋಜನೆ ಲಾಭ, ಅಲ್ಪಸಂಖ್ಯಾತರ ವೋಟ್‌ ನೆಚ್ಚಿಕೊಂಡಿದ್ದರೆ, ಬಿಜೆಪಿ ಮೋದಿ ಅಲೆ ನೆಚ್ಚಿಕೊಂಡಿದೆ. ಜತೆಗೆ, ಸಿಎಂ ಆಗಿದ್ದಾಗ ಮಾಡಿದ ಅಭಿವೃದ್ಧಿ ಕಾರ್ಯಗಳು ಕೈಹಿಡಿಯಲಿವೆ ಎಂಬ ನಂಬಿಕೆಯಲ್ಲಿ ಬೊಮ್ಮಾಯಿ ಇದ್ದಾರೆ. ಇದರಿಂದ ಕ್ಷೇತ್ರದಲ್ಲಿ ಲೋಕಸಭಾ ಚುನಾವಣೆ ರಂಗೇರುವುದು ನಿಶ್ಚಿತವಾಗಿದೆ. ಪುತ್ರನಿಗಾಗಿ ಕೇಂದ್ರದತ್ತ ಬೊಮ್ಮಾಯಿ?: ಸದ್ಯ ಶಿಗ್ಗಾಂವಿ ಕ್ಷೇತ್ರದ ಶಾಸಕರಾಗಿರುವ ಬಸವರಾಜ ಬೊಮ್ಮಾಯಿ ಲೋಕಸಭೆ ಚುನಾವಣೆಯಲ್ಲಿ ಗೆದ್ದರೆ ಶಿಗ್ಗಾಂವಿ ಕ್ಷೇತ್ರಕ್ಕೆ ಉಪಚುನಾವಣೆ ನಡೆಯಲಿದೆ. ಮಗನ ರಾಜಕೀಯ ಭವಿಷ್ಯಕ್ಕಾಗಿಯೂ ಬೊಮ್ಮಾಯಿ ಕೇಂದ್ರದತ್ತ ಮುಖ ಮಾಡಿದ್ದಾರೆ ಎನ್ನಲಾಗುತ್ತಿದೆ. ಆಗ ಶಿಗ್ಗಾಂವಿ ಕ್ಷೇತ್ರದಿಂದ ಪುತ್ರ ಭರತ್‌ ಬೊಮ್ಮಾಯಿ ಅವರನ್ನು ನಿಲ್ಲಿಸಿ ಗೆಲ್ಲಿಸುವುದು ಬೊಮ್ಮಾಯಿ ಅವರ ಯೋಜನೆಯಾಗಿದೆ ಎಂದು ಹೇಳಲಾಗುತ್ತಿದೆ. ಟಿಕೆಟ್‌ ನಿರೀಕ್ಷೆಯಲ್ಲಿದ್ದವರಿಗೆ ಆಘಾತ: ಬಿಜೆಪಿ ಟಿಕೆಟ್‌ಗಾಗಿ ಹಲವು ಆಕಾಂಕ್ಷಿಗಳು ಕಳೆದ ಕೆಲವು ತಿಂಗಳಿಂದಲೇ ಪ್ರಯತ್ನ ನಡೆಸಿದ್ದರು. ಅವರಲ್ಲಿ ಈಶ್ವರಪ್ಪ ಪುತ್ರ ಕಾಂತೇಶ್ ಕ್ಷೇತ್ರಾದ್ಯಂತ ಸಂಚರಿಸುತ್ತ ಒಂದು ಹಂತದಲ್ಲಿ ಪ್ರಚಾರ ಮುಗಿಸಿದ್ದರು. ಟಿಕೆಟ್‌ ಸಿಗುವ ಭಾರಿ ನಿರೀಕ್ಷೆಯಲ್ಲಿ ಅಪ್ಪ, ಮಗ ಇಬ್ಬರೂ ಕ್ಷೇತ್ರದಲ್ಲಿ ಓಡಾಡುತ್ತಿದ್ದರು. ಮಾಜಿ ಸಚಿವ ಬಿ.ಸಿ. ಪಾಟೀಲ, ಸಿದ್ದರಾಜ ಕಲಕೋಟಿ, ಮಹೇಶ ನಾಲವಾಡ, ಶರಣಬಸವ ಅಂಗಡಿ ಸೇರಿದಂತೆ 20ಕ್ಕೂ ಹೆಚ್ಚು ಆಕಾಂಕ್ಷಿಗಳು ಟಿಕೆಟ್‌ಗಾಗಿ ಪ್ರಯತ್ನಿಸಿದ್ದರು. ಆದರೆ, ಬೊಮ್ಮಾಯಿಗೆ ಟಿಕೆಟ್‌ ನೀಡಿರುವುದು ಪ್ರಬಲ ಆಕಾಂಕ್ಷಿಗಳಿಗೆ ನಿರಾಸೆಯಾಗಿದೆ. ತೀವ್ರ ಪೈಪೋಟಿ ನಡೆಸಿದ್ದ ಈಶ್ವರಪ್ಪ ಪುತ್ರ ಕಾಂತೇಶ್‌ಗೆ ಟಿಕೆಟ್‌ ಕೈತಪ್ಪಿರುವುದು ಆಘಾತ ತಂದಿಟ್ಟಿದೆ. ಕ್ಷೇತ್ರದ ಟಿಕೆಟ್‌ ಘೋಷಣೆಯಾದ ಬಗ್ಗೆ ಮಾಜಿ ಸಚಿವ ಬಿ.ಸಿ. ಪಾಟೀಲ ಅವರು ಪ್ರತಿಕ್ರಿಯಿಸಲು ನಿರಾಕರಿಸಿದರು. ಆಕಾಂಕ್ಷಿಯಲ್ಲ ಎನ್ನುತ್ತಿದ್ದ ಬೊಮ್ಮಾಯಿ: ಕಳೆದ ಕೆಲವು ತಿಂಗಳಿಂದ ಹಾವೇರಿ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದ ಬಸವರಾಜ ಬೊಮ್ಮಾಯಿ ವಾರದ ಹಿಂದಿನವರೆಗೂ ತಾನು ಟಿಕೆಟ್‌ ಆಕಾಂಕ್ಷಿಯಲ್ಲ ಎನ್ನುತ್ತಲೇ ಬಂದಿದ್ದರು. ಆದರೆ, ದೆಹಲಿ ಹೈಕಮಾಂಡ್‌ ಮಟ್ಟದಲ್ಲಿ ಪ್ರಯತ್ನ ನಡೆಸುತ್ತಲೇ ಬಂದಿದ್ದರು. ಈಗ ಅಧಿಕೃತವಾಗಿ ಟಿಕೆಟ್‌ ಘೋಷಣೆಯಾಗಿರುವುದರಿಂದ ಅಭ್ಯರ್ಥಿ ಯಾರು ಎಂಬ ಚರ್ಚೆಗೆ ತೆರೆ ಎಳೆದಂತಾಗಿದೆ. ಇನ್ನು ಮತದಾರರ ಓಲೈಕೆ, ಪ್ರಚಾರದ ಅಬ್ಬರ ಶುರುವಾಗಲಿದೆ.