ಸಾರಾಂಶ
ಹಾವೇರಿ: ಇಲ್ಲಿನ ನಗರಸಭೆಗೆ 2025- 26ನೇ ಸಾಲಿಗಾಗಿ ₹5.61 ಲಕ್ಷ ಉಳಿತಾಯ ಬಜೆಟ್‌ಅನ್ನು ಅಧ್ಯಕ್ಷೆ ಶಶಿಕಲಾ ಮಾಳಗಿ ಶುಕ್ರವಾರ ಮಂಡಿಸಿದರು.
ಇಲ್ಲಿಯ ನಗರಸಭೆ ಸಭಾಂಗಣದಲ್ಲಿ ಶುಕ್ರವಾರ ಕರೆದ ಬಜೆಟ್ ಸಭೆಯಲ್ಲಿ ಆಯವ್ಯಯ ಮಂಡಿಸಿದರು. ಕುಡಿಯುವ ನೀರು, ಸ್ವಚ್ಛತೆ ಸೇರಿದಂತೆ ಅಗತ್ಯ ಮೂಲ ಸೌಕರ್ಯಗಳನ್ನು ಒದಗಿಸುವ ಪ್ರಾಮಾಣಿಕ ಪ್ರಯತ್ನದೊಂದಿಗೆ ನಗರದ ಸರ್ವತೋಮುಖ ಅಭಿವೃದ್ಧಿಗಾಗಿ ಪ್ರಯತ್ನಿಸುವುದಾಗಿ ಹೇಳಿದರು. ಆದಾಯದ ಮೂಲ: ಹಾವೇರಿ ನಗರಸಭೆ ಸ್ವಂತ ಮೂಲಗಳಾದ ಆಸ್ತಿ ತೆರಿಗೆ, ನೀರಿನ ಕರ, ಅಭಿವೃದ್ಧಿ ಕರ, ಮಳಿಗೆ ಬಾಡಿಗೆ ಹಾಗೂ ಇತರೆ ಶುಲ್ಕಗಳಿಂದ ಒಟ್ಟು ₹12.36 ಕೋಟಿ ಆದಾಯವನ್ನು ನಿರೀಕ್ಷಿಸಲಾಗಿದೆ. ಸರ್ಕಾರದಿಂದ ಬಿಡುಗಡೆಯಾಗುವ ನಿರೀಕ್ಷಿತ ಅನುದಾನ ಎಸ್‌ಎಫ್‌ಸಿ ಮುಕ್ತ ನಿಧಿ ₹375 ಲಕ್ಷ, ಎಸ್‌ಎಫ್‌ಸಿ ವಿದ್ಯುತ್ ಅನುದಾನ ₹545 ಲಕ್ಷ, ಎಸ್‌ಎಫ್‌ಸಿ ವೇತನ ಅನುದಾನ ₹525 ಲಕ್ಷ, ಕೇಂದ್ರ ಸರ್ಕಾರದ 15ನೇ ಹಣಕಾಸು ಯೋಜನೆಯಡಿ ₹575 ಲಕ್ಷ, ಎಸ್‌ಎಫ್‌ಸಿ ಕುಡಿಯುವ ನೀರಿಗೆ ₹25 ಲಕ್ಷ, ಅಮೃತ(2.0) ನಗರ ಯೋಜನೆಗೆ ₹25 ಲಕ್ಷ, ಸ್ವಚ್ಛ ಭಾರತ ಯೋಜನಗೆ ₹75 ಲಕ್ಷ, ಬೀದಿ ವ್ಯಾಪಾರಸ್ಥರಿಗೆ ವೆಂಡಿಂಗ್ ಜೋನ್ ನಿರ್ಮಿಸಲು ಡೇ- ನಲ್ಮ್ ಯೋಜನೆಗೆ ₹30 ಲಕ್ಷ ಅನುದಾನ ನಿರೀಕ್ಷಿಸಲಾಗಿದೆ ಎಂದರು.ಆದ್ಯತಾ ವಲಯ?: ಪ್ರತಿ ವಾರ್ಡ್‌ನಲ್ಲೂ ರಸ್ತೆ, ಚರಂಡಿ ದುರಸ್ತಿ ಜತೆಗೆ ನಿರ್ಮಾಣಕ್ಕೆ ₹375 ಲಕ್ಷ, ಕುಡಿಯುವ ನೀರು ಸಮರ್ಪಕ ಸರಬರಾಜಿಗೆ ಈಗಾಗಲೇ 24x7 ಕಾಮಗಾರಿ ಪ್ರಗತಿಯಲ್ಲಿದ್ದು, ನೀರು ಸರಬರಾಜು ನಿರ್ವಹಣೆ, ವಾಲ್‌ಮೆನ್ ವೇತನ ನಿರ್ವಹಣೆ ಸೇರಿದಂತೆ ಒಟ್ಟು ₹116 ಲಕ್ಷ ಮೀಸಲಿರಿಸಿದೆ. ವಿವಿಧ ಬಡಾವಣೆಗಳಲ್ಲಿ ಬೀದಿದೀಪಗಳ ವ್ಯವಸ್ಥೆ ಕಲ್ಪಿಸಲು, ವಾರ್ಷಿಕ ನಿರ್ವಹಣೆ ಹಾಗೂ ಇತರೆ ವೆಚ್ಚಕ್ಕೆ ₹115 ಲಕ್ಷ, ಸಾರ್ವಜನಿಕ ಶೌಚಾಲಯ ನಿರ್ಮಾಣ, ದುರಸ್ತಿ ಹಾಗೂ ನಿರ್ವಹಣೆಗೆ ₹25 ಲಕ್ಷ, ಘನತ್ಯಾಜ್ಯ ವಸ್ತು ನಿರ್ವಹಣೆಗೆ ಲ್ಯಾಂಡ್‌ಫಿಲ್ ಸೈಟ್ ಅಭಿವೃದ್ಧಿಗೆ ₹50 ಲಕ್ಷ ಮೀಸಲಿರಿಸಲಾಗಿದೆ. ನಗರಸಭೆ ಹೈಸ್ಕೂಲ್ ಅಭಿವೃದ್ಧಿಗೆ ₹5 ಲಕ್ಷ, ಉದ್ಯಾನವನ ಹಾಗೂ ಕೆರೆಗಳ ಅಭಿವೃದ್ಧಿಗೆ ₹95 ಲಕ್ಷ, ಬೆಳೆಯುತ್ತಿರುವ ಜನಸಂಖ್ಯೆಯಿಂದಾಗಿ ಘನತ್ಯಾಜ್ಯ ಉತ್ಪಾದನೆ ದಿನೇ ದಿನೇ ಹೆಚ್ಚಾಗುತ್ತಿದ್ದು, ವೈಜ್ಞಾನಿಕ ಕಸ ವಿಲೇವಾರಿಗಾಗಿ ಎಲ್ಲ 31 ವಾರ್ಡುಗಳ ವ್ಯಾಪ್ತಿಯಲ್ಲಿ ಶೇ. 100ರಷ್ಟು ಘನತ್ಯಾಜ್ಯ ನಿರ್ವಹಣೆ, ಕಾರ್ಮಿಕರ ವೇತನ, ಚಾಲಕರ ವೇತನ, ಇಂಧನ, ಉಪಹಾರ ಭತ್ಯೆ, ವಾಹನಗಳ ದುರಸ್ತಿ ಹೀಗೆ ₹375 ಲಕ್ಷ, ಮಳೆನೀರು ಚರಂಡಿ ನಿರ್ಮಾಣಕ್ಕೆ ₹30 ಲಕ್ಷ, ವಿವಿಧ ಸ್ಥಳಗಳಲ್ಲಿ ವಾಣಿಜ್ಯ ಮಳಿಗೆ ನಿರ್ಮಾಣಕ್ಕೆ ₹250 ಲಕ್ಷ, ಕಚೇರಿ ಕಟ್ಟಡಕ್ಕೆ ಸೋಲಾರ್ ವ್ಯವಸ್ಥೆ ಕಲ್ಪಿಸಲು ₹20 ಲಕ್ಷ, ಸ್ಮಶಾನ ಅಭಿವೃದ್ಧಿ ಮತ್ತು ವಿದ್ಯುತ್ ಚಿತಾಗಾರಕ್ಕೆ ₹25 ಲಕ್ಷ ಅನುದಾನ ಮೀಸಲಿರಿಸಲಾಗಿದೆ. ಇನ್ನುಳಿದಂತೆ ಸದಸ್ಯರು ಹಾಗೂ ಸಾರ್ವಜನಿಕರ ಬೇಡಿಕೆಗೆ ಅನುಗುಣವಾಗಿ ಕಾಮಗಾರಿ ಕೈಗೆತ್ತಿಕೊಳ್ಳಲು ಅಗತ್ಯ ಅನುದಾನ ಮೀಸಲಿರಿಸಲಾಗಿದೆ ಎಂದರು.ನಗರಸಭೆ ಉಪಾಧ್ಯಕ್ಷ ಮಲ್ಲಿಕಾರ್ಜುನ ಸಾತೇನಹಳ್ಳಿ, ನಗರಸಭೆ ಪ್ರಭಾರ ಪೌರಾಯುಕ್ತ ಹಾಗೂ ಉಪ ವಿಭಾಗಾಕಾರಿ ಎಚ್.ಬಿ. ಚೆನ್ನಪ್ಪ ಸೇರಿದಂತೆ ನಗರಸಭೆಯ ಸದಸ್ಯರು ಉಪಸ್ಥಿತರಿದ್ದರು. ಕಾರ್ಯಕ್ರಮಕ್ಕೆ ಆಹ್ವಾನಿಸಿಲ್ಲವೆಂದು ಆಕ್ರೋಶ
ನಗರಸಭೆ ಹಿಂಭಾಗದಲ್ಲಿ ಸಭಾಂಗಣ ನಿರ್ಮಾಣಕ್ಕೆ ಇತ್ತೀಚೆಗೆ ಶಂಕುಸ್ಥಾಪನೆ ನೆರವೇರಿಸಲಾಗಿದೆ. ಆ ಕಾರ್ಯಕ್ರಮಕ್ಕೆ ನಮಗೆ ಆಹ್ವಾನ ನೀಡಿಲ್ಲ. ನಾವು ನಗರಸಭೆ ಸದಸ್ಯರು ಹೌದೋ.. ಅಲ್ಲವೋ ಎಂಬುದನ್ನು ಸ್ಪಷ್ಟಪಡಿಸಿ ಎಂದು ನಗರಸಭೆ ಸದಸ್ಯ ಪೀರಸಾಬ್ ಚೋಪದಾರ ಪ್ರಶ್ನಿಸಿದರು.ಆಗ ಅಧ್ಯಕ್ಷೆ ಶಶಿಕಲಾ ಮಾಳಗಿ ಅವರು, ಎಲ್ಲ ಸದಸ್ಯರಿಗೂ ಮಾಹಿತಿ ನೀಡುವಂತೆ ಅಕಾರಿಗಳಿಗೆ ಸೂಚಿಸಲಾಗಿತ್ತು ಎಂದರು. ಆಗ ಚೋಪದಾರ್ ನಮಗೆ ಯಾರೂ ಕರೆ ಮಾಡಿಲ್ಲ. ನಗರಸಭೆ ಅಧ್ಯಕ್ಷರು, ಉಪಾಧ್ಯಕ್ಷರ ಹಣದಲ್ಲಿ ಸಭಾಂಗಣ ನಿರ್ಮಿಸುವುದಾದರೆ ನಮ್ಮದೇನು ತಕರಾರಿಲ್ಲ ಎಂದು ಏರುಧ್ವನಿಯಲ್ಲಿ ಮಾತನಾಡಿದರು. ಇದರಿಂದ ಕೆರಳಿದ ಶಾಸಕ ರುದ್ರಪ್ಪ ಲಮಾಣಿ, ನಿಮ್ಮ ಮನೆಗೆ ಬಂದು ಕಾಲ ಬಿದ್ದು ಕರೆದುಕೊಂಡು ಬರಬೇಕಿತ್ತಾ?, ಇದು ಯಾರ ಅಪ್ಪನ ಮನೆ ಆಸ್ತಿ ಅಲ್ಲ, ಯಾರ ಸ್ವಂತ ಹಣದಲ್ಲೂ ಕಟ್ಟಡ ಕಟ್ಟುತ್ತಿಲ್ಲ, ನಾನೇ ಆವತ್ತು ಕಾರ್ಯಕ್ರಮ ಮಾಡೋಕೆ ಹೇಳಿದ್ದೆ. ಏನ್ ಮಾಡ್ತಿಯಾ ಈಗ... ನನ್ನ ಮೇಲೆ ಕೇಸ್ ಹಾಕ್ತಿಯಾ.. ಹಾಕು ನೋಡೋಣ.. ಹೆಣ್ಣುಮಗಳು ಅಧ್ಯಕ್ಷರಿದ್ದಾರೆ ಅಂತಾ ಬಾಯಿಗೆ ಬಂದಂತೆ ಮಾತಾಡ್ತಿಯಾ ಎಂದು ಜೋರಾಗಿಯೇ ದಬಾಯಿಸಿದರು.