ಅಧಿಕಾರಾವಧಿ ಮುಕ್ತಾಯದ ವೇಳೆ ಹಾವೇರಿ ನಗರಸಭೆ ವಿಶೇಷ ಸಭೆ, ನಿರ್ಣಯ ಕೈಗೊಳ್ಳದೇ ಅಂತ್ಯ

| Published : Oct 30 2025, 02:00 AM IST

ಅಧಿಕಾರಾವಧಿ ಮುಕ್ತಾಯದ ವೇಳೆ ಹಾವೇರಿ ನಗರಸಭೆ ವಿಶೇಷ ಸಭೆ, ನಿರ್ಣಯ ಕೈಗೊಳ್ಳದೇ ಅಂತ್ಯ
Share this Article
  • FB
  • TW
  • Linkdin
  • Email

ಸಾರಾಂಶ

ವಿಶೇಷ ಸಾಧಾರಣ ಸಭೆಯಲ್ಲಿ ಹಿಂದಿನ ಸಭೆಗಳ ನಡಾವಳಿ ದೃಢೀಕರಣಕ್ಕೆ ಕಾನೂನಿನಲ್ಲಿ ಅವಕಾಶವಿಲ್ಲ ಎಂದು ಸದಸ್ಯರೇ ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಬುಧವಾರ ಹಾವೇರಿ ನಗರಸಭೆ ಸಭಾಂಗಣದಲ್ಲಿ ಕರೆದಿದ್ದ ವಿಶೇಷ ಸಾಧಾರಣ ಸಭೆಯು ಯಾವುದೇ ನಿರ್ಣಯ ಕೈಗೊಳ್ಳದೇ ಅಂತ್ಯಗೊಂಡಿತು.

ಹಾವೇರಿ: ವಿಶೇಷ ಸಾಧಾರಣ ಸಭೆಯಲ್ಲಿ ಹಿಂದಿನ ಸಭೆಗಳ ನಡಾವಳಿ ದೃಢೀಕರಣಕ್ಕೆ ಕಾನೂನಿನಲ್ಲಿ ಅವಕಾಶವಿಲ್ಲ ಎಂದು ಸದಸ್ಯರೇ ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಬುಧವಾರ ಇಲ್ಲಿಯ ನಗರಸಭೆ ಸಭಾಂಗಣದಲ್ಲಿ ಕರೆದಿದ್ದ ವಿಶೇಷ ಸಾಧಾರಣ ಸಭೆಯು ಯಾವುದೇ ನಿರ್ಣಯ ಕೈಗೊಳ್ಳದೇ ಅಂತ್ಯಗೊಂಡಿತು.

ನಗರಸಭೆಯ ಸದ್ಯದ ಆಡಳಿತ ಮಂಡಳಿ ಅಧಿಕಾರ ಅವಧಿ ಗುರುವಾರ ಮುಕ್ತಾಯಗೊಳ್ಳಲಿರುವ ಹಿನ್ನೆಲೆಯಲ್ಲಿ ಶಶಿಕಲಾ ಮಾಳಗಿ ಅಧ್ಯಕ್ಷತೆಯಲ್ಲಿ ಎರಡು ದಿನಗಳ ಹಿಂದಷ್ಟೇ ಸಭೆ ನೋಟಿಸ್‌ ಜಾರಿ ಮಾಡಿ ತರಾತುರಿಯಲ್ಲಿ ವಿಶೇಷ ಸಾಧಾರಣ ಸಭೆ ಕರೆಯಲಾಗಿತ್ತು. ಇದು ಬಹುತೇಕ ಸದಸ್ಯರ ಅಸಮಾಧಾನಕ್ಕೆ ಕಾರಣವಾಗಿತ್ತು. ಆದ್ದರಿಂದ 11 ಗಂಟೆಗೆ ಸಭೆ ಆರಂಭವಾಗಬೇಕಿದ್ದರೂ ಸದಸ್ಯರು ಸಭಾಂಗಣಕ್ಕೆ ಬರದೇ ಗುಂಪು ಗುಂಪಾಗಿ ಚರ್ಚಿಸುತ್ತಲೇ ಕಳೆದರು. ಅಧ್ಯಕ್ಷರು ಬಂದು ಕುಳಿತರೂ ಸದಸ್ಯರು ಸಭೆಗೆ ಬರಲಿಲ್ಲ. ಮಧ್ಯಾಹ್ನ 1 ಗಂಟೆ ವರೆಗೂ ಸಭೆ ನಡೆಯುವುದೇ ಅನುಮಾನ ಎಂಬ ಚರ್ಚೆ ನಡೆದಿತ್ತು. ಬಳಿಕ ಶಾಸಕ ರುದ್ರಪ್ಪ ಲಮಾಣಿ ಅವರು ಮಧ್ಯಾಹ್ನ 1.15ಕ್ಕೆ ಆಗಮಿಸಿದ ಬಳಿಕ ಸದಸ್ಯರು ಅವರನ್ನು ಹಿಂಬಾಲಿಸಿದರು. ಆದರೆ, ಸಭೆಯ ಆರಂಭದಲ್ಲೇ ಸದಸ್ಯ ಐ.ಯು. ಪಠಾಣ ಅವರು ಸಭೆ ಅಜೆಂಡಾದಲ್ಲಿರುವ ವಿಷಯವನ್ನು ವಿಶೇಷ ಸಾಧಾರಣ ಸಭೆಯಲ್ಲಿ ದೃಢೀಕರಣ ಮಾಡಲು ಕಾನೂನಿನಲ್ಲಿ ಅವಕಾಶವಿಲ್ಲ. ಸಾಮಾನ್ಯ ಸಭೆಯಲ್ಲಿ ಮಾತ್ರ ಹಿಂದಿನ ಸಭೆಯ ನಡಾವಳಿ ಅಂಗೀಕರಿಸಬಹುದು. ಈ ಸಭೆಯಲ್ಲಿ ದೃಢೀಕರಣ ಮಾಡಿ ನಂತರ ಜೈಲಿಗೆ ಹೋಗಲು ಇಷ್ಟವಿಲ್ಲ. ಆದ್ದರಿಂದ ಸಭೆಗೆ ಮಾನ್ಯತೆ ಇಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಈ ಬಗ್ಗೆ ಅಧ್ಯಕ್ಷೆ ಶಶಿಕಲಾ ಮಾಳಗಿ ಸ್ಪಷ್ಟನೆ ನೀಡಲು ಮುಂದಾಗಿ, ವಿಶೇಷ ಸಾಧಾರಣ ಸಭೆಯಲ್ಲಿ ದೃಢೀಕರಣಕ್ಕೆ ಅವಕಾಶವಿಲ್ಲ ಎಂದಾಗಲಿ ಅಥವಾ ಮಾಡಬಹುದು ಎಂದಾಗಲಿ ಕಾಯ್ದೆಯಲ್ಲಿ ಇಲ್ಲ ಎಂದು ಪುಸ್ತಕ ತೆರೆದು ಹೇಳಿದರು. ಪೌರಾಯುಕ್ತರೂ ಇದನ್ನೇ ಪುನರುಚ್ಚರಿಸಿದರು. ಬಳಿಕ ವಿಧಾನಸಭೆ ಉಪಾಧ್ಯಕ್ಷರೂ ಆಗಿರುವ ಶಾಸಕ ರುದ್ರಪ್ಪ ಲಮಾಣಿ ಕೂಡ ತಮಗೂ ಈ ಬಗ್ಗೆ ಮಾಹಿತಿಯಿಲ್ಲ ಎಂದು ಹೇಳಿದರು. ಕಾನೂನಿನಲ್ಲಿ ಅವಕಾಶವಿಲ್ಲದಿದ್ದರೆ ಬೇಡ ಎಂದು ನಿರ್ಧರಿಸಿ, ಬೇರೆ ಯಾವುದೇ ನಿರ್ಣಯವಿಲ್ಲದೇ ಸಭೆಯನ್ನು ಅಂತ್ಯಗೊಳಿಸಲಾಯಿತು.

ಸಭೆಗೆ ಬರಲು ಕಾಡಿಸಿದ ಸದಸ್ಯರು: ಸಭೆ ನಿಗದಿಯಾಗಿದ್ದ ಸಮಯಕ್ಕೆ ಅಧ್ಯಕ್ಷೆ ಶಶಿಕಲಾ ಮಾಳಗಿ, ಪೌರಾಯುಕ್ತ ಕಾಂತರಾಜು ಹಾಗೂ ಇಬ್ಬರು ಬಿಜೆಪಿ ಸದಸ್ಯರು ನಗರಸಭೆಯ ಸಭಾಂಗಣದಲ್ಲಿ ಹಾಜರಿದ್ದರು. ಆದರೆ ಒಂದು ತಾಸು ಕಳೆದ ಬಳಿಕವೂ ಉಳಿದ ಸದಸ್ಯರು ಸಭಾಂಗಣಕ್ಕೆ ಬರಲಿಲ್ಲ. ಆದರೆ ನಗರಸಭೆಯ ಆವರಣದಲ್ಲೇ ಸದಸ್ಯರು ತಮ್ಮ ತಮ್ಮೊಳಗೆ ಚರ್ಚಿಸುತ್ತಾ ನಿಂತಿದ್ದರು. ಈ ಹಿನ್ನೆಲೆಯಲ್ಲಿ ಸಭೆಗೆ ಹಾಜರಾಗುವಂತೆ ಸದಸ್ಯರನ್ನು ಬರ ಹೇಳಲಾಯಿತು. ಆದರೆ ಯಾವ ಸದಸ್ಯರು ಸಭೆಗೆ ಬಾರದೇ ದೂರವೇ ಉಳಿದರು. ಸಭೆಗೆ ಅಸಹಕಾರ ವ್ಯಕ್ತಪಡಿಸಿದ ಸದಸ್ಯರಲ್ಲಿ ನಗರಸಭೆಯ ಆಡಳಿತದ ಚುಕ್ಕಾಣಿ ಹಿಡಿದಿರುವ ಬಿಜೆಪಿ ಸದಸ್ಯರೂ ಇದ್ದಿದ್ದು ಕುತೂಹಲ ಮೂಡಿಸಿತ್ತು.

ಸದಸ್ಯ ಐ.ಯು. ಪಠಾಣ, ಗಣೇಶ ಬಿಷ್ಟಣ್ಣನವರ ಮೊದಲಾದವರು ಮಾತನಾಡಿ, ನಗರಸಭೆ ಆಡಳಿತ ಮಂಡಳಿ ಅಧಿಕಾರ ಅವಧಿ ಅ. 30ರಂದೇ ಮುಕ್ತಾಯವಾಗಲಿದೆ. ಒಂದೇ ದಿನದಲ್ಲಿ ಸಭೆಯಲ್ಲಿ ಕೈಗೊಂಡ ನಿರ್ಣಯಗಳನ್ನು ಅನುಷ್ಠಾನದ ಪ್ರಕ್ರಿಯೆ ಜಾರಿಗೊಳಿಸುವುದು ಅಧಿಕಾರಿಗಳಿಗೆ ಅಸಾಧ್ಯ. ಒಂದು ವೇಳೆ ನಿರ್ಣಯ ಕೈಗೊಳ್ಳುವುದಿದ್ದರೆ ಇಲ್ಲಿಯೇ ನಾವು ಹೇಳಿದ ವಿಷಯವನ್ನು ಟೈಪ್‌ ಮಾಡಿ ಇಲ್ಲಿಯೇ ನಮ್ಮ ಸಹಿ ಪಡೆಯಬೇಕು ಎಂದು ಹೇಳಿದರು. ಸದಸ್ಯರ ಆಕ್ಷೇಪ ಹಿನ್ನೆಲೆಯಲ್ಲಿ ಸಭೆಯನ್ನು ರದ್ದುಗೊಳಿಸುವಂತೆ ಅಧ್ಯಕ್ಷೆ ಶಶಿಕಲಾ ಮಾಳಗಿ ಪೌರಾಯುಕ್ತರಿಗೆ ಸೂಚಿಸಿದರು. ಬಳಿಕ ವಿದಾಯದ ಭಾಷಣ ಮಾಡಿದ ಅವರು, ಇದುವರೆಗೆ ಸಹಕರಿಸಿದ ಎಲ್ಲರಿಗೂ ಧನ್ಯವಾದ ಹೇಳಿದರು. ಪೌರಾಯುಕ್ತ ಕಾಂತರಾಜು, ಸದಸ್ಯ ಸಂಜೀವಕುಮಾರ ನೀರಲಗಿ ಇತರರು ಇದ್ದರು.

ಕಾಮಗಾರಿ ಮಾಡದೇ ಬಿಲ್‌: ವಿದ್ಯಾನಗರದ ಆನೆಪಾರ್ಕ್‌ ಬಳಿ ಫೇವರ್ಸ್‌ ಹಾಕಲಾಗಿದೆ ಎಂದು ಬಿಲ್‌ ಮಾಡಲಾಗಿದೆ. ಈಗಲೇ ಅಲ್ಲಿಗೆ ಹೋಗಿ ನೋಡಿಕೊಂಡು ಬರಬಹುದು. ಅಲ್ಲಿ ಫೇವರ್ಸ್‌ ಅಳವಡಿಸಿಲ್ಲ. ಹಾಕಿರುವ ಬಗ್ಗೆ ಫೋಟೋ ಕೂಡ ನೀಡಿ ಬಿಲ್‌ ಎತ್ತಲಾಗಿದೆ. ಅಲ್ಲದೇ ತಾವು ಅನಾರೋಗ್ಯದಿಂದ ಬಳಲುತ್ತಿದ್ದ ದಿನಗಳಲ್ಲಿ ತಮ್ಮ ವಾರ್ಡ್‌ಗೆ ಒಂದೂ ಕಾಮಗಾರಿ ಹಾಕದೇ ಅಧ್ಯಕ್ಷರು ಮಲತಾಯಿ ಧೋರಣೆ ಅನುಸರಿಸಿದ್ದಾರೆ ಎಂದು ಸದಸ್ಯ ಗಣೇಶ ಬಿಷ್ಟಣ್ಣನವರ ಆರೋಪಿಸಿದರು.