ಸಾರಾಂಶ
ಮುಂಡರಗಿ: ಹೇಮಗಿರೀಶ ಹಾವಿನಾಳ ಅನೇಕ ವರ್ಷಗಳಿಂದ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡು ಜನೋಪಯೋಗಿ ಕಾರ್ಯ ಮಾಡುತ್ತಾ ಬಂದಿದ್ದು, ಇದೀಗ ತಮ್ಮ ಜನ್ಮದಿನದ ನೆಪದಲ್ಲಿ ತಾಲೂಕಿನ 70 ಜನ ಕ್ಷಯರೋಗ ಪೀಡಿತರಿಗೆ ಪೌಷ್ಟಿಕ ಆಹಾರದ ಕಿಟ್ ವಿತರಿಸುತ್ತಿದ್ದು, ಅವರ ಸಾಮಾಜಿಕ ಕಾಳಜಿ ಮೆಚ್ಚುವಂತದ್ದು ಎಂದು ಶಿರಹಟ್ಟಿ ಶಾಸಕ ಡಾ. ಚಂದ್ರು ಲಮಾಣಿ ಹೇಳಿದರು.
ಅವರು ಮಂಗಳವಾರ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಜಿಲ್ಲಾಡಳಿತ ಗದಗ, ರಾಷ್ಟ್ರೀಯ ಕ್ಷಯರೋಗ ನಿರ್ಮೂಲನ ಆಂದೋಲನ 100 ದಿನದ ಕಾರ್ಯಕ್ರಮದಡಿಯಲ್ಲಿ ಬಿಜೆಪಿ ಮುಂಡರಗಿ ಮಂಡಲದ ಅಧ್ಯಕ್ಷ ಹೇಮಗಿರೀಶ ಹಾವಿನಾಳ 48ನೇ ಜನ್ಮದಿನದ ಅಂಗವಾಗಿ 70 ಕ್ಷಯರೋಗ ಪೀಡಿತರಿಗೆ ಪೌಷ್ಟಿಕ ಆಹಾರದ ಕಿಟ್ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಕ್ಷಯ ರೋಗಕ್ಕೆ ಸರ್ಕಾರಿ ಆಸ್ಪತ್ರೆಯಲ್ಲಿ ಒಳ್ಳೆಯ ರೀತಿಯ ಚಿಕಿತ್ಸೆ ದೊರೆಯುತ್ತಿದ್ದು, 6 ತಿಂಗಳು, 9ತಿಂಗಳ, 18 ತಿಂಗಳಿನ ಚಿಕಿತ್ಸೆ ಇದ್ದು ಅದನ್ನು ಪಡೆದುಕೊಂಡು ಗುಣಮುಖರಾಗಬಹುದು. ಕೋವಿಡ್ ಸಂದರ್ಭದಲ್ಲಿ ಆಶಾ ಕಾರ್ಯಕರ್ತೆಯರು, ಆರೋಗ್ಯ ಇಲಾಖೆ ಸಿಬ್ಬಂದಿ ತಮ್ಮ ಜೀವದ ಹಂಗು ತೊರೆದು ಕಾರ್ಯ ನಿರ್ವಹಿಸಿದ್ದು, ಅಂದು ನಾನು ಸಹ ವೈದ್ಯನಾಗಿ ಸೇವೆ ಸಲ್ಲಿಸುವುದರ ಜತೆಗೆ ಇತರೆ ಜನಪರ ಕಾರ್ಯ ಮಾಡಿದ್ದೇನೆ, ಅದರ ಪ್ರತಿಫಲವಾಗಿ ನೀವೆಲ್ಲರೂ ಕ್ಷೇತ್ರದ ಶಾಸಕನಾಗಿ ಕಾರ್ಯ ನಿರ್ವಹಿಸಿ ಆಶೀರ್ವದಿಸಿದ್ದು ವಿವಿಧ ಅಭಿವೃದ್ಧಿ ಕಾರ್ಯ ಮಾಡುತ್ತಿರುವೆ. ಹಾವಿನಾಳವರಿಗೂ ಸಹ ಭವಿಷ್ಯದಲ್ಲಿ ಉನ್ನತ ಹುದ್ದೆಗಳು ದೊರೆಯಲಿವೆ ಎಂದರು.
ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ. ಅರುಂದತಿ ಕುಲಕರ್ಣಿ ಮಾತನಾಡಿ, 3ತಿಂಗಳ ಕ್ಷಯರೋಗ ಪತ್ತೆ ಆಂದೊಲನದ ಭಾಗವಾಗಿ ಪೌಷ್ಟಿಕ ಆಹಾರದ ಕಿಟ್ ವಿತರಣೆ ಜರುಗಿದ್ದು, ಕೇಂದ್ರ ಸರ್ಕಾರ ಕ್ಷಯ ಮುಕ್ತ ಭಾರತಕ್ಕೆ ಅಡಿ ಇಟ್ಟಿದ್ದು, ಜಗತ್ತಿನಲ್ಲಿಯೇ ಹೆಚ್ಚು ಕ್ಷಯ ರೋಗಿಗಳನ್ನು ಹೊಂದಿದ ದೇಶ ಭಾರತ. ಜಿಲ್ಲಾ ಹಾಗೂ ತಾಲೂಕಾಸ್ಪತ್ರೆಯ ಎಲ್ಲರ ಸಹಕಾರದಿಂದ 2025 ರೊಳಗಾಗಿ ಕ್ಷಯ ಮುಕ್ತ ಭಾರತ ಮಾಡಲು ಸರ್ಕಾರ ಸನ್ನದ್ದವಾಗಿದೆ. ಕ್ಷಯ ರೋಗ ಲಕ್ಷಣಗಳುಳ್ಳವರಿಗೆ ಕನಿಷ್ಠ 6 ತಿಂಗಳವರೆಗೆ ಉಚಿತ ತಪಾಸಣೆ, ಮಾತ್ರೆ ಹಾಗೂ ಚಿಕಿತ್ಸೆ ನೀಡಲಾಗುತ್ತದೆ ಎಂದರು.ಹೇಮಗಿರೀಶ ಹಾವಿನಾಳ ಮಾತನಾಡಿ, ಎಲ್ಲರಿಗೂ ಆರೋಗ್ಯ ಭಾಗ್ಯ ಅವಶ್ಯ. ಡಾ.ಚಂದ್ರು ಲಮಾಣಿ ಜನಪ್ರೀಯ ಸೇವೆ ನನಗೆ ಪ್ರೇರಣೆ. ಸಮಾಜದ ಸೇವೆ, ಬಡವರ ಸೇವೆ, ರೊಗಿಗಳ ಸೇವೆ ಮಾಡುವುದು ದೇವರ ಸೇವೆ ಮಾಡಿದಂತೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಎಲ್ಲರಿಗೂ ಸೇವೆ ದೊರೆಯಬೇಕೆನ್ನುವ ಉದ್ದೇಶದಿಂದ ನಮಗೆ ಎಆರ್ ಎಸ್. ಕಮೀಟಿ ಸದಸ್ಯರನ್ನಾಗಿ ಮಾಡಿದ್ದು, ಪ್ರಾಮಾಣಿಕವಾಗಿ ಆ ಕಾರ್ಯ ಮಾಡುತ್ತಿದ್ದೇನೆ. ಇದೀಗ ಜನ್ಮದಿನದ ಅಂಗವಾಗಿ 70 ಜನ ಕ್ಷಯ ರೋಗದ ಚಿಕಿತ್ಸೆ ಪಡೆಯುವವರಿಗೆ ಕಿಟ್ ಕೊಡುವ ಮೂಲಕ ನನ್ನದೊಂದು ಅಳಿಲು ಸೇವೆ ಮಾಡಿರುವೆ ಎಂದರು.
ಎ.ಎ.ಅಳವಂಡಿ, ಕುಮಾರಸ್ವಾಮಿ ಹಿರೇಮಠ ಮಾತನಾಡಿದರು.ಈ ಸಂದರ್ಭದಲ್ಲಿ ಡಾ. ಲಕ್ಷ್ಮಣ ಪೂಜಾರ, ಜ್ಯೋತಿ ಹಾನಗಲ್, ಕವಿತಾ ಉಳ್ಳಾಗಡ್ಡಿ, ತಿಮ್ಮಪ್ಪ ದಂಡಿನ, ಚಿನ್ನಪ್ಪ ವಡ್ಡಟ್ಟಿ, ಪರಶುರಾಮ ಕರಡಿಕೊಳ್ಳ, ಜಾನು ಲಮಾಣಿ, ಫಕ್ಕೀರೇಶ ರಟ್ಟಿಹಳ್ಳಿ, ನಾಗರಾಜ ಗುಡಿಮನಿ, ಕಿಟ್ಟಪ್ಪ ಮೋರನಾಳ, ಪ್ರಶಾಂತಗೌಡ ಗುಡದಪ್ಪನವರ, ಅಶೋಕ ಚೂರಿ, ಪವಿತ್ರಾ ಕಲ್ಲಕುಟಗರ್, ವಿರೇಶ ಸಜ್ಜನ, ಅರುಣಾ ಪಾಟೀಲ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಮಂಜುಳಾ ಸಜ್ಜನರ ಸ್ವಾಗತಿಸಿದರು. ಈರಮ್ಮ ಕುಂದಗೋಳ ನಿರೂಪಿಸಿದರು.