ಸಾರಾಂಶ
ಶಿರಸಿ: ಹವ್ಯಕರ ಆಚಾರ-ವಿಚಾರ ಉಳಿದ ಸಮುದಾಯಗಳಿಗೂ ಪ್ರೇರಣೆ ಎಂದು ಶಾಸಕ ಭೀಮಣ್ಣ ನಾಯ್ಕ ಹೇಳಿದರು.
ಶ್ರೀಅಖಿಲ ಹವ್ಯಕ ಮಹಾ ಸಭಾದ ಸಮ್ಮಾನ, ಸ್ಪರ್ಧೆ, ಪ್ರತಿಭಾ ಪ್ರೋತ್ಸಾಹಧನ ವಿತರಣೆಯ ಪ್ರತಿಬಿಂಬ ಕಾರ್ಯಕ್ರಮಕ್ಕೆ ಭಾನುವಾರ ಚಾಲನೆ ನೀಡಿ ಮಾತನಾಡಿದರು. ಹವ್ಯಕ ಸಮುದಾಯ ಸಂಸ್ಕಾರ, ಶಿಕ್ಷಣದಲ್ಲಿ ಸಾಧನೆ ಮಾಡಿದೆ. ಉಳಿದವರಿಗೆ ಮಾದರಿ-ಪ್ರೇರಣೆ. ಎಲ್ಲ ಹವ್ಯಕರು ಆರ್ಥಿಕವಾಗಿ ಶ್ರೀಮಂತ ಆಗದೇ ಇದ್ದರೂ ಹೃದಯ ಶ್ರೀಮಂತರು ಎಂದು ಬಣ್ಣಿಸಿದರು.ಶಿಕ್ಷಣದಿಂದ ಸಮಾಜದ ಪರಿವರ್ತನೆ ಆಗುತ್ತದೆ. ಅದರ ಜತೆಗೆ ಸಂಸ್ಕಾರ ನೋಡಿ ಕಲಿತರೂ ಅದರಿಂದಲೂ ಬದಲಾವಣೆ ಆಗುತ್ತದೆ. ಹವ್ಯಕರು ಸಂಸ್ಕೃತಿ ಅನೇಕ ಜನರಿಗೆ, ಸಮುದಾಯಕ್ಕೆ ಮಾದರಿ ಎಂದರು.
ಹವ್ಯಕರ ಸಂಸ್ಕಾರದ ಪ್ರಭಾವದಿಂದ ನನ್ನ ಬದುಕಿನಲ್ಲೂ ಏಳ್ಗೆಗೆ ಕಾರಣವಾಗುವ ಹವ್ಯಕ ಸಮೂಹದ ನಡೆ, ನುಡಿ ವಿಚಾರ ಅಡಿಯಲ್ಲಿ ಅನೇಕರಿಗೆ ಮಾದರಿ ಎಂದರು.ಜೀವ ಜಲ ಕಾರ್ಯಪಡೆ ಅಧ್ಯಕ್ಷ ಶ್ರೀನಿವಾಸ ಹೆಬ್ಬಾರ್, ಹವ್ಯಕರು ಎಂದರೆ ಕೃಷಿಕರು ಮಾತ್ರವಲ್ಲ. ಎಲ್ಲ ದೇಶ, ಎಲ್ಲೆಡೆ ಹವ್ಯಕರು ಇದ್ದಾರೆ. ಎಲ್ಲ ಕ್ಷೇತ್ರದಲ್ಲಿ ಕೂಡ ಇದ್ದಾರೆ. ಎಲ್ಲರೂ ಸೇರಿದರೆ ಹವ್ಯಕ ಜಾಗ ಮಾಡಬಹುದು ಎಂದರು.
ಹೋರಾಟಗಾರ ಅನಂತಮೂರ್ತಿ ಹೆಗಡೆ, ಹವ್ಯಕರು ಬೇಡುವ ಜನ ಅಲ್ಲ, ಕೊಡುವ ಜನ. ತಲೆ ಬಾಗಿದವರಲ್ಲ. ಇದು ನಮಗೆ ಅನುಕೂಲ, ಅನನುಕೂಲ. ಹಳ್ಳಿಗಳು ಇಂದು ವೃದ್ದಾಶ್ರಮ ಆಗುತ್ತಿದೆ. ಮಹಾನಗರದಲ್ಲಿ ಯುವಕರು ಸೇರುತ್ತಿದ್ದಾರೆ ಎಂದರು.ಆರ್.ಎಂ. ಹೆಗಡೆ ಬಾಳೇಸರ, ಹವ್ಯಕ ಕುಟುಂಬಗಳು ಮನೆ, ಜಮೀನು ಮಾರಾಟ ಮಾಡುತ್ತಿದ್ದಾರೆ. ಯಾರೂ ಜಮೀನು ಮಾರಾಟ ಮಾಡಬಾರದು. ಹವ್ಯಕ ಸಂಸ್ಥೆ ವಿಕೇಂದ್ರಿಕರಣ ವ್ಯವಸ್ಥೆಗೆ ಮುಂದಾಗಿದೆ ಎಂದರು.
ಹವ್ಯಕದ ಮಾಜಿ ಅಧ್ಯಕ್ಷ ಜಿ.ವಿ. ಹೆಗಡೆ ಕಾನಗೋಡ, ನಿರ್ದೇಶಕ ಶಶಾಂಕ ಹೆಗಡೆ, ಎಂಇಎಸ್ ಕಲಾ ಮತ್ತು ವಿಜ್ಞಾನ ಕಾಲೇಜಿನ ಅಧ್ಯಕ್ಷ ಎಸ್.ಕೆ. ಭಾಗವತ, ಹವ್ಯಕ ಕಾರ್ಯದರ್ಶಿ ಪ್ರಶಾಂತ ಭಟ್ಟ, ಸಂಚಾಲಕ ವಿ.ಎಂ. ಹೆಗಡೆ ಹಲಗೇರಿ, ಲಯನ್ಸನ ಕೆ.ಬಿ. ಲೋಕೇಶ ಹೆಗಡೆ ಇದ್ದರು.೧೬ಕ್ಕೂ ಸ್ಪರ್ಧೆಗಳಲ್ಲಿ ಐನೂರಕ್ಕೂ ಅಧಿಕ ಸ್ಪರ್ಧಾಳುಗಳು ಪಾಲ್ಗೊಂಡಿದ್ದರು.
ಪ್ರತಿಬಿಂಬದಲ್ಲಿ ಸಾಧಕರಿಗೆ ಸಮ್ಮಾನ: ಅಖಿಲ ಹವ್ಯಕ ಮಹಾ ಸಭೆಯಿಂದ ನಡೆಸಲಾದ ಪ್ರತಿಬಿಂಬ ಸಮಾರೋಪ ಕಾರ್ಯಕ್ರಮದಲ್ಲಿ ನಾಲ್ವರು ಸಾಧಕರನ್ನು ಹವ್ಯಕ ಸಾಧಕ ಪ್ರಶಸ್ತಿ ನೀಡಿ ಅಭಿನಂದಿಸಲಾಯಿತು.ಪ್ರಸಿದ್ಧ ಮಕ್ಕಳ ತಜ್ಞ ಡಾ. ಎನ್.ಆರ್. ಹೆಗಡೆ, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕ ನಾರಾಯಣ ಭಾಗ್ವತ್, ಪ್ರಗತಿಪರ ಕೃಷಿಕ, ಸಂಗೀತ ಕಲಾವಿದ ಭಾರ್ಗವ ಹೆಗಡೆ ಶೀಗೇಹಳ್ಳಿ, ಯಕ್ಷಗಾನ ಕಿಶೋರಿ ಕಲಾವಿದೆ ತುಳಸಿ ಹೆಗಡೆ ಶಿರಸಿ ಅವರನ್ನು ಗೌರವಿಸಲಾಯಿತು.
ಪ್ರಶಸ್ತಿ ಪ್ರದಾನ ಮಾಡಿದ ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಸಮಾಜದ ಸಂಘಟನೆ ತುಡಿತ ಇದ್ದರೆ ಸಮಾಜದ ಒಳಿತಿಗೆ ಕಾರಣವಾಗುತ್ತದೆ. ಪ್ರತಿಭಾವಂತರ ಪರಿಚಯ, ಸಮ್ಮಾನಿಸುವ ಜತೆಯಲ್ಲಿ ಎಲ್ಲ ಹಂತದಲ್ಲಿ ಹೆಚ್ಚಬೇಕು ಎಂದರು.ಟಿಎಸ್‌ಎಸ್ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ, ಯಾರ್ಯಾರ ಪ್ರತಿಭೆ ಹೇಗಿದೆ ಎಂಬುದನ್ನು ವೇದಿಕೆ ಕೊಟ್ಟಾಗಲೇ ಗೊತ್ತಾಗುತ್ತದೆ. ಅಂಥ ಕೆಲಸ ಹವ್ಯಕದಿಂದ ಆಗುತ್ತಿದೆ ಎಂದರು.
ಮಹಾಸಭೆಯ ಉಪಾಧ್ಯಕ್ಷ ಶ್ರೀಧರ ಜೆ. ಭಟ್ಟ ಕೆಕ್ಕಾರು ಅಧ್ಯಕ್ಷತೆ ವಹಿಸಿದ್ದರು. ಲಯನ್ಸ್ ಅಧ್ಯಕ್ಷ ಪ್ರಭಾಕರ ಹೆಗಡೆ, ಮಹಾಸಭೆಯ ಕಾರ್ಯದರ್ಶಿ ಪ್ರಶಾಂತ ಭಟ್ಟ, ಮಾಜಿ ಅಧ್ಯಕ್ಷ ಜಿ.ವಿ. ಹೆಗಡೆ ಕಾನಗೋಡ, ನಿರ್ದೇಶಕ ಶಶಾಂಕ ಹೆಗಡೆ, ಸಂಚಾಲಕ ವಿ.ಎಂ. ಹೆಗಡೆ ಹಲಗೇರಿ, ಪ್ರಮುಖ ಕೆ.ಬಿ. ಲೋಕೇಶ ಹೆಗಡೆ ಇತರರು ಇದ್ದರು. ಡಿ.ಪಿ. ಹೆಗಡೆ, ಭಾಗ್ಯಾ ಭಟ್ಟ, ಗೀತಾಂಜಲಿ ಭಟ್ಟ ನಿರ್ವಹಿಸಿದರು.ಇದೇ ವೇಳೆ ಭಾರ್ಗವ ಅವರಿಂದ ಸಿತಾರ್ ವಾದನ ನಡೆಯಿತು. ವಿವಿಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ಇದಕ್ಕೂ ಮುನ್ನ ಛದ್ಮವೇಷ, ಶ್ಲೋಕ ಪಠಣ, ಚೆಂಡು ಎಸೆತ, ಭಗವದ್ಗೀತಾ ಶ್ಲೋಕಗಳು, ಹಬ್ಬದ ಕುರಿತಾದ ಚಿತ್ರಕಲೆ, ಕೆರೆದಡ, ಭಾವಗೀತೆ, ಆಶು ಭಾಷಣ, ಸಂಗೀತ ಖುರ್ಚಿ, ಹವಿ ರುಚಿ ಹಲ್ವಾ, ಸಂಪ್ರದಾಯ ಗೀತೆ, ಚುಕ್ಕಿ ರಂಗೋಲಿ, ಆರತಿ ತಟ್ಟೆ, ಪಾಯಸ ಕುಡಿಯುವ ಸ್ಪರ್ಧೆ ನಡೆಯಿತು. ವಿದ್ಯಾಪೋಷಕ ಪ್ರೋತ್ಸಾಹಧನ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನೀಡಲಾಯಿತು. ಎಲ್.ಆರ್. ಭಟ್ಟ ದಂಪತಿ ಪ್ರೋತ್ಸಾಹ ಧನಕ್ಕೆ ನೆರವಾದರು.