ಮಂಗ್ಳೂರು ಶಾಲೇಲಿ ಧರ್ಮನಿಂದನೆ ಆರೋಪ: ಶಾಸಕವಿರುದ್ಧ ತನಿಖೆಗೆ ಹೈ ತಡೆ

| Published : Mar 25 2024, 12:48 AM IST

ಮಂಗ್ಳೂರು ಶಾಲೇಲಿ ಧರ್ಮನಿಂದನೆ ಆರೋಪ: ಶಾಸಕವಿರುದ್ಧ ತನಿಖೆಗೆ ಹೈ ತಡೆ
Share this Article
  • FB
  • TW
  • Linkdin
  • Email

ಸಾರಾಂಶ

ಇಲ್ಲಿನ ಜೆರೋಸಾ ಶಾಲೆಯಲ್ಲಿ ಶಿಕ್ಷಕಿಯೊಬ್ಬರು ಹಿಂದು ದೇವರ ನಿಂದನೆ ಮಾಡಿದ್ದನ್ನು ಖಂಡಿಸಿ ಪ್ರತಿಭಟನೆ ನಡೆಸಿದ ಆರೋಪಕ್ಕೆ ಸಂಬಂಧಿಸಿ ಶಾಸಕರು ಸೇರಿದಂತೆ ಐವರ ವಿರುದ್ಧ ದಾಖಲಾದ ಪೊಲೀಸ್‌ ಕೇಸ್‌ ತನಿಖೆಗೆ ಹೈಕೋರ್ಟ್‌ ತಡೆ ನೀಡಿದೆ.

ಮಂಗಳೂರು: ಇಲ್ಲಿನ ಜೆರೋಸಾ ಶಾಲೆಯಲ್ಲಿ ಶಿಕ್ಷಕಿಯೊಬ್ಬರು ಹಿಂದು ದೇವರ ನಿಂದನೆ ಮಾಡಿದ್ದನ್ನು ಖಂಡಿಸಿ ಪ್ರತಿಭಟನೆ ನಡೆಸಿದ ಆರೋಪಕ್ಕೆ ಸಂಬಂಧಿಸಿ ಶಾಸಕರು ಸೇರಿದಂತೆ ಐವರ ವಿರುದ್ಧ ದಾಖಲಾದ ಪೊಲೀಸ್‌ ಕೇಸ್‌ ತನಿಖೆಗೆ ಹೈಕೋರ್ಟ್‌ ತಡೆ ನೀಡಿದೆ. ಅಲ್ಲದೆ, ದೂರುದಾರರಿಗೆ ನೋಟಿಸ್‌ ಜಾರಿಗೊಳಿಸಿದೆ. ಫೆ.12ರಂದು ಶಾಲೆಯಲ್ಲಿ ನಡೆದ ಪ್ರತಿಭಟನೆಯನ್ನು ಬೆಂಬಲಿಸಿದ್ದಾರೆ ಎಂಬ ಆರೋಪದಡಿ ಶಾಸಕರಾದ ವೇದವ್ಯಾಸ್‌ ಕಾಮತ್‌, ಡಾ.ಭರತ್‌ ಶೆಟ್ಟಿ ಸೇರಿ ಇನ್ನೂ ಮೂವರ ವಿರುದ್ಧ ದೂರು ದಾಖಲಾಗಿತ್ತು. ಇದರ ತನಿಖೆಗೆ ತಡೆ ಕೋರಿ ಶಾಸಕರು ನ್ಯಾಯಾಲಯದ ಮೊರೆ ಹೋಗಿದ್ದರು.

ಶಾಸಕರ ಪರ ವಾದ ಮಂಡಿಸಿದ ಹಿರಿಯ ನ್ಯಾಯವಾದಿ ಅರುಣ್‌ ಶ್ಯಾಮ್‌, ಶಾಲೆಯಲ್ಲಿ ಶಾಂತಿ ಕದಡುವ ವಾತಾವರಣವನ್ನು ಶಾಸಕರು ಸೇರಿದಂತೆ ಐವರು ಸೃಷ್ಟಿಸಿಲ್ಲ. ಆರೋಪಕ್ಕೆ ಒಳಗಾದ ಶಿಕ್ಷಕಿಯನ್ನು ಕೆಲಸದಿಂದ ತೆಗೆದುಹಾಕಿದ ಬಗ್ಗೆ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರೇ ಲಿಖಿತವಾಗಿ ತಿಳಿಸಿದ್ದಾರೆ. ಹಾಗಾಗಿ, ಅಲ್ಲಿ ನಡೆದ ಘಟನೆಗೆ ಶಾಲಾ ಆಡಳಿತವೇ ಕಾರಣ. ಅಂತಹ ಕಾನೂನು ಸಮಸ್ಯೆ ಉದ್ಭವಿಸಿದ್ದರೆ ಶಾಲಾ ಆಡಳಿತವೇ ದೂರು ನೀಡುತ್ತಿತ್ತು. ಆದರೆ, ಶಾಲೆಯ ಹೊರಗಿನವರು ಶಾಲಾ ಬಳಿಯ ನಿವಾಸಿ ಅನಿಲ್‌ ಜೆರಾಲ್ಡ್‌ ಲೋಬೋ ಎಂಬುವರು ದೂರು ನೀಡಿದ್ದಾರೆ. ಆದ್ದರಿಂದ ಐವರ ವಿರುದ್ಧದ ಪ್ರಕರಣ ರದ್ದುಪಡಿಸಬೇಕು ಎಂದು ಮನವಿ ಮಾಡಿದರು. ವಾದ, ಪ್ರತಿವಾದ ಆಲಿಸಿದ ನ್ಯಾ. ಕೃಷ್ಣ ಎಸ್‌.ದೀಕ್ಷಿತ್‌ ಅವರ ಏಕಸದಸ್ಯ ನ್ಯಾಯಪೀಠ, ಶುಕ್ರವಾರ ಈ ಐವರ ವಿರುದ್ಧದ ತನಿಖೆಗೆ ತಡೆ ನೀಡಿದೆ. ಅಲ್ಲದೆ, ದೂರುದಾರರಿಗೆ ನೋಟಿಸ್‌ ಜಾರಿಗೊಳಿಸಿದೆ.