ಕೇಂದ್ರ ಸಚಿವ ಸ್ಥಾನ: ಎಚ್‌.ಡಿ.ಕುಮಾರಸ್ವಾಮಿ ತವರಲ್ಲಿ ಸಂಭ್ರಮ ವಾತಾವರಣ

| Published : Jun 11 2024, 01:33 AM IST

ಕೇಂದ್ರ ಸಚಿವ ಸ್ಥಾನ: ಎಚ್‌.ಡಿ.ಕುಮಾರಸ್ವಾಮಿ ತವರಲ್ಲಿ ಸಂಭ್ರಮ ವಾತಾವರಣ
Share this Article
  • FB
  • TW
  • Linkdin
  • Email

ಸಾರಾಂಶ

ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಸಂಪುಟ ದರ್ಜೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದಂತೆ ಹೊಳೆನರಸೀಪುರ ಪಟ್ಟಣದಲ್ಲಿ ಜೆಡಿಎಸ್ ಕಾರ್ಯಕರ್ತರು ಸತತವಾಗಿ ಎರಡು ಗಂಟೆಗೂ ಹೆಚ್ಚು ಕಾಲ ಪಟಾಕಿ ಸಿಡಿಸಿ, ಜೈಕಾರ ಕೂಗುತ್ತ, ಕುಣಿದು ಸಂಭ್ರಮಿಸಿದರು.

ಎಚ್ಡಿಕೆಗೆ ಕೇಂದ್ರ ಸಚಿವ ಸ್ಥಾನ । ಪಟಾಕಿ ಸಿಡಿಸಿ ಕಾರ್‍ಯಕರ್ತರ ಸಂಭ್ರಮ

ಹೊಳೆನರಸೀಪುರ: ನರೇಂದ್ರ ಮೋದಿ ಪ್ರಧಾನಿಯಾಗಿ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಸಂಪುಟ ದರ್ಜೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದಂತೆ ಪಟ್ಟಣದಲ್ಲಿ ಜೆಡಿಎಸ್ ಕಾರ್ಯಕರ್ತರು ಸತತವಾಗಿ ಎರಡು ಗಂಟೆಗೂ ಹೆಚ್ಚು ಕಾಲ ಪಟಾಕಿ ಸಿಡಿಸಿ, ಜೈಕಾರ ಕೂಗುತ್ತ, ಕುಣಿದು ಸಂಭ್ರಮಿಸಿದರು.

ಪಟ್ಟಣದಲ್ಲಿ ಜೂ.೪ ರಂದು ಲೋಕಸಭೆ ಚುನಾವಣಾ ಫಲಿತಾಂಶದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಶ್ರೇಯಸ್ ಎಂ.ಪಟೇಲ್ ಜಯಗಳಿಸಿದ್ದರು. ಜತೆಗೆ ೨೫ ವರ್ಷಗಳ ನಂತರ ಹಾಸನ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಜಯಗಳಿಸಿದ್ದರಿಂದ ಕಾರ್ಯಕರ್ತರಲ್ಲಿ ಹೆಚ್ಚಿದ್ದ ಉತ್ಸಾಹ ತರಕಕ್ಕೇರಿತ್ತು.

ಹಾಸನ ಕ್ಷೇತ್ರದಲ್ಲಿ ಜೆಡಿಎಸ್ ಸೋತಿದ್ದರೂ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಎಚ್.ಡಿ.ಕುಮಾರಸ್ವಾಮಿ ಅವರು ಜಯಗಳಿಸಿದ್ದು ಮತ್ತು ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಪರಾಭವಗೊಂಡು, ಎಚ್.ಡಿ.ದೇವೇಗೌಡರ ಅಳಿಯ ಡಾ. ಮಂಜುನಾಥ್ ಹಾಗೂ ಕೋಲಾರದಲ್ಲಿ ಜೆಡಿಎಸ್ ಜಯಗಳಿಸಿದ್ದು, ಜೆಡಿಎಸ್ ಕಾರ್ಯಕರ್ತರ ಸಂಭ್ರಮಾಚರಣೆಗೆ ಸಾಕ್ಷಿಯಾಗಿತ್ತು. ಆದರೆ ಎರಡು ಪಕ್ಷದ ಕಾರ್ಯಕರ್ತರು ಮಹಾತ್ಮಗಾಂಧಿ ವೃತ್ತದಲ್ಲಿ ಒಬ್ಬರ ನಂತರ ಒಬ್ಬರು ಪಟಾಕಿ ಸಿಡಿಸಿ, ಜೋರಾಗಿ ಜೈಕಾರ ಕೂಗುತ್ತ ಒಬ್ಬರನ್ನೊಬ್ಬರು ಗೇಲಿ ಮಾಡುತ್ತಿರುವ ರೀತಿಯೂ ಪ್ರಚೋದಿಸುತ್ತಿದ್ದು, ಕೆಲವೊಮ್ಮೆ ಕೈಕೈ ಮಿಸಲಾಯಿಸುವ ಹಂತಕ್ಕೂ ಬಂದಿತ್ತು.

ಜೆಡಿಎಸ್ ಕಾರ್ಯಕರ್ತ ಡಿಶ್ ಗೋವಿಂದರಾಜು ಮಾತನಾಡಿ, ಮಾಜಿ ಸಚಿವ ಜಿ.ಪುಟ್ಟಸ್ವಾಮಿಗೌಡ ೧೯೯೯ರ ಲೋಕಸಭಾ ಚುನಾವಣೆಯಲ್ಲಿ ೧೯೦೩೦೫ ಮತಗಳ ಅಂತರದಿಂದ ಮಾಜಿ ಪ್ರಧಾನಿ ದೇವೇಗೌಡರನ್ನು ಸೋಲಿಸಿದ್ದರು, ಆದರೆ ೨೦೦೪ ರ ವಿಧಾನಸಭೆ ಚುನಾವಣೆಯಲ್ಲಿ ಮಾಜಿ ಸಚಿವ ಜಿ.ಪುಟ್ಟಸ್ವಾಮಿಗೌಡರು ೩೨೦೭೦ ಮತಗಳನ್ನು ಮಾತ್ರ ಪಡೆದಿದ್ದರು, ಆದರೆ ಎಚ್.ಡಿ.ರೇವಣ್ಣ ಅವರು ೩೨೫೯೪ ಮತಗಳ ಅಂತರದಿಂದ ಜಯಗಳಿದ್ದರು. ಹಾಸನ ಲೋಕಸಭಾ ಕ್ಷೇತ್ರದ ಚುನಾವಣೆಯ ಗೆಲುವಿಗಾಗಿ ಕಾಂಗ್ರೆಸ್ ಪಕ್ಷದವರು ಅನುಸರಿಸಿದ ರೀತಿಯೂ ಅಸಭ್ಯತೆಯಿಂದ ಕೂಡಿದೆ. ಆದ್ದರಿಂದ ಜೆಡಿಎಸ್ ಕಾರ್ಯಕರ್ತರನ್ನು ಅಸಭ್ಯ ಪದಗಳಿಂದ ಟೀಕಿಸುವುದು ಮತ್ತು ಉದ್ದೇಶಪೂರ್ವಕವಾಗಿ ಪ್ರಚೋದಿಸುವ ಮನಸ್ಥಿತಿ ಬಿಡಬೇಕು ಎಂದು ಸಲಹೆ ನೀಡಿದರು.