ಸಾರಾಂಶ
ಮನುಷ್ಯನ ಜೀವಿತಾವಧಿ ಎಪ್ಪತ್ತು ವರ್ಷ ಎನಿಸಿದರೂ ಪ್ರತಿ ವರ್ಷವೂ ಒಂದೊಂದು ಗಿಡಗಳನ್ನು ನೆಟ್ಟು ಬೆಳೆಸುತ್ತಾ ಬಂದರೆ ಪರಿಸರದ ಸಮತೋಲನ ಕಾಪಾಡಬಹುದು. ಇದರಿಂದಾಗಿ ಉಸಿರಾಡುವ ಗಾಳಿ, ಕುಡಿಯುವ ನೀರು, ಯಾವುದೂ ವಿಷವಾಗುವುದಿಲ್ಲ
ಕನ್ನಡಪ್ರಭ ವಾರ್ತೆ ಕುದೂರು
ಪರಿಸರವನ್ನು ನಾವು ಸಂರಕ್ಷಿಸದೇ ಹೋದರೆ ಭೂಮಿ ಅಕ್ಷರಶಃ ಬೆಂಕಿಯುಂಡೆಯಂತಾಗುತ್ತದೆ. ಮುಂದಿನ ತಲೆಮಾರಿಗೆ ಒಳ್ಳೆಯ ಪರಿಸರವನ್ನು ಉಳಿಸಿ ಹೋಗದೆ ಆ ತಲೆಮಾರಿನ ಶಾಪಕ್ಕೆ ಗುರಿಯಾಗಬೇಕಾಗುತ್ತದೆ ಎಂದು ಡಾ.ಚೇತನ್ ಕುಮಾರ್ ಹೇಳಿದರು.ಸೋಲೂರು ಗ್ರಾಮದ ರಾಜಶೇಖರಯ್ಯ ಸಮೂಹ ಶಿಕ್ಷಣ ಸಂಸ್ಥೆಗಳ ವತಿಯಿಂದ ಏರ್ಪಡಿಸಿದ್ದ ಪರಿಸರ ದಿನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪರಿಸರ ಮಾಲಿನ್ಯವನ್ನು ಮಾಡದೇ ಇರುವ ಬಗ್ಗೆ ಮಕ್ಕಳಿಗೆ ಚಿಕ್ಕಂದಿನಿಂದಲೇ ಪರಿಸರ ಜಾಗೃತಿ ಮೂಡಿಸುವಂತಹ ಪಠ್ಯಗಳನ್ನು ಶಾಲಾ ಹಂತದಲ್ಲಿ ಪರಿಚಯಿಸಬೇಕು. ಪರಿಸರ ಸಂರಕ್ಷಣೆ ಕುರಿತ ಜಾಗೃತಿ ಕೇವಲ ಒಂದು ದಿನ ಕಾರ್ಯಕ್ರಮವಾಗಬಾರದು. ಅದು ನಮ್ಮ ಜೀವನ ಕ್ರಮವಾಗಬೇಕು ಎಂದು ತಿಳಿಸಿದರು.ಶಿಕ್ಷಣ ಸಂಸ್ಥೆಯ ಛೇರ್ಮನ್ ರಾಜಶೇಖರಯ್ಯ ಮಾತನಾಡಿ, ಗಿಡ- ಮರಗಳಿಗೂ ಪ್ರಾಣಿಗಳಂತೆ ಜೀವ ಇರುವುದರ ಜೊತೆಗೆ ನಮ್ಮ ಭಾವನೆಗಳಿಗೆ ಸ್ಪಂದಿಸುತ್ತವೆ. ಪ್ರಕೃತಿ ಮನುಷ್ಯನ ಆಸೆಯನ್ನು ಪೂರೈಸುತ್ತದೆಯೇ ಹೊರತು ದುರಾಸೆಯನ್ನಲ್ಲ. ಇಂದು ಮನುಷ್ಯನ ಸ್ವಾರ್ಥಕ್ಕೆ ನೀರು, ಗಾಳಿ, ಮಣ್ಣು ಎಲ್ಲವನ್ನೂ ಮಲಿನ ಮಾಡುತ್ತಿದ್ದೇವೆ. ಒಂದು ಹಂತದ ತನಕ ಪ್ರಕೃತಿ ನಮ್ಮೆಲ್ಲಾ ತಪ್ಪುಗಳನ್ನು ಕ್ಷಮಿಸುತ್ತದೆ. ಒಮ್ಮೆ ಅದು ತಿರುಗಿ ಬಿದ್ದರೆ ಖಂಡಿತವಾಗಿಯೂ ಪ್ರಳಯವಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಶಿಕ್ಷಣ ಸಂಸ್ಥೆಯ ಮುಖ್ಯಸ್ಥೆ ಐಶ್ವರ್ಯ ಚೇತನ್ ಕುಮಾರ್ ಮಾತನಾಡಿ, ಮನುಷ್ಯನ ಜೀವಿತಾವಧಿ ಎಪ್ಪತ್ತು ವರ್ಷ ಎನಿಸಿದರೂ ಪ್ರತಿ ವರ್ಷವೂ ಒಂದೊಂದು ಗಿಡಗಳನ್ನು ನೆಟ್ಟು ಬೆಳೆಸುತ್ತಾ ಬಂದರೆ ಪರಿಸರದ ಸಮತೋಲನ ಕಾಪಾಡಬಹುದು. ಇದರಿಂದಾಗಿ ಉಸಿರಾಡುವ ಗಾಳಿ, ಕುಡಿಯುವ ನೀರು, ಯಾವುದೂ ವಿಷವಾಗುವುದಿಲ್ಲ ಎಂದು ಹೇಳಿದರು.ನೂರಾರು ಗಿಡಗಳನ್ನು ಸೋಲೂರು ಹಾಗೂ ಸುತ್ತಮುತ್ತಲಿನ ರೈತರಿಗೆ ಉಚಿತವಾಗಿ ವಿತರಣೆ ಮಾಡಿದರು. ಸೋಲೂರು ಗ್ರಾಮದ ಗ್ರಾಮದೇವತೆ ದೇವಾಲಯದಿಂದ ಹೆದ್ದಾರಿಯವರೆವಿಗೆ ಬೀದಿನಾಟಕಗಳನ್ನು ಪ್ರದರ್ಶನ ಮಾಡಿದರು.
ಸೋಲೂರು ಗ್ರಾಮಸ್ಥರು, ಹಾಗೂ ಶಾಲಾ ಆಡಳಿತ ಮಂಡಳಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.