ಕನ್ನಡಪ್ರಭ ವಾರ್ತೆ ಪಾಂಡವಪುರ
ತಾಲೂಕಿನ ಮಾಣಿಕ್ಯನಹಳ್ಳಿ ಹೊರವಲಯದ ಶ್ರೀಪಟ್ಟಲದಮ್ಮ ದೇವಸ್ಥಾನಕ್ಕೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಭೇಟಿ ಕೊಟ್ಟು ದೇವಿಗೆ ಪೂಜೆ ಸಲ್ಲಿಸಿದರು.ಗ್ರಾಮದ ಚೀರ್‍ಲಗಾಟಿ ಕರೀಗೌಡರ ಪುತ್ರ ಪುಟ್ಟರಾಜು ಮತ್ತು ಎಂ.ಎಸ್.ಮರಿಸ್ವಾಮೀಗೌಡ ಅವರ ಕುಟುಂಬದಿಂದ ಹಮ್ಮಿಕೊಂಡಿದ್ದ ಪಟ್ಟಲದಮ್ಮ ದೇವಿ ಪೂಜೆ ಹಾಗೂ ಪರ ಕಾರ್ಯಯಕ್ರಮದ ಹಿನ್ನೆಲೆಯಲ್ಲಿ ಆಗಮಿಸಿದ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಬೆಲ್ಲದ ಆರತಿ ಬೆಳಗಿ, ಮಹಿಳೆಯರ ಪೂರ್ಣಕುಂಭ ಹೊತ್ತು, ದಾರಿಯುದ್ದಕ್ಕೂ ಹೂಮಳೆ ಸುರಿಸಿ ಸ್ವಾಗತಿಸಿದರು.
ದೇವಸ್ಥಾನಕ್ಕೆ ಆಗಮಿಸಿದ ಎಚ್.ಡಿ.ಕುಮಾರಸ್ವಾಮಿ ಅವರು ಶ್ರೀಪಟ್ಟಲದಮ್ಮ ದೇವಿಗೆ ವಿಶೇಷವಾದ ಪೂಜೆ ಸಲ್ಲಿಸಿದರು. ಕೇಂದ್ರ ಸಚಿವರು ಆಗಮಿಸುತ್ತಿದ್ದಂತೆಯೇ ಮಹಿಳೆಯರು, ಹೆಣ್ಣುಮಕ್ಕಳು, ಸಾರ್ವಜನಿಕರು ಸೆಲ್ಪಿ ತೆಗೆದುಕೊಳ್ಳಲು ಮುಗಿಬಿದ್ದರು. ಬಳಿಕ ದೇವರ ಪರದ ಸಾಮೂಹಿಕ ಭೋಜನಕೂಟದಲ್ಲಿ ಭಾಗವಹಿಸಿ ದೇವರ ಪ್ರಸಾದ ಸ್ವೀಕರಿಸಿದರು. ಕುಟುಂಬಸ್ಥರಿಂದ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹಾಗೂ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಅವರನ್ನು ಅಭಿನಂದಿಸಿದರು.ನಂತರ ಮಾತನಾಡಿದ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ಧಾರ್ಮಿಕ ಕಾರ್ಯಕ್ರಮಗಳು ಜನರ ಮನಸ್ಸಿಗೆ ನೆಮ್ಮದಿ, ಶಾಂತಿ ನೀಡುತ್ತಿವೆ. ನಾವು ಭಕ್ತಿಯಿಂದ ದೇವರ ಪೂಜೆ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ದೇವರ ಕೃಪೆಗೆ ಪಾತ್ರರಾಗಬೇಕು. ಸಾವಿರಾರು ಜನರಿಗೆ ಅನ್ನಸಂತರ್ಪಣೆ ಹಮ್ಮಿಕೊಂಡಿರುವ ಪುಟ್ಟರಾಜು ಮತ್ತು ಎಂ.ಎಸ್.ಮರಿಸ್ವಾಮೀಗೌಡ ಕುಟುಂಬಕ್ಕೆ ಭಗವಂತ ಒಳ್ಳೆಯದು ಮಾಡಲಿ ಎಂದು ಶುಭಹಾರೈಸಿದರು.
ಈ ವೇಳೆ ಜೆಡಿಎಸ್ ಜಿಲ್ಲಾಧ್ಯಕ್ಷ ಡಿ.ರಮೇಶ್, ಜಿಪಂ ಮಾಜಿ ಸದಸ್ಯರಾದ ಸಿ.ಅಶೋಕ್, ಎಚ್.ಮಂಜುನಾಥ್, ಮಳವಳ್ಳಿ ರವಿ, ಮನ್ಮುಲ್ ನಿರ್ದೇಶಕರಾದ ಸಿ.ಶಿವಕುಮಾರ್, ಬಿ.ಆರ್.ರಾಮಚಂದ್ರು, ಡಾಲುರವಿ, ಜೆಡಿಎಸ್ ಮಹಿಳಾ ಘಟಕದ ಅಧ್ಯಕ್ಷೆ ಅನುಪಮ, ಜೆಡಿಎಸ್ ರಾಜ್ಯ ಕಾರ್ಯಕಾರಿಣಿ ಸದಸ್ಯ ವಕೀಲ ಪುಟ್ಟೇಗೌಡ, ಡಿಸಿಸಿ ಬ್ಯಾಂಕ್ ನಿರ್ದೇಶಕ ಎಚ್.ಸಿ.ಪುಟ್ಟಸ್ವಾಮೀಗೌಡ, ಸಮಾಜಸೇವಕ ಅರವಿಂದ್ ರಾಘವನ್, ನಿವೃತ್ತ ಅಧಿಕಾರಿ ಎಂ.ಕೆ.ಕೆಂಪೇಗೌಡ, ಪ್ರೊ.ಎಚ್.ಆರ್.ತಿಮ್ಮೇಗೌಡ, ಉದ್ಯಮಿ ಸುಂಕಾತೊಣ್ಣೂರು ಶಿವಕುಮಾರ್, ಡಾ.ಎನ್.ಕೆ.ವೆಂಕಟೇಗೌಡ, ಪಾಲಹಳ್ಳಿ ಚಂದ್ರಶೇಖರ್, ಪೈ.ಮುಕುಂದ, ಮಾಣಿಕ್ಯನಹಳ್ಳಿ ಅಶೋಕ ಸೇರಿದಂತೆ ಹಲವರು ಹಾಜರಿದ್ದರು.