ಸಾರಾಂಶ
ಕನ್ನಡಪ್ರಭ ವಾರ್ತೆ ಹಾಸನ
ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಕುಟುಂಬದ ವಿರುದ್ಧ ದ್ವೇಷದ ರಾಜಕಾರಣ ಮಾಡಲು ಹೋಗಿ ಜಿಲ್ಲೆಯ ಅಭಿವೃದ್ಧಿ ಕುಂಠಿತವಾಗುತ್ತಿದೆ. ಅಭಿವೃದ್ಧಿಗೆ ಮೀಸಲಿಟ್ಟ ಹಣ ಹಾಗೆ ಇಡಬೇಕು. ಏನಾದರೂ ದುರ್ಬಳಕೆ ಮಾಡಿಕೊಂಡರೇ ಜೆಡಿಎಸ್ ಪಕ್ಷ ಏನೆಂಬುದನ್ನು ತೋರಿಸಬೇಕಾಗುತ್ತದೆ ಎಂದು ಮಾಜಿ ಸಚಿವ ಎಚ್.ಡಿ. ರೇವಣ್ಣ ಎಚ್ಚರಿಸಿದರು.ನಗರದ ಪ್ರವಾಸಿ ಮಂದಿರದಲ್ಲಿ ಬುಧವಾರ ಮಾಧ್ಯಮದೊಂದಿಗೆ ಮಾತನಾಡಿ, ಎಚ್.ಡಿ. ದೇವೇಗೌಡರ ಕುಟುಂಬದ ವಿರುದ್ಧ ದ್ವೇಷ ರಾಜಕಾರಣ ಮಾಡಲು ಹೋಗಿ ಕೆಲವರು ಜಿಲ್ಲೆಯ ಅಭಿವೃದ್ಧಿಗೆ ಅಡ್ಡಿಯಾಗುತ್ತಿದ್ದಾರೆ. ಕೇವಲ ಅಭಿವೃದ್ಧಿ ರಾಜಕೀಯ ಮಾಡಿಕೊಂಡು ಪ್ರಗತಿ ಕಡೆಗಣಿಸಿದ್ದಾರೆ ಎಂದರು.
ವರ್ಷಕ್ಕೊಮ್ಮೆ ಬಾಗಿಲು ತೆಗೆದು ದರ್ಶನ ನೀಡುವ ಹಾಸನಾಂಬೆ ದರ್ಶನೋತ್ಸವದ ಪೂರ್ವಭಾವಿ ಸಭೆಗೆ ತಮ್ಮನ್ನು ಆಹ್ವಾನಿಸದ ಜಿಲ್ಲಾಧಿಕಾರಿ ಸಿ. ಸತ್ಯಭಾಮ ವಿರುದ್ಧ ಮಾಜಿ ಸಚಿವ ಎಚ್.ಡಿ. ರೇವಣ್ಣ ಅಸಮಾಧಾನ ವ್ಯಕ್ತಪಡಿಸಿದರು.ಡೀಸಿ ವಿರುದ್ಧ ಅಸಮಾಧಾನ: ಕಳೆದ ಒಂದು ದಿನಗಳ ಹಿಂದೆ ನಡೆದ ಹಾಸನಾಂಬ ದರ್ಶನೋತ್ಸವದ ಪೂರ್ವಭಾವಿ ಸಭೆಗೆ ನನ್ನನ್ನು ಆಹ್ವಾನಿಸಿಲ್ಲ ಎಂದು ಜಿಲ್ಲಾಧಿಕಾರಿ ಸಿ. ಸತ್ಯಭಾಮ ನಿರ್ಧಾರಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಪುಣ್ಯಕೋಟಿ ಕಥೆ ಹೇಳುವವರು ಅವರು ಅವರ ಯಜಮಾನರನ್ನು ಕೂರಿಸಿಕೊಂಡು ಪೂಜೆ ಮಾಡಲಿ ಎಂದು ವ್ಯಂಗ್ಯವಾಡಿದರು. ನಮ್ಮ ಜಿಲ್ಲೆಯ ಬೆಳವಣಿಗೆಯನ್ನು ಕೊಲ್ಲಲು ಹೋಗಬೇಡಿ. ದ್ವೇಷದ ರಾಜಕಾರಣ ಮಾಡಬೇಡಿ. ನೀವು ಅಭಿವೃದ್ಧಿ ಮಾಡದಿದ್ದರೆ ಮುಂದೆ ನಾನು ಬರಬಹುದು, ಸ್ವರೂಪ್ ಬರಬಹುದು ನಾವು ಮಾಡುತ್ತೇವೆ ಎಂದರು.
ದುರ್ಬಳಕೆ ಮಾಡದಿರಿ: ಜಿಲ್ಲೆಯಲ್ಲಿ ದೇವೇಗೌಡರ ಕುಟುಂಬ ಹಾಗೂ ರೇವಣ್ಣ ಅವರ ರಾಜಕೀಯ ಜೀವನ ಮುಗಿಯಿತು ಎಂದು ಯಾರಾದರೂ ಭಾವಿಸಿದ್ದರೆ ಅದು ಸುಳ್ಳು. ತನ್ನ ೪೦ ವರ್ಷಗಳ ರಾಜಕೀಯ ಜೀವನದಲ್ಲಿ ಇಂಥಹ ಅನೇಕ ಘಟನೆ ಎದುರಿಸಿದ್ದೇನೆ, ಆಳುವ ಸರ್ಕಾರ ಅಭಿವೃದ್ಧಿ ಮಾಡುವುದಾದರೆ ಮಾಡಲಿ, ಇಲ್ಲವಾದರೆ ಅಭಿವೃದ್ಧಿಗೆ ಮೀಸಲಿಟ್ಟಿರುವ ಜಾಗ ಹಾಗೂ ಹಣವನ್ನು ಹಾಗೆಯೇ ಇಡಲಿ ಅದನ್ನು ಬಿಟ್ಟು ದುರ್ಬಳಕೆ ಮಾಡಿದರೆ ಮುಂದಿನ ದಿನಗಳಲ್ಲಿ ಜೆಡಿಎಸ್ ಏನು ಎಂಬುದನ್ನು ತೋರಿಸಬೇಕಾಗುತ್ತದೆ ಎಂದು ಗುಡುಗಿದರು.ಸುಮ್ಮನೆ ಕೂರಲ್ಲ: ಪೊಲೀಸ್ ಇಲಾಖೆ, ಕಂದಾಯ ಇಲಾಖೆ ಸೇರಿದಂತೆ ಯಾವ ಇಲಾಖೆಗಳಲ್ಲಿ ಏನು ನಡೆಯುತ್ತಿದೆ ಎಂಬುದನ್ನು ಗಮನಿಸುತ್ತಿದ್ದೇನೆ. ದೇವೇಗೌಡರು, ರೇವಣ್ಣ ಅವರದು ಮುಗಿದೇ ಹೋಯಿತು ಎಂದು ಅಧಿಕಾರಿಗಳು ಮಾತನಾಡಿಕೊಳ್ಳುತ್ತಿದ್ದಾರೆ. ನಾನು ನಗರದಲ್ಲಿ ಐಐಟಿಗೆ ಮೀಸಲಿಟ್ಟಿದ್ದ ಜಾಗ ಕಬಳಿಸಲು ಹುನ್ನಾರ ನಡೆಯುತ್ತಿದೆ. ನಾನೇನು ಸುಮ್ಮನೆ ಕೂರಲ್ಲ ಇದರ ವಿರುದ್ಧ ಹೋರಾಟ ಮಾಡುವೆ ಎಂದು ಎಚ್ಚರಿಸಿದರು.
ರಾಜ್ಯ ಸರ್ಕಾರ ದ್ವೇಷ ರಾಜಕಾರಣ ಮೂಲಕ ಜಿಲ್ಲೆಯ ಬೆಳವಣಿಗೆ ಕೊಲ್ಲಲು ಮುಂದಾದರೆ, ಇತ್ತ ಅಧಿಕಾರಿಗಳು ದರ್ಪ, ದುರಹಂಕಾರದಿಂದ ಮೆರೆಯುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ನಮ್ಮ ಸರ್ಕಾರದ ಅವಧಿಯಲ್ಲಿ ಕೈಗೊಳ್ಳಲಾಗಿದ್ದ ಐ.ಐ.ಟಿ, ವಿಮಾನ ನಿಲ್ದಾಣ, ರೈಲ್ವೆ ಮೇಲ್ಸೇತುವೆ ಹೀಗೆ ಹತ್ತು ಹಲವು ಯೋಜನೆಗಳನ್ನು ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಹತ್ತಿಕ್ಕುವ ಕೆಲಸ ಮಾಡುತ್ತಿದೆ. ಮೂಲ ಯೋಜನೆಗೆ ಅನುಗುಣವಾಗಿ ವಿಮಾನ ನಿಲ್ದಾಣ ಮಾಡುವ ಬದಲಾಗಿ ಮನಬಂದಂತೆ ಕೆಲಸ ಮಾಡುತ್ತಿದ್ದಾರೆ ಎಂದು ಕೆಂಡಾಮಂಡಲವಾದರು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದ ನಂತರ ವರ್ಗಾವಣೆ ದಂಧೆ ಮಿತಿ ಮೀರಿದೆ. ಆಡಳಿತ ವ್ಯವಸ್ಥೆ ಹದಗೆಟ್ಟಿದೆ. ಕೇಳುವವರು ಯಾರು ಇಲ್ಲದಂತಾಗಿದೆ ಎಂದರು.ಸುದ್ದಿಗೋಷ್ಠಿಯಲ್ಲಿ ಶಾಸಕ ಎಚ್.ಪಿ. ಸ್ವರೂಪ್, ಮಾಜಿ ಶಾಸಕ ಕೆ.ಎಸ್. ಲಿಂಗೇಶ್ ಇತರರು ಉಪಸ್ಥಿತರಿದ್ದರು.
* ಬಾಕ್ಸ್: ವಿಧಾನಸಭೆ ನನಗೆ ದೇವಾಲಯ ಇದ್ದಂತೆ ರೇವಣ್ಣ ಕುಟುಂಬ ಮುಗಿಸಲು ಹೊರಟಿದ್ದಾರೆ ಎಂಬ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ನನಗೆ ದೇವರು, ನ್ಯಾಯಾಲಯದ ಮೇಲೆ ನಂಬಿಕೆ ಇದೆ. ಸಮಯ ಬಂದಾಗ ಎಲ್ಲವನ್ನೂ ಹೇಳುತ್ತೇನೆ. ವಿಧಾನಸಭೆಯಲ್ಲಿ ಏನೇನು ನಡೆದಿದೆ ಎನ್ನುವುದನ್ನು ಹೇಳುತ್ತೇನೆ. ವಿಧಾನಸಭೆ ನನಗೆ ದೇವಾಲಯ ಇದ್ದಂತೆ ಎಲ್ಲವನ್ನೂ ಅಲ್ಲೇ ಹೇಳುತ್ತೇನೆ ಎಂದರು. ಮಂಡ್ಯದಲ್ಲಿ ಕುಮಾರಸ್ವಾಮಿ ಸೋಲ್ತಾರೆ ಅಂದಿದ್ದರು. ಕುಮಾರಸ್ವಾಮಿ ಎರಡು ಲಕ್ಷದ ಎಂಬತ್ತೈದು ಸಾವಿರ ಮತಗಳ ಅಂತರದಿಂದ ಗೆದ್ದರು. ಡಾ.ಮಂಜುನಾಥ್ ಹೆಚ್ಚು ಮತಗಳಿಂದ ಗೆಲ್ಲಲಿಲ್ಲವಾ? ವೈದ್ಯ ವೃತ್ತಿಯಿಂದ ಇಳಿದ ಮೂರು ತಿಂಗಳಿನಲ್ಲಿ ಎಂಪಿ ಆಗಲಿಲ್ಲವಾ? ಕುಮಾರಸ್ವಾಮಿ ಕೇಂದ್ರ ಸಚಿವರಾಗುತ್ತಾರೆ ಎಂದು ಯಾರಾದರೂ ಅಂದುಕೊಂಡಿದ್ರಾ? ಅದೆಲ್ಲಾ ದೇವರ ಆಶೀರ್ವಾದ. ಇನ್ನು ಮುಂದೆ ರಾಜಕೀಯದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತೇನೆ ಎಂದು ರೇವಣ್ಣ ಹೇಳಿದರು.