ರಾಮನಗರ: ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಜೈಲಲ್ಲೇ ಇರಬೇಕು. ಅವರನ್ನು ರಾಜಕೀಯವಾಗಿ ಮುಗಿಸಿ ತಮ್ಮ ಮಗನನ್ನು ಪ್ರತಿಷ್ಠಾಪನೆ ಮಾಡಬೇಕು ಎನ್ನುವುದೇ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅಸಲಿ ಅಭಿಲಾಷೆ ಎಂದು ಪೌರಾಡಳಿತ ಸಚಿವ ಎಚ್.ಸಿ.ಬಾಲಕೃಷ್ಣ ನೇರವಾಗಿ ಆರೋಪಿಸಿದರು

ರಾಮನಗರ: ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಜೈಲಲ್ಲೇ ಇರಬೇಕು. ಅವರನ್ನು ರಾಜಕೀಯವಾಗಿ ಮುಗಿಸಿ ತಮ್ಮ ಮಗನನ್ನು ಪ್ರತಿಷ್ಠಾಪನೆ ಮಾಡಬೇಕು ಎನ್ನುವುದೇ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅಸಲಿ ಅಭಿಲಾಷೆ ಎಂದು ಪೌರಾಡಳಿತ ಸಚಿವ ಎಚ್.ಸಿ.ಬಾಲಕೃಷ್ಣ ನೇರವಾಗಿ ಆರೋಪಿಸಿದರು.

ನೈಸ್ ಮತ್ತು ಕೆಪಿಎಸ್‌ಸಿ ಅಕ್ರಮಗಳನ್ನು ಮುಚ್ಚಿಹಾಕಲು ಪ್ರಜ್ವಲ್ ರೇವಣ್ಣ ಪ್ರಕರಣವನ್ನು ಮುನ್ನೆಲೆಗೆ ತರಲಾಗುತ್ತಿದೆ ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ಆರೋಪಿಸಿದ್ದಾರಲ್ಲ ಎಂಬ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವ ಬಾಲಕೃಷ್ಣ, ಪ್ರಜ್ವಲ್ ರೇವಣ್ಣ ವಿಚಾರದ ಬಗ್ಗೆ ಏಕೆ ಮಾತನಾಡುತ್ತಾರೆ. ಅದು ಅಸಹ್ಯ. ಪ್ರಜ್ವಲ್ ಪ್ರಕರಣಕ್ಕೂ, ನೈಸ್-ಕೆಪಿಎಸ್‌ಸಿಗೂ ಸಂಬಂಧ ಏನು? ಹೀಗೆ ಪದೇಪದೇ ಮಾತನಾಡಿಯೇ ಪ್ರಜ್ವಲ್‌ ಅವರನ್ನು ಜೈಲಿಗೆ ಕಳುಹಿಸಿದರು ಎಂದು ದೂರಿದರು.

ಜವಾಬ್ದಾರಿಯುತ ಸ್ಥಾನದಲ್ಲಿರುವ ಕೇಂದ್ರ ಸಚಿವರು ಗೌರವಯುತವಾಗಿ ಮಾತನಾಡಬೇಕು. ಕೇಂದ್ರ ಮಂತ್ರಿ ಎನ್ನುವುದನ್ನು ಮರೆತು ಗ್ರಾಮ ಪಂಚಾಯಿತಿ ಸದಸ್ಯರಂತೆ ವರ್ತಿಸುತ್ತಿದ್ದಾರೆ. ಪ್ರಜ್ವಲ್ ಬಳಿ ಮೊಬೈಲ್ ಹೇಗೆ ಬಂತು ಎಂದು ಅನುಮಾನವಿದ್ದರೆ ಸಿಬಿಐ ತನಿಖೆಗೆ ಪತ್ರ ಬರೆಯಲಿ ಎಂದು ಸಚಿವ ಬಾಲಕೃಷ್ಣ ಸವಾಲು ಹಾಕಿದರು.

ಮುಗಿದು ಹೋಗಿದ್ದ ವಿಚಾರ ಮತ್ತೆ ಚರ್ಚೆ ಮಾಡಿ ಪ್ರಜ್ವಲ್ ರನ್ನು ಪರ್ಮನೆಂಟ್ ಆಗಿ ಜೈಲಲ್ಲಿಡಲು ತೀರ್ಮಾನ ಮಾಡಿದ್ದಾರೆ. ಪ್ರಜ್ವಲ್ ಮುಗಿಸುವ ತನಕ ಕುಮಾರಸ್ವಾಮಿ ಸುಮ್ಮನಿರಲ್ಲ. ಅವಾಗವಾಗ ಮಾತನಾಡಿ ಅವರನ್ನ ಮುಗಿಸಿ ಮಗನನ್ನು ಪ್ರತಿಷ್ಠಾಪನೆ ಮಾಡಲು ಮುಂದಾಗಿದ್ದಾರೆ ಎಂದು ಟೀಕಿಸಿದರು.

ರಾಜ್ಯ ಸರ್ಕಾರದ 100ನೇ ದಿನದ ಸಾಧನಾ ಕಾರ್ಯಕ್ರಮವನ್ನು ಕುಮಾರಸ್ವಾಮಿ ವ್ಯಂಗ್ಯ ಮಾಡಿದ್ದಕ್ಕೆ ಪ್ರತಿಕ್ರಿಯಿಸಿದ ಬಾಲಕೃಷ್ಣ, ಪ್ರಪಂಚದಲ್ಲಿ ಕುಮಾರಸ್ವಾಮಿ ಒಬ್ಬರೇ ಮೇಧಾವಿ, ಉಳಿದವರೆಲ್ಲ ದಡ್ಡರು ಎನ್ನುವ ಮನಸ್ಥಿತಿ ಅವರದ್ದು. ನಾನು ಹುಟ್ಟಿದ್ದೇ ಬಡವರಿಗಾಗಿ ಎನ್ನುವ ಅವರ ಮನಸ್ಥಿತಿ ಬಗ್ಗೆ ನಾವೇನೂ ಮಾತನಾಡಲು ಸಾಧ್ಯವಿಲ್ಲ ಎಂದರು.

ದೇವೇಗೌಡರ ಕುಟುಂಬವನ್ನು ಮುಗಿಸಲು ಸಂಚು ರೂಪಿಸಲಾಗಿದೆ ಎಂಬ ಆರೋಪಕ್ಕೆ ತಿರುಗೇಟು ನೀಡಿದ ಅವರು, ಯಾರೋ ಯಾರನ್ನೂ ಮುಗಿಸಲು ಸಾಧ್ಯವಿಲ್ಲ. ನಮ್ಮನ್ನು ಮುಗಿಸಲು ಅವರು ನೋಡಿದರೆ, ನಾವು ಅದನ್ನೇ ಮಾಡುತ್ತೇವೆ. ಇದು ರಾಜಕಾರಣ, ವಿರೋಧಿಗಳನ್ನ ಯಾರೂ ಬೆಳೆಸಲ್ಲ. ದೇವೇಗೌಡರು, ಕುಮಾರಸ್ವಾಮಿ ಎಂದರೆ ಒಕ್ಕಲಿಗರು ಎದ್ದು ನಿಲ್ಲುತ್ತಾರೆ ಎನ್ನುವ ಸೆಂಟಿಮೆಂಟ್ ರಾಜಕಾರಣ ಬಿಡಲಿ. ಕೇಂದ್ರ ಮಂತ್ರಿಯಾಗಿದ್ದಾರೆ, ರಾಜ್ಯಕ್ಕೆ ಉದ್ಯೋಗಗಳನ್ನು ತರಲಿ ನಮ್ಮ ಸರ್ಕಾರ ಜಾಗ ನೀಡಲು ಸಿದ್ಧವಿದೆ ಎಂದು ಹೇಳಿದರು.

ನಾನು ವಿದೇಶದಿಂದ ಬರುವವರೆಗೆ ಯಾರೂ ನಿದ್ದೆ ಮಾಡಿಲ್ಲ ಎಂಬ ಕುಮಾರಸ್ವಾಮಿ ಹೇಳಿಕೆಗೆ ವ್ಯಂಗ್ಯವಾಡಿದ ಬಾಲಕೃಷ್ಣ, ಅಯ್ಯೋ.. ಅವರು ಬರುವವರೆಗೂ ನಾವ್ಯಾರೂ ನಿದ್ದೆಯೇ ಮಾಡಿರಲಿಲ್ಲ. ನಾಳೆಯಿಂದ ನೆಮ್ಮದಿಯಾಗಿ ನಿದ್ದೆ ಮಾಡುತ್ತೇವೆ. ಎಲ್ಲಿ ಎದೆ ಡಮ್ ಅನ್ನುತ್ತೋ ಅಂತ ಭಯ ಇತ್ತು. ಎದೆ ಗಟ್ಟಿಯಾಗಿ ಇಟ್ಟುಕೊಂಡಿದ್ದೆವು. ಇಂತಹ ಚಿಲ್ಲರೆ ಹೇಳಿಕೆಗಳು ನೀಡುವುದನ್ನು ಕುಮಾರಸ್ವಾಮಿ ನಿಲ್ಲಿಸಲಿ ಎಂದು ಬಾಲಕೃಷ್ಣ ಸಲಹೆ ನೀಡಿದರು.