ಸಾರಾಂಶ
ಹುಬ್ಬಳ್ಳಿ:
ರಾಜ್ಯಪಾಲರು ತೆಗೆದುಕೊಳ್ಳುವ ನಿರ್ಧಾರದಿಂದ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ತಲೆದಂಡ ಆಗಲಿದೆ. ಇದು ಬಿಜೆಪಿಯವರು ಮಾಡಿದ ಹುನ್ನಾರವಾಗಿದ್ದು, ಜೆಡಿಎಸ್ ಮುಗಿಸಬೇಕು ಎನ್ನುವ ಚಿಂತನೆ ಬಹಳ ದಿನಗಳಿಂದ ಇತ್ತು. ಅದನ್ನೀಗ ಕಾರ್ಯರೂಪಕ್ಕೆ ತರುತ್ತಿದ್ದಾರೆ ಎಂದು ಆರೋಗ್ಯ ಸಚಿವ ದಿನೇಶ ಗುಂಡೂರಾವ ಆರೋಪಿಸಿದರು.ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹಿಂದಿನಿಂದಲೂ ಬಿಜೆಪಿ ನಾಯಕರು ಜೆಡಿಎಸ್ ಮುಗಿಸಬೇಕು ಎನ್ನುವ ಹುನ್ನಾರ ಮಾಡಿದ್ದರು. ಇದೀಗ ಎಚ್.ಡಿ. ಕುಮಾರಸ್ವಾಮಿ ಅವರ ಹಳೇ ಪ್ರಕರಣವನ್ನು ಮುನ್ನೆಲೆಗೆ ತಂದವರೇ ಅವರು. ಗಣಿ ಇಲಾಖೆಯಲ್ಲಿ ಹಿಂದೆ ಹಗರಣವಾಗಿತ್ತು. ಇದೀಗ ಕೇಂದ್ರದಲ್ಲಿ ಗಣಿ ಸಚಿವರಾಗಿದ್ದಾರೆ. ಹೀಗಾಗಿ ರಾಜ್ಯಪಾಲರು ತೆಗೆದುಕೊಳ್ಳುವ ನಿರ್ಧಾರದಿಂದ ಕುಮಾರಸ್ವಾಮಿ ಅವರ ತಲೆದಂಡ ಆಗಲಿದೆ. ಈಗ ಅವರ ಸಹಿ ಫೋರ್ಜರಿ ಎಂದು ಹೇಳುತ್ತಿದ್ದು, ಇಷ್ಟು ದಿನ ಯಾಕೆ ದೂರು ಕೊಟ್ಟಿಲ್ಲ ಎಂದು ಪ್ರಶ್ನಿಸಿದರು.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಭ್ರಷ್ಟಾಚಾರದ ಕಿಂಗ್. ಇವರ ತಂದೆ ದೇಶ ಕಂಡ ದೊಡ್ಡ ಭ್ರಷ್ಟಾಚಾರಿ. ತಂದೆ ಮುಖ್ಯಮಂತ್ರಿಯಿದ್ದಾಗ ವಿಜಯೇಂದ್ರ ಅಧಿಕಾರ ಮಾಡುತ್ತಿದ್ದರು ಎಂದು ಅವರ ಪಕ್ಷದ ಸಚಿವರೇ ಹೇಳಿದ್ದಾರೆ. ಅಂದು ವಿಜಯೇಂದ್ರ ತೆರಿಗೆ ಎಂದೇ ನಿಗದಿಯಾಗಿತ್ತು. ಇವರು ನಮ್ಮ ಹಾಗೂ ನಮ್ಮ ಮುಖ್ಯಮಂತ್ರಿ ಬಗ್ಗೆ ಮಾತನಾಡುತ್ತಿರುವುದಕ್ಕೆ ನಾಚಿಕೆಯಾಗಬೇಕು. ಕಾಂಗ್ರೆಸ್ ಪಕ್ಷದ ಎಲ್ಲ ಶಾಸಕರು ಮುಖ್ಯಮಂತ್ರಿ ಪರವಾಗಿ ನಿಂತಿದ್ದಾರೆ. ಬಿಜೆಪಿ ಒಡೆದ ಮನೆಯಾಗಿದೆ ಎಂದು ತಿರುಗೇಟು ನೀಡಿದರು.ರಾಜ್ಯಪಾಲರ ಬಗ್ಗೆ ನಮಗೆ ಬಹಳ ಗೌರವವಿತ್ತು. ಆದರೆ ಕೇಂದ್ರ ನಾಯಕರ ಒತ್ತಡಕ್ಕೆ ಮಣಿದು ನಿಯಮ ಬಾಹಿರವಾಗಿ ಖಾಸಗಿ ದೂರು ಆಧರಿಸಿ ಮುಖ್ಯಮಂತ್ರಿ ವಿರುದ್ಧ ಪ್ರಾಸಿಕ್ಯೂಷನ್‌ಗೆ ಸೂಚಿಸಿದ್ದಾರೆ. ಆದರೆ ಅಧಿಕೃತ ತನಿಖಾ ಸಂಸ್ಥೆಗಳು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ, ಮಾಜಿ ಸಚಿವರಾದ ಶಶಿಕಲಾ ಜೊಲ್ಲೆ, ಮುರುಗೇಶ ನಿರಾಣಿ, ಜನಾರ್ದನ ರೆಡ್ಡಿ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ಕೋರಿದರೂ ಅನುಮತಿ ನೀಡದಿರುವುದು ರಾಜ್ಯಪಾಲ ಹುದ್ದೆಗೆ ಅಗೌರವ ತೋರಿಲ್ಲವೇ?. ಇದರಿಂದ ರಾಜ್ಯಪಾಲರು ಸಾರ್ವಜನಿಕರ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಮುಜುಗರ ಅನುಭವಿಸುವಂತಾಗಿದೆ ಎಂದರು.
ಯಾರೇ ಭ್ರಷ್ಟಾಚಾರ ಮಾಡಿದರೂ ತಪ್ಪು. ಬಿಜೆಪಿ ಮಾಡುತ್ತಿರುವ ಯಾವುದೇ ಆರೋಪಗಳಲ್ಲಿ ಸಾಕ್ಷಿ, ದಾಖಲೆಗಳಿಲ್ಲದ ಕಾರಣ ಇದೀಗ ರಾಜ್ಯಪಾಲರು ದಲಿತರಾಗಿದ್ದು ಅವರನ್ನು ಅವಮಾನ ಮಾಡಿದ್ದಾರೆ ಎಂದು ಹೊರಟಿದ್ದಾರೆ. ರಾಜ್ಯಪಾಲರ ಜಾತಿಯನ್ನು ಪ್ರಸ್ತಾಪಿಸಿರುವುದೇ ಬಿಜೆಪಿ ನಾಯಕರು ಎಂದು ತಿಳಿಸಿದರು.