ಸಾರಾಂಶ
ಚನ್ನಪಟ್ಟಣ: ಕುಮಾರಸ್ವಾಮಿ ಪುತ್ರ ಎರಡು ಬಾರಿ ಸೋತಿದ್ದಾನೆ. ಅವನಿಗೆ ಪುನರ್ಜನ್ಮ ಬೇಕು ಅಂತಾ ಚನ್ನಪಟ್ಟಣಕ್ಕೆ ತಂದು ನಿಲ್ಲಿಸಿದ್ದಾರೆ. ಮಗನನ್ನು ನಿಲ್ಲಿಸಲು ಅವರು ಇಷ್ಟೆಲ್ಲ ಡ್ರಾಮಾ ಮಾಡಿದ್ದಾರೆ ಎಂದು ಶಾಸಕ ಶಿವಲಿಂಗೇಗೌಡ ಆರೋಪಿಸಿದರು.
ತಾಲೂಕಿನ ಕೋಡಂಬಳ್ಳಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಕಾಂಗ್ರೆಸ್ ಸಮನ್ವಯ ಸಭೆಯಲ್ಲಿ ಮಾತನಾಡಿದ ಅವರು, ಯೋಗೇಶ್ವರ್ ಎಂಎಲ್ಸಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ಬಳಿಕ ನಮ್ಮದೇ ಪಕ್ಷದಿಂದ ನಿಂತ್ಕೊಳ್ಳಿ ಅಂದ್ರು. ಚನ್ನಪಟ್ಟಣಕ್ಕೆ ಕರ್ಕೊಂಡು ಬಂದು ನಾಟಕ ಮಾಡ್ತಾ ಇದ್ದರು. ಚನ್ನಪಟ್ಟಣ ಜನ ಸ್ವಾಭಿಮಾನಕ್ಕೆ ಮತ ಕೊಡಬೇಕು. ನಾಟಕ, ಸ್ವಾರ್ಥಕ್ಕೆ ಮತ ಕೊಡಬೇಡಿ. ಕುಮಾರಸ್ವಾಮಿ ಸಿಎಂ ಆಗಿದ್ದನ್ನು ತೆಗೆದಿದ್ದು ಯಾರು? ಯೋಗೇಶ್ವರ್ ಸಾಮರ್ಥ್ಯ ಏನು ಅಂತಾ ಕುಮಾರಸ್ವಾಮಿಗೆ ಗೊತ್ತಿಲ್ವ. ನಾವೆಲ್ಲಾ ಒಕ್ಕಲಿಗರಂತೆ ಅವರಿಗೆ ಕಾಣೊಲ್ಲ, ಡಿ.ಕೆ.ಶಿವಕುಮಾರ್, ಸುರೇಶ್ ಎಲ್ಲ ಒಕ್ಕಲಿಗರಲ್ವ, ಅವರು ಮಾತ್ರ ಒಕ್ಕಲಿಗರ, ಇದೊಂದು ಟ್ರಂಪ್ ಕಾರ್ಡ್ ತಂದು ಚುನಾವಣೆ ಮಾಡ್ತಾರೆ ಎಂದು ವಾಗ್ದಾಳಿ ನಡೆಸಿದರು.ಕಾಂಗ್ರೆಸ್ ಆಶೀರ್ವಾದದಿಂದಲೇ ದೇವೆಗೌಡರು ಪ್ರಧಾನಮಂತ್ರಿ ಆಗಿದ್ದು ಅನ್ನೋದನ್ನ ಮರೆಯಬಾರದು. ಕುಮಾರಸ್ವಾಮಿ ೨೫ ಸೀಟು ತಗೊಂಡ್ರು ಸಿಎಂ ಆಗ್ತಾರೆ. ಅವರಿಗೆ ಅದೊಂದು ಅದೃಷ್ಟ ಇದೆ. ಕೊಟ್ಟಿದ್ದನ್ನು ಉಳಿಸಿಕೊಳ್ಳುವ ಶಕ್ತಿ ಅವರಿಗೆ ಇಲ್ಲ. ನನ್ನ ಜನ್ಮ ಇರೋವರೆಗೂ ಬಿಜೆಪಿ ಸಹವಾಸ ಮಾಡೊಲ್ಲ ಅಂದು ಇವಾಗ ಹೋಗಿದ್ದೀರಲ್ಲ ಎಂದು ಕಿಡಿಕಾರಿದರು.
ಹುಟ್ಟಿದ್ರೆ ಇನ್ನೊಂದು ಜನ್ಮದಲ್ಲಿ ಮುಸ್ಲಿಂ ಆಗಿ ಹುಟ್ಟುತ್ತೀನಿ ಅಂದ್ರಲ್ಲ. ಇವಾಗ ಯಾರ ಸಹವಾಸ ಮಾಡಿದ್ದೀರಿ. ಇದೇ ಕೆಲಸ ಯಾರಾದರು ಬಡವರು ಮಾಡಿದ್ರೆ ಎಂತಹ ಮಾತು ಆಡ್ತಾ ಇದ್ರಿ..? ಕುಮಾರಸ್ವಾಮಿ ರಾಜಕೀಯದ ಜೀವ ಉಳಿಸಿಕೊಳ್ಳಲು ಬಿಜೆಪಿ ಜೊತೆ ಸೇರಿಕೊಂಡ್ರು. ಇವರ ಕುಟುಂಬಕ್ಕೋಸ್ಕರ ಏನು ಬೇಕಾದ್ರು ಮಾಡ್ತಾರೆ ಎಂದರು.ನಿಮಗೆ ಒಬ್ಬ ಸ್ವಾಭಿಮಾನಿ ಬೇಕು. ಯೋಗೇಶ್ವರ್ ಗೆಲ್ಲಿಸೋ ಮುಖಾಂತರ ನಿಮ್ಮ ಸ್ವಾಭಿಮಾನ ಉಳಿಸಬೇಕು. ನ.೧೩ರಂದು ನಡೆಯುವ ಚುನಾವಣೆಯಲ್ಲಿ ಹೊರಗಿನವರನ್ನು ಜಿಲ್ಲೆಯಿಂದ ಕಳಿಸಬೇಕು. ಯೋಗೇಶ್ವರ್ ಅವರನ್ನು ಅತ್ಯಧಿಕ ಮತಗಳಿಂದ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.
ಇಲ್ಲಿಂದ ತಿರುವು ಪ್ರಾರಂಭ: ರಾಜ್ಯದಲ್ಲಿ ಮೂರು ಕ್ಷೇತ್ರಕ್ಕೆ ಉಪ ಚುನಾವಣೆ ನಡೆಯುತ್ತಿದೆ. ಚನ್ನಪಟ್ಟಣ ಕ್ಷೇತ್ರ ಸಾಕಷ್ಟು ಸದ್ದು ಮಾಡ್ತಿದೆ. ನಿಮ್ಮ ಜಿಲ್ಲೆಯವರೇ ನಿಮ್ಮವರೇ ಸಿಎಂ ಆಗ್ತಾರೆ. ಈ ಚುನಾವಣೆ ಫಲಿತಾಂಶ ನಿಜವಾಗಿಯೂ ಅದನ್ನು ತೋರಿಸುತ್ತದೆ. ಡಿಕೆ ಶಿವಕುಮಾರ್ ಅವರ ನಾಯಕತ್ವ ಇರುತ್ತೆ. ಈ ಜಿಲ್ಲೆ ದೊಡ್ಡ ಮಟ್ಟದಲ್ಲಿ ಉನ್ನತವಾಗಿ ಬೆಳೆಯುತ್ತದೆ. ರಾಜ್ಯ ರಾಜಕಾರಣದ ತಿರುವು ಇಲ್ಲಿಂದ ಪ್ರಾರಂಭವಾಗುತ್ತದೆ ಎಂದರು.ಡಿ.ಕೆ.ಸುರೇಶ್ ನಿಲ್ಲಿಸಿ ಗೆಲ್ಲಿಸಿಕೊಳ್ಳೊ ಶಕ್ತಿ ಡಿ.ಕೆ.ಶಿವಕುಮಾರ್ ಅವರಿಗೆ ಇರಲಿಲ್ವಾ..? ತ್ಯಾಗ ಮಾಡಿ ಸಹೋದರನನ್ನು ನಿಲ್ಲಿಸದೇ ಯೋಗೇಶ್ವರ್ ಅವರನ್ನು ನಿಲ್ಲಿಸಿದ್ದಾರೆ. ಕೇಂದ್ರದ ಬಿಜೆಪಿಯವರು ರಾಜ್ಯಕ್ಕೆ ಏನು ಮಾಡಿಲ್ಲ. ನಮಗೆ ಬರಬೇಕಾದ ಜಿಎಸ್‌ಟಿ ಹಣವನ್ನು ತಿನ್ಕೊಂಡು ಕೂತಿದ್ದಾರೆ ಎಂದರು.
ಬಾಕ್ಸ್.................ಎಚ್‌ಡಿಕೆಗೆ ಚನ್ನಪಟ್ಟಣದಲ್ಲಿ ಎಷ್ಟು ಕೆರೆ ಇದೆ ಎಂದು ಗೊತ್ತಿಲ್ಲ: ಸಿಪಿವೈ
ಕನ್ನಡಪ್ರಭ ವಾರ್ತೆ ಚನ್ನಪಟ್ಟಣಕುಮಾರಸ್ವಾಮಿ ಅವರ ರಾಜಕೀಯ ಮಹತ್ವಾಕಾಂಕ್ಷೆಯಿಂದ ಚನ್ನಪಟ್ಟಣಕ್ಕೆ ಉಪಚುನಾವಣೆ ಎದುರಾಗಿದೆ. ಅವರು ಕ್ಷೇತ್ರದಲ್ಲಿ ಶಾಸಕರಾಗಿದ್ದಾಗ ಸರಿಯಾಗಿ ಬರಲಿಲ್ಲ. ಮೊನ್ನೆ ಚನ್ನಪಟ್ಟಣದಲ್ಲಿ ೧೫೦ ಕೆರೆ ತುಂಬಿಸಿದ್ದೇವೆ ಅಂದಿದ್ದಾರೆ. ಅವರಿಗೆ ಚನ್ನಪಟ್ಟಣದಲ್ಲಿ ಎಷ್ಟು ಕೆರೆ ಇದೆ ಅಂತ ಗೊತ್ತಿಲ್ಲ ಎಂದು ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ವಾಗ್ದಾಳಿ ನಡೆಸಿದರು.
ತಾಲೂಕಿನ ಕೋಡಂಬಳ್ಳಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಕಾಂಗ್ರೆಸ್ ಸಮನ್ವಯ ಸಭೆಯಲ್ಲಿ ಮಾತನಾಡಿದ ಅವರು, ಚನ್ನಪಟ್ಟಣ ತಾಲೂಕಿನಲ್ಲಿ ಇದು ನನ್ನ ೧೦ನೇ ಚುನಾವಣೆ. ಈ ಉಪಚುನಾವಣೆ ಬರುತ್ತೆ ಅಂತ ನಾನು ಅಂದುಕೊಂಡಿರಲಿಲ್ಲ ಎಂದರು.ಹೊಸ ಯೋಜನೆ: ನಾನು, ಸುರೇಶ್ ಸೇರಿ ಒಂದು ಹೊಸ ಯೋಜನೆ ಬಗ್ಗೆ ಆಲೋಚನೆ ಮಾಡಿದ್ದೇವೆ. ಕೆಆರ್‌ಎಸ್ ನಿಂದ ಮಾರ್ಕೋನಹಳ್ಳಿ ಡ್ಯಾಂಗೆ ನೀರು ತಂದು ಅದನ್ನ ಕಣ್ವ, ಇಗ್ಗಲೂರು ಡ್ಯಾಂಗೆ ತರಬಹುದು. ಆ ಕುರಿತು ಚಿಂತಿಸುತ್ತಿದ್ದೇವೆ ಎಂದರು.
ಕುಮಾರಸ್ವಾಮಿ ಎರಡು ಬಾರಿ ಗೆದ್ದರೂ ಒಂದು ಕೆರೆ ತುಂಬಿಸಲಿಲ್ಲ. ಶಿವಲಿಂಗೇಗೌಡರಿಗೆ ಅವರ ಎಲ್ಲಾ ಮರ್ಮಗಳು ಗೊತ್ತು. ಅವರ ಫ್ಲಾನ್‌ಗಳು ನಮ್ಮ ಬಹುತೇಕ ನಾಯಕರಿಗೆ ಗೊತ್ತು. ನನ್ನ ಮೇಲೆ ಯಾಕಿಂಗೆ ಅವರ ಮನೆಯವರು ಮುಗಿಬಿಳ್ತಿದ್ದಾರೋ ಗೊತ್ತಿಲ್ಲ. ನಾನೇನು ತಪ್ಪುಮಾಡಿದ್ದೀನಿ, ನನ್ನ ಮೇಲೆ ಯಾಕೆ ಹೀಗೆ ಬೀಳ್ತಾರೆ ಎಂದು ಪ್ರಶ್ನಿಸಿದರು.ಕುಮಾರಸ್ವಾಮಿ ಬಂದ್ರು, ಅವರ ಪತ್ನಿ ಬಂದ್ರು ಈಗ ಮಗ ಬಂದಿದ್ದಾರೆ. ಮೊನ್ನೆ ೫೦೦ ಬಸ್ ಮಾಡಿ ಜನ ಸೇರಿಸಿ ನಾಮಪತ್ರ ಸಲ್ಲಿಕೆ ಮಾಡಿದರು. ಅವರು ಕೇಂದ್ರದಲ್ಲಿ ಮಂತ್ರಿ ಆಗಿದ್ದಾರೆ ಎಷ್ಟಾದರೂ ಹಣ ತಂದು ಚುನಾವಣೆ ಮಾಡೋಕೆ ನಿಂತಿದ್ದಾರೆ. ಈ ಬಗ್ಗೆ ಚುನಾವಣಾ ಆಯೋಗವನ್ನು ಪ್ರಶ್ನಿಸಿದೆ. ಈಗ ಚುನಾವಣಾ ಆಯೋಗ ಕೇಸ್ ಹಾಕಿ ೯೬ ಬಸ್ ಸೀಜ್ ಮಾಡಿ ಕ್ರಮ ಕೈಗೊಳ್ತಾರೆ ಎಂದರು.
ನನ್ನ ಬಳಿ ಹಣವಿಲ್ಲ:ಕುಮಾರಸ್ವಾಮಿಗೆ ಇರೋದು ಒಂದೇ ಅಸ್ತ್ರ. ಯಥೇಚ್ಛವಾಗಿ ಹಣ ಸುರಿದು ಚುನಾವಣೆ ಮಾಡೋದು. ನನ್ನ ಬಳಿ ಅಷ್ಟು ಹಣ ಇಲ್ಲ, ಎರಡು ಬಾರಿ ಸೋತಿದ್ದೇನೆ. ಜನರೇ ನನ್ನ ಪರವಾಗಿ ಚುನಾವಣೆ ಮಾಡ್ತಾರೆ. ನನ್ನ ಎಲ್ಲರೂ ಪಕ್ಷಾಂತರಿ, ಪಕ್ಷಾಂತರಿ ಅಂತಾರೆ. ಯಾಕೆ ಕಾಂಗ್ರೆಸ್ ಬಿಟ್ಟು ಹೋಗಿದ್ರಿ ಅಂತ ಕೇಳ್ತಾರೆ. ಅವತ್ತು ನೀರಾವರಿ ಯೋಜನಗಾಗಿ ಪಕ್ಷ ಬಿಟ್ಟು ಹೋಗಿದ್ದೆ. ಈಗ ಕ್ಷೇತ್ರದ ಅಭಿವೃದ್ಧಿಗಾಗಿ ನಾನು ಪಕ್ಷಾಂತರ ಮಾಡಿದ್ದೇನೆ ಎಂದರು.
ಬಾಕ್ಸ್................ಬಾಯ್ತಿಪ್ಪಿ ಬಿಜೆಪಿ ಸರ್ಕಾರವಿದೆ ಎಂದ ಸಿಪಿವೈ!
ತಮ್ಮ ಭಾಷಣದ ವೇಳೆ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ಅವರು ಬಾಯ್ತಪ್ಪಿ ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದೆ ಎಂದರು. ತಕ್ಷಣ ಕಾರ್ಯಕರ್ತರು ಕಾಂಗ್ರೆಸ್ ಸರ್ಕಾರ ಎಂದರು. ತಕ್ಷಣ ಸಾವರಿಸಿಕೊಂಡು ಕಾಂಗ್ರೆಸ್ ಸರ್ಕಾರ ಎಂದ ಯೋಗೇಶ್ವರ್ ತಮ್ಮ ಭಾಷಣ ಮುಂದುವರಿಸಿದರು.