ಸಾರಾಂಶ
ಜೆಡಿಎಸ್ ಕೈ ತಪ್ಪಿ ಹೋಗುವ ಹಂತದಲ್ಲಿದ್ದ ಮಂಡ್ಯ ನಗರಸಭೆಯ ಅಧಿಕಾರ ಸಂಸದ ಹಾಗೂ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿಯವರ ಪ್ರವೇಶದಿಂದ ದಳದಲ್ಲೇ ಉಳಿದುಕೊಂಡಿದೆ.
ಮಂಡ್ಯ : ಜೆಡಿಎಸ್ ಕೈ ತಪ್ಪಿ ಹೋಗುವ ಹಂತದಲ್ಲಿದ್ದ ಮಂಡ್ಯ ನಗರಸಭೆಯ ಅಧಿಕಾರ ಸಂಸದ ಹಾಗೂ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿಯವರ ಪ್ರವೇಶದಿಂದ ದಳದಲ್ಲೇ ಉಳಿದುಕೊಂಡಿದೆ. ಕೊನೆಯ ಹಂತದಲ್ಲಿ ಕಾಂಗ್ರೆಸ್ ಸದಸ್ಯ ಟಿ.ಕೆ.ರಾಮಲಿಂಗು ಅವರು ಪಕ್ಷಾಂತರ ಮಾಡಿ ಜೆಡಿಎಸ್‌ಗೆ ಜೈ ಎಂದ ಪರಿಣಾಮ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಯಲ್ಲಿ ಕೇವಲ ಒಂದು ಮತದಿಂದ ಜೆಡಿಎಸ್ ರೋಚಕ ಗೆಲುವು ಸಾಧಿಸಿದೆ.
35 ಸದಸ್ಯ ಬಲದ ನಗರಸಭೆಯಲ್ಲಿ ಜೆಡಿಎಸ್ 18, ಕಾಂಗ್ರೆಸ್ 10, ಬಿಜೆಪಿ 2 ಹಾಗೂ ಐವರು ಪಕ್ಷೇತರ ಸದಸ್ಯರಿದ್ದಾರೆ. ಬುಧವಾರ ನಡೆದ ನಗರಸಭೆಯ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್‌ನಿಂದ ಎಚ್.ಎಸ್.ಮಂಜು, ಉಪಾಧ್ಯಕ್ಷ ಸ್ಥಾನಕ್ಕೆ ಜಾಕಿರ್‌ಪಾಷಾ ನಾಮಪತ್ರ ಸಲ್ಲಿಸಿದ್ದರು. ಜೆಡಿಎಸ್-ಬಿಜೆಪಿ ಮೈತ್ರಿ ಅಭ್ಯರ್ಥಿಯಾಗಿ ಅಧ್ಯಕ್ಷ ಸ್ಥಾನಕ್ಕೆ ನಾಗೇಶ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಎಂ.ಪಿ.ಅರುಣ್ ಕುಮಾರ್ ಉಮೇದುವಾರಿಕೆ ಸಲ್ಲಿಸಿದ್ದರು.
ಜೆಡಿಎಸ್‌ನ 15, ಬಿಜೆಪಿಯ ಇಬ್ಬರು, ಕಾಂಗ್ರೆಸ್‌ನ ಟಿ.ಕೆ.ರಾಮಲಿಂಗು, ಸಂಸದ ಎಚ್.ಡಿ.ಕುಮಾರಸ್ವಾಮಿ ಸೇರಿ 19 ಸದಸ್ಯರು ಮೈತ್ರಿ ಪರ ಮತ ಚಲಾಯಿಸಿದರು. ಕಾಂಗ್ರೆಸ್ ಪರವಾಗಿ ಪಕ್ಷದ 9, ಐವರು ಪಕ್ಷೇತರರು, ಜೆಡಿಎಸ್‌ನ ಮೂವರು, ಶಾಸಕ ರವಿಕುಮಾರ್ ಸೇರಿ 18 ಮತಗಳು ಚಲಾವಣೆಯಾದವು. ಅಂತಿಮವಾಗಿ ಅಧ್ಯಕ್ಷರಾಗಿ ಜೆಡಿಎಸ್‌ನ ನಾಗೇಶ ಹಾಗೂ ಉಪಾಧ್ಯಕ್ಷರಾಗಿ ಎಂ.ಪಿ.ಅರುಣ್ ಗೆಲುವಿನ ನಗೆ ಬೀರಿದರು.
ಮೂವರು ಜೆಡಿಎಸ್ ಸದಸ್ಯರನ್ನು ತನ್ನತ್ತ ಸೆಳೆದ ಕಾಂಗ್ರೆಸ್ ತಂತ್ರಕ್ಕೆ ಪ್ರತಿತಂತ್ರ ಹೂಡಿದ ಕುಮಾರಸ್ವಾಮಿ, ಕಾಂಗ್ರೆಸ್‌ನ ರಾಮಲಿಂಗು ಅವರನ್ನು ಸೆಳೆದು, ಅಧಿಕಾರ ಪಡೆಯುವಲ್ಲಿ ಯಶಸ್ವಿಯಾದರು.