ಎಚ್ಡಿಕೆ ದಾರಿ ತಪ್ಪಿದ ಮಗ: ಪ್ರಕಾಶ್ ರೈ

| Published : Apr 15 2024, 01:17 AM IST

ಸಾರಾಂಶ

ಕಳೆದ ಚುನಾವಣೆಯಲ್ಲಿ ಸಂಸದೆ ಸುಮಲತಾ ಅವರ ಬಗ್ಗೆ ಮಾತನಾಡಿದ್ದಕ್ಕೆ ಜಿಲ್ಲೆಯ ಮಹಿಳೆಯರು ಚುನಾವಣೆಯಲ್ಲಿ ಸೋಲಿಸಿ ಮನೆಗೆ ಕಳಿಸಿದ್ದರು. ಈ ಬಾರಿಯೂ ಮಹಿಳೆಯರು ಎಚ್ಚೆತ್ತುಕೊಂಡು ಸರಿಯಾದ ದಾರಿ ತೋರಿಸಬೇಕು ಎಂದು ಪ್ರಕಾಶ್ ರೈ ಕರೆ ನೀಡಿದರು.

ಕನ್ನಡಪ್ರಭ ವಾರ್ತೆ ಮಂಡ್ಯ

ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹೆಣ್ಣು ಮಕ್ಕಳ ಬಗ್ಗೆ ಹಗುರವಾಗಿ ಮಾತನಾಡಿ ದಾರಿ ತಪ್ಪಿದ ಮಗನಾಗಿದ್ದಾರೆ ಎಂದು ಚಿತ್ರನಟ ಪ್ರಕಾಶ್ ರೈ ಟೀಕಿಸಿದರು.

ನಗರದ ರೈತ ಸಭಾಂಗಣದಲ್ಲಿ ಜಿಲ್ಲಾ ಶ್ರಮಿಕನಗರ ನಿವಾಸಿಗಳ ಒಕ್ಕೂಟದ ವತಿಯಿಂದ ನಡೆದ ಶ್ರಮಿಕರ ಸ್ವಾಭಿಮಾನಿ ಗೆಲುವಿನ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿ, ಹೆಣ್ಣುಮಕ್ಕಳ ಬಗ್ಗೆ ಈ ರೀತಿ ಮಾತನಾಡಲು ಇವರಿಗೆ ನಾಚಿಕೆ, ಮಾನ ಮರ್ಯಾದೆ ಇಲ್ಲವೇ ಎಂದು ಪ್ರಶ್ನಿಸಿದರು.

ಕಳೆದ ಚುನಾವಣೆಯಲ್ಲಿ ಸಂಸದೆ ಸುಮಲತಾ ಅವರ ಬಗ್ಗೆ ಮಾತನಾಡಿದ್ದಕ್ಕೆ ಜಿಲ್ಲೆಯ ಮಹಿಳೆಯರು ಚುನಾವಣೆಯಲ್ಲಿ ಸೋಲಿಸಿ ಮನೆಗೆ ಕಳಿಸಿದ್ದರು. ಈ ಬಾರಿಯೂ ಮಹಿಳೆಯರು ಎಚ್ಚೆತ್ತುಕೊಂಡು ಸರಿಯಾದ ದಾರಿ ತೋರಿಸಬೇಕು ಎಂದು ಕರೆ ನೀಡಿದರು.

ಲೋಕಸಭಾ ಚುನಾವಣೆ ವೇಳೆ ಮೈಸೂರಿನ ಮಹಾರಾಜರನ್ನು ನೋಡಲು ದಿಲ್ಲಿಯ ಮಹಾಪ್ರಭುಗಳು ಬಂದಿದ್ದಾರೆ. ಮಹಾಪ್ರಭುವಿನ ಕಾರ್ಯಕ್ರಮಕ್ಕೆ ಜನರನ್ನು ಕರೆದುಕೊಂಡು ಬಸ್ಸುಗಳು ಹೊರಟಿವೆ. ಇದರಿಂದ ಬೆಂಗಳೂರು-ಮೈಸೂರು ಹೈವೇ ನಲ್ಲಿ ಟ್ರಾಫಿಕ್ ಜಾಮ್ ಆಗಿದೆ. ನಮ್ಮ ಮಹಾಪ್ರಭುಗಳು ಕೋವಿಡ್ ಕಾಲದಲ್ಲಿ ಯಾಕೆ ಬರಲಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಪ್ರಶ್ನಿಸಿದರು.

ಕಳೆದ ಸೆಪ್ಟಂಬರ್ ನಲ್ಲಿ ಬರ ಪರಿಹಾರ ನೀಡಿ ಎಂದು ರಾಜ್ಯ ಸರ್ಕಾರ ಕೇಂದ್ರಕ್ಕೆ ಮನವಿ ಸಲ್ಲಿಸಿದೆ. ಆದರೆ, ಏಪ್ರಿಲ್ ಬಂದರೂ ಬರ ಪರಿಹಾರ ನೀಡಿಲ್ಲ. ಇದರಿಂದ ರಾಜ್ಯ ಸರ್ಕಾರವು ಸುಪ್ರೀಂ ಕೋರ್ಟ್ ಹೋಗಿದೆ. ಇದರ ವಿಚಾರಣೆ ನಡೆಸಿದ ನ್ಯಾಯಾಲಯವು ಕೇಂದ್ರಕ್ಕೆ ನೋಟೀಸ್ ನೀಡಲು ಮುಂದಾದರೆ ನೋಟೀಸ್ ನೀಡಬೇಡಿ, ಮಾನ ಮರ್ಯಾದೆ ಹೋಗುತ್ತೇ ಎಂದು ಬೇಡಿಕೊಳ್ಳುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದೇ ವೇಳೆ ಪ್ರಗತಿಪರ ಚಿಂತಕ ಡಾ.ವಾಸು ಹಾಗೂ ಭೂಮಿ ಮತ್ತು ವಸತಿ ಹಕ್ಕುಗಳ ವಂಚಿತರ ಹೋರಾಟ ಸಮಿತಿ ರಾಜ್ಯ ಕಾರ್ಯರ್ಶಿ ಕುಮಾರ್ ಸಮತಳ, ವಿಚಾರ ಮಂಡನೆ ಮಾಡಿದರು. ಪ್ರಗತಿಪರ ವಕೀಲ ಬಿ.ಟಿ.ವಿಶ್ವನಾಥ್ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಕರ್ನಾಟಕ ಜನಶಕ್ತಿ ಸಂಘಟನೆ ಜಿಲ್ಲಾಧ್ಯಕ್ಷ ಕೃಷ್ಣ ಪ್ರಕಾಶ್, ಸಿಐಟಿಯು ಮುಖಂಡರಾದ ಸಿ.ಕುಮಾರಿ, ಪತ್ರಕರ್ತ ಎನ್.ನಾಗೇಶ್, ರೈತಸಂಘದ ಲತಾ ಶಂಕರ್, ಕರ್ನಾಟಕ ಜನಶಕ್ತಿಯ ಸಿದ್ದರಾಜು, ಪೂರ್ಣಿಮ, ಜಗದೀಶ್ ನಗರಕರೆ ಮತ್ತಿತರರು ಉಪಸ್ಥಿತರಿದ್ದರು.