ಸಾರಾಂಶ
ಕಳೆದ ಲೋಕಸಭಾ ಚುನಾವಣೆಯಲ್ಲಿ ಏಳಕ್ಕೆ ಏಳು ಜೆಡಿಎಸ್ ಶಾಸಕರಿದ್ದರೂ ಕಾಂಗ್ರೆಸ್ ಪಕ್ಷದ ಮುಖಂಡರ ಧೋರಣೆಯಿಂದ ಜೆಡಿಎಸ್ ಅಭ್ಯರ್ಥಿ ಸೋಲಬೇಕಾಯಿತು. ಆದರೆ, ಅದೇ ಸನ್ನಿವೇಶ ಈಗ ಮರುಕಳಿಸಿದ್ದು ಮಂಡ್ಯ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದ ಆರು ಶಾಸಕರು ಹಾಗೂ ಸಚಿವರು, ವಿಧಾನ ಪರಿಷತ್ ಸದಸ್ಯರು ಇದ್ದರೂ ತಮ್ಮ ಅಭ್ಯರ್ಥಿಯನ್ನು ಗೆಲ್ಲಿಸಲು ಸಾಧ್ಯವಾಗಲಿಲ್ಲ.
ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅಭೂತಪೂರ್ವ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಜೆಡಿಎಸ್ ಹಾಗೂ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ ಸಿಹಿ ವಿತರಿಸಿ ಸಂಭ್ರಮಿಸಿದರು.ಪಟ್ಟಣದ ಬಸವೇಶ್ವರ ನಗರದ ಶಾಸಕರ ಕಚೇರಿ ಆವರಣದಲ್ಲಿ ಮತ್ತು ಎಂ.ಕೆ.ಬೊಮ್ಮೇಗೌಡ ವೃತ್ತದಲ್ಲಿ ಮತ್ತು ಪಟ್ಟಣದ ಹೊರವಲಯದ ತಾಲೂಕು ಎಚ್.ಡಿ. ದೇವೇಗೌಡ ಅಭಿಮಾನಿಗಳ ಸಂಘದ ಕಚೇರಿ ಬಳಿ ಮೈತ್ರಿ ಪಕ್ಷಗಳ ಕಾರ್ಯಕರ್ತರು ಪಟಾಕಿ ಸಿಡಿಸಿ ಸಿಹಿ ತಿನ್ನಿಸಿ ಸಂಭ್ರಮಿಸಿದರು.
ಈ ಕುರಿತು ಮಾತನಾಡಿದ ತಾಲೂಕು ಎಚ್.ಡಿ.ದೇವೇಗೌಡ ಅಭಿಮಾನಿ ಬಳಗದ ಅಧ್ಯಕ್ಷ ಗೌರೀಶ್, ಮೈತ್ರಿ ಅಭ್ಯರ್ಥಿ ಕುಮಾರಸ್ವಾಮಿ ಅವರು ಗೆದ್ದೇ ಗೆಲ್ಲುತ್ತಾರೆ ಎಂಬ ಆಶಾಭಾವನೆ ನಮಗೆ ಇತ್ತು. ಇಷ್ಟು ದೊಡ್ಡ ಪ್ರಮಾಣದ ಮತಗಳಲ್ಲಿ ಗೆಲುತ್ತಾರೆ ಎಂದು ಊಹಿಸಿರಲಿಲ್ಲ ಎಂದರು.ಜಿಲ್ಲೆಯ ಜನರ ನೂರು ದಿನಗಳಿಗೂ ಹೆಚ್ಚು ಕಾಲ ಸತ್ಯಾಗ್ರಹ, ಮಾಡಿದರೂ ಕಾವೇರಿ ನೀರನ್ನು ನಿರಂತರವಾಗಿ ತಮಿಳುನಾಡಿಗೆ ಹರಿಸಿ ಜಿಲ್ಲೆಯ ರೈತರ ಕಣ್ಣಲ್ಲಿ ನೀರು ಹಾಕಿಸಿದ್ದ ಕಾಂಗ್ರೆಸ್ ಪಕ್ಷಕ್ಲೆ ಜಿಲ್ಲೆಯ ಮತದಾರರು ತಕ್ಕ ಪಾಠ ಕಲಿಸಿದ್ದಾರೆ ಎಂದರು.
ಕಳೆದ ಲೋಕಸಭಾ ಚುನಾವಣೆಯಲ್ಲಿ ಏಳಕ್ಕೆ ಏಳು ಜೆಡಿಎಸ್ ಶಾಸಕರಿದ್ದರೂ ಕಾಂಗ್ರೆಸ್ ಪಕ್ಷದ ಮುಖಂಡರ ಧೋರಣೆಯಿಂದ ಜೆಡಿಎಸ್ ಅಭ್ಯರ್ಥಿ ಸೋಲಬೇಕಾಯಿತು. ಆದರೆ, ಅದೇ ಸನ್ನಿವೇಶ ಈಗ ಮರುಕಳಿಸಿದ್ದು ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದ ಆರು ಶಾಸಕರು ಹಾಗೂ ಸಚಿವರು, ವಿಧಾನ ಪರಿಷತ್ ಸದಸ್ಯರು ಇದ್ದರೂ ತಮ್ಮ ಅಭ್ಯರ್ಥಿಯನ್ನು ಗೆಲ್ಲಿಸಲು ಸಾಧ್ಯವಾಗಲಿಲ್ಲ ಎಂದು ಟೀಕಿಸಿದರು.ಕುಮಾರಣ್ಣ ಜಯಗಳಿಸಿರುವುದು ಕಾಂಗ್ರೆಸ್‌ಗೆ ನುಂಗಲಾರದ ತುತ್ತಾಗಿದೆ. ಜಿಲ್ಲೆಯಲ್ಲಿ ಜೆಡಿಎಸ್ ಪರ ಅಲೆ ಇರುವುದು ಈ ಚುನಾವಣೆಯಲ್ಲಿ ಸಾಬೀತಾಗಿದೆ. ಜಿಲ್ಲೆಯಲ್ಲಿ ಗ್ಯಾರಂಟಿ ಯೋಜನೆಗಳು ಸರ್ಕಾರದ ಕೈ ಹಿಡಿದಿಲ್ಲ ಎನ್ನುವುದು ಸ್ಪಷ್ಟವಾಗಿದೆ. ಗ್ಯಾರಂಟಿ ಯೋಜನೆಗಳು ಕುಟುಂಬಗಳಲ್ಲಿ ಅಸಮಾಧಾನ ತರುವಂತೆ ಮಾಡಿವೆ ಎಂದರು.
ಈ ವೇಳೆ ಸಂಘದ ಉಪಾದ್ಯಕ್ಷ ಚಿಕ್ಕೋನಹಳ್ಳಿ ನಾಗರಾಜು, ಜಿಪಂ ಮಾಜಿ ಅಧ್ಯಕ್ಷ ಆರ್.ಕೆ.ಕುಮಾರ್, ಜಿಲ್ಲಾ ಜೆಡಿಎಸ್ ಉಪಾಧ್ಯಕ್ಷ ನಾಗೇಶ್, ಜೆಡಿಎಸ್ ಮುಖಂಡರಾದ ಮಂಜೇಗೌಡ, ಕುಂದನಹಳ್ಳಿ ಶಿವಕುಮಾರ್, ಟಿಎಪಿಸಿಎಂಎಸ್ ನಿರ್ದೇಶಕ ಕೊರಟಿಕೆರೆ ದಿನೇಶ್, ಅಂಚನಹಳ್ಳಿ ಸುಬ್ಬಣ್ಣ, ಹೆರಗನಹಳ್ಳಿ ಬಸವರಾಜು, ರೇಣುಕಪ್ಪ, ನಂಜುಂಡಪ್ಪ ಸೇರಿದಂತೆ ಹಲವರು ಹಾಜರಿದ್ದರು.