ಸಾರಾಂಶ
ಕೆ.ಆರ್.ಪೇಟೆ/ಮಂಡ್ಯ : ಮಂಡ್ಯ ಲೋಕಸಬಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಹಣ ಬಲವುಳ್ಳ ಗುತ್ತಿಗೆದಾರನನ್ನು ಚುನಾವಣೆಗೆ ನಿಲ್ಲಿಸಿದೆ. ಪ್ರಧಾನಿ ಮೋದಿ ನೇತೃತ್ವದ ಮೈತ್ರಿಕೂಟ ಜನ ನಾಯಕ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಮೂರು ಲಕ್ಷ ಮತಗಳ ಅಂತರದಿಂದ ಗೆಲ್ಲಲಿದ್ದಾರೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.
ಜೆಡಿಎಸ್-ಬಿಜೆಪಿ ಮೈತ್ರಿ ಪಕ್ಷಗಳು ಆಯೋಜಿಸಿದ್ದ ಬೃಹತ್ ಬಹಿರಂಗ ಸಭೆಯಲ್ಲಿ ಮಾತನಾಡಿ, ಹಣ ಬಲ ಮತ್ತು ಜನಬಲದ ನಡುವೆ ಚುನಾವಣೆ ನಡೆಯುತ್ತಿದೆ. ಜನ ಬಲದ ನಾಯಕ ಕುಮಾರಸ್ವಾಮಿ ಅವರನ್ನು ಅತ್ಯಧಿಕ ಬಹುಮತದಿಂದ ಚುನಾಯಿಸಿ ಲೋಕಸಭೆಗೆ ಕಳುಹಿಸಬೇಕು ಎಂದರು.
ಮಂಡ್ಯ ಜಿಲ್ಲೆಯಲ್ಲಿ ಸ್ಪರ್ಧಿಸಲು ಎಚ್.ಡಿ.ಕುಮಾರಸ್ವಾಮಿ ಅವರನ್ನು ಕರೆತಂದವರು ನಾವು. ಜಿಲ್ಲೆಯ ಪ್ರಜ್ಞಾವಂತ ಮತದಾರರು ಮತ್ತು ತಾಯಂದಿರು ತಮ್ಮ ಮತವನ್ನು ಆಸೆ ಆಮಿಷಗಳಿಗೆ ಮಾರಿಕೊಳ್ಳದೆ ಕುಮಾರಸ್ವಾಮಿ ಬೆಂಬಲಿಸಬೇಕು ಎಂದು ಕೋರಿದರು.
ಕಳೆದ ಉಪ ಚುನಾವಣೆಯಲ್ಲಿ ಕೆ.ಆರ್.ಪೇಟೆ ಉಸ್ತುವಾರಿ ತೆಗೆದುಕೊಂಡು ನಮ್ಮ ಅಭ್ಯರ್ಥಿ ಕೆ.ಸಿ.ನಾರಾಯಣಗೌಡರನ್ನು ಗೆಲ್ಲಿಸಿಕೊಟ್ಟರೆ ಕ್ಷೇತ್ರದ ಅಭಿವೃದ್ಧಿ ಮಾಡುವುದಾಗಿ ಮಾತು ಕೊಟ್ಟಿದ್ದೆ. ಅದರಂತೆ ಬಿಜೆಪಿ ಸರ್ಕಾರ ಕೆ.ಸಿ. ನಾರಾಯಣಗೌಡರನ್ನು ಸಚಿವರನ್ನಾಗಿ ಮಾಡಿ 1800 ಕೋಟಿಗೂ ಅಧಿಕ ಅನುದಾನ ನೀಡಿ ಕ್ಷೇತ್ರದ ಅಭಿವೃದ್ಧಿ ಮಾಡಿದೆ ಎಂದರು.
ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ನಂತರ ಕಳೆದ 10 ತಿಂಗಳಿಂದ ಯಾವುದೇ ಅಭಿವೃದ್ಧಿ ಕೆಲಸಗಳು ಆಗಿಲ್ಲ. ರಾಜ್ಯದಲ್ಲಿ ತೀವ್ರ ಬರಗಾಲವಿದೆ. ಈಗಾಗಲೇ 800ಕ್ಕೂ ಅಧಿಕ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮುಖ್ಯಮಂತ್ರಿಗಳಿಗೆ ರೈತರ ಆತ್ಮಹತ್ಯೆಗಳು ಕಣ್ಣಿಗೆ ಕಾಣುತ್ತಿಲ್ಲ. ರೈತರ ಬದುಕು ನಾಶವಾಗುತ್ತಿದ್ದರೂ ನಯಾಪೈಸೆ ಪರಿಹಾರ ನೀಡಿಲ್ಲ ಎಂದು ಕಿಡಿಕಾರಿದರು.
ಡಾ। ಮಂಜುನಾಥ್‌ರಿಗೆ ಜಯದೇವ ಆಸ್ಪತ್ರೆಗೆ ಆಯ್ಕೆ ಮಾಡದಂತೆ ಡಿಕೆಶಿ ತಡೆಯೊಡ್ಡಿದ್ದರು: ದೇವೇಗೌಡ
ಈ ಹಿಂದೆ ಎಸ್.ಎಂ.ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ಡಾ.ಸಿ.ಎನ್.ಮಂಜುನಾಥ್ ಅವರನ್ನು ಜಯದೇವ ಆಸ್ಪತ್ರೆಯ ನಿರ್ದೇಶಕರ ಸ್ಥಾನಕ್ಕೆ ಆಯ್ಕೆ ಮಾಡದಂತೆ ತಡೆಯೊಡ್ಡಿದ್ದನ್ನು ಜನ ಮರೆಯಬಾರದು ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹೇಳಿದರು.
ಕನಕಪುರದ ಮುನ್ಸಿಪಲ್ ಹೈಸ್ಕೂಲ್ ಮೈದಾನದಲ್ಲಿ ಆಯೋಜಿಸಿದ್ದ ಚುನಾವಣಾ ಪ್ರಚಾರದ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ನನ್ನ ರಾಜಕೀಯ ಜೀವನದಲ್ಲಿ ಈವರೆಗೂ ಒಂದೇ ಒಂದು ಅಸತ್ಯ ನುಡಿದಿಲ್ಲ. ನನ್ನ ಅಳಿಯನನ್ನು ರಾಜಕೀಯಕ್ಕೆ ತರಲು ನನಗೆ ಇಷ್ಟವಿರಲಿಲ್ಲ. ಆದರೆ, ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಡಾ.ಮಂಜುನಾಥ ಅವರ ಸೇವೆ ದೇಶಕ್ಕೆ ಬೇಕಾಗಿದೆ ಎಂಬ ಒತ್ತಾಯದ ಮೇರೆಗೆ ಈ ಕ್ಷೇತ್ರದಲ್ಲಿ ಚುನಾವಣೆಗೆ ನಿಲ್ಲಿಸಿದ್ದಾರೆ ಎಂದರು.
ನೆಹರು ಅವರಿಂದ ಹಿಡಿದು ರಾಜೀವ್ ಗಾಂಧಿಯವರೆಗೂ ಅಧಿಕಾರ ನಡೆಸಿದ ವಂಶಸ್ಥರು ಇವತ್ತು ಗೆಲುವು ಕಾಣಲು ಕೇರಳದ ವಯನಾಡಿಗೆ ಏಕೆ ಹೋಗಿದ್ದಾರೆ ಎಂಬುದನ್ನು ಕಾಂಗ್ರೆಸ್ ಪಕ್ಷದವರು ಅರಿಯಲಿ. ದೇಶದಲ್ಲಿ ಎರಡು ರಾಜಕೀಯ ಪಕ್ಷಗಳ ನಡುವೆ ಧರ್ಮಯುದ್ಧ ನಡೆಯುತ್ತಿದೆ. ಒಂದು ಕಡೆ ಎನ್‌ಡಿಎ ಕೂಟದ ಪ್ರಧಾನಿ ಅಭ್ಯರ್ಥಿಯಾಗಿ ಮೋದಿ ಇದ್ದರೆ, ಪ್ರತಿಸ್ಪರ್ಧಿ ಐಎನ್ ಡಿಎ ಕೂಟದಲ್ಲಿ ಪ್ರಧಾನಿ ಅಭ್ಯರ್ಥಿ ಯಾರು ಎಂಬುದು ಅವರಿಗೆಯೇ ತಿಳಿಯದಾಗಿದೆ. ಡಿ.ಕೆ.ಶಿವಕುಮಾರ್ ರವರು ಖರ್ಗೆಯವರು ಪ್ರಧಾನಿ ಆಗಲಿದ್ದಾರೆ ಎಂದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅದು ಸಾಧ್ಯವಿಲ್ಲ ಎಂದು ಹೇಳುತ್ತಾರೆ ಎಂದು ಟೀಕಿಸಿದರು.ಸಿದ್ದು ಕುರ್ಚಿ ಹೋಗೋದು ಪಂಚ ಗ್ಯಾರಂಟಿಗಳಲ್ಲೊಂದು: ಯತ್ನಾಳಚುನಾವಣೆ ಮುಗಿದ 15 ದಿನಗಳಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿ ಆಗೋ ಯೋಜನೆ ಹಾಕಿಕೊಂಡಿದ್ದಾರೆ. ಆಗ ಕಾಂಗ್ರೆಸ್ ಒಡೆದು ಹೋಗುತ್ತದೆ. ಬಳಿಕ ಹೊಸ ಸರ್ಕಾರ ರಚನೆಯಾಗುತ್ತದೆ. ಪಂಚ ಗ್ಯಾರಂಟಿಗಳಲ್ಲಿ ಸಿದ್ದರಾಮಯ್ಯ ಕುರ್ಚಿ ಹೋಗೋದು ಒಂದು ಗ್ಯಾರಂಟಿ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಹೇಳಿದ್ದಾರೆ.
ವಿಜಯಪುರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಇಳಿಸಲು ಹೋದರೆ ಕಾಂಗ್ರೆಸ್ ಸರ್ಕಾರ ಪತನ ಆಗಲಿದೆ. ಡಿ.ಕೆ.ಶಿವಕುಮಾರ್ ಈಗಲೇ ತನ್ನ ಪರವಾಗಿರುವ ಲೋಕಸಭಾ ಸದಸ್ಯರ ಆಯ್ಕೆಗೆ ಸ್ಕೆಚ್ ಹಾಕಿದ್ದು, ಚುನಾವಣೆ ಮುಗಿದ ಬಳಿಕ ಅವರು ಸಿಎಂ ಆಗುವ ಕನಸು ಕಾಣುತ್ತಿದ್ದಾರೆ. ಇದೇ ಕಾರಣಕ್ಕೆ ಬಾಗಲಕೋಟೆಯಲ್ಲಿ ಒಕ್ಕಲಿಗರು, ಲಿಂಗಾಯತರು ಒಂದೇ ಎನ್ನುವ ಸಂದೇಶ ಕೊಟ್ಟಿದ್ದಾರೆ ಎಂದರು.
ಸಿದ್ದರಾಮಯ್ಯ ಅವರು ಡಿ.ಕೆ.ಶಿವಕುಮಾರ್ ಪರವಾಗಿರುವ ಅಭ್ಯರ್ಥಿಗಳನ್ನು ಸೋಲಿಸದಿದ್ದರೆ ಚುನಾವಣೆ ಬಳಿಕ ಕಾಂಗ್ರೆಸ್ ಒಡೆದು ಮುಂದೆ ಹೊಸ ಸರ್ಕಾರ ಅಸ್ತಿತ್ವಕ್ಕೆ ಬರುತ್ತದೆ. ಸಿದ್ದರಾಮಯ್ಯ ತಮ್ಮ ಶಕ್ತಿ ಪ್ರದರ್ಶನ ಮಾಡದೇ ಹೋದರೆ ಅವರ ಕುರ್ಚಿ ಹೋಗೋದು ಗ್ಯಾರಂಟಿ ಎಂದರು.
ಕಾಂಗ್ರೆಸ್ ಬ್ರೇನ್ ಡೆಡ್ ಪಾರ್ಟಿ: ಶ್ರೀರಾಮುಲು
ಕಾಂಗ್ರೆಸ್ ಈಗಾಗಲೇ ದೇಶದಾದ್ಯಂತ ಬ್ರೇನ್ ಡೆಡ್ ಆದ ಪಾರ್ಟಿ. ಅದನ್ನು ಎಷ್ಟೇ ಮೇಲೆತ್ತಲು ಪ್ರಯತ್ನಪಟ್ಟರೂ ಆಗುವುದಿಲ್ಲ ಎಂದು ಮಾಜಿ ಸಚಿವ ಬಿ. ಶ್ರೀರಾಮುಲು ಟೀಕಿಸಿದ್ದಾರೆ. ಕೊಪ್ಪಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ಸಿನ ಮಲ್ಲಿಕಾರ್ಜುನ್ ಖರ್ಗೆ, ಪ್ರಿಯಾಂಕಾ ಗಾಂಧಿ, ಸೋನಿಯಾಗಾಂಧಿ ಸೇರಿದಂತೆ ಪ್ರಮುಖ ನಾಯಕರೇ ಸ್ಪರ್ಧೆ ಮಾಡುತ್ತಿಲ್ಲ. ಅವರಿಗೆ ಅಭ್ಯರ್ಥಿಗಳೇ ಸಿಗುತ್ತಿಲ್ಲ ಎನ್ನುವಂತೆ ಆಗಿದೆ. ದೇಶದಲ್ಲಿ ಕಾಂಗ್ರೆಸ್ ಪಕ್ಷವೇ ಸ್ವಚ್ಛವಾಗುತ್ತಿದ್ದು, ಬಿಜೆಪಿಯನ್ನೇನು ಸ್ವಚ್ಛ ಮಾಡುತ್ತಾರೆ ಎಂದು ಕಿಡಿಕಾರಿದರು.ಗಾಲಿ ಜನಾರ್ದನರೆಡ್ಡಿ ಪಕ್ಷದ ನಿಷ್ಠಾವಂತ ಕಾರ್ಯಕರ್ತರು. ಪಕ್ಷ ನಮ್ಮಂತವರನ್ನು ಕಳೆದುಕೊಳ್ಳಬಾರದು ಎಂದೇ ಪಕ್ಷ ನಮಗೆ ಮತ್ತೆ ಮತ್ತೆ ಅವಕಾಶ ನೀಡುತ್ತಿದೆ. ಅವರು ಜೊತೆಯಲ್ಲಿ ಇರುವುದು ನಮಗೆ ಹೆಚ್ಚಿನ ಬಲಬಂದಿದೆ ಎಂದರು. ಸಂಸದ ಸಂಗಣ್ಣ ಕರಡಿ ದೊಡ್ಡ ಲೀಡರ್, ಅವರು ಯಾಕೆ ಬಿಜೆಪಿ ತೊರೆದಿದ್ದಾರೆ ಎನ್ನುವುದು ಗೊತ್ತಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಕಾಂಗ್ರೆಸ್ ನ ಪ್ರಧಾನಿ ಅಭ್ಯರ್ಥಿ ಯಾರು: ಬಿಎಸ್‌ವೈ
ನಿಮ್ಮ ಪ್ರಧಾನಿ ಅಭ್ಯರ್ಥಿ ಯಾರು ಎಂದು ಮೊದಲು ಹೇಳಿ, ನಿಮ್ಮಲ್ಲಿ ಮೋದಿಗೆ ಸಮಾನವಾಗಿ ನಿಲ್ಲುವ ವ್ಯಕ್ತಿ ಯಾರಿದ್ದಾರೆ ಹೇಳಿ? ಎಂದು ಮಾಜಿ ಸಿಎಂ ಯಡಿಯೂರಪ್ಪ ಅವರು ಕಾಂಗ್ರೆಸ್ ನಾಯಕರಿಗೆ ಪ್ರಶ್ನೆ ಮಾಡಿದ್ದಾರೆ. ಕೊಪ್ಪಳದಲ್ಲಿ ಬುಧವಾರ ಶ್ರೀರಾಮನ ಮೂರ್ತಿಗೆ ಹಾಲೆರೆಯುವ ಮೂಲಕ ಬಿಜೆಪಿ ವಿಜಯ ಸಂಕಲ್ಪ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು. ದೇಶದ ಬಗ್ಗೆ ನಿಮಗೆ ಗೌರವ ಇದ್ದಿದ್ದರೆ, ನೀವು ಪ್ರಾಮಾಣಿಕರಾಗಿದ್ದರೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಈ ಬಾರಿ ಸರ್ವಾನುಮತದಿಂದ ಆಯ್ಕೆ ಮಾಡಬೇಕಾಗಿತ್ತು. ನಿಮ್ಮಲ್ಲಿ ಪ್ರಧಾನಿ ಅಭ್ಯರ್ಥಿ ಘೋಷಣೆ ಮಾಡುವುದಕ್ಕೂ ಯಾರೂ ಇಲ್ಲ ಎಂದು ಕಿಡಿಕಾರಿದರು.ನಿಮ್ಮ ಕಾಲದಲ್ಲಿ ಹಣ, ಹೆಂಡ, ತೋಳ್ಬಲದಿಂದ ಅಧಿಕಾರ ನಡೆಸಲಾಗಿದೆ. ಈಗ ಮತದಾರರು ಇದಕ್ಕೆ ಅವಕಾಶ ನೀಡುವುದಿಲ್ಲ. ಮೋದಿಯವರು ದೇಶಕ್ಕಾಗಿಯೇ ತಮ್ಮನ್ನು ಸಮರ್ಪಣೆ ಮಾಡಿಕೊಂಡಿದ್ದಾರೆ. ಒಂದು ದಿನವೂ ವಿಶ್ರಾಂತಿ ಪಡೆಯದೆ ಕಳೆದ ಹತ್ತು ವರ್ಷಗಳಿಂದ ದೇಶ ಸೇವೆ ಮಾಡುತ್ತಿದ್ದಾರೆ. ಅಂಥ ನಾಯಕ ಮತ್ತೆ ದೇಶದ ಪ್ರಧಾನಿಯಾದರೆ ದೇಶದ ಗೌರವ ಮತ್ತಷ್ಟು ಹೆಚ್ಚಳವಾಗಲಿದೆ ಎಂದರು.
ಬಳಿಕ ಅವರು ಜೆಡಿಎಸ್ ಕೋರ್ ಕಮಿಟಿ ರಾಜ್ಯ ಸದಸ್ಯ ಸಿ.ವಿ. ಚಂದ್ರಶೇಖರ ಮನೆಗೆ ಭೇಟಿ ನೀಡಿದರು. ಕರಡಿಯವರು ಬಿಜೆಪಿ ತೊರೆಯುತ್ತಿದ್ದಂತೆ ಸಿವಿಸಿ ಬಿಜೆಪಿಗೆ ಬರುತ್ತಾರೆ ಎನ್ನುವ ವದಂತಿ ಜೋರಾಗಿರುವ ಬೆನ್ನಲ್ಲೇ ಯಡಿಯೂರಪ್ಪ ಮತ್ತು ಇತರ ಬಿಜೆಪಿ ನಾಯಕರು ಸಿವಿಸಿ ಮನೆಗೆ ಭೇಟಿ ನೀಡಿರುವುದು ಕುತೂಹಲ ಮೂಡಿಸಿದೆ.ಇದಕ್ಕೂ ಮೊದಲು ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, ಕರಡಿ ಸಂಗಣ್ಣ ಅವರು ಪಕ್ಷ ತೊರೆದು ಕಾಂಗ್ರೆಸ್ ಸೇರಿದ್ದು, ಅವರ ವೈಯಕ್ತಿಕ ನಿರ್ಧಾರ ಎಂದು ಹೇಳಿದರು.
ಈಶ್ವರಪ್ಪಗೆ ದೇವರು ಒಳ್ಳೆಯ ಬುದ್ಧಿ ಕೊಡಲಿ: ರಾಧಾಮೋಹನ್‌ಈಶ್ವರಪ್ಪನವರು ಪಕ್ಷಕ್ಕಾಗಿ ಸಾಕಷ್ಟು ದುಡಿದಿದ್ದಾರೆ. ಪಕ್ಷಕ್ಕಾಗಿ ಕೆಲಸ ಮಾಡಿದ್ದಾರೆ. ಅವರ ದುಃಖವನ್ನು ನಾನು ಅರ್ಥ ಮಾಡಿಕೊಳ್ಳಬಲ್ಲೆ. ಈಶ್ವರಪ್ಪನವರಿಗೆ ಭಗವಂತ ಒಳ್ಳೆಯ ಬುದ್ಧಿ ಕೊಡಲಿ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಚುನಾವಣಾ ಉಸ್ತುವಾರಿ ರಾಧಾಮೋಹನದಾಸ್ ಅಗರವಾಲ್ ಹೇಳಿದರು. ವಿಜಯಪುರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಾನು ಅವರ ಬಗ್ಗೆ ಹೆಚ್ಚಿಗೆ ಏನನ್ನೂ ಮಾತನಾಡಲು ಇಷ್ಟ ಪಡಲ್ಲ. ಅವರ ಬಗ್ಗೆ ನನಗೆ ದುಃಖವಿದೆ ಎಂದಷ್ಟೇ ಹೇಳಿದರು. ಕರ್ನಾಟಕದಲ್ಲಿ 28ಕ್ಕೆ 28 ಸೀಟುಗಳನ್ನೂ ಗೆಲ್ಲುತ್ತೇವೆ. ಕಾಂಗ್ರೆಸ್ ಬಳಿ ಖರ್ಚು ಮಾಡಲು ಸಾಕಷ್ಟು ಹಣವಿದೆ. ಅವರು ಈ ಬಾರಿ ₹500 ಕೋಟಿಗೂ ಹೆಚ್ಚು ಹಣವನ್ನು ಖರ್ಚು ಮಾಡಬಹುದು. ಆದರೂ, ಸೋಲು ಅನುಭವಿಸಲಿದ್ದಾರೆ. ಕಾಂಗ್ರೆಸ್ ಮೇಲೆ ಜನತೆಗೆ ಭರವಸೆಯೇ ಇಲ್ಲದ ಕಾರಣ ಇಡಿ ದೇಶದಲ್ಲಿ ಕಾಂಗ್ರೆಸ್ 40ರಿಂದ 45 ಸ್ಥಾನಗಳನ್ನೂ ಗೆಲ್ಲುವುದಿಲ್ಲ ಎಂದು ಲೇವಡಿ ಮಾಡಿದರು.